ಅನಿಲ್ ಅಂಬಾನಿಗೆ ಹಿನ್ನಡೆ; ಡೆಲ್ಲಿ ಮೆಟ್ರೋಗೆ 8,000 ಕೋಟಿ ರೂ ಮರಳಿಸುವಂತೆ ರಿಲಾಯನ್ಸ್ ಇನ್ಫ್ರಾಗೆ ಸುಪ್ರೀಂಕೋರ್ಟ್ ನಿರ್ದೇಶನ
Anil ambani Owned Reliance Infra Shares Hit Lower Circuit: ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ನ ಅಂಗಸಂಸ್ಥೆಯಾದ ದೆಹಲಿ ಏರ್ಪೋರ್ಟ್ ಮೆಟ್ರೋ ಎಕ್ಸ್ಪ್ರೆಸ್ ಪ್ರೈ ಲಿ ಸಂಸ್ಥೆಗೆ ಡಿಎಂಆರ್ಸಿ ನೀಡಿದ್ದ 8,000 ಕೋಟಿ ರೂ ಹಣವನ್ನು ಮರಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಇದರೊಂದಿಗೆ ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ಗೆ ಹಿನ್ನಡೆಯಾಗಿದ್ದು ಷೇರು ಮಾರುಕಟ್ಟೆಯಲ್ಲಿ ಗರಿಷ್ಠ ಕುಸಿತಕ್ಕೆ ಒಳಗಾಗಿದೆ.
ನವದೆಹಲಿ, ಏಪ್ರಿಲ್ 10: ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗೆ (Reliance Infrastructure) ಇಂದು ಆಘಾತಕವಾಗಿ ಸುದ್ದಿ ಬಂದಿದೆ. ಇದರ ಉಪಸಂಸ್ಥೆಗೆ ದೆಹಲಿ ಮೆಟ್ರೋ ರೈಲ್ ಕಾರ್ಪೊರೇಶನ್ (DMRC) ನೀಡಿದ್ದ 8,000 ಕೋಟಿ ರೂ ಹಣವನ್ನು ಮರಳಿಸುವಂತೆ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಡಿಎಂಆರ್ಸಿ ಸಲ್ಲಿಸಿದ್ದ ಕ್ಯುರೇಟಿವ್ ಪೆಟಿಶನ್ ಅಥವಾ ಮರುಪರಿಶೀಲನಾ ಮನವಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಪುರಸ್ಕರಿಸಿದೆ. ಈ ಮೂಲಕ ವಿಭಾಗೀಯ ಪೀಠ ನೀಡಿದ್ದ ಆದೇಶ ರದ್ದಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಷೇರುಬೆಲೆ ತೀವ್ರ ಕುಸಿತ ಕಂಡಿದೆ. ಕೆಳಗಿನ ಇಳಿಕಾ ಮಿತಿಯಾದ ಶೇ. 20ರಷ್ಟು ಷೇರುಬೆಲೆ ಕುಸಿತವಾಗಿದೆ.
ಏನಿದು ಪ್ರಕರಣ?
2008ರಲ್ಲಿ ಡೆಲ್ಲಿ ಏರ್ಪೋರ್ಟ್ ಎಕ್ಸ್ಪ್ರೆಸ್ ಅನ್ನು ನಿರ್ಮಿಸುವ ಯೋಜನೆಗೆ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಮತ್ತು ಡಿಎಂಆರ್ಸಿ ಮಧ್ಯೆ ಒಪ್ಪಂದವಾಗಿತ್ತು. ಆದರೆ, 2012ರಲ್ಲಿ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಈ ಒಪ್ಪಂದಿಂದ ಹೊರಬಂದಿತು. ಆಗ ಡೆಲ್ಲಿ ಮೆಟ್ರೋ ರೈಲ್ ಕಾರ್ಪೊರೇಶನ್ ಸಂಸ್ಥೆ ರಿಲಾಯನ್ಸ್ ಇನ್ಫ್ರಾ ವಿರುದ್ಧ ಕಾನೂನು ಕ್ರಮಕ್ಕೆ ಮೊರೆ ಹೋಯಿತು. 2017ರಲ್ಲಿ ನ್ಯಾಯಮಂಡಳಿಯು ಡಿಎಂಆರ್ಸಿ ವಿರುದ್ಧವೇ ತೀರ್ಪು ನೀಡಿತು. ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ನ ಅಂಗ ಸಂಸ್ಥೆಯಾದ ಡಿಎಎಂಇಪಿಎಲ್ಗೆ 2,800 ಕೋಟಿ ರೂಗೆ ಬಡ್ಡಿ ಸೇರಿಸಿ ಕೊಡುವಂತೆ ಆದೇಶಿಸಿತು.
ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಎಂಡಿ, ಸಿಇಒ ಸುರೀಂದರ್ ಚಾವ್ಲಾ ರಾಜೀನಾಮೆ
2018ರಲ್ಲಿ ದೆಹಲಿ ಹೈಕೋರ್ಟ್ನ ಒಂದು ನ್ಯಾಯಪೀಠ ಕೂಡ ಈ ತೀರ್ಪನ್ನು ಎತ್ತಿಹಿಡಿಯಿತು. ಆದರೆ ಹೈಕೋರ್ಟ್ನ ವಿಭಾಗೀಯ ಪೀಠವೊಂದು ಈ ಆದೇಶವನ್ನು ರದ್ದು ಮಾಡಿತು. ಬಳಿಕ ಸುಪ್ರೀಂಕೋರ್ಟ್ನ ದ್ವಿಸದಸ್ಯ ವಿಭಾಗೀಯ ನ್ಯಾಯಪೀಠ ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ರದ್ದು ಮಾಡಿ ಡಿಎಂಆರ್ಸಿ ವಿರುದ್ಧದ ತೀರ್ಪನ್ನೇ ಎತ್ತಿಹಿಡಿಯಿತು. ಆದರೆ, ಪಟ್ಟು ಬಿಡದ ಡೆಲ್ಲಿ ಮೆಟ್ರೋ ರೈಲು ನಿಗಮ ಅಂತಿಮ ಮಾರ್ಗವಾಗಿ ಕ್ಯುರೇಟಿವ್ ಪೆಟಿಶನ್ ಹಾಕಿತು. ಈಗ ಸುಪ್ರೀಂ ಕೋರ್ಟ್ ನ್ಯಾಯಪೀಠ ಡಿಎಂಆರ್ಸಿ ಪರವಾಗಿ ತೀರ್ಪು ನೀಡಿದೆ.
ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ನ ಷೇರು ಬೆಲೆ 2008ರ ಜನವರಿ ತಿಂಗಳಲ್ಲಿ 2,514 ರೂಗಳ ಗರಿಷ್ಠ ಮಟ್ಟದಲ್ಲಿತ್ತು. ಈಗ ಅದು 227.60 ರೂಗೆ ಕುಸಿದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಷೇರುಬೆಲೆ ಸ್ಥಿರವಾಗಿ ಏರತೊಡಗಿತ್ತು. ಈಗ ಸುಪ್ರೀಂಕೋರ್ಟ್ ತೀರ್ಪು ರಿಲಾಯನ್ಸ್ ಇನ್ಫ್ರಾ ಷೇರಿಗೆ ಇನ್ನಷ್ಟು ಹಿನ್ನಡೆ ತರುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ