Infosys Hiring: ಮೂರನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್​ನಿಂದ 6,000 ಮಂದಿಯ ನೇಮಕ; 50,000 ಉದ್ಯೋಗದ ಗುರಿ

| Updated By: Ganapathi Sharma

Updated on: Jan 13, 2023 | 10:42 AM

ನೇಮಕಾತಿ ಪ್ರಕ್ರಿಯೆಯನ್ನು ನಾವು ಮುಂದುವರಿಸಿದ್ದೇವೆ. ಹಣಕಾಸು ವರ್ಷಾಂತ್ಯದ ವೇಳೆಗೆ ನಾವು ಹಾಕಿಕೊಂಡಿರುವ ಗುರಿಯನ್ನು ಸಾಧಿಸುವ ನಿರೀಕ್ಷೆ ಇದೆ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ನೀಲಾಂಜನ್ ರಾಯ್ ತಿಳಿಸಿದ್ದಾರೆ.

Infosys Hiring: ಮೂರನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್​ನಿಂದ 6,000 ಮಂದಿಯ ನೇಮಕ; 50,000 ಉದ್ಯೋಗದ ಗುರಿ
ಇನ್ಫೋಸಿಸ್
Image Credit source: PTI
Follow us on

ಮುಂಬೈ: ಜಗತ್ತಿನಾದ್ಯಂತ ಟೆಕ್ ಕಂಪನಿಗಳು ಉದ್ಯೋಗ ಕಡಿತದ ಮೊರೆ ಹೋಗಿರುವ ಸಂದರ್ಭದಲ್ಲಿ ಬೆಂಗಳೂರು ಮೂಲದ ಇನ್ಫೋಸಿಸ್ (Infosys) ಹೊಸಬರ ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ವೇಗವಾಗಿ ಹೆಜ್ಜೆಹಾಕುತ್ತಿದೆ. 2022-23ನೇ ಸಾಲಿನ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಇನ್ಫೋಸಿಸ್ 6,000 ಮಂದಿ ಹೊಸಬರನ್ನು ನೇಮಕ ಮಾಡಿಕೊಂಡಿದೆ. ಒಟ್ಟಾರೆಯಾಗಿ 23ನೇ ಹಣಕಾಸು ವರ್ಷದಲ್ಲಿ 50,000 ಮಂದಿಯ ನೇಮಕ ಮಾಡಿಕೊಳ್ಳುವ ಗುರಿಯನ್ನು ಕಂಪನಿ ಹಾಕಿಕೊಂಡಿತ್ತು. ಈ ಪೈಕಿ 40,000 ಮಂದಿಯನ್ನು ವರ್ಷದ ಮೊದಲಾರ್ಧದಲ್ಲೇ ನೇಮಕ ಮಾಡಿಕೊಳ್ಳಲಾಗಿದೆ. ಕಂಪನಿಯು ತನ್ನ ವಾರ್ಷಿಕ ಗುರಿಯನ್ನು ಸಾಧಿಸುವತ್ತ ಸಾಗುತ್ತಿದೆ. ಆದರೆ, ನೇಮಕಾತಿ ವಿಚಾರದಲ್ಲಿ ಗುರಿಯನ್ನು ಪರಿಷ್ಕರಣೆ ಮಾಡಿಲ್ಲ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ನೀಲಾಂಜನ್ ರಾಯ್ (Nilanjan Roy) ತಿಳಿಸಿದ್ದಾರೆ.

ನೇಮಕಾತಿ ಪ್ರಕ್ರಿಯೆಯನ್ನು ನಾವು ಮುಂದುವರಿಸಿದ್ದೇವೆ. ಹಣಕಾಸು ವರ್ಷಾಂತ್ಯದ ವೇಳೆಗೆ ನಾವು ಹಾಕಿಕೊಂಡಿರುವ ಗುರಿಯನ್ನು ಸಾಧಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ. ಕಂಪನಿಯಲ್ಲಿ ಹೊಸ ಉದ್ಯೋಗಿಗಳ ಸಂಖ್ಯೆ ಈಗ ಹೆಚ್ಚಿದ್ದು, ಮೈಸೂರಿನ ಕಚೇರಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಹೊಸ ಉದ್ಯೋಗಿಗಳು ಈಗ ತರಬೇತಿ ಹಂತದಲ್ಲಿದ್ದಾರೆ. ನಾವು ಅವರಿಗೆ ತರಬೇತಿ ನೀಡುತ್ತಿದ್ದೇವೆ, ಅವರ ಕೌಶಲಾಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ವಾಸ್ತವವಾಗಿ ಅದು ನಮಗೆ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ ಎಂದು ರಾಯ್ ಹೇಳಿದ್ದಾರೆ.

ಇನ್ಫೋಸಿಸ್ ತ್ರೈಮಾಸಿಕ ಲಾಭ ಶೇ 13 ಹೆಚ್ಚಳ

ಇನ್ಫೋಸಿಸ್ ತ್ರೈಮಾಸಿಕ ಫಲಿತಾಂಶ (ಡಿಸೆಂಬರ್​​ಗೆ ಕೊನೆಗೊಂಡ ತ್ರೈಮಾಸಿಕ ಅವಧಿ) ಗುರುವಾರ ಪ್ರಕಟಗೊಂಡಿದ್ದು, ವಾರ್ಷಿಕ ಶೇಕಡಾ 13ರಷ್ಟು ಹೆಚ್ಚಳ ದಾಖಲಿಸಿದೆ. ವಾರ್ಷಿಕ ಕ್ರೋಡೀಕೃತ ಆದಾಯ ಪ್ರಮಾಣ ಶೇ 20.2 ಹೆಚ್ಚಳವಾಗಿದ್ದು, 38,318 ಕೋಟಿ ರೂ. ಆಗಿದೆ. ಕ್ರೋಡೀಕೃತ ನಿವ್ವಳ ಲಾಭ ಶೇ 13.4 ಹೆಚ್ಚಾಗಿ 6,586 ಕೋಟಿ ರೂ. ಆಗಿದೆ.

ಇನ್ಫೋಸಿಸ್​ಗೆ ಗೋವಿಂದ ಅಯ್ಯರ್ ಸ್ವತಂತ್ರ ನಿರ್ದೇಶಕ

ಮುಂದಿನ ಐದು ವರ್ಷಗಳ ಅವಧಿಗೆ ಇನ್ಫೋಸಿಸ್ ಸ್ವತಂತ್ರ ನಿರ್ದೇಶಕರನ್ನಾಗಿ ಗೋವಿಂದ ವೈದಿರಾಮ್ ಅಯ್ಯರ್ ಅವರನ್ನು ನೇಮಕ ಮಾಡಲಾಗಿದೆ. ಅಯ್ಯರ್ ಅವರು ಕಂಪನಿಯ ಹೆಚ್ಚುವರಿ ಸ್ವತಂತ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಗೋವಿಂದ ಅಯ್ಯರ್ ನೇಮಕ 2023ರ ಜನವರಿ 12ರಿಂದಲೇ ಅಸ್ತಿತ್ವಕ್ಕೆ ಬಂದಿದೆ. ಕಂಪನಿಯ ನಾಮ ನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಇನ್ಫೋಸಿಸ್ ಉಲ್ಲೇಖಿಸಿದೆ.

ಇದನ್ನೂ ಓದಿ: Retail Inflation: ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಚಿಲ್ಲರೆ ಹಣದುಬ್ಬರ

ಈ ಮಧ್ಯೆ, ಇನ್ಫೋಸಿಸ್ ಮಾಜಿ ಅಧ್ಯಕ್ಷ ರವಿಕುಮಾರ್ ಅವರನ್ನು ಕಾಗ್ನಿಜೆಂಟ್ ಕಂಪನಿಯು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಿದೆ. ರವಿಕುಮಾರ್ ಅವರು ಬ್ರಿಯಾನ್ ಹಂಫ್ರೀಸ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ