ನವದೆಹಲಿ, ಸೆಪ್ಟೆಂಬರ್ 8: ಜುಲೈ ತಿಂಗಳಲ್ಲಿ ಶೇ 7ಕ್ಕಿಂತಲೂ ಹೆಚ್ಚು ಮಟ್ಟಕ್ಕೆ ಹೋಗಿ ತಲೆನೋವು ಸೃಷ್ಟಿಸಿರುವ ಹಣದುಬ್ಬರ (Inflation) ಆಗಸ್ಟ್ ತಿಂಗಳಲ್ಲಿ ಕಡಿಮೆ ಆಗಿರಬಹುದು. ಆದರೆ, ಅರ್ಬಿಐ ನಿಗದಿಪಡಿಸಿದ ಹಣದುಬ್ಬರದ ತಾಳಿಕೆ ಮಿತಿಯಾದ ಶೇ. 6ಕ್ಕಿಂತ ತುಸು ಮೇಲೆಯೇ ಇರಬಹುದು ಎಂದು ಭಾರತದ ವಿವಿಧ ಆರ್ಥಿಕ ತಜ್ಞರು ಅಂದಾಜು ಮಾಡಿದ್ದಾರೆ. ರಾಯ್ಟರ್ಸ್ ಸಂಸ್ಥೆ ಸೆಪ್ಟೆಂಬರ್ 4ರಿಂದ 7ರವರೆಗೂ ನಡೆಸಿದ ಸಮೀಕ್ಷೆಯಲ್ಲಿ 45 ಆರ್ಥಿಕ ತಜ್ಞರು ಪಾಲ್ಗೊಂಡು ಅಭಿಪ್ರಾಯ ಮಂಡಿಸಿದ್ದಾರೆ. ಇವರೆಲ್ಲರ ಅಂದಾಜು ಸಂಖ್ಯೆಯ ಸರಾಸರಿ ಪಡೆದಾಗ ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಶೇ. 7ರಷ್ಟು ಇರಬಹುದು.
ಜುಲೈನಲ್ಲಿ ಹಣದುಬ್ಬರ ಶೇ. 7.44ಕ್ಕೆ ಏರಿತ್ತು. ಟೊಮೆಟೋ ಹಾಗೂ ಇತರ ಕೆಲ ತರಕಾರಿಗಳ ಬೆಲೆ ಹೆಚ್ಚಳವಾಗಿದ್ದರಿಂದ ಹಣದುಬ್ಬರ ಗಣನೀಯವಾಗಿ ಹೆಚ್ಚಾಗಿತ್ತು. ಆಗಸ್ಟ್ ತಿಂಗಳಲ್ಲೂ ಹಲವು ತರಕಾರಿಗಳ ಬೆಲೆ ಮಾಮೂಲಿಗಿಂತ ಹೆಚ್ಚೇ ಇದ್ದ ಕಾರಣ ಹಣದುಬ್ಬರ ಆರ್ಬಿಐ ಗುರಿಯೊಳಗೆ ಸೇರಿದ್ದಿರುವ ಸಾಧ್ಯತೆ ಕಡಿಮೆ. ರಾಯ್ಟರ್ಸ್ ಪೋಲ್ನಲ್ಲಿ ಪಾಲ್ಗೊಂಡಿದ್ದ ಆರ್ಥಿಕ ತಜ್ಞರಲ್ಲಿ ಕೆಲವರು ಆಗಸ್ಟ್ನಲ್ಲಿ ಹಣದುಬ್ಬರ ಜುಲೈನದಕ್ಕಿಂತ ಹೆಚ್ಚೇ ಇರಬಹುದು ಎಂದು ಅಭಿಪ್ರಾಯಪಟ್ಟಿರುವುದುಂಟು.
ಇದನ್ನೂ ಓದಿ: ಭಾರತ ಈ ವಿಶ್ವದ ಹೊಸ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಲಿದೆ: ಫಾಕ್ಸ್ಕಾನ್ ವಿಶ್ವಾಸ
ಒಟ್ಟಾರೆ ಈ 45 ಆರ್ಥಿಕ ತಜ್ಞರು ಆಗಸ್ಟ್ನಲ್ಲಿ ಹಣದುಬ್ಬರ ಶೇ. 6.50ರಿಂದ ಶೇ. 7.65ರವರೆಗೆ ಇದ್ದಿರಬಹುದು ಎಂಬ ವಿವಿಧ ಅಭಿಪ್ರಾಯಗಳನ್ನು ಪಟ್ಟಿದ್ದಾರೆ. ಹೆಚ್ಚಿನವರು ಹಣದುಬ್ಬರ ಶೇ. 7ಕ್ಕಿಂತಲೂ ಹೆಚ್ಚಿರುತ್ತದೆ ಎಂದಿದ್ದಾರೆ.
ತರಕಾರಿ, ಬೇಳೆ, ಕಾಳು ಇತ್ಯಾದಿ ಆಹಾರವಸ್ತುಗಳ ಬೆಲೆಗಳು ಹಣದುಬ್ಬರ ಮೇಲೆ ಪ್ರಮುಖವಾಗಿ ಪರಿಣಾಮ ಬೀರುತ್ತವೆ. ಇವುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸರ್ಕಾರ ಸಾಕಷ್ಟು ಕಸರತ್ತು ಮಾಡುತ್ತಿದೆ. ಸಬ್ಸಿಡಿ ದರದಲ್ಲಿ ಕೆಲ ತರಕಾರಿಗಳ ಮಾರಾಟ, ಅಕ್ಕಿ ಇತ್ಯಾದಿ ಆಹಾರವಸ್ತುಗಳ ರಫ್ತು ನಿಷೇಧ ಮತ್ತು ನಿರ್ಬಂಧ ಹೀಗೆ ಬಹುಕ್ರಮಗಳ ಮೂಲಕ ದೇಶದಲ್ಲಿ ಆಹಾರ ಕೊರತೆಯಾಗಿ ಬೆಲೆ ಏರಿಕೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇದು ಪರಿಣಾಮ ಬೀರುತ್ತಿದೆಯಾದರೂ ವಿದ್ಯುತ್ ಬೆಲೆ ಹೆಚ್ಚಳ ಇತ್ಯಾದಿ ಬೆಳವಣಿಗೆಯು ಅಡ್ಡಿಯಾಗುವ ಸಾಧ್ಯತೆ ಇದೆ.
ಭಾರತೀಯ ರಿಸರ್ವ್ ಬ್ಯಾಂಕ್ ಭಾರತದಲ್ಲಿ ಹಣದುಬ್ಬರ ಶೇ. 4ರಷ್ಟು ಇರಬೇಕೆಂಬ ಗುರಿ ಇಟ್ಟುಕೊಂಡಿದೆ. ಶೇ. 2ರಿಂದ 6ರೊಳಗೆ ಹಣದುಬ್ಬರ ಇರಬೇಕೆಂದು ತಾಳಿಕೆ ಮಿತಿ ನಿರ್ಧರಿಸಲಾಗಿದೆ. ಆದರೆ, ಜುಲೈ ತಿಂಗಳಲ್ಲಿ ತಾಳಿಕೆ ಮಿತಿ ದಾಟಿ ಹಣದುಬ್ಬರ ಹೆಚ್ಚಾಗಿದೆ. ಆಗಸ್ಟ್ನಲ್ಲೂ ಈ ಮಿತಿಯೊಳಗೆ ಹಣದುಬ್ಬರ ಬರುವ ಸಾಧ್ಯತೆ ತೀರಾ ಕಡಿಮೆ. ಆರ್ಬಿಐ ಆಗಸ್ಟ್ ತಿಂಗಳ ಹಣದುಬ್ಬರದ ಡಾಟಾವನ್ನು ಸೆಪ್ಟೆಂಬರ್ 12ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ