ಭಾರತದ ಈಗಿನ ಪಠ್ಯಕ್ರಮದಿಂದ ಚಿಪ್ ಎಂಜಿನಿಯರ್ಗಳ ನಿರ್ಮಾಣ ಸಾಧ್ಯವಿಲ್ಲವಾ? ಮೈಕ್ರೋನ್ ಸಿಇಒ ಬಿಚ್ಚಿಟ್ಟಿದ್ದಾರೆ ವಾಸ್ತವ ಸ್ಥಿತಿ
Chip Manufacturing: ಭಾರತದಲ್ಲಿ ಯಾವ ಶಿಕ್ಷಣಸಂಸ್ಥೆಯಲ್ಲೂ ಚಿಪ್ ಮ್ಯಾನುಫ್ಯಾಕ್ಚರಿಂಗ್ ಕಲಿಸುವ ಪಠ್ಯಕ್ರಮ ಇಲ್ಲ ಎಂದು ಮೈಕ್ರೋನ್ ಸಿಇಒ ಹೇಳಿದ್ದಾರೆ. ಭಾರತದ ನೂರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಸೆಮಿಕಂಡಕ್ಟರ್ ಕೋರ್ಸ್ ನೀಡುತ್ತವೆ. ಅವ್ಯಾವುವೂ ಕೂಡ ಚಿಪ್ ಮ್ಯಾನುಫ್ಯಾಕ್ಚರಿಂಗ್ ಕಡೆ ಗಮನ ಹರಿಸಲ್ಲ. ಸೆಮಿಕಂಡಕ್ಟರ್ ಕ್ಷೇತ್ರದ ಉದ್ಯೋಗ ಅಗತ್ಯಗಳಿಗೆ ತಕ್ಕಂತೆ ಭಾರತದಲ್ಲಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ವ್ಯವಸ್ಥೆ ಮಾಡುವುದಾಗಿ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಗಾಂಧಿನಗರ್, ಜನವರಿ 11: ಭಾರತದಲ್ಲಿ ನೂರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಸೆಮಿಕಂಡಕ್ಟರ್ ಡಿಸೈನ್ ಕೋರ್ಸ್ (Semiconductor design curricula) ಆಫರ್ ಮಾಡುತ್ತವೆ. ಆದರೆ, ಆ ಯಾವುದೇ ಪಠ್ಯಕ್ರಮದಲ್ಲಿ ಚಿಪ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಪ್ರೋಸಸ್ ತಂತ್ರಜ್ಞಾನ ಬಗ್ಗೆ ಗಮನ ಹರಿಸಲಾಗುತ್ತಿಲ್ಲ. ಈ ವಿಷಯವನ್ನು ಜಾಗತಿಕ ಸೆಮಿಕಂಡ್ಟರ್ ದೈತ್ಯ ಮೈಕ್ರೋನ್ ಟೆಕ್ನಾಲಜಿ ಸಂಸ್ಥೆಯ ಸಿಇಒ ಸಂಜಯ್ ಮೆಹ್ರೋತ್ರಾ ಅವರೇ ಖುದ್ದಾಗಿ ವಾಸ್ತವ ಸ್ಥಿತಿ ತೆರೆದಿಟ್ಟಿದ್ದಾರೆ. ಇಲ್ಲಿ ಇಂದು ನಡೆದ 10ನೇ ಆವೃತ್ತಿಯ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೈಕ್ರೋನ್ ಅಧ್ಯಕ್ಷರು ಮತ್ತು ಸಿಇಒ ಆಗಿರುವ ಸಂಜಯ್ ಮೆಹ್ರೋತ್ರಾ, ಜಾಗತಿಕವಾಗಿ ಮ್ಯಾನುಫ್ಯಾಕ್ಚರಿಂಗ್ ಎಂಜಿನಿಯರುಗಳು ಮತ್ತು ಟೆಕ್ನೀಶಿಯನ್ಗಳಿಗೆ ಬಹಳ ಬೇಡಿಕೆ ಇದೆ ಎಂದಿದ್ದಾರೆ.
‘ಭಾರತದಲ್ಲಿ ಸೆಮಿಕಂಡಕ್ಟರ್ ಡಿಸೈನ್ ಪಠ್ಯಕ್ರಮ ಹೊಂದಿರುವ ನೂರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ. ಅವ್ಯಾವುವೂ ಕೂಡ ಮ್ಯಾನುಫ್ಯಾಕ್ಚರಿಂಗ್ ಮತ್ತು ಪ್ರೋಸಸ್ ಟೆಕ್ನಾಲಜಿ ಬಗ್ಗೆ ಗಮನ ಹರಿಸುವುದಿಲ್ಲ. ಮ್ಯಾನುಫ್ಯಾಕ್ಚರಿಂಗ್ ಎಂಜನಿಯರುಗಳು ಮತ್ತು ತಂತ್ರಜ್ಞರಿಗೆ ಜಾಗತಿಕವಾಗಿ ಹೆಚ್ಚಿನ ಬೇಡಿಕೆ ಇದೆ,’ ಎಂದು ಸಂಜಯ್ ಮೆಹ್ರೋತ್ರಾ ಅಭಿಪ್ರಾಯಪಟ್ಟಿದ್ದಾರೆ.
ಮೈಕ್ರೋನ್ ಸಿಇಒ ಅಭಿಪ್ರಾಯ ಸ್ವಾಗತಿಸಿದ ಕೇಂದ್ರ ಸಚಿವ
ಚಿಪ್ ಎಂಜಿನಿಯರುಗಳನ್ನು ನಿರ್ಮಿಸುವ ಪಠ್ಯಕ್ರಮ ಇಲ್ಲ ಎನ್ನುವ ಸಂಜಯ್ ಮೆಹ್ರೋತ್ರಾ ಅವರ ಅಭಿಪ್ರಾಯವನ್ನು ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ದಿ ಸಚಿವರು ಸ್ವಾಗತಿಸಿದ್ದಾರೆ. ‘ಜಾಗತಿಕವಾಗಿ ಬೇಡಿಕೆ ಏನಿದೆ ಎಂಬುದನ್ನು ನಾವು ಕಂಡುಕೊಳ್ಳಬೇಕು. ಸೆಮಿಕಂಡಕ್ಟರ್ ವಿಚಾರಕ್ಕೆ ಬಂದರೆ ಆ ಕ್ಷೇತ್ರಕ್ಕೆ ಸಂಶೋಧನೆಯಿಂದ ಹಿಡಿದು ಅಭಿವೃದ್ದಿಯವರೆಗೆ ಮಾನವ ಸಂಪನ್ಮೂಲವನ್ನು ಕೊಡಲು ಭಾರತ ಉತ್ಸುಕವಾಗಿದೆ. ಭಾರತದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿವೆ, ಅವಶ್ಯ ಮಾನವ ಸಂಪನ್ಮೂಲ ಇದೆ’ ಎಂದು ಅವರು ತಿಳಿಸಿದ್ದಾರೆ.
ಜಾಗತಿಕವಾಗಿ ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ ನುರಿತರಾದ 10 ಲಕ್ಷ ವೃತ್ತಿಪರರ ಅಗತ್ಯ ಇದೆ. ಈ ಅವಕಾಶವನ್ನು ಭಾರತ ವಿನಿಯೋಗಿಸಿಕೊಳ್ಳಬಯಸುತ್ತದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ