‘ಉಂಡಾಡಿ ಗುಂಡ’ ನಾಟಕಕ್ಕೆ 80 ವರ್ಷ: ಕಲಾದ್ಯುತಿ ಪ್ರೊಡಕ್ಷನ್ ಹೌಸ್ ವತಿಯಿಂದ ಪ್ರದರ್ಶನ
‘ಉಂಡಾಡಿ ಗುಂಡ’ ನಾಟಕದ ಮೂಲಕ ಪರ್ವತವಾಣಿ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಈ ನಾಟಕಕ್ಕೆ 80 ವರ್ಷ ತುಂಬಿದೆ. ಹಲವು ಕಡೆಗಳಲ್ಲಿ ಪ್ರದರ್ಶನ ಮಾಡಲು ಸಿದ್ಧತೆ ನಡೆದಿದೆ. ಸಿಹಿ ಕಹಿ ಚಂದ್ರು ಅವರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ..

ನಾಟಕ ರಚನೆಕಾರರಾಗಿ, ನಿರ್ದೇಶಕರಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಪರ್ವತವಾಣಿ (Parvathavani) ಅವರ ಕೊಡುಗೆ ಅಪಾರ. ಡಾ. ರಾಜ್ಕುಮಾರ್ ನಾಯಕರಾಗಿದ್ದ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಚಿತ್ರದಲ್ಲಿ ನಟಿಸುವ ಮೂಲಕವೂ ಅವರು ಮನೆ ಮಾತಾಗಿದ್ದರು. ಪರ್ವತವಾಣಿ ಅವರು ರಚಿಸಿದ್ದ ಹಾಸ್ಯ ನಾಟಕ ‘ಉಂಡಾಡಿ ಗುಂಡ’ (Undaadi Gunda) ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು.
‘ಉಂಡಾಡಿ ಗುಂಡ’ ನಾಟಕ ರಚನೆಗೆ ಇದೀಗ ಎಂಬತ್ತು ವರ್ಷ ತುಂಬಿದೆ. ಈ ಸಂದರ್ಭದಲ್ಲಿ, ಪರ್ವತವಾಣಿ ಅವರಿಗೆ ಗೌರವ ಸಲ್ಲಿಸಲು ‘ಕಲಾದ್ಯುತಿ ಪ್ರೊಡಕ್ಷನ್ ಹೌಸ್’ ಮುಂತಾಗಿದೆ. ಸಂಸ್ಥೆಯ ಈ ಆಶಯಕ್ಕೆ ಖುದ್ದು ಪರ್ವತವಾಣಿಯವರ ಮೊಮ್ಮಗ ಶರತ್ ಪರ್ವತವಾಣಿ ಜೊತೆಯಾಗಿದ್ದಾರೆ. ತಾತ ಬರೆದಿದ್ದ ಪ್ರಸಿದ್ಧ ನಾಟಕವನ್ನು ಮೊಮ್ಮಗ ಶರತ್ ನಿರ್ದೇಶನ ಮಾಡಲಿದ್ದಾರೆ.
ಸಂಜಯ್ ಧ್ರುವ ಅವರು ಇತ್ತೀಚಿನ ವರ್ಷಗಳಲ್ಲಿ ಜಾಹೀರಾತು ಏಜೆನ್ಸಿಯ ಮೂಲಕ ಪರಿಚಿತರಾಗಿದ್ದಾರೆ. ವಿಭಿನ್ನವಾದ ರೂಪುರೇಷೆಗಳೊಂದಿಗೆ ಅವರು ಈಗ ‘ಕಲಾದ್ಯುತಿ ಪ್ರೊಡಕ್ಷನ್ ಹೌಸ್’ ಸಂಸ್ಥೆಯನ್ನು ಶುರು ಮಾಡಿದ್ದಾರೆ. ನೃತ್ಯ, ನಾಟಕ ಸೇರಿದಂತೆ ಪ್ರದರ್ಶನ ಕಲೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುವುದು, ಹೊಸತನದ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿಯೊಂದಿಗೆ ಈ ಸಂಸ್ಥೆಯನ್ನು ಆರಂಭಿಸಲಾಗಿದೆ. ಪರ್ವತವಾಣಿ ಬರೆದ ‘ಉಂಡಾಡಿ ಗುಂಡ’ ನಾಟಕ ಪ್ರದರ್ಶನದ ಮೂಲಕವೇ ‘ಕಲಾದ್ಯುತಿ ಪ್ರೊಡಕ್ಷನ್ ಹೌಸ್’ ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದೆ.
ಇದನ್ನೂ ಓದಿ: ನಾಟಕ ಪ್ರದರ್ಶನ, ಕಿಡಿಗೇಡಿಗಳ ಸಂದೇಶಕ್ಕೆ ಕಿವಿಗೊಡದಂತೆ ಸಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮನವಿ
ಫೆಬ್ರವರಿ 24ರಂದು ರಂಗಶಂಕರದಲ್ಲಿ ‘ಉಂಡಾಡಿ ಗುಂಡ’ ನಾಟಕ ಪ್ರದರ್ಶನಗೊಳ್ಳಲಿದೆ. ನಂತರ ಫೆಬ್ರವರಿ 27ರಂದು ಯುವಪಥ ಜಯನಗರದಲ್ಲಿ, ಮಾರ್ಚ್ 7ರಂದು ಬಿಪಿ ವಾಡಿಯಾ ಸಭಾಂಗಣದಲ್ಲಿ ಮತ್ತು ಮಾರ್ಚ್ 14ರಂದು KEA ಪ್ರಭಾತ್ ಬಸವೇಶ್ವರನಗರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಫೆಬ್ರವರಿ 24, ಮಾರ್ಚ್7 ಹಾಗೂ ಮಾರ್ಚ್ 14ರಂದು ನಡೆಯಲಿರುವ ಪ್ರದರ್ಶನಗಳಲ್ಲಿ ಜನಪ್ರಿಯ ನಟ ಸಿಹಿಕಹಿ ಚಂದ್ರು ಅವರು ಅಭಿನಯಿಸಲಿರುವುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




