Pharma Exports: ಔಷಧ ರಫ್ತಿನಲ್ಲಿ ಭಾರಿ ಹೆಚ್ಚಳ, ಮುಂಚೂಣಿಯಲ್ಲಿ ಭಾರತ; ಮನ್​ಸುಖ್ ಮಾಂಡವೀಯ

| Updated By: Ganapathi Sharma

Updated on: Nov 23, 2022 | 12:51 PM

Pharma Exports; ಔಷಧ ಉತ್ಪನ್ನಗಳ ರಫ್ತಿಗೆ ಸಂಬಂಧಿಸಿದ ಗ್ರಾಫ್ ಅನ್ನು ಬಿಡುಗಡೆ ಮಾಡಿರುವ ಸಚಿವರು, ಭಾರತದ ಔಷಧ ರಫ್ತು ಪ್ರಮಾಣ ವಿಶ್ವದಲ್ಲೇ ಮುಂಚೂಣಿಯಲ್ಲಿದೆ ಎಂದು ಉಲ್ಲೇಖಿಸಿದ್ದಾರೆ.

Pharma Exports: ಔಷಧ ರಫ್ತಿನಲ್ಲಿ ಭಾರಿ ಹೆಚ್ಚಳ, ಮುಂಚೂಣಿಯಲ್ಲಿ ಭಾರತ; ಮನ್​ಸುಖ್ ಮಾಂಡವೀಯ
ಸಾಂದರ್ಭಿಕ ಚಿತ್ರ
Image Credit source: Reuters
Follow us on

ನವದೆಹಲಿ: ದೇಶದ ಔಷಧ ಉತ್ಪನ್ನಗಳ ರಫ್ತು (Pharma Exports) ಪ್ರಮಾಣ 2022ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ 2013-14ರ ಏಪ್ರಿಲ್-ಅಕ್ಟೋಬರ್ ಅವಧಿಗೆ ಹೋಲಿಸಿದರೆ ಶೇಕಡಾ 138ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ (Mansukh Mandaviya) ತಿಳಿಸಿದ್ದಾರೆ. 2013-14ರಲ್ಲಿ 37,987.68 ಕೋಟಿ ರೂ. ಮೊತ್ತದ ಔಷಧ ಉತ್ಪನ್ನಗಳನ್ನು ಭಾರತ ರಫ್ತು ಮಾಡಿತ್ತು. 2022ರಲ್ಲಿ 90,324.23 ಕೋಟಿ ರೂ. ಮೊತ್ತದ ಔಷಧ ಉತ್ಪನ್ನಗಳನ್ನು ರಫ್ತು ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಔಷಧ ಉತ್ಪನ್ನಗಳ ರಫ್ತಿಗೆ ಸಂಬಂಧಿಸಿದ ಗ್ರಾಫ್ ಅನ್ನು ಬಿಡುಗಡೆ ಮಾಡಿರುವ ಸಚಿವರು, ಭಾರತದ ಔಷಧ ರಫ್ತು ಪ್ರಮಾಣ ವಿಶ್ವದಲ್ಲೇ ಮುಂಚೂಣಿಯಲ್ಲಿದೆ ಎಂದು ಉಲ್ಲೇಖಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿತ್ವದ ನಾಯಕತ್ವದಿಂದಾಗಿ ಭಾರತವು ಜಾಗತಿಕ ಔಷಧ ಶಕ್ತಿ ಕೇಂದ್ರವಾಗಿದೆ ಎಂದು ಮಾಂಡವೀಯ ಹೇಳಿದ್ದಾರೆ.

ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತವು ವಿಶ್ವದ ಔಷಧಾಲಯವಾಗಿದೆ ಎಂದು ಹೇಳಿದ್ದರು. ಔಷಧ ಉತ್ಪನ್ನಗಳನ್ನು ತಯಾರಿಸುವ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿ ಭಾರತ ಹೊರಹೊಮ್ಮಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಲಸಿಕೆಗಳನ್ನು ಮತ್ತು ಅಗತ್ಯ ವೈದ್ಯಕೀಯ ಸಾಧನಗಳನ್ನು ಅನೇಕ ದೇಶಗಳಿಗೆ ಕಳುಹಿಸಿಕೊಟ್ಟಿದೆ. ಈ ಮೂಲಕ ‘ಒಂದು ಭೂಮಿ ಒಂದು ಆರೋಗ್ಯ’ ಎಂಬ ಧ್ಯೇಯಕ್ಕೆ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದ್ದರು.

ಲಸಿಕೆಗಳನ್ನು ಮತ್ತು ಅಗತ್ಯ ವೈದ್ಯಕೀಯ ಸಾಧನಗಳನ್ನು ಅನೇಕ ದೇಶಗಳಿಗೆ ಕಳುಹಿಸಿಕೊಡುವ ಮೂಲಕ ಭಾರತವು ಕೋಟ್ಯಂತರ ಜೀವಗಳನ್ನು ಉಳಿಸುವಲ್ಲಿ ನೆರವಾಗಿದೆ ಎಂದು ಅವರು ಹೇಳಿದ್ದರು.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದಲ್ಲಿ ತಯಾರಿಸಲಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ಅನೇಕ ದೇಶಗಳಿಗೆ ಭಾರತ ಕಳುಹಿಸಿಕೊಟ್ಟಿತ್ತು. ಕೋಟ್ಯಂತರ ಡೋಸ್ ಲಸಿಕೆಗಳನ್ನು ಕಳುಹಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ