ನವದೆಹಲಿ, ಆಗಸ್ಟ್ 2: ವಿಶ್ವದ ಪ್ರಮುಖ ಚಿಪ್ ತಯಾರಕ ಸಂಸ್ಥೆಯಾದ ಇಂಟೆಲ್ ತನ್ನ ಶೇ. 15ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿದೆ. ಎನ್ವಿಡಿಯಾ, ಎಎಂಡಿ ಸಂಸ್ಥೆಗಳಿಂದ ಪ್ರಬಲ ಪೈಪೋಟಿ ಎದುರಿಸುತ್ತಿರುವ ಇಂಟೆಲ್ ತನ್ನ ಸ್ಪರ್ಧಾತ್ಮಕತೆ ಉಳಿಸಿಕೊಳ್ಳಲು ಲೇ ಆಫ್ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ. ಒಟ್ಟು ತನ್ನಲ್ಲಿರುವ 1.2 ಲಕ್ಷ ಉದ್ಯೋಗಿಗಳ ಪೈಕಿ 15,000 ರಿಂದ 18,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಲು ಇಂಟೆಲ್ ನಿರ್ಧರಿಸಿದೆ. 2025ರಲ್ಲಿ 10 ಬಿಲಿಯನ್ ಡಾಲರ್ ಹಣವನ್ನು ಉಳಿಸುವ ಗುರಿ ಈ ಸಂಸ್ಥೆಯದ್ದು. ಈ ವಿಚಾರವನ್ನು ಇಂಟೆಲ್ ಕಾರ್ಪೊರೇಶನ್ನ ಸಿಇಒ ಪ್ಯಾಟ್ ಜೆಲ್ಸಿಂಗರ್ ನಿನ್ನೆ ಗುರುವಾರ ತಮ್ಮ ಸಿಬ್ಬಂದಿ ವರ್ಗಕ್ಕೆ ಕಳುಹಿಸಿದ ಮೆಮೋದಲ್ಲಿ ತಿಳಿಸಿದ್ದಾರೆ.
ಆಪರೇಟಿಂಗ್ ಅಥವಾ ಕಾರ್ಯಾಚರಣೆ ವೆಚ್ಚ ತೀರಾ ಅಧಿಕವಾಗಿದೆ. ಲಾಭದ ಮಾರ್ಜಿನ್ ಬಹಳ ಕಡಿಮೆ ಆಗಿದೆ. ನಿರೀಕ್ಷಿತ ಮಟ್ಟದಲ್ಲಿ ಆದಾಯ ಹೆಚ್ಚಳವಾಗುತ್ತಿಲ್ಲ ಎಂದು ಸಿಇಒ ಹೇಳಿದ್ದಾರೆ. ವರ್ಷದ ಎರಡನೇ ಕ್ವಾರ್ಟರ್ನಲ್ಲಿ (ಏಪ್ರಿಲ್ನಿಂದ ಜೂನ್) ಇಂಟೆಲ್ ನಷ್ಟ ಅನುಭವಿಸಿದೆ. 1.6 ಬಿಲಿಯನ್ ಡಾಲರ್ನಷ್ಟು ನಷ್ಟ ಕಂಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇಂಟೆಲ್ 1.5 ಬಿಲಿಯನ್ ಡಾಲರ್ ಲಾಭ ಗಳಿಸಿತ್ತು. ಈ ಎರಡನೇ ಕ್ವಾರ್ಟರ್ನಲ್ಲಿ ಅದರ ಆದಾಯವೂ ಕಡಿಮೆ ಆಗಿದೆ. ಮೂರನೇ ಕ್ವಾರ್ಟರ್ನಲ್ಲೂ ಆದಾಯ ಕಡಿಮೆ ಇರಬಹುದು ಎಂದು ಸ್ವತಃ ಇಂಟೆಲ್ ಸಂಸ್ಥೆಯೇ ಅಂದಾಜು ಮಾಡಿದೆ.
ಇದರ ಬೆನ್ನಲ್ಲೇ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಇಂಟೆಲ್ ಷೇರುಬೆಲೆ ಕುಸಿತ ಕಂಡಿದೆ. ಅದರ ಮಾರುಕಟ್ಟೆ ಬಂಡವಾಳ 24 ಬಿಲಿಯನ್ ಡಾಲರ್ನಷ್ಟು ಕಡಿಮೆ ಆಗಬಹುದು. ಇದೀಗ ವೆಚ್ಚ ಉಳಿತಾಯದ ಭಾಗವಾಗಿ ಲೇ ಆಫ್ ಕ್ರಮ ಕೈಗೊಂಡಿರುವುದರಿಂದ ಷೇರು ಕುಸಿತಕ್ಕೆ ಒಂದಷ್ಟು ವಿರಾಮ ಸಿಗಬಹುದು.
ಇದನ್ನೂ ಓದಿ: ಫಸ್ಟ್ ಕ್ರೈ ಐಪಿಒ; ನಷ್ಟದ ಭೀತಿಯಲ್ಲಿ ಸಚಿನ್ ತೆಂಡೂಲ್ಕರ್; ಐಪಿಒಗೆ ಮುಂಚೆಯೇ 2 ಲಕ್ಷ ಷೇರು ಖರೀದಿಸಿದ್ದ ಮಾಸ್ಟರ್ ಬ್ಲಾಸ್ಟರ್
2025ರೊಳಗೆ 18,000 ಉದ್ಯೋಗಿಗಳನ್ನು ಲೇ ಆಫ್ ಮಾಡುವುದು ಇಂಟೆಲ್ ಮ್ಯಾನೇಜ್ಮೆಂಟ್ ಗುರಿಯಾಗಿದೆ. ವರದಿ ಪ್ರಕಾರ ಈ ವರ್ಷಾಂತ್ಯದಲ್ಲೇ ಹೆಚ್ಚಿನ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಸಾಧ್ಯತೆ ಇದೆ. ಸ್ವ ಇಚ್ಛೆಯಿಂದ ಕೆಲಸ ಬಿಡಲು ಉದ್ಯೋಗಿಗಳಿಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ. ಕೆಲ ಆಯ್ದ ಉದ್ಯೋಗಿಗಳಿಗೆ ಈ ಅವಕಾಶ ನೀಡಬಹುದು. ಅವರಿಗೆ ಹೆಚ್ಚಿನ ಪ್ರೋತ್ಸಾಹಕ ಪ್ಯಾಕೇಜ್ ಕೊಡುವ ಸಾಧ್ಯತೆ ಇದೆ.
2023ರಲ್ಲಿ ಇಂಟೆಲ್ ಸಂಸ್ಥೆ ಶೇ. 5ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿತ್ತು. ಇದರ ಬೆನ್ನಲ್ಲೇ ಇನ್ನೂ ದೊಡ್ಡ ಮಟ್ಟದ ಲೇ ಆಫ್ ಕ್ರಮಕ್ಕೆ ಅದು ಕೈ ಹಾಕುತ್ತಿರುವುದು ಉದ್ಯೋಗಿಗಳಿಗೆ ಆತಂಕಕ್ಕೀಡು ಮಾಡಿದೆ. ಭಾರತದಲ್ಲೂ ಇಂಟೆಲ್ನ ಸಾವಿರಾರು ಉದ್ಯೋಗಿಗಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ