
ನವದೆಹಲಿ, ಫೆಬ್ರುವರಿ 28: ಭಾರತದ ಆರ್ಥಿಕತೆ ಈ ಹಣಕಾಸು ವರ್ಷದ ಮೂರನೇ ಕ್ವಾರ್ಟರ್ನಲ್ಲಿ (ಅಕ್ಟೋಬರ್ನಿಂದ ಡಿಸೆಂಬರ್) ಶೇ. 6.2ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ಕ್ವಾರ್ಟರ್ನಲ್ಲಿ ಶೇ. 5.4ರಷ್ಟು ಮಾತ್ರವೇ ಹೆಚ್ಚಾಗಿದ್ದ ಜಿಡಿಪಿ ಮೂರನೇ ತ್ರೈಮಾಸಿಕದಲ್ಲಿ ತುಸು ಪುಟಿದೆದ್ದಿದೆ. ಶೇ. 6.3ರಷ್ಟು ಆರ್ಥಿಕತೆ ಬೆಳೆಯಬಹುದು ಎಂದು ಹೆಚ್ಚಿನ ಆರ್ಥಿಕ ತಜ್ಞರು ಮಾಡಿದ್ದ ಅಂದಾಜು ಬಹುತೇಕ ನಿಜವಾಗಿದೆ. ಸರ್ಕಾರ ಇಂದು ಅಧಿಕೃತ ದತ್ತಾಂಶ ಬಿಡುಗಡೆ ಮಾಡಿದ್ದು, ಅದರ ಪ್ರಕಾರ 2024-25ರ ವರ್ಷಾದ್ಯಂತ ಆರ್ಥಿಕತೆ ಶೇ. 6.5ರಷ್ಟು ಬೆಳೆಯಬಹುದು ಎಂದು ಅಂದಾಜು ಮಾಡಿದೆ.
ಜಿಡಿಪಿ ಎಂದರೆ ದೇಶದ ಒಟ್ಟು ಉತ್ಪನ್ನ. ಸರಳವಾಗಿ ವಿವರಿಸುವುದಾದರೆ, ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದಲ್ಲಿ ಉತ್ಪಾದನೆಯಾದ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವೇ ಜಿಡಿಪಿ ಎಂದು ಕರೆಯಲಾಗುತ್ತದೆ. ದೇಶದ ಆರ್ಥಿಕ ಗಾತ್ರಕ್ಕೆ ಜಿಡಿಪಿ ಪ್ರಮುಖ ಅಳತೆಗೋಲಾಗಿದೆ.
ಇದನ್ನೂ ಓದಿ: 2024-25ಕ್ಕೆ ಇಪಿಎಫ್ ಹಣಕ್ಕೆ ಶೇ. 8.25 ಬಡ್ಡಿ: ಸಿಬಿಟಿ ನಿರ್ಧಾರ; 1952ರಿಂದೀಚೆಗಿನ ಇಪಿಎಫ್ ಬಡ್ಡಿದರಗಳ ಪಟ್ಟಿ
ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಶುಕ್ರವಾರ ಬಿಡುಗಡೆ ಮಾಡಿದ ದತ್ತಾಂಶ ಪ್ರಕಾರ, ದೇಶದಲ್ಲಿ 2024-25ರ ಹಣಕಾಸು ವರ್ಷದ ಮೂರನೇ ಕ್ವಾರ್ಟರ್ ಬಳಿಕ ನೈಜ ಜಿಡಿಪಿ 47.17 ಲಕ್ಷ ಕೋಟಿ ರೂ ಇರಬಹುದು ಎಂದಿದೆ. 2023-24ರ ಮೂರನೇ ಕ್ವಾರ್ಟರ್ನಲ್ಲಿ ರಿಯಲ್ ಜಿಡಿಪಿ 44.44 ಲಕ್ಷ ಕೋಟಿ ರೂ ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಜಿಡಿಪಿ ಬೆಳವಣಿಗೆ ಶೇ. 6.2ರಷ್ಟಾಗಿದೆ.
ಮೇಲಿನದ್ದು ಹಣದುಬ್ಬರದ ಪರಿಣಾಮವನ್ನು ತೊಡೆದಾಗ ಕಂಡು ಬಂದ ಜಿಡಿಪಿ ದರವಾಗಿದೆ. ಆದರೆ, ಹಣದುಬ್ಬರವನ್ನು ಗಳಿಸದೇ ವಸ್ತುಗಳ ಹಾಲಿ ಬೆಲೆಗಳ ಮೇಲೆ ಜಿಡಿಪಿ ಅಳೆಯುವುದಕ್ಕೆ ನಾಮಿನಲ್ ಜಿಡಿಪಿ ಎನ್ನುತ್ತಾರೆ. ಈ ನಾಮಿನಲ್ ಜಿಡಿಪಿ ಮೂರನೇ ಕ್ವಾರ್ಟರ್ನಲ್ಲಿ ಶೇ.. 9.9ರಷ್ಟು ಬೆಳೆದಿದೆ. ಆದರೆ, ಹಣದುಬ್ಬರದ ಪರಿಣಾಮ ಪರಿಗಣಿಸುವ ರಿಯಲ್ ಜಿಡಿಪಿ ದರಕ್ಕೆ ಹೆಚ್ಚು ಮಹತ್ವ ಇದೆ. ಎಲ್ಲಾ ಅಧಿಕೃತ ಲೆಕ್ಕಾಚಾರಗಳಲ್ಲಿ ರಿಯಲ್ ಜಿಡಿಪಿ ದರವನ್ನೇ ಗಣಿಸಲಾಗುತ್ತದೆ.
ಇದನ್ನೂ ಓದಿ: ಷೇರುಪೇಟೆ ಗಡಗಡ; ಹಿಂದಿನ ದೊಡ್ಡ ಕುಸಿತಗಳಿಗೆ ಹೋಲಿಸಿದರೆ ಈ ಬಾರಿ ನಿಫ್ಟಿಯ ನಷ್ಟ ಸಾಧಾರಣ
ಉತ್ಪಾದನಾ ವಲಯ ಈ ಮೂರನೇ ಕ್ವಾರ್ಟರ್ನಲ್ಲಿ ಬಹಳ ಮಂದಗೊಂಡಿದೆ. ಕಳೆದ ವರ್ಷದಲ್ಲಿ ಶೇ. 14ರಷ್ಟು ಬೆಳವಣಿಗೆ ಕಂಡಿದ್ದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಈ ಬಾರಿ ಶೇ. 3.5ರಷ್ಟು ಮಾತ್ರವೇ ಬೆಳೆದಿದೆ. ಕೃಷಿ ವಲಯದ ಬೆಳವಣಿಗೆ ವೇಗ ಶೇ. 1.5ರಷ್ಟು ಇದ್ದದ್ದು ಈಗ ಶೇ. 5.6ಕ್ಕೆ ಏರಿದೆ. ವ್ಯಾಪಾರ, ಹೋಟೆಲ್, ಸಾರಿಗೆ, ವಿದ್ಯುನ್ಮಾನ ಸೇವೆಗಳ ಬೆಳವಣಿಗೆಯ ವೇಗ ತುಸು ಕಡಿಮೆಗೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ