ಏವಿಯೇಶನ್ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಭಾರತದ ಇಂಡಿಗೋ ಏರ್ಲೈನ್ಸ್ ವಿಶ್ವದ ನಂಬರ್ 3

|

Updated on: Apr 10, 2024 | 3:56 PM

Indigo Airlines Market Capital Rise Enormously: ಇಂಡಿಗೋ ಏರ್ಲೈನ್ಸ್​ನ ಷೇರುಬೆಲೆ ಕಳೆದ ಒಂದು ವರ್ಷದಿಂದ ಸಖತ್ತಾಗಿ ಏರಿದೆ. ಇದರಿಂದ ಅದರ ಮಾರುಕಟ್ಟೆ ಬಂಡವಾಳ ಅಥವಾ ಮಾರ್ಕೆಟ್ ಕ್ಯಾಪ್ 17.6 ಬಿಲಿಯನ್ ಡಾಲರ್​ನಷ್ಟಾಗಿದೆ. ವಿಶ್ವದ ಏವಿಯೇಶನ್ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರ್ಕೆಟ್ ಕ್ಯಾಪ್ ಇರುವ ಕಂಪನಿಗಳಲ್ಲಿ ಇಂಡಿಗೋ ಏರ್ಲೈನ್ಸ್ ಮೂರನೇ ಸ್ಥಾನಕ್ಕೆ ಏರಿದೆ. ಅಮೆರಿಕದ ಸೌತ್​ವೆಸ್ಟ್ ಏರ್ಲೈನ್ಸ್ ಅನ್ನು ಹಿಂದಿಕ್ಕಿದೆ. ಮುಂದಿನ 12 ತಿಂಗಳಲ್ಲಿ ಇದರ ಷೇರು ಬೆಲೆ ಶೇ 10ರಿಂದ 15ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಏವಿಯೇಶನ್ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಭಾರತದ ಇಂಡಿಗೋ ಏರ್ಲೈನ್ಸ್ ವಿಶ್ವದ ನಂಬರ್ 3
ಇಂಡಿಗೋ ಏರ್ಲೈನ್ಸ್
Follow us on

ನವದೆಹಲಿ, ಏಪ್ರಿಲ್ 10: ದೇಶದ ಅತಿದೊಡ್ಡ ವೈಮಾನಿಕ ಸಂಸ್ಥೆಯಾದ ಇಂಡಿಗೋ ಏರ್ಲೈನ್ಸ್ (Indigo Airlines) ಇದೀಗ ಮಾರುಕಟ್ಟೆ ಮೌಲ್ಯದಲ್ಲಿ (Market cap) ಜಾಗತಿಕ ವೈಮಾನಿಕ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಕಳೆದ ಆರು ತಿಂಗಳಿಂದ ಅದರ ಷೇರುಬೆಲೆ ಗಣನೀಯವಾಗಿ ಹೆಚ್ಚಿದೆ. ಪರಿಣಾಮವಾಗಿ ಮಾರುಕಟ್ಟೆ ಬಂಡವಾಳ ಆರು ತಿಂಗಳಲ್ಲಿ ಶೇ. 50ರಷ್ಟು ಹೆಚ್ಚಾಗಿದೆ. ಇದರ ಒಟ್ಟು ಮಾರ್ಕೆಟ್ ಕ್ಯಾಪ್ ಈಗ 17.6 ಬಿಲಿಯನ್ ಡಾಲರ್ ಇದೆ. ಜಾಗತಿಕ ಕಂಪನಿಗಳ ಪೈಕಿ ಡೆಲ್ಟಾ ಏರ್ಲೈನ್ಸ್ ಮತ್ತು ರಯಾನ್ ಏರ್ ಹೋಲ್ಡಿಂಗ್ಸ್ ಸಂಸ್ಥೆಗಳು ಮಾತ್ರವೇ ಇದಕ್ಕಿಂತ ಹೆಚ್ಚು ಮಾರ್ಕೆಟ್ ಕ್ಯಾಪ್ ಹೊಂದಿರುವುದು.

ಅಮೆರಿಕದ ಡೆಲ್ಟಾ ಏರ್ ಲೈನ್ಸ್ ಸಂಸ್ಥೆಯ ಮಾರುಕಟ್ಟೆ ಬಂಡವಾಳ 30.4 ಬಿಲಿಯನ್ ಡಾಲರ್ ಇದೆ. ಐರ್ಲೆಂಡ್ ಮೂಲದ ರಯಾನ್ ಏರ್ ಹೋಲ್ಡಿಂಗ್ಸ್ 26.5 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ. ನಂತರ ಸ್ಥಾನ 17.6 ಬಿಲಿಯನ್ ಡಾಲರ್ ಇರುವ ಇಂಡಿಗೋ ಏರ್ಲೈನ್ಸ್​ನದ್ದಾಗಿದೆ. ಅಮೆರಿಕದ ಸೌತ್​ವೆಸ್ಟ್ ಏರ್ಲೈನ್ಸ್ ಸಂಸ್ಥೆಯ ಮಾರುಕಟ್ಟೆ ಬಂಡವಾಳ 17.3 ಬಿಲಿಯನ್ ಡಾಲರ್ ಇದ್ದು ನಾಲ್ಕನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಅನಿಲ್ ಅಂಬಾನಿಗೆ ಹಿನ್ನಡೆ; ಡೆಲ್ಲಿ ಮೆಟ್ರೋಗೆ 8,000 ಕೋಟಿ ರೂ ಮರಳಿಸುವಂತೆ ರಿಲಾಯನ್ಸ್ ಇನ್​ಫ್ರಾಗೆ ಸುಪ್ರೀಂಕೋರ್ಟ್ ನಿರ್ದೇಶನ

2023ರ ಮಾರ್ಚ್​ನಲ್ಲಿ ಜಾಗತಿಕ ವೈಮಾನಿಕ ಸಂಸ್ಥೆಗಳ ಪೈಕಿ ಮಾರುಕಟ್ಟೆ ಬಂಡವಾಳದಲ್ಲಿ ಇಂಡಿಗೋ ಏರ್ಲೈನ್ಸ್ 14ನೇ ಸ್ಥಾನ ಹೊಂದಿತ್ತು. ಒಂದು ವರ್ಷದ ಅಂತರದಲ್ಲಿ ಯುನೈಟೆಡ್ ಏರ್ಲೈನ್ಸ್, ಏರ್ ಚೀನಾ, ಸಿಂಗಾಪುರ್ ಏರ್ಲೈನ್ಸ್ ಮೊದಲಾದ ಪ್ರಮುಖ ಕಂಪನಿಗಳನ್ನು ಹಿಂದಿಕ್ಕಿದೆ.

ಸಾಕಷ್ಟು ಬೆಳವಣಿಗೆಯ ಸಾಮರ್ಥ್ಯ ಹೊಂದಿರುವ ಇಂಡಿಗೋ ಏರ್ಲೈನ್ಸ್ ಷೇರು

ಇಂಡಿಗೋ ಏರ್ಲೈನ್ಸ್ ಮಾಲಕತ್ವ ಹೊಂದಿರುವ ಇಂಟರ್​ಗ್ಲೋಬ್ ಏವಿಯೇಶನ್ ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ ಸ್ಥಿರ ಪ್ರದರ್ಶನ ತೋರಿದೆ. ವರ್ಷದ ಹಿಂದೆ ಅದರ ಷೇರು ಬೆಲೆ 1,864 ರೂ ಇತ್ತು. ಇವತ್ತು 3,806 ರೂಗೆ ಏರಿದೆ. ಕಳೆದ ಏಳೆಂಟು ವರ್ಷದಲ್ಲಿ ಅದರ ಷೇರುಬೆಲೆ ಶೇ. 2,802ನಷ್ಟು ಏರಿದೆ.

ಇದನ್ನೂ ಓದಿ: ಇಂಧನ ಬೆಲೆ ಹೆಚ್ಚಿಲ್ಲ, ಆದರೂ ದುಬಾರಿಯಾಗುತ್ತಿದೆ ವಿಮಾನ ಪ್ರಯಾಣ; ಕಾರಣ ಇದು

ವಿಶ್ವಖ್ಯಾತ ಹಣಕಾಸು ಸಂಸ್ಥೆ ಮಾರ್ಗನ್ ಸ್ಟಾನ್ಲೀ ಇಂಡಿಗೋ ಏರ್ಲೈನ್ಸ್ ಷೇರಿಗೆ ಉತ್ತಮ ವೈಟೇಜ್ ಕೊಟ್ಟಿದೆ. 12 ತಿಂಗಳ ಟಾರ್ಗೆಟ್ ಪ್ರೈಸ್ 4,145 ರೂ ಎಂದು ನಿಗದಿ ಮಾಡಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಆದಷ್ಟು ವೇಗದಲ್ಲಿ ವೃದ್ಧಿಯಾದರೆ 12 ತಿಂಗಳಲ್ಲಿ ಷೇರುಬೆಲೆ 5,000 ರೂ ದಾಟಿದರೂ ಅಚ್ಚರಿ ಇಲ್ಲ. ಆದರೆ, ಭಾರತದ ವೈಮಾನಿಕ ಕ್ಷೇತ್ರದ ಸದ್ಯದ ಬಿಕ್ಕಟ್ಟು ಗಮನಿಸಿದರೆ ಇಂಡಿಗೋ ಏರ್ಲೈನ್ಸ್​ನಿಂದ ಹೆಚ್ಚಿನ ಬೆಳವಣಿಗೆ ನಿರೀಕ್ಷಿಸುವುದು ಕಷ್ಟವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ