ಜಾಗತಿಕವಾಗಿ ನವೀಕರಣ ಇಂಧನ ಸಾಮರ್ಥ್ಯ ಹೆಚ್ಚಳದಲ್ಲಿ ಭಾರತದ ಗಣನೀಯ ಪಾಲು

New and Renewable energy minister Pralhad Joshi speaks at Global Energy Leaders Summit 2025: ಭಾರತವು ಸ್ವಚ್ಛ ಇಂಧನ ಉತ್ಪಾದನಾ ಸಾಮರ್ಥ್ಯ ಇತ್ತೀಚಿನ ವರ್ಷಗಳಿಂದ ಗಣನೀಯವಾಗಿ ಏರಿಕೆ ಆಗುತ್ತಿದೆ. 2014ರಲ್ಲಿ ಭಾರತದಲ್ಲಿ 2.8 ಗಿ.ವ್ಯಾ.ನಷ್ಟು ಮಾತ್ರವೇ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ ಇದ್ದದ್ದು. ಈಗ 2025ರಲ್ಲಿ ಅದು 130 ಗಿ.ವ್ಯಾ. ಮುಟ್ಟಿದೆ. 2022ರಿಂದ 2024ರವರೆಗೆ ಜಾಗತಿಕವಾಗಿ 1 ಟೆ.ವ್ಯಾ. ನವೀಕರಣ ಶಕ್ತಿ ಸಾಮರ್ಥ್ಯ ಹೆಚ್ಚಿದೆ. ಇದರಲ್ಲಿ ಭಾರತದ ಕೊಡುಗೆ ಬಹಳ ಇದೆ.

ಜಾಗತಿಕವಾಗಿ ನವೀಕರಣ ಇಂಧನ ಸಾಮರ್ಥ್ಯ ಹೆಚ್ಚಳದಲ್ಲಿ ಭಾರತದ ಗಣನೀಯ ಪಾಲು
ಪ್ರಲ್ಹಾದ್ ಜೋಷಿ

Updated on: Dec 07, 2025 | 4:02 PM

ನವದೆಹಲಿ, ಡಿಸೆಂಬರ್ 7: ನವೀಕರಣ ಇಂಧನ ಅಥವಾ ಮರುಬಳಕೆ ಇಂಧನ ಕ್ಷೇತ್ರದಲ್ಲಿ (Renewable energy) ಭಾರತ ಅದ್ವಿತೀಯ ವೇಗದಲ್ಲಿ ಬೆಳೆಯುತ್ತಿದೆ. ಈ ಹಣಕಾಸು ವರ್ಷದಲ್ಲೇ ಭಾರತದಲ್ಲಿ 31.25 ಗಿಗಾ ವ್ಯಾಟ್​ನಷ್ಟು ಸ್ವಚ್ಛ ಇಂಧನ ಉತ್ಪಾದನಾ ಸಾಮರ್ಥ್ಯ ಹೆಚ್ಚಿದೆ. ಇದರಲ್ಲಿ 24 ಗಿಗಾ ವ್ಯಾಟ್​ಗಿಂತ ಹೆಚ್ಚು ಸೌರಶಕ್ತಿಯೇ ಇದೆ. ಭಾರತದ ಒಟ್ಟಾರೆ ನವೀಕರಣ ಇಂಧನ ಸಾಮರ್ಥ್ಯ 130 ಗಿಗಾ ವ್ಯಾಟ್ ಮಟ್ಟ ದಾಟಿ ಹೋಗಿರುವುದು ಗಮನಾರ್ಹ. ಕಳೆದ 11 ವರ್ಷದಲ್ಲಿ ಭಾರತದಲ್ಲಿ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ ಶೇ. 4,500ರಷ್ಟು ಬೆಳೆದಿದೆ. ಕೇಂದ್ರ ನವೀಕರಣ ಇಂಧ ಸಚಿವ ಪ್ರಲ್ಹಾದ್ ಜೋಷಿ (Pralhad Joshi) ಈ ಮಾಹಿತಿಯನ್ನು ನೀಡಿದ್ದಾರೆ.

ಇಡೀ ವಿಶ್ವದಲ್ಲಿ 1 ಟೆರಾವ್ಯಾಟ್​ನಷ್ಟು ನವೀಕರಣ ಇಂಧನ ಉತ್ಪಾದನಾ ಸಾಮರ್ಥ್ಯ ತಲುಪಲು ಸಾಧ್ಯವಾಗಿದ್ದು 2022ರಲ್ಲಿ. ಅದಾಗಿ ಎರಡೇ ವರ್ಷದಲ್ಲಿ ಅದು ದ್ವಿಗುಣಗೊಂಡಿದೆ. 2022ರ ನಂತರ ನವೀಕರಣ ಇಂಧನ ತಯಾರಿಕೆ ಭರದಿಂದ ಸಾಗಿದೆ. 2022ರಿಂದ 2024ರವರೆಗೆ ಜಾಗತಿಕವಾಗಿ ನವೀಕರಣ ಇಂಧನ ಸಾಮರ್ಥ್ಯ 1 ಟಿಡಬ್ಲ್ಯುದಿಂದ 2 ಟಿಡಬ್ಲ್ಯುಗೆ ಏರಿದೆ.

ಇದನ್ನೂ ಓದಿ: ಭಾರತ-ರಷ್ಯಾ 23ನೇ ಜಂಟಿ ವಾರ್ಷಿಕ ಸಭೆ; 100 ಬಿಲಿಯನ್ ಡಾಲರ್​ಗೆ ವ್ಯಾಪಾರ ಹೆಚ್ಚಿಸುವ ಗುರಿ

ಈ ಎರಡು ವರ್ಷದ ಅಗಾಧ ಬೆಳವಣಿಗೆಯಲ್ಲಿ ಭಾರತದ ಪಾಲು ಗಮನೀಯವಾಗಿದೆ. ಹನ್ನೊಂದು ವರ್ಷಗಳ ಹಿಂದೆ ಭಾರತದ ಸೌರಶಕ್ತಿ ಸಾಮರ್ಥ್ಯ 2.8 ಗಿಗಾ ವ್ಯಾಟ್ ಮಾತ್ರವೇ ಇತ್ತು. ಇದೀಗ ಅದು 130 ಗಿಗಾ ವ್ಯಾಟ್​ಗೆ ಏರಿದೆ. 2022ರಿಂದ 2024ರವರೆಗೆ ಭಾರತವೊಂದೇ 46 ಗಿಗಾ ವ್ಯಾಟ್​ನಷ್ಟು ಸೌರಶಕ್ತಿ ತಯಾರಿಕೆ ಹೆಚ್ಚಿಸಿದೆ. ಸಚಿವ ಪ್ರಹ್ಲಾದ್ ಜೋಷಿ ಪ್ರಕಾರ, ಆ ಎರಡು ವರ್ಷ ಜಾಗತಿಕ ಸೌರಶಕ್ತಿಯನ್ನು ಅತಿಹೆಚ್ಚಿಸಿದ ದೇಶಗಳ ಪಟ್ಟಿಯಲ್ಲಿ ಭಾರತದ್ದು ಮೂರನೇ ಸ್ಥಾನ.

ಕಲ್ಲಿದ್ದಲು ಹೇರಳವಾಗಿದ್ದರೂ ಸ್ವಚ್ಛ ಇಂಧನಕ್ಕೆ ಭಾರತದ ಆದ್ಯತೆ

ಒಡಿಶಾದ ಪುರಿಯಲ್ಲಿ ನಡೆದ ಗ್ಲೋಬಲ್ ಎನರ್ಜಿ ಲೀಡರ್ಸ್ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಲ್ಹಾದ್ ಜೋಷಿ, ಭಾರತದಲ್ಲಿ ಕಲ್ಲಿದ್ದಲು ಸಂಪನ್ಮೂಲ ಹೇರಳವಾಗಿದ್ದರೂ ಸ್ವಚ್ಛ ಇಂಧನ ತಯಾರಿಕೆಗೆ ಒತ್ತು ಕೊಡಲಾಗುತ್ತಿರುವುದನ್ನು ತಿಳಿಸಿದ್ದಾರೆ

ಇದನ್ನೂ ಓದಿ: ಭಾರತಕ್ಕೆ ತೈಲ ಪೂರೈಕೆ ಮುಂದುವರೆಸುತ್ತೇವೆ; ದೆಹಲಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿಕೆ

ವಿಶ್ವದಲ್ಲೇ ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪಗಳಿರುವ ದೇಶಗಳ ಪೈಕಿ ಭಾರತ 5ನೆಯದು. ಇಷ್ಟಿದ್ದರೂ ಭಾರತವು ಕಲ್ಲಿದ್ದಲು ಬಳಕೆ ಹೆಚ್ಚಿಸದೆ, ನವೀಕರಣ ಇಂಧನ ತಯಾರಿಕೆಗೆ ಒತ್ತುಕೊಡುತ್ತಿದೆ ಎಂದು ಸಚಿವ ಜೋಷಿ ಹೇಳಿದ್ದಾರೆ.

ಪಳೆಯುಳಿಕೆ ಇಂಧನದ ಬಳಕೆ ತಗ್ಗಿಸಿ ಸ್ವಚ್ಛ ಇಂಧನದ ಬಳಕೆ ಹೆಚ್ಚಿಸುವ ಸರ್ಕಾರದ ಪರಿಸರಸ್ನೇಹಿ ನೀತಿಯ ಫಲ. ಜಾಗತಿಕ ಕಾರಣಗಳಿಗೆ ಭಾರತವು ನವೀಕರಣ ಇಂಧನದತ್ತ ವಾಲುವುದು ಸಂದರ್ಭೋಚಿತವೆನಿಸಿದೆ. ಸರ್ಕಾರದ ನೀತಿಗಳು, ಮೂಲಸೌಕರ್ಯ, ಬೇಡಿಕೆ ಪ್ರೇರಿತ ಯೋಜನೆಗಳು, ಕೇಂದ್ರ-ರಾಜ್ಯ ಸಹಕಾರ, ಹೂಡಿಕೆದಾರರ ವಿಶ್ವಾಸ, ಇವೆಲ್ಲವೂ ಭಾರತದಲ್ಲಿ ನವೀಕರಣ ಇಂಧನದ ಶಕ್ತಿ ಹೆಚ್ಚಿಸಲು ಸಹಾಯಕವಾಗಿವೆ ಎಂದು ಪ್ರಲ್ಹಾದ್ ಜೋಷಿ ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ