ಡಿಆರ್ಡಿಒ ಅಭಿವೃದ್ಧಿಪಡಿಸುತ್ತಿರುವ ಶಸ್ತ್ರಾಸ್ತ್ರಗಳು ಮತ್ತವುಗಳ ಸಾಮರ್ಥ್ಯ; ಇಲ್ಲಿದೆ ಪಟ್ಟಿ
DRDO chief reveals Indian advanced weapons being developed: ಭಾರತ ತನ್ನ ಶಸ್ತ್ರಾಸ್ತ್ರಗಳ ಬೇಡಿಕೆ ಪೂರೈಸಲು ಆಮದು ಬದಲು ಸ್ವಂತವಾಗಿ ತಯಾರಿಸುವ ಕಾರ್ಯವನ್ನು ಭರದಿಂದ ನಡೆಸುತ್ತಿದೆ. ಡಿಫೆನ್ಸ್ ಸಿಸ್ಟಂಗಳ ಸಂಶೋಧನೆ ಮತ್ತು ಅಭಿವೃದ್ಧಿಗೆಂದೇ ಮೀಸಲಾಗಿರುವ ಡಿಆರ್ಡಿಒ ಬಳಿ ಅಸಂಖ್ಯ ಪ್ರಾಜೆಕ್ಟ್ಗಳಿವೆ. ಈಗ ಅಭಿವೃದ್ಧಿ ಹಂತದಲ್ಲಿರುವ ಮತ್ತು ಮುಂದಿನ ದಿನಗಳಲ್ಲಿ ಆರಂಭಿಸಲಿರುವ ಪ್ರಾಜೆಕ್ಟ್ಗಳ ವಿವರ ಇಲ್ಲಿದೆ.

ನವದೆಹಲಿ, ಜೂನ್ 22: ಆಪರೇಷನ್ ಸಿಂದೂರ, ರಷ್ಯಾ ಉಕ್ರೇನ್ ಯುದ್ಧ, ಇಸ್ರೇಲ್ ಇರಾನ್ ಯುದ್ದ ನೋಡಿದವರಿಗೆ ಶಸ್ತ್ರಾಸ್ತ್ರಗಳು ಮತ್ತು ರಣತಂತ್ರಗಳು ಎಷ್ಟು ಮಹತ್ವದ್ದು ಎಂಬುದು ಗೊತ್ತಾಗೇ ಆಗುತ್ತದೆ. ಹೊಸ ಹೊಸ ತಂತ್ರಜ್ಞಾನಗಳನ್ನೊಳಗೊಂಡ ಸಮರ ವಸ್ತುಗಳನ್ನು ತಯಾರಿಸಬಲ್ಲವರು ಮೇಲುಗೈ ಸಾಧಿಸುತ್ತಾರೆ. ಇದು ಇತಿಹಾಸದುದ್ದಕ್ಕೂ ಕಂಡು ಬಂದಿರುವ ಸತ್ಯ. ಇಸ್ರೇಲ್, ಉಕ್ರೇನ್ ದೇಶಗಳು ಹೊಸ ಮಾದರಿ ರಣತಂತ್ರ, ಯುದ್ಧಾಸ್ತ್ರಗಳನ್ನು ಬಳಸಿ ಗಮನ ಸೆಳೆದಿವೆ. ಭಾರತವೂ ಕೂಡ ಆಪರೇಷನ್ ಸಿಂದೂರದಲ್ಲಿ ತನ್ನ ಶಸ್ತ್ರಾಸ್ತ್ರಗಳ ಶಕ್ತಿಯ ಸ್ಯಾಂಪಲ್ ತೋರಿಸಿದೆ. ಬಹಳಷ್ಟು ದೇಶಗಳು ಭಾರತದ ಮಿಲಿಟರಿ (Indian Army) ಬಗ್ಗೆ ಕುತೂಹಲ ಹೊಂದಿವೆ.
ಮುಂಬರುವ ವರ್ಷಗಳಲ್ಲಿ ಭಾರತ ಯಾವ್ಯಾವ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ ಎನ್ನುವ ವಿವರವನ್ನು ಡಿಆರ್ಡಿಒ ಮುಖ್ಯಸ್ಥ ಡಾ. ಸಮೀರ್ ವಿ ಕಾಮತ್ ನೀಡಿದ್ದಾರೆ. ಖಾಸಗಿ ಮಾಧ್ಯಮ ಸಂದರ್ಶನವೊಂದರಲ್ಲಿ ಅವರು ಭವಿಷ್ಯದ ಡಿಫೆನ್ಸ್ ಪ್ರಾಜೆಕ್ಟ್ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಡಿಆರ್ಡಿಒ ಹೊಸ ಹೊಸ ಶಸ್ತ್ರಾಸ್ತ್ರಗಳ ತಯಾರಿಕೆಗೆ ರಿಸರ್ಚ್ ನಡೆಸುತ್ತದೆ.
ಹೊಸ ಮಾದರಿಯ ಬ್ರಹ್ಮೋಸ್ ಕ್ಷಿಪಣಿ
ಬ್ರಹ್ಮೋಸ್ ಕ್ಷಿಪಣಿ ಸದ್ಯ ಭಾರತದ ಮಿಸೈಲ್ಗಳ ಪೈಕಿ ಪ್ರಮುಖ ಟ್ರಂಪ್ ಕಾರ್ಡ್. ಅದೆಷ್ಟು ಪರಿಣಾಮಕಾರಿ ಎಂಬುದು ಆಪರೇಷನ್ ಸಿಂದೂರದಲ್ಲಿ ಸಾಬೀತಾಗಿದೆ. ಆದರೆ, ರಷ್ಯನ್ ಕಂಪನಿಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಈ ಕ್ಷಿಪಣಿ ಎಲ್ಲಾ ಫೈಟರ್ ಜೆಟ್ಗಳಲ್ಲೂ ಅಳವಡಿಸಲು ಆಗುವುದಿಲ್ಲ. ಸುಖೋಯ್ 30 ಎಂಕೆಐ ಜೆಟ್ಗಳಿಂದ ಸದ್ಯ ಇದನ್ನು ಹಾರಿಸಬಹುದು. ಈಗ ಬ್ರಹ್ಮೋಸ್ ಎನ್ಜಿ ಎನ್ನುವ ಹೊಸ ತಲೆಮಾರಿನ ಕ್ಷಿಪಣಿಯನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಇದು ಈಗಿರುವ ಬ್ರಹ್ಮೋಸ್ಗಿಂತ ಗಾತ್ರ ಮತ್ತು ತೂಕದಲ್ಲಿ ಸಣ್ಣದಿರುತ್ತದೆ. ಆದರೆ, ಅಷ್ಟೇ ಮಾರಕ ಶಕ್ತಿ ಹೊಂದಿರುತ್ತದೆ. ಇದು ಸುಖೋಯ್ ಮಾತ್ರವಲ್ಲ, ಯಾವುದೇ ಫೈಟರ್ ಜೆಟ್ಗಳಲ್ಲೂ ಅಳವಡಿಸಬಹುದಾದಂತೆ ಅಭಿವೃದ್ಧಿಪಡಿಸಲಾಗುತ್ತಿದೆ.
ಇದನ್ನೂ ಓದಿ: ಲೇಸರ್ ಡ್ಯಾಜ್ಲರ್ಸ್ ಇರುವ ಆಪ್ಟಾನಿಕ್ ಶೀಲ್ಡ್: ಭಾರತದಿಂದ ಹೊಸ ಡಿಫೆನ್ಸ್ ಸಿಸ್ಟಂ ಅಭಿವೃದ್ಧಿಗೆ ಹೆಜ್ಜೆ
ಹೈಪರ್ಸಾನಿಕ್ ಮಿಸೈಲ್, ಗ್ಲೈಡ್ ವೆಹಿಕಲ್ ಅಭಿವೃದ್ಧಿ
ಭಾರತ ಎರಡು ಹೈಪರ್ಸಾನಿಕ್ ವೆಪನ್ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಹೈಪರ್ಸಾನಿಕ್ ಎಂದರೆ ಮ್ಯಾಚ್-5ಗಿಂತ ಹೆಚ್ಚು ವೇಗದಲ್ಲಿ ಸಾಗುವಂಥದ್ದು. ಅಂದರೆ, ಶಬ್ದಕ್ಕಿಂತ ಐದು ಪಟ್ಟು ಹೆಚ್ಚು ವೇಗ. ಹೈಪರ್ಸಾನಿಕ್ ಕ್ರೂಸ್ ಮಿಸೈಲ್ ಮತ್ತು ಹೈಪರ್ಸಾನಿಕ್ ಗ್ಲೈಡ್ ವೆಹಿಕಲ್ ಅನ್ನು ಡಿಆರ್ಡಿಒ ಅಭಿವೃದ್ಧಿಪಡಿಸುತ್ತಿದೆ. ಇಲ್ಲಿ ಗ್ಲೈಡ್ ವೆಹಿಕಲ್ ಕೂಡ ಕ್ಷಿಪಣಿ ರೀತಿಯಂಥದ್ದೇ. ಆದರೆ, ಸ್ವಲ್ಪ ವ್ಯತ್ಯಾಸ ಇರುತ್ತದೆ. ಗ್ಲೈಡ್ ವೆಹಿಕಲ್ ಅನ್ನು ರಾಕೆಟ್ನೊಳಗೆ ಸೇರಿಸಿ ಬಿಡಲಾಗುತ್ತದೆ. ಒಂದಷ್ಟು ಎತ್ತರಕ್ಕೆ ಹೋಗಿ ಅಲ್ಲಿ ರಾಕೆಟ್ನಿಂದ ಬೇರೆಯಾಗಿ ಗುರಿ ಎಡೆಗೆ ವೇಗವಾಗಿ ಸಾಗುತ್ತದೆ. ಈ ಎರಡು ಹೈಪರ್ಸಾನಿಕ್ ಅಸ್ತ್ರಗಳು ಇನ್ನೆರಡು ವರ್ಷದಲ್ಲಿ ಮಿಲಿಟರಿಗೆ ನಿಯೋಜನೆ ಆಗುವ ನಿರೀಕ್ಷೆ ಇದೆ.
ಅಸ್ತ್ರ ಮತ್ತು ರುದ್ರಂ ಕ್ಷಿಪಣಿಗಳ ಹೊಸ ಮಾದರಿ ಅಭಿವೃದ್ಧಿ
ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಗೊಂಡ ಕ್ಷಿಪಣಿಗಳಲ್ಲಿ ಅಸ್ತ್ರ ಮತ್ತು ರುದ್ರಂ ಸೇರಿವೆ. ಸದ್ಯ ಸೇನೆ ಬಳಿ ಅಸ್ತ್ರ ಎಂಕೆ-1 ಕ್ಷಿಪಣಿ ಇದೆ. ಇನ್ನೂ ಹೆಚ್ಚು ದೂರ ಕ್ರಮಿಸಬಲ್ಲ ಅಸ್ತ್ರ ಎಂಕೆ-2 ಮತ್ತು ಎಂಕೆ-3 ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ. ಇವು ಶತ್ರುಗಳ ಫೈಟರ್ ಜೆಟ್ಗಳನ್ನು ನಾಶ ಮಾಡಲು ಉಪಯುಕ್ತವಾಗಿವೆ. ಹಾಗೆಯೆ, ರುದ್ರಂ ಸರಣಿಯ ಕ್ಷಿಪಣಿಗಳ ಅಭಿವೃದ್ಧಿಯೂ ಆಗುತ್ತಿದೆ.
ಕುಶ ಡಿಫೆನ್ಸ್ ಯೋಜನೆ
ರಷ್ಯಾದ ಎಸ್-400 ಹಾಗೂ ಇನ್ನೂ ಅಧಿಕ ಸಾಮರ್ಥ್ಯದ ಡಿಫೆನ್ಸ್ ಸಿಸ್ಟಂ ಅನ್ನು ಕುಶ ಪ್ರಾಜೆಕ್ಟ್ ಹೆಸರಿನಲ್ಲಿ ಡಿಆರ್ಡಿಒ ಅಭಿವೃದ್ಧಿಪಡಿಸುತ್ತಿದೆ. ಡ್ರೋನ್ ಸೇರಿದಂತೆ ಎಲ್ಲಾ ರೀತಿಯ ವಾಯುದಾಳಿಗಳನ್ನು ಲೇಸರ್ ಮತ್ತು ಮೈಕ್ರೋವೇವ್ ಸಿಸ್ಟಂ ಇತ್ಯಾದಿ ಮೂಲಕ ನಾಶ ಮಾಡಬಲ್ಲಂತಹ ಶಕ್ತಿ ಇದಕ್ಕೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ಮೊಬೈಲ್ ಆರ್ಟಿಲರಿ ಮತ್ತು ಲೈಟ್ ಟ್ಯಾಂಕ್
ಭಾರತವು ಎಟಿಎಜಿಎಸ್ ಎನ್ನುವ ಗನ್ ಸಿಸ್ಟಂ ಅನ್ನು ಸ್ವಂತವಾಗಿ ಅಭಿವೃದ್ಧಿಪಡಿಸಿದೆ. ಇದರ ಮೊಬೈಲ್ ವರ್ಷನ್, ಅಂದರೆ, ಸುಲಭವಾಗಿ ಸ್ಥಳದಿಂದ ಸ್ಥಳಕ್ಕೆ ಸಾಗಿಸಬಹುದಾದಂತಹ ಎಟಿಎಜಿಎಸ್ ಗನ್ ಸಿಸ್ಟಂಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನ 3 ರಫೇಲ್ ಹೊಡೆದಿಲ್ಲ; ವಾಸ್ತವ ಗೊತ್ತಾದರೆ ಅಚ್ಚರಿ ಆಗಬಹುದು: ಡಸ್ಸೋ ಏವಿಯೇಶನ್ ಸಿಇಒ
ಇನ್ನು. ಹಗುರ ತೂಕದ ಬ್ಯಾಟಲ್ ಟ್ಯಾಂಕ್ ಅನ್ನು ಎಲ್ ಅಂಡ್ ಟಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು 25 ಟನ್ ತೂಕದ್ದಿದ್ದು, ಚೀನಾದ ಗಡಿಭಾಗದಲ್ಲಿ ನಿಯೋಜನೆಯಾಗಲಿದೆ.
ನೌಕಾ ಶಸ್ತ್ರಾಸ್ತ್ರಗಳ ತಯಾರಿಕೆ
ಭಾರತದ ನೌಕಾಪಡೆಗಾಗಿಯೂ ಡಿಆರ್ಡಿಒ ವಿಶೇಷ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಟಾರ್ಪಿಡೋ, ನೇವಲ್ ಮೈನ್ಸ್ ಇತ್ಯಾದಿ ಸಾಗರದೊಳಗಿನ ಶಸ್ತ್ರಾಸ್ತ್ರಗಳು ಬಹುತೇಕ ಅಂತಿಮ ಹಂತದ ತಯಾರಿಕೆಯಲ್ಲಿವೆ.
ಐದನೆ ತಲೆಮಾರಿನ ಫೈಟರ್ ಜೆಟ್
ಚೀನಾ ತನ್ನ ಬಳಿ ಇರುವ ಐದನೇ ತಲೆಮಾರಿನ ಫೈಟರ್ ಜೆಟ್ಗಳನ್ನು ಪಾಕಿಸ್ತಾನಕ್ಕೆ ಸರಬರಾಜು ಮಾಡುತ್ತಿದೆ. ಭಾರತದ ಬಳಿ ಇರುವ ರಫೇಲ್ ಐದನೆ ತಲೆಮಾರಿನ ಜೆಟ್ ಅಲ್ಲ. ರಷ್ಯಾ ಅಥವಾ ಅಮೆರಿಕದಿಂದ ಐದನೇ ತಲೆಮಾರಿನ ಜೆಟ್ ಪಡೆಯುವ ಪ್ರಸ್ತಾಪ ಇದೆ. ಆದರೆ, ಭಾರತ ತಾನೇ ಸ್ವಂತವಾಗಿ ಐದನೇ ತಲೆಮಾರಿನ ಫೈಟರ್ ಜೆಟ್ ತಯಾರಿಸುವ ಕಾರ್ಯಾರಂಭಿಸಿದೆ. ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ ಅಥವಾ ಎಎಂಸಿಎ ಪ್ರಾಜೆಕ್ಟ್ 2035ರಲ್ಲಿ ಪೂರ್ಣಗೊಳ್ಳಬಹುದು. ಇದು ಯಶಸ್ವಿಯಾದರೆ ಭಾರತವು ಡಿಫೆನ್ಸ್ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಬಲ್ಲುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




