Sunfeast Allrounder: ಬಾಂಗ್ಲಾದೇಶ್ನ ಪ್ರಾಣ್ ಆಲೂ ಬಿಸ್ಕೆಟ್ಗೆ ಟಕ್ಕರ್ ನೀಡಲು ಐಟಿಸಿ ಸನ್ಫೀಸ್ಟ್ನ ಚಟ್ಪಟ ಮಸಾಲ
ಇತ್ತೀಚೆಗೆ ಭಾರತದಲ್ಲಿ ಬಹಳ ಜನಪ್ರಿಯ ಆಗಿರುವ ಬಾಂಗ್ಲಾದೇಶ್ನ ಪ್ರಾಣ್ ಬ್ರ್ಯಾಂಡ್ನ ಆಲೂ ಬಿಸ್ಕೆಟ್ಗೆ ಸ್ಪರ್ಧೆ ನೀಡುವುದಕ್ಕೆ ಐಟಿಸಿ ಸನ್ಫೀಸ್ಟ್ನಿಂದ ಹೊಸ ಚಟ್ಪಟ ಮಸಾಲ ತರಲಾಗಿದೆ.
ಬಾಂಗ್ಲಾದೇಶ್ ಮೂಲದ ಪ್ರಾಣ್ (PRAN) ಬ್ರ್ಯಾಂಡ್ನ ಆಲೂಗಡ್ಡೆ ಬಿಸ್ಕೆಟ್ ಭಾರತದಲ್ಲಿ ಈಗ ಬಹಳ ಜನಪ್ರಿಯ ಆಗಿದೆ. ಅಮೆಜಾನ್.ಕಾಮ್ನಲ್ಲಿ ಈ ಬಗೆಗಿನ ಗ್ರಾಹಕರ ಅಭಿಪ್ರಾಯಗಳನ್ನು ನೋಡಿದರೆ ಅಚ್ಚರಿಯೇ ಆಗುತ್ತದೆ. ಅಷ್ಟರ ಮಟ್ಟಿಗೆ ಹಾಡಿ, ಹೊಗಳಲಾಗಿದೆ. ಇದೀಗ ಭಾರತದಲ್ಲಿ ಆ ಬ್ರ್ಯಾಂಡ್ಗೆ ಟಕ್ಕರ್ ನೀಡಲು ಐಟಿಸಿ ಲಿಮಿಟೆಡ್ನ ಸನ್ಫೀಸ್ಟ್ ಬಿಸ್ಕೆಟ್ ಬ್ರ್ಯಾಂಡ್ ಮುಂದಾಗಿದೆ. ಸನ್ಫೀಸ್ಟ್ನ ಆಲ್ರೌಂಡರ್ ಚಟ್ಪಟ ಮಸಾಲ ಆಲೂಗಡ್ಡೆ ಬಿಸ್ಕೆಟ್ ಅನ್ನು ತಂದಿದೆ. ಅಂದ ಹಾಗೆ ಮೊದಲಿಗೆ ಹೇಳಿದಂತೆ, ಅಮೆಜಾನ್ ಮೂಲಕ ಭಾರತದಲ್ಲಿ ಬಾಂಗ್ಲಾದೇಶ್ ಮೂಲದ ಪ್ರಾಣ್ ಬ್ರ್ಯಾಂಡ್ನ ಆಲೂಗಡ್ಡೆ ಬಿಸ್ಕೆಟ್ ದೊರೆಯುತ್ತದೆ. ಇತ್ತ ಸನ್ಫೀಸ್ಟ್ ಆಲೂಗಟ್ಟೆ ಬಿಸ್ಕೆಟ್ ಐಟಿಸಿ ಆನ್ಲೈನ್ ಸ್ಟೋರ್, ಸಾಮಾನ್ಯ ಮಳಿಗೆಗಳು ಹಾಗೂ ಆಧುನಿಕ ಮಾರಾಟ ಮಳಿಗೆಗಳಲ್ಲೂ ಮಾರುತ್ತಿದೆ. “ಸನ್ಫೀಸ್ಟ್ ಆಲ್ ರೌಂಡರ್ನಿಂದ ಗ್ರಾಹಕರಿಗೆ ವಿಭಿನ್ನ ಪ್ರೀಮಿಯಂ ಕೊಡುಗೆಯನ್ನು ಕ್ರ್ಯಾಕರ್ ಸ್ವರೂಪದಲ್ಲಿ ನೀಡಲು ಉದ್ದೇಶಿಸಿದೆ,” ಎಂದು ಐಟಿಸಿಯ ಬಿಸ್ಕೆಟ್ ಮತ್ತು ಕೇಕ್ ಕ್ಲಸ್ಟರ್ನ ಆಹಾರ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲಿ ಹ್ಯಾರಿಸ್ ಶೆರೆ ತಿಳಿಸಿದ್ದಾರೆ.
“ಇದು ಬಿಸ್ಕೆಟ್ಗಿಂತ ಹೆಚ್ಚು,” ಎಂದು ಹೇಳಿಕೊಳ್ಳುವ ಐಟಿಸಿಯ ವೆಬ್ಸೈಟ್, ಹಗುರ, ತೆಳುವಾದ ಮತ್ತು ಕುರುಕುಲಾದ ಆಲೂಗೆಡ್ಡೆ ಬಿಸ್ಕೆಟ್ಗಳಿವು ಎಂದು ಪಟ್ಟಿ ಮಾಡಿದೆ. ಮತ್ತು ಚಟ್ಪಟ ಮಸಾಲೆಗಳೊಂದಿಗೆ ಚುಮುಕಿಸಲಾಗುತ್ತದೆ. ಇದು ಅದರ ಪ್ರಮುಖ ಲಕ್ಷಣಗಳಾಗಿವೆ ಎಂದಿದೆ. “ಬಿಸ್ಕೆಟ್ಗಳ ವಿಭಾಗದಲ್ಲಿ ಕ್ರ್ಯಾಕರ್ಗಳು ದೊಡ್ಡ ಭಾಗವನ್ನು ಹೊಂದಿದ್ದು, ನಮ್ಮ ಪೋರ್ಟ್ ಫೋಲಿಯೋವನ್ನು ಮತ್ತಷ್ಟು ಬಲಪಡಿಸಲು ಮತ್ತು ಗ್ರಾಹಕರಿಗೆ ಟ್ರೆಂಡ್ಸೆಟ್ಟಿಂಗ್ ಮತ್ತು ಸಂತೋಷಕರ ಕೊಡುಗೆಗಳನ್ನು ಒದಗಿಸಲು ಇದು ಸೂಕ್ತ ಸಮಯ ಎಂದು ನಾವು ನಂಬುತ್ತೇವೆ. ಸನ್ಫೀಸ್ಟ್ ಆಲ್ ರೌಂಡರ್ ಅನ್ನು ಪ್ರಾರಂಭಿಸುವುದರೊಂದಿಗೆ ನಾವು ಗ್ರಾಹಕರ ಅನುಭವವನ್ನು, ಅದರಲ್ಲೂ ಬಿಸ್ಕೆಟ್ಗಳಲ್ಲಿ ಮತ್ತು ವಿಶೇಷವಾಗಿ ಕ್ರ್ಯಾಕರ್ ವಿಭಾಗದಲ್ಲಿ ಮರುವ್ಯಾಖ್ಯಾನಿಸಲು ಬಯಸುತ್ತೇವೆ, ಎಂದು ಅವರು ಹೇಳಿದ್ದಾರೆ.
ಐಟಿಸಿಯ ಪ್ರಕಾರ, ಬಿಂಗೋ ಚಿಪ್ಸ್ ಮತ್ತು ಯಿಪ್ಪೀ ನೂಡಲ್ಸ್ ಇವುಗಳಿಗೆ ಗೃಹಿಣಿಯರು ಮತ್ತು ಒಂದು ವರ್ಗದ ಗ್ರಾಹಕರು ರುಚಿಗೆ ಬಹಳ ಇಷ್ಟಪಟ್ಟಿದ್ದಾರೆ. ಈ ವಿಭಾಗದ ಅಡಿಯಲ್ಲಿ ಬರುವ ಗ್ರಾಹಕರಲ್ಲಿ ಬಿಸ್ಕೆಟ್ ಜನಪ್ರಿಯ ಆಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮೊದಲಿಗೆ ಸನ್ಫೀಸ್ಟ್ ಬಿಸ್ಕೆಟ್ಗಳು ದಕ್ಷಿಣದ ರಾಜ್ಯಗಳು, ಪಶ್ಚಿಮ ಬಂಗಾಲ ಮತ್ತು ಈಶಾನ್ಯ ರಾಜ್ಯಗಳಲ್ಲಿ ದೊರೆಯಲಿವೆ.
ಇದನ್ನೂ ಓದಿ: Stake sale by govt: ಆಕ್ಸಿಸ್ ಬ್ಯಾಂಕ್ನಲ್ಲಿದ್ದ ಷೇರು ಮಾರಾಟ ಮಾಡಿ 3994 ಕೋಟಿ ರೂಪಾಯಿ ಸಂಗ್ರಹಿಸಿದ ಕೇಂದ್ರ ಸರ್ಕಾರ
(ITC Sunfeast’s new potato biscuits rolled out to compete with Bangladeshi biscuit brand Pran)
Published On - 12:31 am, Wed, 30 June 21