Cyber Fraud: ಸೈಬರ್ ವಂಚಕರು ಸುಲಭವಾಗಿ ಬ್ಯಾಂಕ್ ಖಾತೆಗೆ ಕಣ್ಣ ಹಾಕುವುದು ಹೇಗೆ? ವಂಚನೆಯಿಂದ ಪಾರಾಗಲು ಇಲ್ಲಿದೆ ಉಪಾಯ
ಜಗತ್ತು ಡಿಜಿಟಲ್ ಆಗಿ ಪರಿವರ್ತೆಯಾದ ನಂತರ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದೆ. ಯುಪಿಐ ಪಿನ್ ಹಾಗೂ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಬ್ಯಾಂಕ್ಗಳು ಸಂದೇಶ ರವಾನಿಸುತ್ತಲೇ ಇವೆ. ಇವುಗಳ ಕಡೆ ಗಮನಹರಿಸಿ.
ಜಗತ್ತು ಡಿಜಿಟಲ್ ಆಗಿ ಪರಿವರ್ತೆಯಾದ ನಂತರ ಸೈಬರ್(Cyber) ಕಳ್ಳರ ಹಾವಳಿ ಹೆಚ್ಚಾಗಿದೆ. ಈ ಬ್ಯಾಂಕಿನ ಗ್ರಾಹಕರ ಖಾತೆಗೆ ಸೈಬರ್ ಕಳ್ಳರ ಕಣ್ಣ ಎಂಬ ಸುದ್ದಿಗಳನ್ನು ಓದುತ್ತಿದ್ದೇವೆ. ಹೀಗಾಗಿ ಪ್ರತಿಯೊಂದು ಬ್ಯಾಂಕ್ಗಳು ಗ್ರಾಹಕರಿಗೆ ಯಾವುದೇ ಕಾರಣಕ್ಕೂ ಓಟಿಪಿ ಶೇರ್ ಮಾಡದಿರಿ, ಪಾಸ್ವರ್ಡ್ ನೀಡಬೇಡಿ ಎಂದು ಸಂದೇಶಗಳನ್ನು ರವಾನಿಸುತ್ತಿರುತ್ತದೆ. ಹೀಗಿದ್ದಾಗ ಸೈಬರ್ ವಂಚಕ(Fraud)ರ ಹಾವಳಿಯಿಂದ ತಪ್ಪಿಸಿಕೊಳ್ಳಲು ನಾವು ಕೂಡ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅವುಗಳು ಈ ಕೆಳಗಿನಂತಿವೆ.
ಸಾಮಾನ್ಯವಾಗಿ ಇಂಥ ವಂಚನೆಯನ್ನು ಮೂರು ಹಂತದಲ್ಲಿ ಮಾಡಲಾಗುತ್ತದೆ. ಸೈಬರ್ ವಂಚಕರು ಜನರಿಗೆ ಮೊದಲು ಪಾವತಿ ಸ್ವೀಕಾರ ವಿನಂತಿಯನ್ನು ಒಪ್ಪಿಕೊಳ್ಳುವಂತೆ ಕೇಳಿಕೊಳ್ಳುತ್ತಾರೆ. ಇಲ್ಲದಿದ್ದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ನಿಮಗೆ 2 ಫ್ಯಾಕ್ಟರ್ ಅಥೆಂಟಿಕೇಷನ್ ( 2FA) ಅಥವಾ ಯುಪಿಐ ಪಿನ್ ಹೇಳುವಂತೆ ಕೇಳಲಾಗುತ್ತದೆ. ಇನ್ನೊಂದೆಡೆ ನೀವು ಪಾವತಿ ಸ್ವೀಕಾರ ವಿನಂತಿಯನ್ನು ಒಪ್ಪಿಕೊಂಡಾಗ ಯುಪಿಐ ಆಪ್ , ವ್ಯವಹಾರದ ಕಡೆ ಹಂತದಲ್ಲಿ ನಿಮ್ಮ ಪಿನ್ ನಂಬರ್ ಕೇಳುತ್ತದೆ. ಅಂದರೆ ನೀವು ಯುಪಿಐ ಪಿನ್ ನಮೂದಿಸಿದ ಕೂಡಲೇ ನಿಮ್ಮ ಹಣ ಕಡಿತವಾಗುತ್ತದೆ.
ನೀವು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಅಥವಾ ಪೇಮೆಂಟ್ ರಿಸೀವ್ ಮಾಡುವ ವಿನಂತಿಯನ್ನು ಒಪ್ಪಿಕೊಳ್ಳುವ ಯಾವುದೇ ಅಗತ್ಯವಿರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ. ಒಟಿಪಿ, ಪಾಸ್ವರ್ಡ್ , ಎಂಪಿಐಎನ್ ಮತ್ತು ಯುಪಿಐ ಪಿನ್ ಇವುಗಳು ನೀವು ಬೇರೆಯವರಿಗೆ ವರ್ಗಾವಣೆ ಮಾಡಲು ಮಾತ್ರ ಅಗತ್ಯವಿದೆ. ಆದರೆ ನಿಮ್ಮ ಖಾತೆಗೆ ಹಣ ತುಂಬಲು ಅಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅಕೌಂಟ್ ನಂಬರ್ ಮತ್ತು ಉಳಿದ ಮಾಹಿತಿಗಳಿದ್ದರೆ ಯಾರೂ ಸಹ ವರ್ಗಾವಣೆ ಮಾಡಬಹುದು.
ಸೈಬರ್ ವಂಚಕರು ನಕಲಿ ಯುಆರ್ಎಲ್ ಅಥವಾ ಪೇಮೆಂಟ್ ಲಿಂಕ್ಗಳನ್ನು ಎಸ್ಎಂಎಸ್ ಮೂಲಕ ಕಳುಹಿಸುತ್ತಾರೆ. ಅದನ್ನು ಕ್ಲಿಕ್ ಮಾಡಿದರೆ ಅವರು ನಿಮ್ಮ ಫೋನ್ನ ಯುಪಿಐ ಆಪ್ ನೋಡಲು ಅವರಿಗೆ ಸಾಧ್ಯವಾಗುತ್ತದೆ. ಅದೇ ವೇಳೆ, ಆಟೋ ಡೆಬಿಟ್ ಮಾಡಲು ನಿಮ್ಮ ಫೋನ್ನಿಂದ ಯುಪಿಐ ಆಪ್ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಕೇಳಲಾಗುತ್ತದೆ. ಅದನ್ನು ನೀವು ಅಪ್ರೂವ್ ಮಾಡಿದ ಕೂಡಲೇ ನಿಮ್ಮ ಯುಪಿಐ ಆಪ್ ಮೂಲಕ ಹಣ ಕಡಿತವಾಗುತ್ತದೆ. ಇದಲ್ಲದೆ, ನಕಲಿ ಯುಆರ್ಎಲ್ ಮೇಲೆ ಕ್ಲಿಕ್ ಮಾಡುವುದರಿಂದ ನಿಮ್ಮ ಫೋನ್, ವೈರಸ್ ಅಥವಾ ಫೋನ್ ಸಿಸ್ಟಮ್ ಹಾಳುಗೆಡುವಂತಹ ಕೆಲಸವನ್ನು ಮಾಡಬಲ್ಲರು. ಈ ರೀತಿಯ ಮಾಲ್ ವೇರ್ ಗಳನ್ನು ನಿಮ್ಮ ಫೋನ್ನಿಂದ ಹಣಕಾಸು ಮಾಹಿತಿ ಕದಿಯಲು ಬಳಸಲಾಗುತ್ತದೆ.
ಯುಪಿಐ ವಂಚನೆ ತಪ್ಪಿಸುವುದು ಹೇಗೆ?
ಯುಪಿಐ ವ್ಯವಹಾರಗಳು ನಿರಂತರವಾಗಿ ಏರಿಕೆಯಾಗುತ್ತಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಇಂಡಿಯಾ ಪ್ರಕಾರ, ಫೆಬ್ರವರಿ 2021ರಿಂದ ಜನವರಿ 2022ರವರೆಗೆ 75.6 ಲಕ್ಷ ಕೋಟಿ ರೂಪಾಯಿ ಮೊತ್ತದ ವ್ಯವಹಾರವನ್ನು ಯುಪಿಐ ಮೂಲಕ ಮಾಡಲಾಗಿದೆ. ಈ ಅವಧಿಯಲ್ಲಿ ತಿಂಗಳ ಸರಾಸರಿ ವ್ಯವಹಾರದ ಪ್ರಮಾಣ 6.3 ಲಕ್ಷ ಕೋಟಿ ರೂಪಾಯಿಗಳಾಗಿತ್ತು. ನೀವು ಸಹ ಯುಪಿಐ ನಿರಂತರವಾಗಿ ಬಳಸುತ್ತಿದ್ದರೆ ಸೈಬರ್ ವಂಚನೆ ತಡೆಯುವುದು ಹೇಗೆ ಎಂಬುದನ್ನು ತಿಳಿಯಬೇಕು.
ಮೊದಲಿಗೆ ನಿಮ್ಮ ಯುಪಿಐ ಪಿನ್ ಹಾಗೂ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಬ್ಯಾಂಕುಗಳು ತಾವು ಅಂತಹ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ ಎಂಬ ಎಚ್ಚರಿಕೆ ಸಂದೇಶಗಳನ್ನು ರವಾನಿಸುತ್ತಲೇ ಇರುತ್ತವೆ. ಬ್ಯಾಂಕುಗಳ ಇಂತಹ ಸಲಹೆಗೆ ನೀವು ಗಮನಕೊಡಿ.