ನವದೆಹಲಿ, ಜನವರಿ 11: ಪೆಟ್ರೋಲಿಯಂನಂತಹ ಪಳೆಯುಳಿಕೆ ಇಂಧನಗಳ ಬಳಕೆ ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಭಾರತ ಈ ನಿಟ್ಟಿನಲ್ಲಿ ಸಾಕಷ್ಟು ಪರ್ಯಾಯ ಇಂಧನಗಳ ಉತ್ಪಾದನೆಯತ್ತ ಗಮನ ಹರಿಸುತ್ತಿದೆ. ಸೌರಶಕ್ತಿ ಮತ್ತು ವಾಯುಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಕಾರ್ಯವನ್ನು ಹೆಚ್ಚಿಸಿದೆ. ಜೆಎಂಕೆ ರಿಸರ್ಚ್ನ ವರದಿ ಪ್ರಕಾರ 2024ರಲ್ಲಿ 24.5 ಗೀಗಾವ್ಯಾಟ್ನಷ್ಟು ಸೌರವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಹಾಗೆಯೇ, ವಾಯುಶಕ್ತಿ ಮೂಲಕ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕಳೆದ ವರ್ಷ 3.4 ಗೀಗಾವ್ಯಾಟ್ನಷ್ಟು ಹೆಚ್ಚಿಸಿಕೊಂಡಿದೆ. ಇವು ಹೊಸ ದಾಖಲೆಗಳೇ ಆಗಿವೆ.
ಈ ಹೊಸ ಸೇರ್ಪಡೆಗಳೊಂದಿಗೆ ಭಾರತದಲ್ಲಿ ಒಟ್ಟಾರೆ ನವೀಕರಣ ಇಂಧನ ಉತ್ಪಾದನಾ ಸಾಮರ್ಥ್ಯ ಬರೋಬ್ಬರಿ 209.44 ಗಿಗಾವ್ಯಾಟ್ಗೆ ಏರಿದೆ. ಇದರಲ್ಲಿ ಸೌರಶಕ್ತಿಯ ಪಾಲೇ ಶೇ. 47ರಷ್ಟಿದೆ. ನವೀಕರಣ ಇಂಧನ ಅಥವಾ ಮರುಬಳಕೆ ಇಂಧನ ಮೂಲಗಳಲ್ಲಿ ಸೌರಶಕ್ತಿಯೇ ಅಗ್ರಜ ಆಗಿದೆ.
ದೊಡ್ಡ ಮಟ್ಟದ ಸೌರಶಕ್ತಿ ಉತ್ಪಾದನಾ (Utility Scale Solar) ಸಾಮರ್ಥ್ಯ 2024ರಲ್ಲಿ 18.5 ಗಿಗಾವ್ಯಾಟ್ನಷ್ಟು ಹೆಚ್ಚಾಗಿದೆ. ರಾಜಸ್ಥಾನ, ಗುಜರಾತ್ ಮತ್ತು ತಮಿಳುನಾಡಿನಲ್ಲಿ ಈ ರೀತಿಯ ಸೌರಘಟಕಗಳು ಅತಿಹೆಚ್ಚು ಸ್ಥಾಪಿತವಾಗಿವೆ. 2024ರಲ್ಲಿ ಹೊಸದಾಗಿ ಸೇರ್ಪಡೆಯಾದ ಸೌರ ಘಟಕಗಳಲ್ಲಿ ಈ ಮೂರು ರಾಜ್ಯಗಳ ಪಾಲು ಶೇ. 71ರಷ್ಟಿದೆ.
ಇದನ್ನೂ ಓದಿ: ಕಾಶ್ಮೀರ ಕಣಿವೆಯ ದುರ್ಗಮ ಹಾದಿಯಲ್ಲಿ ರೈಲು ಪ್ರಯೋಗ ಯಶಸ್ವಿ; ಶೀಘ್ರದಲ್ಲೇ ಜಮ್ಮು-ಕಾಶ್ಮೀರಕ್ಕೆ ನೇರ ರೈಲು ಸಂಪರ್ಕ
ಭಾರತದಲ್ಲಿ ಮೇಲ್ಛಾವಣಿ ಸೌರವಿದ್ಯುತ್ ಘಟಕಗಳ ಸ್ಥಾಪನೆ ಕಾರ್ಯ ಭರದಿಂದ ಸಾಗಿದೆ. 2024ರಲ್ಲಿ 4.59 ಗಿಗಾವ್ಯಾಟ್ನಷ್ಟು ಹೊಸ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೇರ್ಪಡೆಯಾಗಿದೆ. ಹಿಂದಿನ ವರ್ಷದಕ್ಕಿಂತ ಇದು ಶೇ. 53ರಷ್ಟು ಹೆಚ್ಚಳವಾಗಿದೆ.
ಪಿಎಂ ಸೂರ್ಯಘರ್ ಯೋಜನೆಯು ಈ ಮನೆ ಮೇಲಿನ ಸೌರವಿದ್ಯುತ್ ಸಾಮರ್ಥ್ಯ ಹೆಚ್ಚಲು ಪ್ರಮುಖ ಕಾರಣವಾಗಿದೆ. ಕೇವಲ 10 ತಿಂಗಳ ಅವಧಿಯಲ್ಲಿ ದೇಶಾದ್ಯಂತ 7 ಲಕ್ಷ ಸೌರಘಟಕಗಳನ್ನು ಮೇಲ್ಛಾವಣಿಗಳ ಮೇಲೆ ಸ್ಥಾಪಿಸಲಾಗಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ವಿಶ್ವದರ್ಜೆ ಲ್ಯಾಪ್ಟಾಪ್ ನಿರ್ಮಾಣಕ್ಕೆ ಹೊಸ ಘಟಕ; ಕೇಂದ್ರ ಸಚಿವ ಎ ವೈಷ್ಣವ್ರಿಂದ ಅಡಿಗಲ್ಲು
2024ರಲ್ಲಿ 3.4 ಗಿಗಾವ್ಯಾಟ್ನಷ್ಟು ವಾಯು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 2024ರಲ್ಲಿ ಸೇರ್ಪಡೆಯಾಗಿದೆ. ಇದರಲ್ಲಿ ಗುಜರಾತ್ ಮತ್ತು ಕರ್ನಾಟಕ ಮುಂಚೂಣಿಯಲ್ಲಿವೆ. 2024ರಲ್ಲಿ ಗುಜರಾತ್ನಲ್ಲಿ 1,250 ಮೆಗಾವ್ಯಾಟ್, ಕರ್ನಾಟಕದಲ್ಲಿ 1,135 ಮೆಗಾವ್ಯಾಟ್ ಮತ್ತು ತಮಿಳುನಾಡಿನಲ್ಲಿ 980 ಮೆಗಾವ್ಯಾಟ್ ವಿಂಡ್ ಎನರ್ಜಿ ಸಾಮರ್ಥ್ಯ ಸೇರ್ಪಡೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ