IT Companies Recruitment: ಟಾಪ್ ಐಟಿ ಕಂಪೆನಿಗಳಿಂದ 1 ಲಕ್ಷಕ್ಕೂ ಹೆಚ್ಚು ಪದವೀಧರರ ನೇಮಕ ನಿರೀಕ್ಷೆ

| Updated By: Srinivas Mata

Updated on: Oct 15, 2021 | 1:16 PM

ಭಾರತದ ಟಾಪ್ ಐಟಿ ಕಂಪೆನಿಗಳು 1 ಲಕ್ಷಕ್ಕೂ ಅಧಿಕ ಕಾಲೇಜು ಪದವೀಧರರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಯೋಜನೆ ರೂಪಿಸಿವೆ. ಆ ಬಗ್ಗೆ ಮಾಹಿತಿ ನಿಮ್ಮೆದುರು ಇದೆ.

IT Companies Recruitment: ಟಾಪ್ ಐಟಿ ಕಂಪೆನಿಗಳಿಂದ 1 ಲಕ್ಷಕ್ಕೂ ಹೆಚ್ಚು ಪದವೀಧರರ ನೇಮಕ ನಿರೀಕ್ಷೆ
ಸಾಂದರ್ಭಿಕ ಚಿತ್ರ
Follow us on

ನೇಮಕಾತಿ ಚಟುವಟಿಕೆ ಹೆಚ್ಚಾಗುತ್ತಿರುವಂತೆ ಡಿಜಿಟಲ್ ಪ್ರತಿಭೆ ಬೇಡಿಕೆ ಭಾರೀ ಪ್ರಮಾಣದಲ್ಲಿ ಜಾಸ್ತಿ ಆಗುತ್ತಿದ್ದು, ಭಾರತದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಸೇವಾ ಪೂರೈಕೆದಾರರಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಇನ್ಫೋಸಿಸ್, ವಿಪ್ರೋ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಈ ಆರ್ಥಿಕ ವರ್ಷದಲ್ಲಿ ಸಂಸ್ಥೆಗಳು ತಮ್ಮ ತ್ರೈಮಾಸಿಕ ಗಳಿಕೆಯ ಅಪ್‌ಡೇಟ್‌ನಲ್ಲಿ ಹೇಳಿಕೊಂಡಂತೆ 1 ಲಕ್ಷಕ್ಕೂ ಹೆಚ್ಚು ಹೊಸಬರನ್ನು ಸ್ವಾಗತಿಸುವ ನಿರೀಕ್ಷೆಯಿದೆ.

ಟಿಸಿಎಸ್
ಐಟಿ ಪ್ರಮುಖ ಕಂಪೆನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಶುಕ್ರವಾರ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ 35,000 ಹೊಸ ಪದವೀಧರರನ್ನು ನೇಮಿಸಿಕೊಳ್ಳಲು ಯೋಜಿಸಿದ್ದು, ಸಂಪೂರ್ಣ ಆರ್ಥಿಕ ವರ್ಷಕ್ಕೆ ಅದು ಒಟ್ಟು 78,000ಕ್ಕೆ ತಲುಪಿದೆ. ಕಳೆದ ಆರು ತಿಂಗಳಲ್ಲಿ ಕಂಪೆನಿಯು 43,000 ಪದವೀಧರರನ್ನು ನೇಮಿಸಿಕೊಂಡಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಟಿಸಿಎಸ್ ಅಟ್ರಿಶನ್ ದರ (ಕೆಲಸ ಬಿಡುವವರ ಪ್ರಮಾಣ) ಶೇ 11.9ಕ್ಕೆ ಏರಿಕೆಯಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಶೇ 8.6ರಷ್ಟು ಇದ್ದದ್ದು ಅದಕ್ಕಿಂತ ಹೆಚ್ಚಾಗಿದೆ. ಕಂಪೆನಿಯ ಆಡಳಿತವು ಪ್ರಸ್ತುತ ಅಟ್ರಿಶನ್ ಮಟ್ಟಗಳ ಬಗ್ಗೆ ಚಿಂತಿತವಾಗಿದೆ ಹಾಗೂ ಮುಂದಿನ ಎರಡು- ಮೂರು ತ್ರೈಮಾಸಿಕಗಳಲ್ಲಿ ಈ ಪ್ರವೃತ್ತಿ ಮುಂದುವರಿಯುತ್ತದೆ ಎಂದು ಹೇಳಲಾಗಿದೆ.

ಇನ್ಫೋಸಿಸ್
ಅಟ್ರಿಶನ್ ಮಟ್ಟ ತೀವ್ರ ಏರಿಕೆಗೆ ಸಾಕ್ಷಿ ಆಗಿರುವುದರಿಂದ ಇನ್ಫೋಸಿಸ್ ಈಗಾಗಲೇ ತನ್ನ ಹೊಸಬರ ನೇಮಕಾತಿ ಕಾರ್ಯಕ್ರಮವನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಐಟಿ ಕಂಪನಿ ಈ ಹಣಕಾಸು ವರ್ಷದಲ್ಲಿ 45,000 ಕಾಲೇಜು ಪದವೀಧರರನ್ನು ನೇಮಿಸಿಕೊಳ್ಳಲು ಯೋಜಿಸಿದೆ ಎಂದು ಹೇಳಿದೆ. “ಮಾರುಕಟ್ಟೆಯ ಅವಕಾಶದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಲುವಾಗಿ ಕಾಲೇಜು ಪದವೀಧರರ ನೇಮಕಾತಿ ಕಾರ್ಯಕ್ರಮವನ್ನು ವರ್ಷಕ್ಕೆ 45,000ಕ್ಕೆ ವಿಸ್ತರಿಸುತ್ತಿದ್ದೇವೆ,” ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರವೀಣ್ ರಾವ್ ಹೇಳಿದ್ದಾರೆ. ಜೂನ್ ತ್ರೈಮಾಸಿಕದ ಕೊನೆಯಲ್ಲಿ ಇನ್ಫೋಸಿಸ್ ಹೇಳಿದಂತೆ, 35,000 ಕಾಲೇಜು ಪದವೀಧರರನ್ನು ನೇಮಿಸಿಕೊಳ್ಳಲು ಯೋಜಿಸಲಾಗಿದೆ.

ವಿಪ್ರೋ
ಎರಡನೇ ತ್ರೈಮಾಸಿಕ ಗಳಿಕೆಯ ಅಪ್‌ಡೇಟ್‌ನಲ್ಲಿ ವಿಪ್ರೋ ಸಿಇಒ ಮತ್ತು ಎಂಡಿ ಥಿಯೆರಿ ಡೆಲಾಪೋರ್ಟೆ, ಎರಡನೇ ತ್ರೈಮಾಸಿಕದಲ್ಲಿ ಕ್ಯಾಂಪಸ್‌ಗಳಿಂದ 8,100 ಯುವ ಸಹೋದ್ಯೋಗಿಗಳನ್ನು ಸೇರಿಸಿಕೊಂಡು, ಫ್ರೆಷರ್ಸ್ ನೇಮಕಾತಿ ದ್ವಿಗುಣಗೊಳಿಸಿದ್ದಾರೆ. “ನಾವು ಇದನ್ನು ಆಕ್ರಮಣಕಾರಿಯಾಗಿ ಮುಂದುವರಿಸುತ್ತೇವೆ. ಮುಂದಿನ ಹಣಕಾಸು ವರ್ಷದಲ್ಲಿ ನಾವು 25,000 ಹೊಸಬರನ್ನು ನೇಮಿಸಿಕೊಳ್ಳುತ್ತೇವೆ,” ಎಂದು ಡೆಲಾಪೋರ್ಟೆ ಹೇಳಿದ್ದಾರೆ.

ಎಚ್‌ಸಿಎಲ್ ಟೆಕ್
ಎಚ್‌ಸಿಎಲ್ ಟೆಕ್ನಾಲಜೀಸ್ ಈ ವರ್ಷ ಸುಮಾರು 20,000-22,000 ಹೊಸ ಪದವೀಧರರನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ ಮತ್ತು ಮುಂದಿನ ವರ್ಷ 30,000 ಹೊಸಬರನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ ಎಂದು ಆಡಳಿತ ಮಂಡಳಿ ಗುರುವಾರ ತಿಳಿಸಿದೆ.

ಇದನ್ನೂ ಓದಿ: Reliance Industries: ಫೋರ್ಬ್ಸ್​ನಿಂದ ಭಾರತದ ಟಾಪ್ 1 ಉದ್ಯೋಗದಾತ ಸಂಸ್ಥೆಯಾಗಿ ರಿಲಯನ್ಸ್​ ಇಂಡಸ್ಟ್ರೀಸ್ ಆಯ್ಕೆ