Infosys-InSemi: ಬೆಂಗಳೂರಿನ ಸೆಮಿಕಂಡಕ್ಟರ್ ಡಿಸೈನ್ ಕಂಪನಿ ಇನ್​ಸೆಮಿಯನ್ನು ಖರೀದಿಸಲು ಮುಂದಾದ ಇನ್ಫೋಸಿಸ್

|

Updated on: Jan 12, 2024 | 11:26 AM

Infosys To Buy Semiconductor Design Company: ಬೆಂಗಳೂರಿನ ಚಿಪ್ ಡಿಸೈನಿಂಗ್ ಕಂಪನಿ ಇನ್​ಸೆಮಿಯನ್ನು 280 ಕೋಟಿ ರೂಗೆ ಇನ್ಫೋಸಿಸ್ ಖರೀದಿಸುತ್ತಿದೆ. ಮಾರ್ಚ್​ವೊಳಗೆ ಇನ್​ಸೆಮಿಯನ್ನು ಖರೀದಿಸುವ ಪ್ರಕ್ರಿಯೆಯನ್ನು ಇನ್ಫೋಸಿಸ್ ಪೂರ್ಣಗೊಳಿಸುವ ಸಾಧ್ಯತೆ ಇದೆ. ಇನ್​ಸೆಮಿ ಸಂಸ್ಥೆ 2013ರಲ್ಲಿ ಆರಂಭವಾಗಿದ್ದು, ಅದರಲ್ಲಿ 900 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

Infosys-InSemi: ಬೆಂಗಳೂರಿನ ಸೆಮಿಕಂಡಕ್ಟರ್ ಡಿಸೈನ್ ಕಂಪನಿ ಇನ್​ಸೆಮಿಯನ್ನು ಖರೀದಿಸಲು ಮುಂದಾದ ಇನ್ಫೋಸಿಸ್
ಇನ್ಫೋಸಿಸ್
Follow us on

ಬೆಂಗಳೂರು, ಜನವರಿ 12: ಬೆಂಗಳೂರಿನ ಸೆಮಿಕಂಡಕ್ಟರ್ ಡಿಸೈನಿಂಗ್ ಸಂಸ್ಥೆಯಾದ ಇನ್​ಸೆಮಿಯನ್ನು (InSemi) ಖರೀದಿಸಲು ಇನ್ಫೋಸಿಸ್ ಮುಂದಾಗಿದೆ. ವರದಿ ಪ್ರಕಾರ 280 ಕೋಟಿ ರೂಗೆ ಡೀಲ್ ನಡೆಯಲಿದೆ. ಹತ್ತು ವರ್ಷಗಳ ಹಿಂದೆ ಆರಂಭಗೊಂಡ ಎನ್​ಸೆಮಿ ಸೆಮಿಕಂಡಕ್ಟರ್ ಮತ್ತು ಎಂಬೆಡೆಡ್ ಸಿಸ್ಟಂಗಳ ಡಿಸೈನ್ ಸೇವೆ ಒದಗಿಸುವ ಸಂಸ್ಥೆಯಾಗಿದೆ. ಇದನ್ನು ಖರೀದಿಸುವುದರಿಂದ ಮುಂದಿನ ಹಂತದ ಬೆಳವಣಿಗೆಗೆ ಸಹಕಾರಿಯಾಗಬಹುದು ಎನ್ನುವ ವಿಶ್ವಾಸದಲ್ಲಿ ಇನ್ಫೋಸಿಸ್ ಇದೆ. ಈ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ, ಅಂದರೆ, 2024ರ ಜನವರಿಯಿಂದ ಮಾರ್ಚ್ 31ರವರೆಗಿನ ಅವಧಿಯೊಳಗೆ ಇನ್​ಸೆಮಿ ಖರೀದಿ ಪ್ರಕ್ರಿಯೆಯನ್ನು ಇನ್ಫೋಸಿಸ್ ಪೂರ್ಣಗೊಳಿಸುವ ನಿರೀಕ್ಷೆ ಇದೆ.

‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸ್ಮಾರ್ಟ್ ಡಿವೈಸ್, 5ಜಿ, ಎಲೆಕ್ಟ್ರಿಕ್ ವಾಹನಗಳ ಕಾಲ ಘಟ್ಟ ಬಂದಿದೆ. ಮುಂದಿನ ತಲೆಮಾರಿನ ಸೆಮಿಕಂಡಕ್ಟರ್ ಡಿಸೈನ್ ಸರ್ವಿಸ್​ಗಳು ಬಹಳ ಮುಖ್ಯ ಎನಿಸುತ್ತವೆ. ಎನ್​ಸೆಮಿಗೆ ನಾವು ಮಾಡುವ ಹೂಡಿಕೆಯು ಹೊಸ ಅಲೆಯ ಬೆಳವಣಿಗೆಗೆ ಎಡೆ ಮಾಡಿಕೊಡಬಲ್ಲುದು. ಎಂಜಿನಿಯರಿಂಗ್ ಆರ್ ಅಂಡ್ ಡಿಯಲ್ಲಿ ನಮ್ಮನ್ನು ಮುಂಚೂಣಿಗೆ ನಿಲ್ಲಿಸಬಲ್ಲುದು,’ ಎಂದು ಇನ್ಫೋಸಿಸ್​ನ ಹಿರಿಯ ಅಧಿಕಾರಿ ದಿನೇಶ್ ಆರ್ ಹೇಳಿದ್ದಾರೆ.

ಇದನ್ನೂ ಓದಿ: World’s Most Valuable Company: ವಿಶ್ವದ ಅತಿಹೆಚ್ಚು ಮೌಲ್ಯದ ಕಂಪನಿ; ಕ್ಷಣಿಕವಾದರೂ ಆ್ಯಪಲ್ ಅನ್ನು ಮತ್ತೆ ಹಿಂದಿಕ್ಕಿದ ಮೈಕ್ರೋಸಾಫ್ಟ್

ಇನ್​ಸೆಮಿ ಸಂಸ್ಥೆ 2013ರಲ್ಲಿ ಆರಂಭವಾಗಿದ್ದು, ಅದರಲ್ಲಿ 900 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. 2022-23ರ ಹಣಕಾಸು ವರ್ಷದಲ್ಲಿ ಇನ್​ಸೆಮಿ 154 ಕೋಟಿ ರೂ ಆದಾಯ ಗಳಿಸಿದೆ.

ಸೆಮಿಕಂಡಕ್ಟರ್ ಡಿಸೈನ್ ಸೇವೆಗಳನ್ನು ಪ್ರಮುಖವಾಗಿ ನೀಡುತ್ತದೆ. ಸೆಮಿಕಂಡಕ್ಟರ್, ಕನ್ಸೂಮರ್ ಎಲೆಕ್ಟ್ರಾನಿಕ್ಸ್, ವಾಹನ, ಹೈಟೆಕ್ ಉದ್ಯಮ ಇತ್ಯಾದಿ ಕ್ಷೇತ್ರಗಳ ಜಾಗತಿಕ ಸಂಸ್ಥೆಗಳಿಗೆ ಅದು ಚಿಪ್ ಡಿಸೈನ್ ಮಾಡಿಕೊಡುತ್ತದೆ.

ಇದನ್ನೂ ಓದಿ: ಭಾರತದ ಈಗಿನ ಪಠ್ಯಕ್ರಮದಿಂದ ಚಿಪ್ ಎಂಜಿನಿಯರ್​ಗಳ ನಿರ್ಮಾಣ ಸಾಧ್ಯವಿಲ್ಲವಾ? ಮೈಕ್ರೋನ್ ಸಿಇಒ ಬಿಚ್ಚಿಟ್ಟಿದ್ದಾರೆ ವಾಸ್ತವ ಸ್ಥಿತಿ

‘ನಮಗೆ ಇನ್ಫೋಸಿಸ್ ವೇಗವರ್ಧಕವಾಗಿ (catalyst) ಪ್ರಭಾವ ಬೀರಬಹುದು. ಹೆಚ್ಚೆಚ್ಚು ಕ್ಷೇತ್ರಗಳಲ್ಲಿ ಜಾಗತಿಕ ಗ್ರಾಹಕರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಎಂಜಿನಿಯರಿಂಗ್ ಆರ್ ಅಂಡ್ ಟಿ, ಮುಂದಿನ ತಲೆಮಾರಿನ ತಂತ್ರಜ್ಞಾನವನ್ನು ಒದಗಿಸಲು ಇನ್​ಸೆಮಿಗೆ ಶಕ್ತಿ ಕೊಡಬಹುದು,’ ಎಂದು ಇನ್​ಸೆಮಿ ಸಹ-ಸಂಸ್ಥಾಪಕರಾದ ಶ್ರೀಕಾಂತ್ ಸಂಪಿಗೆತ್ತಾಯ ಮತ್ತು ಅರುಪ್ ದಾಶ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ