ಭಾರತದ ಪ್ರಾಜೆಕ್ಟ್ ವಿಷ್ಣು; ಸೆಕೆಂಡ್​ಗೆ 2-3 ಕಿಮೀ ವೇಗವಾಗಿ ಹೋಗಬಲ್ಲ ಹೊಸ ಕ್ಷಿಪಣಿ ಸದ್ಯದಲ್ಲೇ

DRDO develops new hypersonic cruise missile: ಭಾರತದ ಡಿಫೆನ್ಸ್ ರಿಸರ್ಚ್ ಸಂಸ್ಥೆಯಾದ ಡಿಆರ್​ಡಿಒ ಇತ್ತೀಚೆಗೆ ಹೊಸ ಹೈಪರ್​ಸಾನಿಕ್ ಕ್ಷಿಪಣಿಯೊಂದರ ಕಿರು ಪರೀಕ್ಷೆ ನಡೆಸಿದೆ. ಪ್ರಾಜೆಕ್ಟ್ ವಿಷ್ಣು ಅಡಿಯಲ್ಲಿ ಅಭಿವೃದ್ಧಿಗೊಂಡಿರುವ ಈ ಕ್ಷಿಪಣಿ ಮ್ಯಾಕ್-8 ವೇಗದಲ್ಲಿ (ಗಂಟೆಗೆ 9,800 ಕಿಮೀ) ಹೋಗಬಲ್ಲುದು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಈ ಹೈಪರ್​ಸಾನಿಕ್ ವೇಗದ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿರುವುದು.

ಭಾರತದ ಪ್ರಾಜೆಕ್ಟ್ ವಿಷ್ಣು; ಸೆಕೆಂಡ್​ಗೆ 2-3 ಕಿಮೀ ವೇಗವಾಗಿ ಹೋಗಬಲ್ಲ ಹೊಸ ಕ್ಷಿಪಣಿ ಸದ್ಯದಲ್ಲೇ
ಸಾಂದರ್ಭಿಕ ಚಿತ್ರ

Updated on: Jul 18, 2025 | 2:34 PM

ನವದೆಹಲಿ, ಜುಲೈ 18: ಭಾರತದ ರಕ್ಷಣಾ ಕ್ಷೇತ್ರದಲ್ಲಿ (Indian defense) ಚಟುವಟಿಕೆ ತೀವ್ರ ಹಂತಕ್ಕೆ ಹೋಗಿದೆ. ಅದರಲ್ಲೂ ಆಪರೇಷನ್ ಸಿಂದೂರದ ಬಳಿಕ ಸರ್ಕಾರವು ತನ್ನ ಡಿಫೆನ್ಸ್ ಪ್ರಾಜೆಕ್ಟ್​​ಗಳೆಲ್ಲವನ್ನೂ ಅವಧಿಗೆ ಮುನ್ನ ಮುಗಿಸುವತ್ತ ಗಮನ ಕೊಟ್ಟಿದೆ. ಅಮೆರಿಕದ, ರಷ್ಯಾ, ಚೀನಾದ ರಕ್ಷಣಾ ಸಾಮರ್ಥ್ಯಕ್ಕೆ ಸಮೀಪ ಹೋಗಲು ಯತ್ನಿಸುತ್ತಿದೆ. ಇದೇ ವೇಳೆ, ಈ ವಾರ ಎರಡು ಪ್ರಮುಖ ಕ್ಷಿಪಣಿ ಪರೀಕ್ಷೆಗಳಾಗಿವೆ. ಮೊನ್ನೆ ಡಿಆರ್​ಡಿಒ ಸಂಸ್ಥೆ ಆಕಾಶ್ ಪ್ರೈಮ್ ಕ್ಷಿಪಣಿಗಳ ಯಶಸ್ವಿ ಪರೀಕ್ಷೆ ನಡೆಸಿದೆ. ಮೂರ್ನಾಲ್ಕು ದಿನಗಳ ಹಿಂದೆ ಹೈಪರ್​ಸಾನಿಕ್ ಕ್ರ್ಯೂಸ್ ಮಿಸೈಲ್​ವೊಂದರ (Hypersonic cruise missile) ಸಣ್ಣ ಪರೀಕ್ಷೆಯನ್ನೂ ಯಶಸ್ವಿಯಾಗಿ ಮಾಡಿದೆ.

ಬ್ರಹ್ಮೋಸ್​ಗಿಂತ ಮೂರು ಪಟ್ಟು ವೇಗ…

ಪ್ರಾಜೆಕ್ಟ್ ವಿಷ್ಣು ಅಡಿಯಲ್ಲಿ ಡಿಆರ್​ಡಿಒ ಹೈಪರ್​ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಇದು ಈಗಿರುವ ಬ್ರಹ್ಮೋಸ್ ಕ್ಷಿಪಣಿಗಿಂತ ಮೂರು ಪಟ್ಟು ಹೆಚ್ಚು ವೇಗದಲ್ಲಿ ಹೋಗಬಲ್ಲುದು. ಭಾರತದ ಮೊದಲ ಹೈಪರ್​ಸಾನಿಕ್ ಮಿಸೈಲ್ ಇದು. ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಮಾತ್ರ ಹೈಪರ್​ಸಾನಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿರುವುದು.

ಇದನ್ನೂ ಓದಿ: 12,000 ಕಿಮೀ ದೂರದ ಅಮೆರಿಕವನ್ನೂ ತಲುಪಬಲ್ಲುದು ಭಾರತದ ಹೊಸ ಬಾಂಬರ್; ಚೀನಾ ಬಳಿಯೂ ಇದಿಲ್ಲ

ಬ್ರಹ್ಮೋಸ್-2 ಎಂದೇ ಕೆಲವರು ಕರೆಯುತ್ತಿರುವ ಭಾರತದ ಈ ಹೊಸ ಕ್ಷಿಪಣಿ ಮುಂದಿನ ವರ್ಷ ಸೇನೆಗೆ ನಿಯೋಜನೆಯಾಗಬಹುದು. ಕ್ಷಿಪಣಿ ವೇಗವನ್ನು ಮ್ಯಾಚ್ ಮಾಪನದಲ್ಲಿ ಅಳೆಯಲಾಗುತ್ತದೆ. ಮ್ಯಾಚ್-5ಕ್ಕಿಂತ ಹೆಚ್ಚಿದ್ದರೆ ಅದು ಹೈಪರ್​ಸಾನಿಕ್. ಮ್ಯಾಚ್ ಎಂದರೆ ಇಲ್ಲಿ ಶಬ್ದದ ವೇಗ. ಒಂದು ಮ್ಯಾಚ್ ಎಂದರೆ ಗಂಟೆಗೆ ಸುಮಾರು 1,235 ಕಿಮೀ ಆಗುತ್ತದೆ. ಭಾರತದ ಹೊಸ ಕ್ಷಿಪಣಿಯು ಮ್ಯಾಚ್-8 ವೇಗದ್ದಾಗಿದೆ ಎನ್ನಲಾಗಿದೆ.

ಈ ಕ್ಷಿಪಣಿಗೆ ಸ್ಕ್ರಾಮ್​ಜೆಟ್ ಎಂಜಿನ್​ನ ಶಕ್ತಿ ಇದೆ. ವಾತಾವರಣದ ಗಾಳಿಯನ್ನೇ ಇದು ಶಕ್ತಿಯಾಗಿ ಮಾಡಿಕೊಳ್ಳಲಿದೆ. ಇದು 1,500-2,500 ಕಿಮೀ ದೂರ ಕ್ರಮಿಸಬಲ್ಲುದು. ಒಂದೇ ಒಂದು ಸೆಕೆಂಡ್​ನಲ್ಲಿ ಇದು 2.75 ಕಿಮೀ ದೂರ ಹೋಗಬಲ್ಲುದು. ಪಾಕಿಸ್ತಾನದ ಪರಮಾಣು ನೆಲೆ ಇರುವ ನೂರ್ ಖಾನ್ ಬೇಸ್ ಅನ್ನು ಇದು ಕೇವಲ ಮೂರೇ ನಿಮಿಷದಲ್ಲಿ ತಲುಪಿ ಉಡಾಯಿಸಬಲ್ಲುದು.

ಇದನ್ನೂ ಓದಿ: ಒಡಿಶಾದ ಚಂಡಿಪುರದಲ್ಲಿ ಪೃಥ್ವಿ-II ಮತ್ತು ಅಗ್ನಿ-I ಬ್ಯಾಲಿಸ್ಟಿಕ್ ಕ್ಷಿಪಣಿಗಳ ಯಶಸ್ವಿ ಉಡಾವಣೆ

ಅಮೆರಿಕ, ಚೀನಾ, ರಷ್ಯಾ ಸಾಲಿಗೆ ಭಾರತ

ರಷ್ಯಾದ ಏವನ್​ಗಾರ್ಡ್ ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ಎನ್ನಲಾಗುತ್ತಿದೆ. ಇದಿನ್ನೂ ಅಭಿವೃದ್ಧಿ ಹಂತದಲ್ಲಿದೆ. ಇದರ ವೇಗ ಮ್ಯಾಚ್ 20 ಎನ್ನಲಾಗುತ್ತಿದೆ. ಅಂದರೆ, ಒಂದು ಸೆಕೆಂಡ್​​ಗೆ ಇದು 6.8 ಕಿಮೀ ವೇಗದಲ್ಲಿ ಹೋಗಬಲ್ಲುದು. ಬರೋಬ್ಬರಿ 6,000 ಕಿಮೀ ದೂರ ಸಾಗುವ ಇದು ಕೆಲವೇ ನಿಮಿಷದಲ್ಲಿ ಅಮೆರಿಕವನ್ನು ತಲುಪಿ ಗುರಿಯನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ.

ಚೀನಾದ ಡಾಂಗ್ ಫೆಂಗ್, ಅಮೆರಿಕದ ಟ್ರೈಡೆಂಟ್-2, ಮೈನೂಟ್​ಮ್ಯಾನ್-3, ರಷ್ಯಾದ ಸರ್ಮಟ್, ಕಿಂಝಲ್ ಮೊದಲಾದ ಕ್ಷಿಪಣಿಗಳು ಅತ್ಯಂತ ವೇಗದ ಮಿಸೈಲ್​ಗಳೆಂದು ಹೆಸರಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ