ಬೆಂಗಳೂರು: ಅಮೆರಿಕದ ಕಂಪನಿಗಳಿಗೆ ಐಟಿ ಸೇವೆ ಒದಗಿಸುವ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದ ಭಾರತದ ಐಟಿ ಕಂಪನಿಗಳಿಗೆ ಈಗ ಯೂರೋಪ್ನಿಂದ ಆದಾಯಮೂಲ ಹೆಚ್ಚುತ್ತಿರುವ ಟ್ರೆಂಡ್ ಕಾಣುತ್ತಿದೆ. ಅಮೆರಿಕದ ಟ್ರಾನ್ಸಮೆರಿಕಾ ಕಂಪನಿ ಟಿಸಿಎಸ್ ಜೊತೆಗಿನ 2 ಬಿಲಿಯನ್ ಡಾಲರ್ ಒಪ್ಪಂದವನ್ನು ಮಧ್ಯದಲ್ಲೇ ಕೈಬಿಡಲು ನಿರ್ಧರಿಸಿದ್ದೂ ಸೇರಿದಂತೆ ಭಾರತೀಯ ಐಟಿ ಕಂಪನಿಗಳಿಗೆ ಈಗ ಅಮೆರಿಕದಿಂದ ಹೆಚ್ಚು ವ್ಯವಹಾರ ಸಿಗುತ್ತಿಲ್ಲ. ಈ ಮಧ್ಯೆ ಭಾರತದ ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ಗೆ ಐರೋಪ್ಯ ದೇಶವೊಂದರ ಕಂಪನಿಯಿಂದ ಒಳ್ಳೆಯ ಒಪ್ಪಂದ ಸಿಕ್ಕಿದೆ. ಡೆನ್ಮಾರ್ಕ್ ದೇಶದ ಡ್ಯಾನ್ಸ್ಕ್ ಬ್ಯಾಂಕ್ (Dansk Bank) 450 ಮಿಲಿಯನ್ ಡಾಲರ್ (ಸುಮಾರು 3,690 ಕೋಟಿ ರೂ) ಮೊತ್ತದ ಒಪ್ಪಂದವನ್ನು ಇನ್ಪೋಸಿಸ್ ಜೊತೆ ಮಾಡಿಕೊಂಡಿದೆ. ಡೆನ್ಮಾರ್ಕ್ನ ಈ ಪ್ರಮುಖ ಬ್ಯಾಂಕ್ಗೆ ಎಐ ಇತ್ಯಾದಿ ಹೊಸ ತಂತ್ರಜ್ಞಾನದ ಅಳವಡಿಕೆ ಮಾಡಿ, ಅದರ ಸೇವೆಯನ್ನು ಉನ್ನತ ಸ್ತರಕ್ಕೆ ಏರಿಸುವ ಹೊಣೆಗಾರಿಕೆ ಇನ್ಫೋಸಿಸ್ ಮೇಲಿದೆ. ಐದು ವರ್ಷಗಳ ಅವಧಿಗೆ ಈ ಗುತ್ತಿಗೆ ಇರಲಿದೆ. ಡ್ಯಾನ್ಸ್ಕ್ ಬ್ಯಾಂಕ್ ಇಚ್ಛಿಸಿದಲ್ಲಿ ಹೆಚ್ಚುವರಿ 3 ವರ್ಷ ಕಾಲ ಒಪ್ಪಂದದ ಅವಧಿ ಹೆಚ್ಚಿಸಬಹುದು. ಇದೇ ಸೆಪ್ಪಂಬರ್ ತಿಂಗಳ ಕೊನೆಯೊಳಗೆ ಇನ್ಫೋಸಿಸ್ ಮತ್ತು ಡ್ಯಾನ್ಸ್ಕ್ ಬ್ಯಾಂಕ್ ಮಧ್ಯೆ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆ ಇದೆ.
ಡ್ಯಾನ್ಸ್ಕ್ ಬ್ಯಾಂಕ್ ಬೆಂಗಳೂರಿನಲ್ಲೇ ಟೆಕ್ನಾಲಜಿ ಸಪೋರ್ಟ್ ಸೆಂಟರ್ ಹೊಂದಿದ್ದು ಅದರಲ್ಲಿ 1,400 ಮಂದಿ ಉದ್ಯೋಗಿಗಳಿದ್ದಾರೆ. ಒಪ್ಪಂದದ ಪ್ರಕಾರ, ಈ ಐಟಿ ಕೇಂದ್ರವು ಇನ್ಫೋಸಿಸ್ ಸ್ವಾಧೀನಕ್ಕೆ ಹೋಗಲಿದ್ದು, 1400 ಉದ್ಯೋಗಿಗಳು ಇನ್ಫೋಸಿಸ್ ನಿರ್ವಹಣೆಯ ಅಡಿಯಲ್ಲಿ ಇರುತ್ತಾರೆ. ಈ ಟೆಕ್ನಾಲಜಿ ಸೆಂಟರ್ಗೆ ಆಧುನಿಕ ತಂತ್ರಜ್ಞಾನದ ಅಳವಡಿಕೆ ಮಾಡಲಾಗುತ್ತದೆ. ಇನ್ಫೋಸಿಸ್ ಟೋಪಾಜ್ ಎಂಬ ಜನರೇಟಿವ್ ಎಐ ಸರ್ವಿಸ್ಗಳ ಸ್ಯೂಟ್ ಅನ್ನು ಡ್ಯಾನ್ಸ್ಕ್ ಬ್ಯಾಂಕ್ನ ಟೆಕ್ನಾಲಜಿ ಸೆಂಟರ್ಗೆ ಅಳವಡಿಸಲಾಗುತ್ತದೆ ಎಂದು ಮಾಧ್ಯಮಗಳಿಗೆ ಮಾಹಿಇತ ಸಿಕ್ಕಿದೆ.
ಇದನ್ನೂ ಓದಿ: Shree Cements: ಶ್ರೀ ಸಿಮೆಂಟ್ಸ್ ವಿರುದ್ಧ 23,000 ಕೋಟಿ ತೆರಿಗೆ ವಂಚನೆ ಆರೋಪ; ಕುಸಿಯುತ್ತಿರುವ ಷೇರುಬೆಲೆ
ಈ ಒಪ್ಪಂದದಿಂದ ಡ್ಯಾನ್ಸ್ಕ್ ಬ್ಯಾಂಕ್ನ ಪ್ರಧಾನ ವ್ಯವಹಾರಕ್ಕೆ ಇನ್ಫೋಸಿಸ್ನ ಡಿಜಿಟಿಲ್, ಕ್ಲೌಡ್ ಮತ್ತು ಡಾಟಾ ತಂತ್ರಜ್ಞಾನದ ಪುಷ್ಟಿ ಸಿಗಬಹುದು. ಪ್ರಬಲ ಎಐ ತಂತ್ರಜ್ಞಾನವು ಬ್ಯಾಂಕ್ನ ಗ್ರಾಹಕರಿಗೆ ಇನ್ನೂ ಒಳ್ಳೆಯ ಸೇವೆ ಕೊಡಲು ನೆರವಾಗಬಹುದು ಎಂಬ ನಿರೀಕ್ಷೆ ಇದೆ.
ಇನ್ಫೋಸಿಸ್ ಸಂಸ್ಥೆ ಇತ್ತೀಚೆಗಷ್ಟೇ ಡೆನ್ಮಾರ್ಕ್ನ ಬೇಸ್ ಲೈಫ್ ಸೈನ್ಸಸ್ ಸಂಸ್ಥೆ ಹಾಗೂ ಫಿನ್ಲ್ಯಾಂಡ್ನ ಫ್ಲ್ಯೂಡೋ ಕಂಪನಿಗಳನ್ನು ಖರೀದಿಸಿತ್ತು. ಸ್ವೀಡನ್ನ ಗೋಥೆನ್ಬರ್ಗ್ ಹಾಗೂ ನಾರ್ವೆಯ ಓಸ್ಲೋದಲ್ಲಿ ಹೊಸ ಪ್ರಾಕ್ಸಿಮಿಟಿ ಸೆಂಟರ್ಗಳನ್ನು ತೆರೆದು ಐರೋಪ್ಯ ದೇಶಗಳಿಂದ ಹೆಚ್ಚಿನ ವ್ಯವಹಾರದ ನಿರೀಕ್ಷೆ ಇಟ್ಟುಕೊಂಡಿದೆ.
ಇನ್ನೊಂದೆಡೆ, ಅಮೆರಿಕದ ಟ್ರಾನ್ಸಮೆರಿಕಾ ಒಪ್ಪಂದ ಕಳೆದುಕೊಂಡ ಟಿಸಿಎಸ್ ಸಂಸ್ಥೆ ಬ್ರಿಟನ್ ದೇಶದ ನ್ಯಾಷನಲ್ ಎಂಪ್ಲಾಯ್ಮೆಂಟ್ ಸೇವಿಂಗ್ಸ್ ಟ್ರಸ್ಟ್ ಸಂಸ್ಥೆಯ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದು ಯೂರೋಪ್ನ ನಾಲ್ಕನೇ ಕಂಪನಿಯಿಂದ ಟಿಸಿಎಸ್ಗೆ ಸಿಕ್ಕ ಗುತ್ತಿಗೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ