ಮೆಟ್ರೋ ಟಿಕೆಟ್ ದರ ಏರಿಕೆ ಮುಂದಿನ ವಾರದಿಂದ ಬಹುತೇಕ ಖಚಿತ
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮೆಟ್ರೋ ಟಿಕೆಟ್ ದರವನ್ನು ಶೇಕಡಾ 43 ರಷ್ಟು ಹೆಚ್ಚಿಸಲು ಯೋಜಿಸಿದೆ ಎನ್ನಲಾಗಿದ್ದು, ಮುಂದಿನ ವಾರದಿಂದಲೇ ಜಾರಿಗೆ ಬರುವ ಸಾಧ್ಯತೆ ಇದೆ. ಇದಕ್ಕೆ ಪ್ರಯಾಣಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಎಂಆರ್‌ಸಿಎಲ್ ಸುಧಾರಿತ ಸೌಲಭ್ಯಗಳಿಗೆ ದರ ಹೆಚ್ಚಳ ಅಗತ್ಯ ಎಂದು ವಾದಿಸಿದರೆ, ಪ್ರಯಾಣಿಕರು ಇತರ ನಗರಗಳ ಮೆಟ್ರೋಗಳಿಗೆ ಹೋಲಿಸಿದರೆ ಬೆಂಗಳೂರಿನ ಮೆಟ್ರೋ ದುಬಾರಿಯಾಗಲಿದೆ ಎಂದು ಆಕ್ಷೇಪಿಸುತ್ತಿದ್ದಾರೆ.
ಬೆಂಗಳೂರು, ಜನವರಿ 20: ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಈಗಾಗಲೇ ನಿರ್ಧರಿಸಿದೆ ಎನ್ನಲಾಗಿದ್ದು, ಮುಂದಿನ ವಾರದಿಂದ ದರ ಏರಿಕೆ ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ. ಮೆಟ್ರೋ ಟಿಕೆಟ್ ದರವನ್ನು ಶೇ 43ರಷ್ಟು ಹೆಚ್ಚಿಸಲು ಚಿಂತನೆ ನಡೆಸಿರುವುದಾಗಿ ಬಿಎಂಆರ್‌ಸಿಎಲ್ ಈಗಾಗಲೇ ಪ್ರಕಟಿಸಿದ್ದು, ಪ್ರಯಾಣಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆದರೆ, ದರ ಹೆಚ್ಚಳ ಸಂಬಂಧ ಈವರೆಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಟಿಕೆಟ್ ದರ ಹೆಚ್ಚಳದ ಸಂಬಂದ ಬಿಎಂಆರ್‌ಸಿಎಲ್ ಶುಕ್ರವಾರ ಸಭೆ ನಡೆಸಿತ್ತು. ನಂತರ, ದರ ಹೆಚ್ಚಳಕ್ಕೆ ತೀರ್ಮಾನಿಸಿರುವುದಾಗಿ ಶನಿವಾರ ಹೇಳಿತ್ತು. ಆದರೆ, ಅಧಿಕೃತ ಆದೇಶ ಹೊರಡಿಸಿಲ್ಲ.
ಏತನ್ಮಧ್ಯೆ, ಮೆಟ್ರೋ ಟಿಕೆಟ್ ದರ ಏರಿಕೆ ಸಂಬಂಧ ಈವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಮುಂದಿನ ವಾರದಲ್ಲಿ ನಿರ್ಧಾರ ಪ್ರಕಟವಾಗಬಹುದು ಮತ್ತು ತಕ್ಷಣದಿಂದಲೇ ಜಾರಿಗೆ ಬರಬಹುದು. ಶೇ 40 ರಿಂದ 43 ರಷ್ಟು ದರ ಹೆಚ್ಚಳಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತ ವಾಗಿದ್ದರಿಂದ ಹಚ್ಚಳದ ಪ್ರಮಾಣವನ್ನು ಪರಿಷ್ಕರಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ತಿಳಿಸಿದೆ. ಜತೆಗೆ, ದರ ಹೆಚ್ಚಳವನ್ನು ಬಿಎಂಆರ್‌ಸಿಎಲ್ ಮೂಲಗಳು ಸಮರ್ಥಿಸಿಕೊಂಡಿವೆ.
ಮೆಟ್ರೋ ಟಿಕೆಟ್ ದರ ಏರಿಕೆ: ಬಿಎಂಆರ್‌ಸಿಎಲ್ ಹೇಳೋದೇನು?
ಪ್ರಯಾಣಿಕರಿಗೆ ಅತ್ಯುತ್ತಮ ದರ್ಜೆಯ ಸೇವೆಗಳನ್ನು ಒದಗಿಸಲು, ನಿಲ್ದಾಣಗಳು ಮತ್ತು ರೈಲುಗಳನ್ನು ನಿರ್ವಹಿಸಲು, ಮಹಿಳೆಯರಿಗೆ ಮೀಸಲಾದ ಕೋಚ್‌ಗಳನ್ನು ನೀಡಲು, ಸಮಯಕ್ಕೆ ಅನುಗುಣವಾಗಿ ಸೇವೆಗಳನ್ನು ಒದಗಿಸಲು, ಸ್ವಚ್ಛವಾದ ವಾಶ್‌ರೂಮ್‌ಗಳನ್ನು ನಿರ್ವಹಿಸಲು ಮತ್ತು ಹಿರಿಯ ನಾಗರಿಕರು ಹಾಗೂ ವಿಕಲ ಚೇತನರಿಗೆ ವಿಶೇಷ ಸೇವೆಗಳನ್ನು ಒದಗಿಸಲು ಟಿಕೆಟ್ ದರ ಹೆಚ್ಚಳ ಅಗತ್ಯವಾಗಿದೆ ಎಂದು ಬಿಎಂಆರ್‌ಸಿಎಲ್ ಸಮರ್ಥಿಸಿಕೊಂಡಿದೆ.
ಮತ್ತೊಂದೆಡೆ, ಶೇ 40 ಮತ್ತು ಅದಕ್ಕಿಂತ ಹೆಚ್ಚಿನ ದರ ಏರಿಕೆ ನಮ್ಮ ಜೇಬುಗಳನ್ನು ಸುಡಲಿದೆ. ನಾವು ಮೆಟ್ರೊದಲ್ಲಿ ಕುಳಿತು ಪ್ರಯಾಣಿಸುವುದಿಲ್ಲ, ಹೆಚ್ಚಿನ ಸಮಯ ನಿಂತೇ ಪ್ರಯಾಣಿಸುತ್ತೇವೆ. ಆದಾಗ್ಯೂ ನಾವು ಮೆಟ್ರೋವನ್ನು ಬಳಸುತ್ತೇವೆ. ಏಕೆಂದರೆ ಬೆಂಗಳೂರಿನಲ್ಲಿ ರಸ್ತೆ ಪ್ರಯಾಣವು ಸಂಚಾರ ದಟ್ಟಣೆಯಿಂದ ಕಿರಿಕಿರಿಯಾಗಿದೆ. ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸುಧಾರಿಸಲು ಸಾಧ್ಯವಾಗದಿದ್ದಾಗ ಸರ್ಕಾರವು ಮೆಟ್ರೊ ದರ ಹೆಚ್ಚಿಸುವುದು ಸರಿಯಲ್ಲ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಏರೋ ಶೋ 2025: ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ, ಕ್ರೇನ್ ಸ್ಥಗಿತಕ್ಕೆ ಸೂಚನೆ
ಟಿಕೆಟ್ ದರವನ್ನು ಹೆಚ್ಚಿಸಿದ ಬಳಿಕ ದೆಹಲಿ, ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿಯಲ್ಲಿನ ಮೆಟ್ರೋ ಸೇವೆಗಳಿಗೆ ಹೋಲಿಸಿದರೆ ನಮ್ಮ ಮೆಟ್ರೋ ಅತ್ಯಂತ ದುಬಾರಿಯಾಗಲಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ