ಫಸ್ಟ್ ಕ್ರೈ ಐಪಿಒ; ನಷ್ಟದ ಭೀತಿಯಲ್ಲಿ ಸಚಿನ್ ತೆಂಡೂಲ್ಕರ್; ಐಪಿಒಗೆ ಮುಂಚೆಯೇ 2 ಲಕ್ಷ ಷೇರು ಖರೀದಿಸಿದ್ದ ಮಾಸ್ಟರ್ ಬ್ಲಾಸ್ಟರ್

First Cry IPO: ಫಸ್ಟ್ ಕ್ರೈನಲ್ಲಿ ಕಳೆದ ವರ್ಷ ಷೇರು ಖರೀದಿಸಿದ್ದ ಸಚಿನ್ ತೆಂಡೂಲ್ಕರ್, ರಂಜನ್ ಪೈ ಮೊದಲಾದ ವ್ಯಕ್ತಿಗಳು ಹಲವು ಕೋಟಿ ರೂ ನಷ್ಟದ ಭೀತಿಯಲ್ಲಿದ್ದಾರೆ. ವರ್ಷದ ಹಿಂದೆ ಇವರು ಫಸ್ಟ್ ಕ್ರೈನ ಷೇರುಗಳನ್ನು 487 ರೂ ಬೆಲೆಗೆ ಖರೀದಿಸಿದ್ದರು. ಈಗ ಐಪಿಒದಲ್ಲಿ ಇದರ ಬೆಲೆ 440 ರೂನಿಂದ 465 ರೂ ಬೆಲೆಗೆ ಮಾರಾಟಕ್ಕಿಡಲಾಗಿದೆ. ಐಪಿಒ ಬೆಲೆಗೆ ಸಚಿನ್ ತಮ್ಮ ಷೇರುಗಳನ್ನು ಮಾರಿದರೆ ನಷ್ಟವಾಗಬಹುದು.

ಫಸ್ಟ್ ಕ್ರೈ ಐಪಿಒ; ನಷ್ಟದ ಭೀತಿಯಲ್ಲಿ ಸಚಿನ್ ತೆಂಡೂಲ್ಕರ್; ಐಪಿಒಗೆ ಮುಂಚೆಯೇ 2 ಲಕ್ಷ ಷೇರು ಖರೀದಿಸಿದ್ದ ಮಾಸ್ಟರ್ ಬ್ಲಾಸ್ಟರ್
ಸಚಿನ್ ತೆಂಡೂಲ್ಕರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 01, 2024 | 5:38 PM

ಮುಂಬೈ, ಆಗಸ್ಟ್ 1: ಆನ್​ಲೈನ್​ನಲ್ಲಿ ಮಗುವಿನ ವಸ್ತುಗಳನ್ನು ಮಾರುವ ಸಂಸ್ಥೆಯಾದ ಫಸ್ಟ್ ಕ್ರೈ ಐಪಿಒಗೆ ತೆರೆದುಕೊಳ್ಳುತ್ತಿದೆ. ಆಗಸ್ಟ್ 6ರಿಂದ ಐಪಿಒ ಆರಂಭವಾಗುತ್ತಿದ್ದು 440 ರೂನಿಂದ 465 ರೂ ಪ್ರೈಸ್​ಬ್ಯಾಂಡ್​ನಲ್ಲಿ ಷೇರುಗಳ ಮಾರಾಟ ನಡೆಯಲಿದೆ. 4,193.73 ಕೋಟಿ ರೂ ಮೊತ್ತದ ಹೂಡಿಕೆ ನಿರೀಕ್ಷೆಯಲ್ಲಿ ಫಸ್ಟ್ ಕ್ರೈ ಐಪಿಒ ಆರಂಭಿಸುತ್ತಿದೆ. ಈ ಪೈಕಿ 1,666 ಕೋಟಿ ರೂ ಮೊತ್ತಕ್ಕೆ ಹೊಸ ಷೇರುಗಳನ್ನು ವಿತರಿಸಲಾಗುತ್ತಿದೆ. 2,527.73 ಕೋಟಿ ರೂ ಮೌಲ್ಯದ ಷೇರುಗಳನ್ನು ಆಫರ್ ಫಾರ್ ಸೇಲ್ಸ್ ರೂಪದಲ್ಲಿ ಮಾರಲಾಗುತ್ತಿದೆ. ಅಂದರೆ ಈಗಾಗಲೇ ಇದರ ಷೇರುಗಳನ್ನು ಹೊಂದಿರುವವರು ಐಪಿಒದಲ್ಲಿ ಮಾರುತ್ತಿದ್ದಾರೆ. ಆಗಸ್ಟ್ 8ರವರೆಗೆ ಐಪಿಒ ಮಾರಾಟ ಇರಲಿದ್ದು, ಆಗಸ್ಟ್ 13ಕ್ಕೆ ಷೇರು ವಿನಿಯಮ ಕೇಂದ್ರಗಳಲ್ಲಿ ಫಸ್ಟ್ ಕ್ರೈ ಷೇರು ಲಿಸ್ಟ್ ಆಗಲಿದೆ.

ನಷ್ಟದ ಸುಳಿಯಲ್ಲಿ ಸಚಿನ್ ತೆಂಡೂಲ್ಕರ್

ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಆದಿಯಾಗಿ ಬಹಳಷ್ಟು ಸೆಲಬ್ರಿಟಿಗಳು, ಉದ್ಯಮಿಗಳು ಫಸ್ಟ್ ಕ್ರೈನಲ್ಲಿ ಹೂಡಿಕೆ ಮಾಡಿದ್ದಾರೆ. ವಿವಿಧ ಹಂತಗಳಲ್ಲಿ ಬೇರೆ ಬೇರೆ ಬೆಲೆಗಳಲ್ಲಿ ಬಿಕರಿಯಾದ ಫಸ್ಟ್ ಕ್ರೈ ಷೇರುಗಳನ್ನು ಇವರು ಖರೀದಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಮಣಿಪಾಲ್ ಗ್ರೂಪ್​ನ ರಂಜನ್ ಪೈ, ಫೈರ್​​ಸೈಡ್ ವೆಂಚರ್ಸ್​ನ ಕನ್ವಲ್ಜಿತ್ ಸಿಂಗ್ ಅವರು ಕಳೆದ ವರ್ಷ ಪ್ರತೀ ಷೇರಿಗೆ 487.44 ರೂ ಬೆಲೆಯಂತೆ ಲಕ್ಷಾಂತರ ಷೇರುಗಳನ್ನು ಖರೀದಿಸಿದ್ದಾರೆ. ಈಗ ಫಸ್ಟ್ ಕ್ರೈ ಐಪಿಒ 440 ರೂಗೆ ಬಿಕರಿಯಾಗುತ್ತಿದ್ದು, ಸಚಿನ್ ತೆಂಡೂಲ್ಕರ್ ಆದಿಯಾಗಿ ಈ ಹೂಡಿಕೆದಾರರು ಶೇ. 10ರಷ್ಟು ನಷ್ಟದಲ್ಲಿ ನಿಂತಿದ್ದಾರೆ.

ಇದನ್ನೂ ಓದಿ: ಇನ್ಫೋಸಿಸ್​ನಿಂದ 32,403 ಕೋಟಿ ರೂ ಜಿಎಸ್​ಟಿ ಬಾಕಿ ಇದೆಯಾ? ಇಲ್ಲ ಎನ್ನುತ್ತಿದೆ ಐಟಿ ಸಂಸ್ಥೆ; ಯಾತಕ್ಕಾಗಿ ಈ ತೆರಿಗೆ?

ಫಸ್ಟ್ ಕ್ರೈ ಸಂಸ್ಥಾಪಕಿ ಸುಪಮ್ ಮಹೇಶ್ವರಿ ಕಳೆದ ವರ್ಷ ತಮ್ಮ ಪಾಲಿನ ಕೆಲ ಷೇರುಗಳನ್ನು ಮಾರಿದ್ದರು. ಆ ವೇಳೆ ಸಚಿನ್ ತೆಂಡೂಲ್ಕರ್, ರಂಜನ್ ಪೈ ಮೊದಲಾದವರು ಸುಮಾರು 3 ಲಕ್ಷ ಷೇರುಗಳನ್ನು ಖರೀದಿ ಮಾಡಿದ್ದರು. ಸಚಿನ್ ಅವರೊಬ್ಬರೇ 2 ಲಕ್ಷಕ್ಕೂ ಅಧಿಕ ಷೇರುಗಳನ್ನು ಪಡೆದಿದ್ದರು. ರಂಜನ್ ಪೈ, ಕನ್ವಲ್ಜಿತ್ ಸಿಂಗ್, ಕ್ರಿಸ್ ಗೋಪಾಲಕೃಷ್ಣನ್, ಡಿಎಸ್​ಪಿ ಸಂಸ್ಥಾಪಕ ಹೇಮೇಂದ್ರ ಕೊಠಾರಿ, ಶಾರ್ಪ್ ವೆಂಚರ್ಸ್ ಕಳೆದ ವರ್ಷ ಮಹೇಶ್ವರಿ ಅವರಿಂದ ಷೇರು ಖರೀದಿಸಿದ ವ್ಯಕ್ತಿಗಳು ಮತ್ತು ಸಂಸ್ಥೆ.

ಕಡಿಮೆ ಬೆಲೆ ಷೇರು ಖರೀದಿಸಿದವರಿಂದ ಐಪಿಒದಲ್ಲಿ ಆಫರ್ ಫಾರ್ ಸೇಲ್

ಉದ್ಯಮಿ ರತನ್ ಟಾಟಾ ಅವರು ಈ ಹಿಂದೆ 84.72 ರೂ ಸರಾಸರಿ ಬೆಲೆಯಲ್ಲಿ ಫಸ್ಟ್ ಕ್ರೈನ 77,900 ಷೇರುಗಳನ್ನು ಖರೀದಿಸಿದ್ದರು. ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯಂತೂ 77.96 ರೂ ಬೆಲೆಗೆ ಷೇರು ಖರೀದಿಸಿದೆ. ಶೇ. 11ರಷ್ಟು ಫಸ್ಟ್ ಕ್ರೈ ಷೇರು ಮಹೀಂದ್ರ ಮಾಲಕತ್ವದಲ್ಲಿ ಇದೆ. ಇದರ ಸಂಸ್ಥಾಪಕಿ ಸುಪಮ್ ಮಹೇಶ್ವರಿ ಬಳಿ ಇರುವ ಷೇರುಪಾಲು ಶೇ. 6ಕ್ಕಿಂತಲೂ ಕಡಿಮೆ.

ಇದನ್ನೂ ಓದಿ: ಜೀವ ಮತ್ತು ವೈದ್ಯಕೀಯ ವಿಮೆ ಮೇಲಿನ ಶೇ.18ರಷ್ಟು GST ತೆಗೆದುಹಾಕಿ, ವಿತ್ತ ಸಚಿವೆಗೆ ಗಡ್ಕರಿ ಪತ್ರ

ಪ್ರೇಮ್​ಜಿ ಇನ್ವೆಸ್ಟ್ ಸಂಸ್ಥೆ 280.87 ರೂನಂತೆ ಷೇರು ಖರೀದಿಸಿತ್ತು. ಈಗ ಅದು 86 ಲಕ್ಷ ಷೇರುಗಳನ್ನು ಐಪಿಒ ಮೂಲಕ ಮಾರಲು ಇಟ್ಟಿದೆ. ಇದರಿಂದ ಶೇ. 57ರಷ್ಟಾದರೂ ಲಾಭ ಸಿಗುವ ನಿರೀಕ್ಷೆ ಇದೆ. ಅಜೀಮ್ ಪ್ರೇಮ್​ಜಿ ಅವರ ಕುಟುಂಬ ಕಚೇರಿಯ ಎರಡು ಫಂಡ್​ಗಳು ಒಟ್ಟು ಸೇರಿ ಫಸ್ಟ್ ಕ್ರೈನಲ್ಲಿ ಹೊಂದಿರುವ ಷೇರುಪಾಲು ಶೇ. 10.3ರಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ