India-Iran: ಇರಾನ್ ಕಟ್ಟರ್ ಇಸ್ಲಾಮಿಕ್ ದೇಶವಾದರೂ ಭಾರತಕ್ಕೆ ಬೇಕು; ಯಾಕೆ ಗೊತ್ತಾ?

Iran crisis, why India has to worry about this Islamic nation?: ಇರಾನ್ ಬಿಕ್ಕಟ್ಟು ಭಾರತಕ್ಕೆ ಚಿಂತೆಗೀಡು ಮಾಡುವ ವಿಚಾರವಾಗಿದೆ. ಇರಾನ್ ಆಪ್ತ ರಾಷ್ಟ್ರವಲ್ಲವಾದರೂ ಬೇರೆ ಬೇರೆ ಕಾರಣಕ್ಕೆ ಭಾರತಕ್ಕೆ ಅದು ಬೇಕಾಗಿರುವ ದೇಶ. ಪಾಕಿಸ್ತಾನವನ್ನು ಬೈಪಾಸ್ ಮಾಡಿ ಅಫ್ಗಾನಿಸ್ತಾನ ಹಾಗೂ ಮಧ್ಯ ಏಷ್ಯನ್ ದೇಶಗಳನ್ನು ತಲುಪಲು ಭಾರತಕ್ಕೆ ಇರಾನ್ ಬೇಕು. ಹೀಗಾಗಿ ಇರಾನ್​ನಲ್ಲಿ ಛಾಬಹಾರ್ ಬಂದರು ನಿರ್ಮಾಣದಲ್ಲಿ ಭಾರತ ಆಸಕ್ತವಾಗಿದೆ. ಈಗ ಅಲ್ಲಿ ಬಿಕ್ಕಟ್ಟು ತಲೆದೋರಿ ಪೋರ್ಟ್ ಕೈಗೆ ಸಿಗದಂತಾದರೆ?

India-Iran: ಇರಾನ್ ಕಟ್ಟರ್ ಇಸ್ಲಾಮಿಕ್ ದೇಶವಾದರೂ ಭಾರತಕ್ಕೆ ಬೇಕು; ಯಾಕೆ ಗೊತ್ತಾ?
ಇರಾನ್

Updated on: Jan 15, 2026 | 6:18 PM

ನವದೆಹಲಿ, ಜನವರಿ 15: ಇರಾನ್ ಮೇಲೆ ಅಮೆರಿಕ ಯಾವ ಕ್ಷಣದಲ್ಲಿ ಬೇಕಾದರೂ ಮಿಲಿಟರಿ ದಾಳಿ ನಡೆಸಬಹುದು. ಭಾರತ ಬಹಳ ಆತಂಕದಲ್ಲಿ ಪರಿಸ್ಥಿತಿ ವೀಕ್ಷಿಸುವಂತಾಗಿದೆ. ಇರಾನ್ (Iran) ಏನೂ ಭಾರತಕ್ಕೆ ಮಿತ್ರ ದೇಶವಲ್ಲ, ತೀರಾ ಶತ್ರು ದೇಶವೂ ಅಲ್ಲ. ಎರಡು ದೇಶಗಳಾಚೆ ಇರುವ ಒಂದು ರಾಷ್ಟ್ರ. ಅಲ್ಲಿ ಪರಿಸ್ಥಿತಿ ಹದಗೆಟ್ಟರೆ ಭಾರತ ಯಾಕೆ ಚಿಂತಿಸಬೇಕು? ಭಾರತ ಇರಾನ್ ಬಗ್ಗೆ ಚಿಂತೆ ಪಡಲು ಕಾರಣಗಳಿವೆ. ಭಾರತ ಮತ್ತು ಇರಾನ್ ನಡುವಿನ ಈಗಿನ ಸಂಬಂಧದ ತಳಹದಿಯು ಪರಸ್ಪರ ಅಗತ್ಯಗಳ ಮೇಲೆ ನಿಂತಿದೆ.

ಪಶ್ಚಿಮ ಏಷ್ಯಾ ಮತ್ತು ಮಧ್ಯ ಏಷ್ಯಾಗೆ ಹೋಗಲು ಭಾರತಕ್ಕೆ ಇರಾನ್ ಬೇಕು…

ಪಶ್ಚಿಮ ಏಷ್ಯಾ ಮತ್ತು ಮಧ್ಯ ಏಷ್ಯನ್ ರಾಷ್ಟ್ರಗಳೊಂದಿಗೆ ಭಾರತ ವ್ಯಾಪಾರ ವಹಿವಾಟು ನಡೆಸಲು ಪಾಕಿಸ್ತಾನ ಪ್ರಮುಖ ತಡೆಗೋಡೆಯಾಗಿದೆ. ಪಾಕಿಸ್ತಾನದ ನೆಲದ ಮೂಲಕ ಹೋದರೆ ಆ ದೇಶಗಳನ್ನು ಸುಲಭವಾಗಿ ತಲುಪಬಹುದು. ಆದರೆ ಪಾಕಿಸ್ತಾನವನ್ನು ಭಾರತ ಹಾದು ಹೋಗಲು ಆಗುವುದಿಲ್ಲ. ಅಫ್ಗಾನಿಸ್ತಾನದಲ್ಲಿ ಸಮುದ್ರ ಸೀಮೆ ಇಲ್ಲ. ಭಾರತದಿಂದ ಅಫ್ಗಾನಿಸ್ತಾನಕ್ಕೆ ಹೋಗಬೇಕೆಂದರೂ ಪಾಕಿಸ್ತಾನಕ್ಕೆ ಹೋಗಬೇಕು ಇಲ್ಲವಾದರೆ ಇರಾನ್​ಗೆ ಹೋಗಬೇಕು.

ಇದನ್ನೂ ಓದಿ: ಪಾಕಿಸ್ತಾನ, ಬಾಂಗ್ಲಾ ಸೇರಿ 75 ದೇಶಗಳ ಜನರಿಗೆ ಇಲ್ಲ ಅಮೆರಿಕದ ವಲಸೆ ವೀಸಾ; ಇಲ್ಲಿದೆ ಪಟ್ಟಿ

ಈ ಕಾರಣಕ್ಕೆ ಭಾರತವು ಇರಾನ್​ನ ಛಾಬಹಾರ್ ಸಮುದ್ರ ಬಂದರನ್ನು ನಿರ್ಮಿಸಲು ಓಡಾಡುತ್ತಿದೆ. ಈ ಬಂದರು ನಿರ್ಮಾಣವಾದರೆ ಭಾರತದ ಸರಕುಗಳನ್ನು ಇಲ್ಲಿಗೆ ಸಾಗಿಸಿ ಇಲ್ಲಿಂದ ಅಫ್ಗಾನಿಸ್ತಾನ ಹಾಗೂ ಆ ಮೂಲಕ ತುರ್ಕ್​ಮೆನಿಸ್ತಾನ, ತಜಿಕಿಸ್ತಾನ, ಕಿರ್ಗಿಸ್ತಾನ್ ಇತ್ಯಾದಿ ಮಧ್ಯ ಏಷ್ಯನ್ ದೇಶಗಳಿಗೆ ಸಾಗಿಸಬಹುದು.

ಹೀಗಾಗಿ, ಇರಾನ್​ನ ಛಾಬಹಾರ್ ಬಂದರು ಭಾರತಕ್ಕೆ ಬಹಳ ಆಯಕಟ್ಟಿನ ಸ್ಥಳವಾಗಿದೆ. ಅಲ್ಲಿಯ ಕೆಲ ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳಲ್ಲಿ ಭಾರತ ಹೂಡಿಕೆ ಮಾಡಿದೆ. ಅಮೆರಿಕವು ಇರಾನ್ ತೈಲ ನಿಷೇಧ ಮಾಡಿದರೂ ಭಾರತ ಇತರ ಉತ್ಪನ್ನಗಳ ವಹಿವಾಟು ನಡೆಸುತ್ತಾ ಬಂದಿದೆ. ಈ ಮೂಲಕ ಇರಾನ್ ಜೊತೆಗಿನ ಸಂಬಂಧವನ್ನು ತುಸು ಗಟ್ಟಿಯಾಗಿಯೇ ಉಳಿಸಿಕೊಂಡು ಬಂದಿದೆ ಭಾರತ.

ಇದನ್ನೂ ಓದಿ: 2025ರಲ್ಲಿ ಚೀನಾಗೆ ವ್ಯಾಪಾರ ಸುಗ್ಗಿ; ಭಾರತದ ರಫ್ತಿನಲ್ಲೂ 5.5 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

ಈಗ ಇರಾನ್​ನಲ್ಲಿ ಅರಾಜಕತೆ ಸೃಷ್ಟಿಯಾಗಿ, ಛಾಬಹಾರ್ ಪೋರ್ಟ್ ಪ್ರವೇಶ ಭಾರತಕ್ಕೆ ಕೈತಪ್ಪಿ ಹೋದರೆ, ಅಥವಾ ಇಡೀ ಇರಾನ್ ಭಾರತದಿಂದ ದೂರವಾಗಿಬಿಟ್ಟರೆ ನಾನಾ ರೀತಿಯಲ್ಲಿ ಭಾರತಕ್ಕೆ ಹಿನ್ನಡೆಯಾಗಬಹುದು. ಇದು ಭಾರತವನ್ನು ಚಿಂತೆಗೀಡು ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ