12,000 ಕಿಮೀ ದೂರದ ಅಮೆರಿಕವನ್ನೂ ತಲುಪಬಲ್ಲುದು ಭಾರತದ ಹೊಸ ಬಾಂಬರ್; ಚೀನಾ ಬಳಿಯೂ ಇದಿಲ್ಲ
India's new bomber can smash target 12,000 KMs away: ಭಾರತವು ದೂರ ಶ್ರೇಣಿಯ ಹೊಸ ಯುದ್ಧವಿಮಾನವನ್ನು ಅಭಿವೃದ್ಧಿಪಡಿಸಲು ಸಿದ್ಧವಾಗಿದೆ. ಇದು 12,000 ಕಿಮೀ ದೂರ ಶ್ರೇಣಿಯದ್ದಾಗಿದೆ. ಅಮೆರಿಕದ ನ್ಯೂಯಾರ್ಕ್ ನಗರವನ್ನೂ ಇದು ತಲುಪಬಲ್ಲುದು. ಇಂಧನ ಮರುಪೂರಣದ ಅವಶ್ಯಕತೆ ಇಲ್ಲದೇ ಅಷ್ಟು ದೂರ ಹೋಗಬಲ್ಲ ಮಿಲಿಟರಿ ವಿಮಾನ ಚೀನಾ ಬಳಿಯೂ ಇಲ್ಲ.

ನವದೆಹಲಿ, ಜುಲೈ 17: ಭಾರತ ತನ್ನ ಮಿಲಿಟರಿ ಶಕ್ತಿಯನ್ನು (Indian military) ಗಣನೀಯವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಬೇರೆ ದೇಶಗಳಿಂದ ಖರೀದಿಸುವ ಬದಲು ಭಾರತವೇ ಸ್ವಂತವಾಗಿ ಅತ್ಯಾಧುನಿಕ ಮಿಲಿಟರಿ ಆಯುಧಗಳ ನಿರ್ಮಾಣ ಮಾಡುತ್ತಿದೆ. ಅಡ್ವಾನ್ಸ್ಡ್ ಫೈಟರ್ ಏರ್ಕ್ರಾಫ್ಟ್ ಯೋಜನೆ ಚಾಲ್ತಿಗೊಂಡಿರುವುದರ ಜೊತೆಗೆ ಈಗ ಅಲ್ಟ್ರಾ ಲಾಂಗ್ ರೇಂಜ್ ಸ್ಟ್ರೈಕ್ ಏರ್ಕ್ರಾಫ್ಟ್ (ULRSA – Ultra Long Range Strike Aircraft) ಅಭಿವೃದ್ಧಿಪಡಿಸಲು ಯೋಜಿಸಿದೆ. ಇದು ಅಂತಿಂಥದ್ದಲ್ಲ… ವಿಶ್ವದ ಅತ್ಯಂತ ದೂರ ಶ್ರೇಣಿಯ ಬಾಂಬರ್ಗಳಲ್ಲಿ ಒಂದೆನಿಸಲಿದೆ.
ವರದಿ ಪ್ರಕಾರ ಭಾರತದ ಈ ಹೊಸ ಯುದ್ಧವಿಮಾನವು 12,000 ಕಿಮೀ ದೂರ ಸಾಗಬಲ್ಲುದು. ಅಂದರೆ, ದೂರದ ಅಮೆರಿಕವನ್ನೂ ಬೇಕಾದರೆ ಇದು ಟಾರ್ಗೆಟ್ ಮಾಡಬಲ್ಲುದು. ವಿಶ್ವದ ಯಾವುದೇ ಸ್ಥಳವೂ ಭಾರತದಿಂದ ತಪ್ಪಿಸಿಕೊಳ್ಳಲು ಆಗೋದಿಲ್ಲ.
ರಷ್ಯಾದ ಟಿಯು-160 ಬ್ಲ್ಯಾಕ್ಜ್ಯಾಕ್ ಮತ್ತು ಅಮೆರಿಕದ ಬಿ-21 ರೈಡರ್ ವಿಮಾನಗಳ ರೀತಿಯಲ್ಲಿ ಭಾರತವು ತನ್ನ ಹೊಸ ಬಾಂಬರ್ ಅನ್ನು ಅಭಿವೃದ್ಧಿಪಡಿಸಲು ಹೊರಟಿದೆ. 2032-35ರಲ್ಲಿ ಇದರ ಪ್ರೋಟೋಟೈಪ್ ಸಿದ್ಧವಾಗಬಹುದು. 2036ರೊಳಗೆ ಇದರ ತಯಾರಿಕೆ ಆರಂಭವಾಗಬಹುದು. ಅಂದರೆ, ಇನ್ನು 10 ವರ್ಷದಲ್ಲಿ ಭಾರತದ ಬಳಿ ಅತ್ಯಂತ ಶಕ್ತಿಶಾಲಿ ಯುದ್ಧವಿಮಾನದ ಅಸ್ತ್ರ ಸಿಗಲಿದೆ.
ಇದನ್ನೂ ಓದಿ: ಮಿಸೈಲ್ ತಯಾರಿಕೆ ವೇಗದಲ್ಲಿ ಭಾರತ ಗಣನೀಯ ವೃದ್ಧಿ; ತಯಾರಿಕೆ ಅವಧಿ 2-3 ವರ್ಷಕ್ಕೆ ಇಳಿಕೆ; ವಿಶ್ವದರ್ಜೆಗೇರಿದ ಭಾರತದ ಸಾಮರ್ಥ್ಯ
ಚೀನಾ ಬಳಿಯೂ ಇಲ್ಲ ಇಷ್ಟು ದೂರಗಾಮಿ ಯುದ್ಧವಿಮಾನ
ಚೀನಾ ಬಳಿ ಸಾವಿರಾರು ಕಿಮೀ ದೂರ ಹಾರಬಲ್ಲ ಏರ್ಕ್ರಾಫ್ಟ್ಗಳಿವೆ. ಆದರೆ, ಯಾವುವೂ ಕೂಡ 12,000 ಕಿಮೀ ಶ್ರೇಣಿಯಲ್ಲಿಲ್ಲ. ಅದರ ಕ್ಸಿಯಾನ್ ಎಚ್-6ಕೆ ಎನ್ನುವುದು ಸುಮಾರು 8,000 ಕಿಮೀ ರೇಂಜ್ನಲ್ಲಿದೆ.
ಅಮೆರಿಕದ ಬೋಯಿಂಗ್ ಕಂಪನಿಯ ಬಿ-52ಎಚ್ ಯುದ್ಧವಿಮಾನವು 14,157 ಕಿಮೀ ಶ್ರೇಣಿಯಲ್ಲಿದೆಯಾದರೂ ಇದು ಮಿಲಿಟರಿ ಉಪಕರಣಗಳನ್ನು ಸಾಗಿಸಲು ಬಳಕೆ ಆಗುತ್ತದೆ.
ಇನ್ನು, ಅಮೆರಿಕದ ಬಿ-21 ರೇಡರ್, ಬಿ-2 ಸ್ಪಿರಿಟ್, ಬಿ-1ಬಿ ಲ್ಯಾನ್ಸರ್ ವಿಮಾನಗಳು ಮಿಲಿಟರಿ ದಾಳಿಗೆಂದು ರೂಪಿಸಲಾಗಿದ್ದು ಇವುಗಳ ಶ್ರೇಣಿ 9,000ದಿಂದ 11,900 ಕಿಮೀಯಷ್ಟಿದೆ.
ರಷ್ಯಾದ ಟುಪೋಲೆವ್ ಟಿಯು-160 ವಿಮಾನವು ಸೂಪರ್ಸಾನಿಕ್ ಸ್ಪೀಡ್ನಲ್ಲಿ 12,300 ಕಿಮೀ ದೂರ ಕ್ರಮಿಸಬಲ್ಲುದು.
ಇದನ್ನೂ ಓದಿ: ಡಿಆರ್ಡಿಒ ಅಭಿವೃದ್ಧಿಪಡಿಸುತ್ತಿರುವ ಶಸ್ತ್ರಾಸ್ತ್ರಗಳು ಮತ್ತವುಗಳ ಸಾಮರ್ಥ್ಯ; ಇಲ್ಲಿದೆ ಪಟ್ಟಿ
ಭಾರತದ ಅಡ್ವಾನ್ಸ್ಡ್ ಬಾಂಬರ್ ವೈಶಿಷ್ಟ್ಯಗಳೇನು?
ಭಾರತವು ಯೋಜಿಸಿರುವ ಸುಧಾರಿತ ಯುದ್ಧವಿಮಾನವು 12,000 ಕಿಮೀ ಶ್ರೇಣಿಯದ್ದಾಗಿರುತ್ತದೆ. ಮಧ್ಯದಲ್ಲಿ ಇಂಧನ ಮರುಪೂರಣಗೊಳಿಸುವ ಅವಶ್ಯಕತೆ ಇರುವುದಿಲ್ಲ. ಇದರಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಅಳವಡಿಸಬಹುದು. ರಷ್ಯಾದ ಟಿಯು-160 ರೀತಿ ಇದು ಸೂಪರ್ಸಾನಿಕ್ ವೇಗ ಮತ್ತು ಸ್ವಿಂಗ್ ವಿಂಗ್ ಟೆಕ್ನಾಲಜಿ ಹೊಂದಿರಲಿದೆ. ಸ್ವಿಂಗ್ ವಿಂಗ್ನಿಂದಾಗಿ ಇಂಧನ ಬಳಕೆ ಹೆಚ್ಚು ಸಮರ್ಪಕವಾಗಿರುತ್ತದೆ.
ಹಾಗೆಯೇ, ಅಮೆರಿಕದ ಬಿ-21 ರೇಡರ್ನಂತೆ ಇದು ಸ್ಟೀಲ್ತ್ ಟೆಕ್ನಾಲಜಿ ಹೊಂದಿರುತ್ತದೆ. ಅಂದರೆ, ರಾಡಾರ್ಗಳ ಕಣ್ತಪ್ಪಿಸಿ ಇದು ಕ್ರಮಿಸಬಲ್ಲುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ