ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ನಟನೆಯ ‘ಬನ’ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ
ಮಾಧ್ಯಮ ಲೋಕದಲ್ಲಿ ಜಯಪ್ರಕಾಶ್ ಶೆಟ್ಟಿ ಅವರಿಗೆ ಸಾಕಷ್ಟು ಅನುಭವ ಇದೆ. ಈಗ ಅವರು ಸಿನಿಮಾದಲ್ಲೂ ನಟಿಸಿರುವುದು ವಿಶೇಷ. ಅವರು ಅಭಿನಯಿಸಿರುವ ಸಿನಿಮಾದ ಹೆಸರು ‘ಬನ’. ಕನ್ನಡ ಮತ್ತು ತುಳು ಭಾಷೆಯಲ್ಲಿ ಮೂಡಿಬರುತ್ತಿರುವ ‘ಬನ’ ಚಿತ್ರದ ಪೋಸ್ಟರ್ ಗಮನ ಸೆಳೆದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ನಿರೀಕ್ಷೆ ಮೂಡಿಸಿರುವ ‘ಬನ’ (Bana) ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಸಿನಿಮಾ ತುಳು (Tulu) ಮತ್ತು ಕನ್ನಡ ಭಾಷೆಗಳಲ್ಲಿ ಅಕ್ಟೊಬರ್ 23ರಂದು ಬಿಡುಗಡೆಯಾಗಲಿದೆ. ಬಹಳ ವರ್ಷಗಳ ನಂತರ ನಾಗ ಕಥೆಯ ಚಿತ್ರವೊಂದು ಬರುತ್ತಿದ್ದು ತುಳು ಚಿತ್ರರಂಗದ ಇತಿಹಾಸದಲ್ಲೇ ನಾಗ ಕಥೆಯನ್ನು ಹೊಂದಿರುವ ಮೊದಲ ಚಿತ್ರ ಇದು ಎನ್ನಲಾಗಿದೆ. ಸುದ್ದಿ ನಿರೂಪಕ, ಪತ್ರಕರ್ತ ಜಯಪ್ರಕಾಶ್ ಶೆಟ್ಟಿ (Jayaprakash Shetty) ಅವರು ನಟಿಸಿದ್ದಾರೆ ಎಂಬುದು ಈ ಸಿನಿಮಾದ ವಿಶೇಷ.
‘ಬನ’ ಚಿತ್ರದ ಟ್ರೇಲರ್ ಈ ವರ್ಷ ನಾಗರ ಪಂಚಮಿ ಹಬ್ಬದ ದಿನ ಬಿಡುಗಡೆ ಆಗಲಿದೆ. ತುಳುವಿನ ಈ ಸಿನಿಮಾದಲ್ಲಿ ಹಿರಿಯ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಅವರು ಇದೇ ಮೊದಲ ಬಾರಿಗೆ ಅಭಿನಯಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದೆ ರೂಪಾ ವರ್ಕಡಿ ಅವರು ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ‘ಈಶಿ ಪ್ರೊಡಕ್ಷನ್’ ಬ್ಯಾನರ್ ಮೂಲಕ ಮನೋಹರ್ ರೈ ವೈಪಾಲ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
View this post on Instagram
ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಅವರು ‘ಬನ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ತುಳುನಾಡಿನಲ್ಲಿ ನಾಗಾರಾಧನೆ ಹೆಚ್ಚು ಆಚರಣೆಯಲ್ಲಿದೆ. ಈಗ ಅದೇ ವಿಚಾರದ ಕುರಿತು ‘ಬನ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಕಥೆ ಹೇಗಿರಬಹುದು ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಜಯಪ್ರಕಾಶ್ ಶೆಟ್ಟಿ ನಟಿಸಿರುವ ಕಾರಣದಿಂದ ಅವರ ಅಭಿಮಾನಿಗಳಿಗೂ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ: ಸಂಭಾವನೆ ಪಡೆಯದೇ ತುಳು ಸಿನಿಮಾದಲ್ಲಿ ನಟಿಸಿದ ಸುನೀಲ್ ಶೆಟ್ಟಿ
ಕನ್ನಡದ ಅನೇಕ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಜಯಪ್ರಕಾಶ್ ಶೆಟ್ಟಿ ಅವರು ಕೆಲಸ ಮಾಡಿದ್ದಾರೆ. ಆ ಮೂಲಕ ಅವರು ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ‘ಬನ’ ಚಿತ್ರದಲ್ಲಿ ಅವರ ಪಾತ್ರದ ಬಗ್ಗೆ ಜನರಿಗೆ ಕೌತುಕ ಮೂಡಿದೆ. ಬಿಡುಗಡೆ ಆಗಿರುವ ಪೋಸ್ಟರ್ ನೋಡಿದರೆ ಕಥೆಯ ಬಗ್ಗೆ ಕುತೂಹಲ ಹೆಚ್ಚುವಂತಿದೆ. ಟ್ರೇಲರ್ ನೋಡಲು ಸಿನಿಪ್ರಿಯರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




