LIC Listing: ಎಲ್​ಐಸಿ ಲಿಸ್ಟಿಂಗ್​ ನಂತರದ ಕೆಲವೇ ನಿಮಿಷದಲ್ಲಿ 42,500 ಕೋಟಿ ರೂಪಾಯಿ ಉಡೀಸ್

| Updated By: Srinivas Mata

Updated on: May 17, 2022 | 12:57 PM

ಎಲ್​ಐಸಿ ಲಿಸ್ಟಿಂಗ್ ಆದ ಮೇ 17ನೇ ತಾರೀಕಿನ ಮಂಗಳವಾರದಂದು ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರು 42,500 ಕೋಟಿ ರೂಪಾಯಿ ಸಂಪತ್ತು ನಷ್ಟ ಅನುಭವಿಸಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.

LIC Listing: ಎಲ್​ಐಸಿ ಲಿಸ್ಟಿಂಗ್​ ನಂತರದ ಕೆಲವೇ ನಿಮಿಷದಲ್ಲಿ 42,500 ಕೋಟಿ ರೂಪಾಯಿ ಉಡೀಸ್
ಸಾಂದರ್ಭಿಕ ಚಿತ್ರ
Follow us on

ಎಲ್​ಐಸಿ (LIC) ಲಿಸ್ಟಿಂಗ್​ನಲ್ಲಿ ಮೇ 17ನೇ ತಾರೀಕಿನ ಮಂಗಳವಾರದಂದು ಹೂಡಿಕೆದಾರರ 42,500 ಕೋಟಿ ರೂಪಾಯಿ ಕಿಡಿಗೆ ತಾಕಿದ ಕರ್ಪೂರದಂತೆ ಕರಗಿಹೋಗಿದೆ. ಈ ಮೂಲಕವಾಗಿ 6 ಲಕ್ಷ ಕೋಟಿ ರೂಪಾಯಿಯಷ್ಟಿದ್ದ ಮಾರುಕಟ್ಟೆ ಬಂಡವಾಳ ಮೌಲ್ಯ 5.57 ಲಕ್ಷ ಕೋಟಿ ರೂಪಾಯಿಗೆ ಇಳಿದಿತ್ತು. ಲಿಸ್ಟಿಂಗ್​ಗೆ ಮುಂಚೆ ಎಲ್​ಐಸಿ ಮಾರುಕಟ್ಟೆ ಮೌಲ್ಯ 6,00,242 ಕೋಟಿ ರೂಪಾಯಿ ಇತ್ತು. ಆದರೆ ಲಿಸ್ಟಿಂಗ್ ಆದ ಮೊದಲ ಕೆಲವು ನಿಮಿಷಗಳಲ್ಲೇ 5,57,675.05 ಕೋಟಿ ರೂಪಾಯಿಗೆ ಇಳಿಯಿತು. ಆದರೆ ಈಗಲೂ ಹಿಂದೂಸ್ತಾನ್ ಯುನಿಲಿವರ್ (5.33 ಲಕ್ಷ ಕೋಟಿ ರೂ.), ಐಸಿಐಸಿಐ ಬ್ಯಾಂಕ್ (4.85 ಲಕ್ಷ ಕೋಟಿ ರೂಪಾಯಿ)ಗಿಂತ ಮುಂದಿದೆ. ಆದರೆ ಇನ್ಫೋಸಿಸ್​ಗಿಂತ (6.32 ಲಕ್ಷ ಕೋಟಿ ರೂಪಾಯಿ) ಹಿಂದಿದೆ. ಸರ್ಕಾರಿ ಸ್ವಾಮ್ಯದ ಎಲ್​ಐಸಿ ಬಿಎಸ್​ಇಯಲ್ಲಿ ಶೇ 8.62ರಷ್ಟು ರಿಯಾಯಿತಿಯೊಂದಿಗೆ 867.2ರಲ್ಲಿ ಲಿಸ್ಟಿಂಗ್ ಹಾಗೂ ಎನ್​ಎಸ್​ಇಯಲ್ಲಿ ಶೇ 8.11ರಷ್ಟು ಕಡಿಮೆಗೆ ಲಿಸ್ಟಿಂಗ್ ಆಯಿತು.

“ಎಲ್​ಐಸಿ ಲಿಸ್ಟಿಂಗ್ ವಿತರಣೆ ಬೆಲೆಯಾದ 949 ರೂಪಾಯಿಗಿಂತ ಕಡಿಮೆಗೆ ಆದರೂ ಮಾರುಕಟ್ಟೆಯಲ್ಲಿ ಆಕರ್ಷಕ ಮೌಲ್ಯ ಮತ್ತು ಸ್ಥಿರತೆ ನೀಡಿದೆ. ರೀಟೇಲ್ ಮತ್ತು ಸಾಂಸ್ಥಿಕ ಹೂಡಿಕೆದಾರರಿಂದ ಒಂದಿಷ್ಟು ಖರೀದಿ ಉತ್ಸಾಹ ಬರುವ ನಿರೀಕ್ಷೆ ಇದೆ. ಎಲ್​ಐಸಿ ಐಪಿಒ ನಂತರ ದೊಡ್ಡ ಮೊತ್ತ ಬಿಡುಗಡೆ ಆಗಿದ್ದು, ಅದರಲ್ಲಿ ಸ್ವಲ್ಪ ಹಣ ಈಕ್ವಿಟಿ ಮಾರುಕಟ್ಟೆಗೆ ಹೋಗುವ ಸಾಧ್ಯತೆ ಇದೆ,” ಎಂದು ಮೋತಿಲಾಲ್ ಓಸ್ವಾಲ್​ ಫೈನಾನ್ಷಿಯಲ್ ಸರ್ವೀಸಸ್​ನ ಹೇಮಂಗ್ ಜನಿ ಹೇಳಿದ್ದಾರೆ.

ಲಿಸ್ಟಿಂಗ್ ನಂತರ ಎಲ್​ಐಸಿ ಷೇರು ಚೇತರಿಕೆ ಕಂಡಿತು. ಶೇ 4.55ರಷ್ಟು ಇಳಿಕೆಯೊಂದಿಗೆ 905.85 ರೂಪಾಯಿಯಲ್ಲಿ ವ್ಯವಹಾರ ನಡೆಸಿತು. ಮಾರುಕಟ್ಟೆ ಬಂಡವಾಳ ಮೌಲ್ಯವು ಬಿಎಸ್​ಇಯಲ್ಲಿ ಚೇತರಿಕೆ ಕಂಡು, 5,77,282.54 ಕೋಟಿಗೆ ಏರಿದ್ದರೂ ಈಗ ಕೂಡ 22,959 ಕೋಟಿ ರೂಪಾಯಿ ಕಡಿಮೆ ಇದೆ.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LIC Stock Market Debut: 949 ರೂ.ಗೆ ಹಂಚಿದ್ದ ಎಲ್​ಐಸಿ ಷೇರು ಶೇ 9ರಷ್ಟು ಕಡಿಮೆಗೆ 867 ರೂಪಾಯಿಯಲ್ಲಿ ಮಾರುಕಟ್ಟೆ ಲಿಸ್ಟಿಂಗ್

Published On - 12:57 pm, Tue, 17 May 22