Inox: ಥೇಟರ್​ನೊಳಗೆ ಆಹಾರ, ಪಾನೀಯ ಪೂರೈಕೆಗೆ ಐಟಿಸಿ ಜತೆಗೆ ಐನಾಕ್ಸ್​ ಸಹಯೋಗ

| Updated By: Srinivas Mata

Updated on: Oct 01, 2021 | 6:25 PM

ಐನಾಕ್ಸ್ ಥೇಟರ್​ನಲ್ಲಿ ಆಹಾರ ಹಾಗೂ ಪಾನೀಯ ಪೂರೈಕೆಗಾಗಿ ಐಟಿಸಿ ಕಂಪೆನಿ ಜತೆಗೆ ಸಹಯೋಗ ವಹಿಸಿಕೊಂಡು, ಐನಾಕ್ಸ್ ಲೀಷರ್ ಗುರುವಾರದಂದು ಘೋಷಣೆ ಮಾಡಿದೆ.

Inox: ಥೇಟರ್​ನೊಳಗೆ ಆಹಾರ, ಪಾನೀಯ ಪೂರೈಕೆಗೆ ಐಟಿಸಿ ಜತೆಗೆ ಐನಾಕ್ಸ್​ ಸಹಯೋಗ
ವೆಜ್ ಬಿರಿಯಾನಿ (ಪ್ರಾತಿನಿಧಿಕ ಚಿತ್ರ)
Follow us on

ಮಲ್ಟಿಪ್ಲೆಕ್ಸ್ ಆಪರೇಟರ್ ಆದ ಐನಾಕ್ಸ್​ನಿಂದ ಆಹಾರ ಹಾಗೂ ಪಾನೀಯಕ್ಕಾಗಿ ಐಟಿಸಿ ಜತೆಗೆ ಸಹಯೋಗ ಆಗಿದೆ. ಐನಾಕ್ಸ್ ಲೀಷರ್ ಸೆಪ್ಟೆಂಬರ್ 30ರಂದು ಘೋಷಣೆ ಮಾಡಿರುವಂತೆ, ಐನಾಕ್ಸ್​ನ ಥೇಟರ್​ನಲ್ಲಿ ಐಟಿಸಿ ಲಿಮಿಟೆಡ್​ ರೆಡಿ-ಟು-ಈಟ್ ಆಫರ್ ಮಾಡಲಾಗುವುದು. ಈ ಹೊಸ ಮೆನುವಿನ ಸೇರ್ಪಡೆಯೊಂದಿಗೆ ಐನಾಕ್ಸ್ ಗ್ರಾಹಕರಿಗೆ ಹೊಸದಾಗಿ ಮನೆಯ ಶೈಲಿ ಆಹಾರವನ್ನು ಒದಗಿಸುತ್ತದೆ. ಅದು ಥೇಟರ್​ನಲ್ಲೇ ಆಗಲಿ ಅಥವಾ ಫುಡ್- ಆರ್ಡರಿಂಗ್ ಆ್ಯಪ್​ ಮೂಲಕ ಮನೆಯಿಂದಾದರೂ ಸರಿ ಆರ್ಡರ್ ಮಾಡಬಹುದು ಎಂದು ಕಂಪೆನಿ ಹೇಳಿದೆ. ಹೊಸ ಆಹಾರ ಆಫರಿಂಗ್​ನಲ್ಲಿ ವೆಜಿಟೆಬಲ್ ಪಲಾವ್, ಹೈದರಾಬಾದಿ ವೆಜಿಟೆಬಲ್ ಬಿರಿಯಾನಿ, ದಾಲ್ ಮಖನಿ, ರಾಜ್ಮ ಮಸಾಲ, ಪಿಂಡಿ ಚನ್ನ ಮತ್ತು ಸ್ಟೀಮ್ಡ್ ಬಾಸ್ಮತಿ ಅನ್ನ ಒಳಗೊಂಡಿದೆ. ಮಲ್ಟಿಪ್ಲೆಕ್ಸ್​ನಿಂದ ಆಹಾರ ಮತ್ತು ಪಾನೀಯ ಸೆಗ್ಮೆಂಟ್​ ಮೇಲೆ ಗಮನ ಹರಿಸಲಾಗುತ್ತಿದೆ. ಐನಾಕ್ಸ್​ಗೆ 2020ರಲ್ಲಿ ಆಹಾರದ ವ್ಯವಹಾರ ಮೂಲಕ ಬಂದಿರುವ ಆದಾಯ 500 ಕೋಟಿ ರೂಪಾಯಿ. ಸಿಇಒ ಅಲೋಕ್ ಟಂಡನ್ ಸಂದರ್ಶನವೊಂದರಲ್ಲಿ ಮಾತನಾಡಿ, ಈ ಆದಾಯವನ್ನು ಹೆಚ್ಚಿಸಲು ಕಂಪೆನಿಯು ಸಾಕಷ್ಟು ಶ್ರಮ ಹಾಕುತ್ತಿದೆ ಎಂದಿದ್ದಾರೆ.

ಈಗ ಐನಾಕ್ಸ್​ನ ಆದಾಯದಲ್ಲಿ ಆಹಾರ ಸೆಗ್ಮೆಂಟ್​ನ ಪಾಲು ಶೇ 22ರಿಂದ 25ರಷ್ಟಿದೆ. ಅದನ್ನು ಇನ್ನೂ ಹೆಚ್ಚು ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ. ವಿಶ್ಲೇಷಕರ ಪ್ರಕಾರ, FY23ರಲ್ಲಿ ಮಲ್ಟಿಪ್ಲೆಕ್ಸ್​ಗಳ ಆಹಾರ ಹಾಗೂ ಪಾನೀಯ ಸೆಗ್ಮೆಂಟ್​ನ ಆದಾಯ ಕೊವಿಡ್​ ಮುಂಚಿನ ಹಂತದ ಶೇ 90ರಷ್ಟು ಚೇತರಿಸಿಕೊಳ್ಳಲಿದೆ. ತಮ್ಮ ಆಹಾರಗಳು ಫುಡ್​ ಆರ್ಡರ್​ ಮಾಡುವ ಪ್ಲಾಟ್​ಪಾರ್ಮ್​ಗಳಾದ ಸ್ವಿಗ್ಗಿ, ಝೊಮ್ಯಾಟೋದಲ್ಲೂ ಸಿಗುವಂತೆ ಹೊಸ ಪ್ರಕ್ರಿಯೆ ಹಾಗೂ ಆವಿಷ್ಕಾರಗಳನ್ನು ಮಾಡುತ್ತಿರುವುದಾಗಿ ಐನಾಕ್ಸ್ ಹೇಳಿದೆ;. ಈಚೆಗೆ ಟೇಬಲ್ ಕಾಯ್ದಿರಿಸುವ ಹಾಗೂ ಆಹಾರ ಹುಡುಕುವ ಪ್ಲಾಟ್​ಫಾರ್ಮ್​ ಆದ EazyDinerನಲ್ಲಿ ಐನಾಕ್ಸ್ ಲಿಸ್ಟ್ ಆಯಿತು. ಸದ್ಯಕ್ಕೆ ಕಂಪೆನಿಯಿಂದ ಕೆಫೆ ಅನ್​ವೈಂಡ್, ಇನ್​ಸಿಗ್ನಿಯಾ ಮತ್ತು ಡಿಲೈಟ್ಸ್​ ಈ ಮೂರು ಬ್ರ್ಯಾಂಡ್​ಗಳಲ್ಲಿ ಆಹಾರ ಮಾರಾಟ ಮಾಡಲಾಗುತ್ತಿದೆ. ಇವುಗಳನ್ನು ಪೂರ್ಣ ಪ್ರಮಾಣದ ಸೇವೆ ನೀಡುವ ರೆಸ್ಟೋರೆಂಟ್​ ಬ್ರ್ಯಾಂಡ್​ಗಳಾಗಿ ಸಿನಿಮಾಯೇತರ ಗ್ರಾಹಕರಿಗೂ ತಲುಪಿಸುವ ಗುರಿ ಕಂಪೆನಿಗೆ ಇದೆ.

ಪ್ರೀಮಿಯಂ ಹಾಗೂ ಸೋರಿಕೆ ತಡೆಯ ಪ್ಯಾಕೇಜಿಂಗ್​ನೊಂದಿಗೆ ನಮ್ಮ ಗ್ರಾಹಕರಿಗೆ ಸೇವೆ ಒದಗಿಸಿದರೆ ಸಿನಿಮಾ ನೋಡುತ್ತಲೇ ಆಹಾರವನ್ನು ಎಂಜಾಯ್​ ಮಾಡಬಹುದು. ಈಗಿನ ಐಟಿಸಿಯೊಂದಿಗಿನ ಸಹಯೋಗದ ಮೂಲಕ ಐನಾಕ್ಸ್​ನ ಆಹಾರ ಹಾಗೂ ಪಾನೀಯ ಸೆಗ್ಮೆಂಟ್ ಸೇವಾ ಬ್ರ್ಯಾಂಡ್​ ಅನ್ನು ಇನ್ನಷ್ಟು ಬಲ ಪಡಿಸುವುದಕ್ಕೆ ಅನುಕೂಲ ಆಗುತ್ತದೆ. ಜತೆಗೆ ನಮ್ಮ ಗ್ರಾಹಕರಿಗೆ ಹೊಸ ಬಗೆಯ ಆಯ್ಕೆಗಳನ್ನು ನೀಡಿದಂತಾಗುತ್ತದೆ ಎಂದು ಐನಾಕ್ಸ್​ ಲೀಷರ್ ಲಿಮಿಟೆಡ್​ನ ಆಹಾರ ಹಾಗೂ ಪಾನೀಯ ಕಾರ್ಯಾಚರಣೆ ಉಪಾಧ್ಯಕ್ಷ ದಿನೇಶ್​ ಹರಿಹರನ್ ಹೇಳಿದ್ದಾರೆ. ಐನಾಕ್ಸ್​ ಲೀಷರ್​ ಸದ್ಯಕ್ಕೆ 69 ನಗರಗಳಲ್ಲಿ 155 ಮಲ್ಟಿಪ್ಲೆಕ್ಸ್​ಗಳು ಮತ್ತು 654 ಸ್ಕ್ರೀನ್​ಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ​

ಇದನ್ನೂ ಓದಿ: Sunfeast Allrounder: ಬಾಂಗ್ಲಾದೇಶ್​ನ ಪ್ರಾಣ್​ ಆಲೂ ಬಿಸ್ಕೆಟ್​ಗೆ ಟಕ್ಕರ್ ನೀಡಲು ಐಟಿಸಿ ಸನ್​ಫೀಸ್ಟ್​ನ ಚಟ್​ಪಟ ಮಸಾಲ

Published On - 5:51 pm, Thu, 30 September 21