ನ್ಯೂಯಾರ್ಕ್, ಏಪ್ರಿಲ್ 4: ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಇತ್ತೀಚಿನ ದಿನಗಳಲ್ಲಿ ತಮ್ಮ ಜೀವನಾನುಭವಗಳನ್ನು ಹೆಚ್ಚೆಚ್ಚು ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಪತ್ನಿಯ ಬಗ್ಗೆ, ತಮ್ಮ ಕೆಲಸದ ಬಗ್ಗೆ, ತಮ್ಮ ಕಷ್ಟದ ದಿನಗಳ ಬಗ್ಗೆ ಹೀಗೆ ಮೂರ್ತಿಗಳು ಮಾತನಾಡತೊಡಗಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮೊನ್ನೆ (ಏ. 2) ನಡೆದ ಆಹಾರ ಭದ್ರತೆ ಸಂಬಂಧಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಶಕಗಳ ಹಿಂದೆ ಯೂರೋಪ್ನಲ್ಲಿ ತಮಗಾದ ಹಸಿವಿನ ಘಟನೆಯನ್ನು ಮೆಲುಕು ಹಾಕಿದ್ದಾರೆ. ಐವತ್ತು ವರ್ಷಗಳ ಹಿಂದೆ ಯೂರೋಪ್ನಲ್ಲಿ ನಿರಂತರ 120 ಗಂಟೆ ಕಾಲ ಅವರು ಹಸಿವಿನಿಂದ ಒದ್ದಾಡಿ ಹೋಗಿದ್ದರಂತೆ.
‘ನಿಮ್ಮಲ್ಲಿ ಹೆಚ್ಚಿನವರಿಗೆ ಹಸಿವಿನ ಅನುಭವ ಆಗಿಲ್ಲದೇ ಇರಬಹುದು. ನನಗೆ ಆ ಅನುಭವ ಆಗಿದೆ. 50 ವರ್ಷದ ಹಿಂದೆ ಸತತ 120 ಗಂಟೆ ಕಾಲ ಹಸಿವಿನಿಂದ ಒದ್ದಾಡಿದ್ದೇನೆ. ಯೂರೋಪ್ನಲ್ಲಿ ಹಿಚ್ಹೈಕಿಂಗ್ ಮಾಡುವಾಗ ಮತ್ತು ಬಲ್ಗೇರಿಯಾ ಹಾಗು ಸರ್ಬಿಯಾದ ಗಡಿಭಾಗದ ಪಟ್ಟಣವಾದ ನಿಶ್ ಎಂಬಲ್ಲಿದ್ದಾಗ ಸತತವಾಗಿ ಹಸಿವಿನ ಅನುಭವವಾಗಿತ್ತು,’ ಎಂದು ಎನ್ ಆರ್ ನಾರಾಯಣಮೂರ್ತಿ ಹೇಳಿದರು.
ಇಲ್ಲಿ ಹಿಚ್ಹೈಕಿಂಗ್ ಎಂದರೆ ದಾರಿಯಲ್ಲಿ ಹೋಗುವ ಅಪರಿಚಿತರ ವಾಹನಗಳ ಸಹಾಯದಿಂದ ಪ್ರಯಾಣಿಸುವುದು. ಯೂರೋಪ್ನಲ್ಲಿ ನಾರಾಯಣಮೂರ್ತಿಗೆ ಅಂಥದ್ದೊಂದು ಸಂದರ್ಭ ಒದಗಿ ಬಂದಿತ್ತು. ಅಂದಿನ ದಿನಗಳನ್ನು ಅವರು ಮೆಲುಕು ಹಾಕಿದ ಮೊನ್ನೆಯ ಸಭೆಯಲ್ಲಿ ಇದ್ದವರು ವಿಶ್ವಸಂಸ್ಥೆಯ ರಾಜತಾಂತ್ರಿಕರು, ಅಧಿಕಾರಿಗಳು, ಶಿಕ್ಷಣ ತಜ್ಞರು, ಭಾರತೀಯ ಸಮುದಾಯದ ಜನರು.
ಇದನ್ನೂ ಓದಿ: 17,545 ಕೋಟಿ ರೂ ಕುಬೇರನ ಆಸ್ತಿ ಒಂದೇ ವರ್ಷದಲ್ಲಿ ಸೊನ್ನೆಗೆ; ಬೈಜು ರವೀಂದ್ರನ್ ಪತನದ ಕಥೆ
ಇಸ್ಕಾನ್ ಸಂಸ್ಥೆಯ ಎನ್ಜಿಒ ಅಕ್ಷಯ ಪಾತ್ರ ಫೌಂಡೇಶನ್ ನಾನೂರು ಕೋಟಿ ಊಟ ಬಡಿಸಿದ ಒಂದು ಮೈಲಿಗಲ್ಲು ಮುಟ್ಟಿದೆ. ಇದರ ಸ್ಮರಣಾರ್ತ ವಿಶ್ವಸಂಸ್ಥೆಯಿಂದ ಆಯೋಜಿಸಿದ ವಿಶೇಷ ಕಾರ್ಯಕ್ರಮ ಇದಾಗಿತ್ತು. ‘ಇಲ್ಲಿರುವ ಹೆಚ್ಚಿನ ಭಾರತೀಯರಿಗೆ ಮತ್ತು ನನಗೆ ಭಾರತ ಸರ್ಕಾರದಿಂದ ಉತ್ತಮ ಗುಣಮಟ್ಟದ ಮತ್ತು ಕಡಿಮೆ ವೆಚ್ಚದ ಶಿಕ್ಷಣ ಸಿಕ್ಕಿದೆ. ಒಬ್ಬ ನಾಗರಿಕ ಸಮಾಜದ ಜನರಾಗಿ ನಾವು ನಮ್ಮ ದೇಶಕ್ಕೆ ಋಣಿಯಅಗಿರಬೇಕು. ಅಸಹಾಯಕ ಮತ್ತು ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುವಂತೆ ಮಾಡುವ ಮೂಲಕ ಭವಿಷ್ಯದ ತಲೆಮಾರಿಗೆ ಸಹಾಯವಾಗಬೆಕು,’ ಎಂದು ನಾರಾಯಣಮೂರ್ತಿ ಕರೆ ನೀಡಿದರು.
‘ನಮ್ಮ ಬಡಮಕ್ಕಳು ಸಮಾಜದ ಬಗ್ಗೆ ಆಶಯ ಮತ್ತು ನಂಬಿಕೆ ಕಳೆದುಕೊಂಡರೆ ಅವರು ಹಿಂಸಾಚಾರಕ್ಕೆ ತಿರುಗುತ್ತಾರೆ. ಭಾರತ ಸಾಧಿಸಿರುವ ಮತ್ತು ಸಾಧಿಸಬೇಕೆಂದಿರುವ ಎಲ್ಲಾ ಒಳ್ಳೆಯ ಕಾರ್ಯಗಳು ನಾಶವಾಗುತ್ತವೆ’ ಎಂದು ಹೇಳಿದ ಇನ್ಫೋಸಿಸ್ ಸಂಸ್ಥಾಪಕರು, ಯಶಸ್ಸೆಂದರೆ ಅಸಹಾಯಕ ಜನರ ಮೊಗದಲ್ಲಿ ಮುಗುಳ್ನಗೆ ತರುವುದು. ಅಕ್ಷಯ ಪಾತ್ರ ಇದರಲ್ಲಿ ಯಶಸ್ವಿಯಾಗಿದೆ. ಇದರ ಮಾದರಿಯನ್ನು ವಿಶ್ವಸಂಸ್ಥೆ ಅನುಸರಿಸಬಹುದು ಎಂದೂ ಸಲಹೆ ನೀಡಿದರು.
ಇದನ್ನೂ ಓದಿ: ನೂರು ಷೇರು ಖರೀದಿಸಿ ಮರೆತೇಹೋಗಿದ್ದ 85 ವರ್ಷದ ವ್ಯಕ್ತಿಗೆ ಬಂತು 2 ಕೋಟಿ ರೂ ಸಂಪತ್ತು
ನಾರಾಯಣಮೂರ್ತಿ ಇದೇ ವೇಳೆ ಭಾರತ ಸರ್ಕಾರದ ಆರ್ಥಿಕ ನೀತಿಗಳು, ಭಾರತೀಯ ಯುವ ಉದ್ದಿಮೆದಾರರ ಕಠಿಣ ಪರಿಶ್ರಮ, ನಾಗರಿಕರ ಪರಿಶ್ರಮ, ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆ ಇವೆಲ್ಲವೂ ಭಾರತದ ಆರ್ಥಿಕ ಪ್ರಗತಿಗೆ ಪೂರಕವಾಗಿವೆ ಎಂದು ಒತ್ತಿಹೇಳಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ