ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಎಂಡಿ, ಸಿಇಒ ಸುರೀಂದರ್ ಚಾವ್ಲಾ ರಾಜೀನಾಮೆ
Paytm Payments Bank CEO Surinder Chawala Exits: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಸಿಇಒ ಮತ್ತು ಎಂಡಿ ಆಗಿರುವ ಸುರೀಂದರ್ ಚಾವ್ಲಾ ಸೋಮವಾರ (ಏ. 8) ರಾಜೀನಾಮೆ ನೀಡಿರುವುದು ಗೊತ್ತಾಗಿದೆ. ವೈಯಕ್ತಿಕ ಕಾರಣ ನೀಡಿ ಅವರು ರಾಜೀನಾಮೆ ಕೊಟ್ಟಿದ್ದು ರಿಲೀವ್ ಡೇಟ್ ಜೂನ್ 26 ಆಗಿದೆ. 2023ರ ಜನವರಿ 9ರಂದು ಅವರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿ ಸಂಸ್ಥೆಯನ್ನು ಸೇರಿದ್ದರು. ಒಂದು, ಒಂದೂವರೆ ವರ್ಷದ ಅವರ ಈ ಪ್ರಯಾಣ ಮುಕ್ತಾಯಗೊಳ್ಳುತ್ತಿದೆ.
ನವದೆಹಲಿ, ಏಪ್ರಿಲ್ 10: ಕಳೆದ ವರ್ಷ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ (Paytm Payments Bank) ಎಂಡಿ ಮತ್ತು ಸಿಇಒ ಆಗಿ ನೇಮಕವಾಗಿದ್ದ ಸುರೀಂದರ್ ಚಾವ್ಲಾ (Surinder Chawla) ರಾಜೀನಾಮೆ ನೀಡಿದ್ದಾರೆ. ಜೂನ್ 26ಕ್ಕೆ ಪಿಪಿಬಿಎಲ್ನಲ್ಲಿ (PPBL) ಅವರ ಸೇವೆ ಅಂತ್ಯವಾಗಲಿದೆ. ಮೊನ್ನೆ (ಏ. 8) ಅವರು ರಾಜೀನಾಮೆ ನೀಡಿರುವುದು ತಿಳಿದುಬಂದಿದೆ. ವೈಯಕ್ತಿಕ ಕಾರಣಕ್ಕೆ ಮತ್ತು ಉತ್ತಮ ವೃತ್ತಿ ಅವಕಾಶ ಅರಸಲು ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. 2023ರ ಜನವರಿ 9ರಂದು ಅವರು ಪಿಪಿಬಿಎಲ್ ಸಂಸ್ಥೆ ಸೇರಿದ್ದರು.
‘ಅಂಗ ಸಂಸ್ಥೆಯಾದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಗಿರುವ ಸುರೀಂದರ್ ಚಾವ್ಲಾ ಏಪ್ರಿಲ್ 8ರಂದು ರಾಜೀನಾಮೆ ನೀಡಿದರು ಎಂದು ಮಾಹಿತಿ ನೀಡಿದೆ. ಉತ್ತಮ ವೃತ್ತಿ ಅವಕಾಶ ಅರಸಲು ಮತ್ತು ವೈಯಕ್ತಿಕ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದೆ,’ ಎಂದು ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ನಿನ್ನೆ ಮಂಗಳವಾರ (ಏ. 9) ಸಲ್ಲಿಸಿದ ಬಿಎಸ್ಇ ಫೈಲಿಂಗ್ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಕೋಲಾರದಲ್ಲಿ ಟಾಟಾ ನಿರ್ಮಿತ ಮಿಲಿಟರಿ ಸೆಟಿಲೈಟ್ ಅಮೆರಿಕದ ಸ್ಪೇಸ್ಎಕ್ಸ್ ರಾಕೆಟ್ ಮುಖಾಂತರ ಭೂಕಕ್ಷೆಗೆ
ಗುತ್ತಿಗೆ ನಿಯಮದ ಪ್ರಕಾರ ಸುರೀಂದರ್ ಚಾವ್ಲಾ ನೋಟೀಸ್ ಪೀರಿಯಡ್ ಸರ್ವ್ ಮಾಡಬೇಕಾಗುತ್ತದೆ. ಜೂನ್ 26ಕ್ಕೆ ಅವರನ್ನು ರಿಲೀವ್ ಮಾಡಲಾಗುತ್ತಿದೆ. ಪರಸ್ಪರ ಒಪ್ಪಿಗೆ ಮೇರೆಗೆ ರಿಲೀವಿಂಗ್ ಡೇಟ್ ಬದಲಾಗಬಹುದು.
ಆರ್ಬಿಐನಿಂದ ನಿರ್ಬಂಧಕ್ಕೊಳಗಾಗಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಈಗ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಬ್ಯಾಂಕ್ನ ಛೇರ್ಮನ್ ಆಗಿದ್ದ ವಿಜಯ್ ಶೇಖರ್ ಶರ್ಮಾ ಫೆಬ್ರುವರಿ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು. ಒನ್97 ಕಮ್ಯೂನಿಕೇಶನ್ಸ್ ಮತ್ತು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಎರಡರ ಅಧಿಕಾರವನ್ನೂ ಅವರು ಹಿಡಿದಿದ್ದು ಆರ್ಬಿಐ ನಿರ್ಬಂಧಕ್ಕೆ ಇದ್ದ ಕಾರಣಗಳಲ್ಲಿ ಒಂದಾಗಿತ್ತು.
ಇದನ್ನೂ ಓದಿ: ಗಾಳಿಯಿಂದ ನೀರು ತಯಾರಿಸುವ ಬೆಂಗಳೂರಿನ ಉರವು ಲ್ಯಾಬ್ಸ್; ನೀರಿನ ಸಮಸ್ಯೆಗೆ ಸ್ಟಾರ್ಟಪ್ ಪರಿಹಾರ
ಒಂದು ಬ್ಯಾಂಕ್ ವ್ಯಾವಹಾರಿಕವಾಗಿ ಸ್ವಾಯತ್ತ ನಿರ್ವಹಣೆ ಹೊಂದಿರಬೇಕು ಎಂಬುದು ಆಬ್ಬಿಐನ ನಿಯಮ ಇದೆ. ಆದರೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಸೇವೆಗಳು ಪೇಟಿಎಂಗೆ ಸೀಮಿತವಾಗಿದೆ. ಎರಡಕ್ಕೂ ಒಬ್ಬರೇ ಮುಖ್ಯಸ್ಥರಿರುವುದರಿಂದ ಬ್ಯಾಂಕ್ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಅಸಾಧ್ಯವಾಗುತ್ತದೆ ಎಂದು ಆರ್ಬಿಐ ಕಾರಣ ನೀಡಿತ್ತು.
ಇದಾದ ಬಳಿಕ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ನಿರ್ದೇಶಕ ಮಂಡಳಿಯನ್ನು ಪುನಾರಚಿಸಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಛೇರ್ಮನ್ ಶ್ರೀನಿವಾಸನ್ ಶ್ರೀಧರ್, ಬ್ಯಾಂಕ್ ಆಫ್ ಬರೋಡಾದ ಮಾಜಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ದೇಬೇಂದ್ರನಾಥ್ ಸಾರಂಗಿ, ಅಶೋಕ್ ಗರ್ಗ್ ಮತ್ತು ರಜನಿ ಶೇಖ್ರಿ ಸಿಬಲ್ ಅವರು ಬೋರ್ಡ್ ಆಫ್ ಡೈರೆಕ್ಟರ್ಸ್ನಲ್ಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ