
ಮುಂಬೈ, ಮಾರ್ಚ್ 13: ಉಚಿತ ಕೊಡುಗೆಗಳನ್ನು ನೀಡುವುದರಿಂದ ಬಡತನ ಸಮಸ್ಯೆ ನಿವಾರಣೆ ಮಾಡಲು ಸಾಧ್ಯವಿಲ್ಲ. ನಾವೀನ್ಯತೆಯೊಂದಿಗಿನ ಉದ್ಯೋಗ ಸೃಷ್ಟಿಯಿಂದ ಈ ಕಾರ್ಯ ಸಾಧ್ಯ ಎಂದು ಇನ್ಫೋಸಿಸ್ನ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮೂರ್ತಿಗಳು, ವಿವಿಧ ಸರ್ಕಾರಗಳು ನಡೆಸುತ್ತಿರುವ ಬಿಟ್ಟಿಭಾಗ್ಯ ಯೋಜನೆಗಳ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಫ್ರೀಬೀಗಳಿಂದ ಬಡತನದ ಸಮಸ್ಯೆಗೆ ಪರಿಹಾರ ಪಡೆಯಲು ಸಾಧ್ಯ ಇಲ್ಲ. ಯಾವ ದೇಶಕ್ಕೂ ಅದು ಸಾಧ್ಯವಾಗಿಲ್ಲ. ನಿಮ್ಮ ನವೀನ ಪರಿಕಲ್ಪನೆಯೊಂದಿಗೆ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದಾಗ ಬಡತನ ನಿವಾರಣೆ ಸಾಧ್ಯವಾಗುತ್ತದೆ’ ಎಂದು ಇನ್ಫೋಸಿಸ್ ಸಂಸ್ಥಾಪಕರು ಹೇಳಿದ್ದಾರೆ.
ಸಮಾಜವಾದ ಮತ್ತು ಬಂಡವಾಳವಾದ ಬಗ್ಗೆ ಮಾತನಾಡಿದ ನಾರಾಯಣಮೂರ್ತಿ, ಕಾರುಣ್ಯಯುಕ್ತ ಬಂಡವಾಳವಾದದ ಶಿಫಾರಸು ಮಾಡಿದ್ದಾರೆ. ಅವರ ಪ್ರಕಾರ, ತಲೆಯಲ್ಲಿ ಬಂಡವಾಳವಾದ, ಹೃದಯಲ್ಲಿ ಸಮಾಜವಾದ. ‘ಭಾರತ ದೀರ್ಘಕಾಲದಿಂದ ಅಪ್ಪಿರುವ ಸಮಾಜವಾದದಿಂದ ಬಡತನ ನಿವಾರಣೆ ಆಗಲ್ಲ. ಕಾರುಣ್ಯಯುಕ್ತ ಬಂಡವಾಳಶಾಹಿ ವ್ಯವಸ್ಥೆಯು ಉದ್ಯೋಗಿಗಳನ್ನು ಮನುಷ್ಯರಂತೆ ಪರಿಗಣಿಸುತ್ತದೆ. ಸಮಾಜವಾದ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಬಂಡವಾಳಶಾಹಿ ಬಗ್ಗೆ ಅನುಮಾನ ಇರುತ್ತದೆ’ ಎಂದು ಮಾಜಿ ಇನ್ಫೋಸಿಸ್ ಛೇರ್ಮನ್ ಆದ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: 2035ಕ್ಕೆ ಭಾರತದಲ್ಲಿ ಸ್ಟಾರ್ಪಟ್ ಸಂಖ್ಯೆ 10,00,000 ಆಗುವ ನಿರೀಕ್ಷೆ: ನಂದನ್ ನಿಲೇಕಣಿ ನಿರೀಕ್ಷೆ
ಭಾರತದಲ್ಲಿ ಟೆಕ್ ಕಂಪನಿಗಳು ಎಐ ಹೆಸರಿನಲ್ಲಿ ಹಳೆಯ ಸಾಫ್ಟ್ವೇರ್ ಪ್ರೋಗ್ರಾಮ್ಗಳನ್ನು ನೀಡುತ್ತಿವೆ ಎಂದು ನಾರಾಯಣಮೂರ್ತಿ ಲೇವಡಿ ಮಾಡಿದ್ದಾರೆ. ‘ಭಾರತದಲ್ಲಿ ಪ್ರತಿಯೊಂದಕ್ಕೂ ಎಐ ಎಂದು ಹೇಳುವುದು ಫ್ಯಾಷನ್ ಆಗಿಹೋಗಿದೆ. ಹಲವಾರು ಸಾಧಾರಣ ಪ್ರೋಗ್ರಾಮ್ಗಳನ್ನೇ ಎಐ ಆಗಿ ಬಿಂಬಿಸಲಾಗುತ್ತಿರುವುದನ್ನು ನೋಡಿದ್ದೇನೆ’ ಎಂದಿದ್ದಾರೆ.
‘ಎಐನಲ್ಲಿ ಎರಡು ಮೂಲಭೂತ ತತ್ವಗಳಿವೆ. ಒಂದು, ಯಂತ್ರ ಕಲಿಕೆ ಅಥವಾ ಮೆಷೀನ್ ಲರ್ನಿಂಗ್. ಮತ್ತೊಂದು ಡೀಪ್ ಲರ್ನಿಂಗ್. ಮೆಷಿನ್ ಲರ್ನಿಂಗ್ನಲ್ಲಿ ದೊಡ್ಡ ಮೊತ್ತದ ಡಾಟಾದ ನೆರವು ಪಡೆದು ಸಂಸ್ಕರಣೆ ಮಾಡಲಾಗುತ್ತದೆ. ಡೀಪ್ ಲರ್ನಿಂಗ್ ಮಾದರಿಯು ನಮ್ಮ ಮನುಷ್ಯನ ಮಿದುಳಿನ ರೀತಿ ಕೆಲಸ ಮಾಡಲು ಯತ್ನಿಸುತ್ತದೆ,’ ಎಂದು ಅವರು ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ಡಯಾಬಿಟಿಸ್ ರೋಗಿಗಳಿಗೆ ಖುಷಿ ಸುದ್ದಿ; ಈ ಪರಿಣಾಮಕಾರಿ ಔಷಧದ ಬೆಲೆ ಶೇ. 90ರಷ್ಟು ಇಳಿಕೆ
ಮೆಷಿನ್ ಲರ್ನಿಂಗ್ನಲ್ಲಿ ಮೊದಲೇ ನಿಗದಿ ಮಾಡಿದ ಅಲ್ಗಾರಿದಂಗಳನ್ನು ಬಳಸಲಾಗುತ್ತದೆ. ಡೀಪ್ ಲರ್ನಿಂಗ್ನಲ್ಲಿ ಡಾಟಾವನ್ನು ಬಳಸಿ ಹೊಸ ವಿಧಾನಗಳ ಪ್ರೋಗ್ರಾಂಗಳನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಸ್ವಂತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಇದು ಮನುಷ್ಯನ ವರ್ತನೆಗೆ ಸಮೀಪ ಇರುತ್ತದೆ. ಆದರೆ, ಈಗ ತಾವು ನೋಡುತ್ತಿರುವ ಎಐ ತುಂಬಾ ಬಾಲಿಶವಾದ ಹಳೆಯ ಪ್ರೋಗ್ರಾಮ್ಗಳಷ್ಟೇ ಎಂದು ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ