Startup India @10: ಸ್ಟಾರ್ಟಪ್ ಇಂಡಿಯಾಗೆ ದಶಕದ ಸಂಭ್ರಮ; ಸಾಧನೆ, ಮೈಲಿಗಲ್ಲುಗಳೇನು? ಇಲ್ಲಿದೆ ವಿವರ
Startup India's 10-Year Journey: ಪ್ರಧಾನಿ ಮೋದಿ ಆರಂಭಿಸಿದ ಸ್ಟಾರ್ಟಪ್ ಇಂಡಿಯಾ ಯೋಜನೆಗೆ 10 ವರ್ಷ ಪೂರ್ಣಗೊಂಡಿದೆ. 2016ರಲ್ಲಿ ಶುರುವಾದ ಇದು, ಇಂದು ವಿಶಾಲವಾದ ಉದ್ಯಮ ಪರಿಸರ ವ್ಯವಸ್ಥೆಯಾಗಿ ಬೆಳೆದಿದೆ. ವಿಕಸಿತ ಭಾರತ 2047ರ ಗುರಿ ಸಾಧನೆಗೆ ಪ್ರಮುಖ ಎಂಜಿನ್ ಆಗಿ, ನಗರ-ಗ್ರಾಮೀಣ ಅಂತರ ತಗ್ಗಿಸಿ, ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿದೆ. ಭಾರತ ವಿಶ್ವದ ಅತಿದೊಡ್ಡ ಸ್ಟಾರ್ಟಪ್ ಹಬ್‌ಗಳಲ್ಲಿ ಒಂದಾಗಿದೆ.

ನವದೆಹಲಿ, ಜನವರಿ 16: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಹಳ ಮುತುವರ್ಜಿಯಿಂದ ಆರಂಭಿಸಿದ ಸ್ಟಾರ್ಟಪ್ ಇಂಡಿಯಾ ಯೋಜನೆಗೆ (Startup India Program) 10 ವರ್ಷದ ಸಂಭ್ರಮ ಇಂದು. 2016ರಲ್ಲಿ ದೇಶದ ಉದ್ದಿಮೆಗಾರಿಕೆಗೆ ಉತ್ತೇಜಿಸಲು ಸಣ್ಣದಾಗಿ ಶುರುವಾದ ಸ್ಟಾರ್ಟಪ್ ಇಂಡಿಯಾ ಇದೀಗ ಬಹಳ ವ್ಯಾಪಕವಾದ ಇಕೋಸಿಸ್ಟಂ ಆಗಿ ಬೆಳೆದಿದೆ. ವಿಕಸಿತ ಭಾರತ 2047ರ ಗುರಿ ತಲುಪಲು ದೇಶದ ಪ್ರಗತಿಯ ಎಂಜಿನ್ ಆಗಿ ಮಾರ್ಪಾಡುಗೊಂಡಿದೆ. ನಗರ ಮತ್ತು ಗ್ರಾಮೀಣ ಭಾಗಗಳ ನಡುವಿನ ಅಂತರವನ್ನು ತಗ್ಗಿಸುವ ಕೆಲಸ ಮಾಡಿದೆ. ಮಹಿಳೆಯರ ನೇತೃತ್ವದ ಸ್ಟಾರ್ಟಪ್ಗಳಿಗೆ ಉತ್ತೇಜನ ಸಿಕ್ಕಿದೆ. ಸಮತೋಲಿತ ಸಮಾಜ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಇದು ಪುಷ್ಟಿ ಕೊಟ್ಟಿದೆ.
2025ರ ಡಿಸೆಂಬರ್ನಲ್ಲಿ ಡಿಪಿಐಐಟಿ ಮಾನ್ಯತೆ ಪಡೆದಿರುವ ಎರಡು ಲಕ್ಷಕ್ಕೂ ಅಧಿಕ ಸ್ಟಾರ್ಟಪ್ಗಳಿವೆ. ವಿಶ್ವದಲ್ಲೇ ಅತಿದೊಡ್ಡ ಸ್ಟಾರ್ಪಟ್ ಇಕೋಸಿಸ್ಟಂ ಹೊಂದಿದ ದೇಶಗಳಲ್ಲಿ ಭಾರತವೂ ಇದೆ. ಅರ್ಧದಷ್ಟು ಸ್ಟಾರ್ಟಪ್ಗಳು ಎರಡನೇ ಮತ್ತು ಮೂರನೇ ಸ್ತರದ ನಗರಗಳಲ್ಲೇ ಹುಟ್ಟಿರುವುದು ವಿಶೇಷ. ಎಸ್ವಿಇಪಿ, ಆಸ್ಪೈರ್, ಎಸ್ಎಂಇಜಿಪಿ ಇತ್ಯಾದಿ ಯೋಜನೆಗಳು ಗ್ರಾಮೀಣ ಭಾಗದಲ್ಲಿ ಸಣ್ಣ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹ ಕೊಡುತ್ತಿರುವುದು ಗಮನಾರ್ಹ. ಸ್ಟಾರ್ಟಪ್ ಇಂಡಿಯಾ ಉಪಕ್ರಮದಡಿ ಹಲವಾರು ಯೋಜನೆಗಳು, ಸ್ಕೀಮ್ಗಳನ್ನು ತರಲಾಗಿದೆ. ಅದರ ವಿವರ ಇಲ್ಲಿದೆ:
ಸ್ಟಾರ್ಟಪ್ಗಳಿಗೆ ಫಂಡ್ (ಎಫ್ಎಫ್ಎಸ್): ಡಿಪಿಐಐಟಿ ಅಡಿಯಲ್ಲಿ ಫಂಡ್ ಆಫ್ ಫಂಡ್ಸ್ ಫಾರ್ ಸ್ಟಾರ್ಟಪ್ಸ್ ಸ್ಕೀಮ್ (FFS- Fund of Funds for Startups) ರಚಿಸಲಾಗಿದೆ. ಇದು ಸೆಬಿ ನೊಂದಾಯಿತ ಆಲ್ಟರ್ನೇಟಿವ್ ಇನ್ವೆಸ್ಟ್ಮೆಂಟ್ ಫಂಡ್ಗಳಿಗೆ ನೆರವು ನೀಡುತ್ತದೆ. ಈ 140ಕ್ಕೂ ಅಧಿಕ ಎಐಎಫ್ಗಳು 1,370ಕ್ಕೂ ಅಧಿಕ ಸ್ಟಾರ್ಟಪ್ಗಳಿಗೆ 25,500 ಕೋಟಿ ರೂಗೂ ಅಧಿಕ ಮೊತ್ತದ ಹೂಡಿಕೆಗಳನ್ನು ಮಾಡಿವೆ.
ಕ್ರೆಡಿಟ್ ಗ್ಯಾರಂಟೀ ಸ್ಕೀಮ್: ಈ ಸಿಜಿಎಸ್ಎಸ್ ಸ್ಕೀಮ್ನಲ್ಲಿ (Credit Guarantee Scheme for Startups) 800 ಕೋಟಿ ರೂಗೂ ಹೆಚ್ಚು ಮೊತ್ತದಷ್ಟು 330ಕ್ಕೂ ಹೆಚ್ಚು ಸಾಲಗಳನ್ನು ವಿತರಿಸಲಾಗಿದೆ.
ಸೀಡ್ ಫಂಡ್ ಸ್ಕೀಮ್: ಸ್ಟಾರ್ಟಪ್ಗಳ ಆರಂಭಿಕ ಹಂತದಲ್ಲಿ ಉತ್ತೇಜನ ನೀಡಲು ಈ ಸ್ಕೀಮ್ (SISFS- Startup India Seed Fund Scheme) ರಚಿಸಲಾಗಿದೆ. ಇನ್ಕುಬೇಟರ್ಗಳ ಮೂಲಕ ಸ್ಟಾರ್ಟಪ್ಗಳಿಗೆ ಸೀಡ್ ಫಂಡಿಂಗ್ ಕೊಡಲಾಗುತ್ತದೆ.
ಸ್ಟಾರ್ಟಪ್ ಇಂಡಿಯಾ ಹಬ್: ಸ್ಟಾರ್ಟಪ್ ಇಕೋಸಿಸ್ಟಂನ ಮುಖ್ಯ ಪಾತ್ರಧಾರಿಗಳಾದ ಹೂಡಿಕೆದಾರರು, ಮೆಂಟರ್ಗಳು, ಇನ್ಕುಬೇಟರ್ಗಳು, ಉದ್ದಿಮೆದಾರರು ಎಲ್ಲರೂ ಒಂದೇ ಕಡೆ ಸಿಗುವಂತಾಗಲು ಒಂದು ಆನ್ಲೈನ್ ಪ್ಲಾಟ್ಫಾರ್ಮ್ ರಚಿಸಲಾಗಿದೆ.
ರಾಜ್ಯಗಳ ಸ್ಟಾರ್ಟಪ್ ರ್ಯಾಂಕಿಂಗ್ ಫ್ರೇಮ್ವರ್ಕ್: ಸ್ಟಾರ್ಟಪ್ಗಳ ಆರಂಭ ಮತ್ತು ಬೆಳವಣಿಗೆಗೆ ಉತ್ತೇಜಿಸುವಂತಹ ಅತ್ಯುತ್ತಮ ನೀತಿ ಮತ್ತು ವಾತಾವರಣ ಹೊಂದಿರುವಂತಹ ರಾಜ್ಯಗಳನ್ನು ಗುರುತಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ.
ನ್ಯಾಷನಲ್ ಮೆಂಟರ್ಶಿಪ್ ಪೋರ್ಟಲ್ (ಮಾರ್ಗ್): ಉದ್ದಿಮೆದಾರರಿಗೆ ಅನುಭವಿ ಮೆಂಟರ್ಗಳನ್ನು (ಮಾರ್ಗದರ್ಶಕರು) ದೊರಕಿಸಿಕೊಡುವಂತಹ ಒಂದು ವ್ಯವಸ್ಥೆಯನ್ನು ಮಾರ್ಗ್ ಯೋಜನೆ ಮೂಲಕ ಮಾಡಲಾಗುತ್ತಿದೆ.
ಸ್ಟಾರ್ಟಪ್ ಇಂಡಿಯಾ ಇನ್ವೆಸ್ಟರ್ ಕನೆಕ್ಟ್ ಪೋರ್ಟಲ್: ಉದ್ದಿಮೆದಾರರು ಒಂದೇ ಅರ್ಜಿ ಮೂಲಕ ಹಲವು ಹೂಡಿಕೆದಾರರನ್ನು ತಲಪಲು ಅಥವಾ ಆಕರ್ಷಿಸಲು ವಿಶೇಷ ಡಿಜಿಟಲ್ ಪ್ಲಾಟ್ಫಾರ್ಮ್ ರಚಿಸಲಾಗಿದೆ. ವೆಂಚರ್ ಕ್ಯಾಪಿಟಲ್ ಫಂಡ್ಗಳು ಮತ್ತು ಹೂಡಿಕೆದಾರರನ್ನು ಈ ಪೋರ್ಟಲ್ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: G-RAM-G: ಜಿ ರಾಮ್ ಜಿ ಕಾಯ್ದೆ- ಮತ್ತಷ್ಟು ಉದ್ಯೋಗ, ಮತ್ತಷ್ಟು ಭದ್ರತೆ
ಸ್ಟಾರ್ಟಪ್ ಇಕೋಸಿಸ್ಟಂ ಗಟ್ಟಿಗೊಳಿಸಲು ವಿವಿಧ ಉಪಕ್ರಮಗಳು…
ಅಟಲ್ ಇನ್ನೋವೇಶನ್ ಮಿಷನ್: ಅಟಲ್ ಟಿಂಕರಿಂಗ್ ಲ್ಯಾಬ್, ಕಮ್ಯೂನಿಟಿ ಇನ್ನೋವೇಟರ್ ಫೆಲೋಶಿಪ್, ಯೂತ್ ಕೋ ಲ್ಯಾಬ್ ಪ್ರೋಗ್ರಾಮ್, ಡೀಪ್ಟೆಕ್ ರಿಯಾಕ್ಟರ್, ಲಿಪಿ ಇತ್ಯಾದಿ ವಿವಿಧ ಯೋಜನೆಗಳ್ನು ಈ ಮಿಷನ್ನಲ್ಲಿ ಜಾರಿಗೊಳಿಸಲಾಗಿದೆ. ಹೊಸ ತಲೆಮಾರಿನ ತಂತ್ರಜ್ಞಾನಗಳಲ್ಲಿ ಯುವಕರು ನಾವೀನ್ಯತೆ ತೋರಲು ಉತ್ತೇಜಿಸುವುದು, ತಳಮಟ್ಟದಿಂದ ಉದ್ದಿಮೆಗಾರಿಕೆಗೆ ಪ್ರೋತ್ಸಾಹಿಸುವುದು ಇತ್ಯಾದಿ ಕೆಲಸಗಳನ್ನು ಈ ಮಿಷನ್ನಲ್ಲಿ ಮಾಡಲಾಗುತ್ತಿದೆ.
ಜೆನೆಸಿಸ್ ಯೋಜನೆ: ಡೀಪ್ ಟೆಕ್ ಕ್ಷೇತ್ರದಲ್ಲಿ ಇನ್ನೋವೇಶನ್ ಅನ್ನು ಪ್ರೋತ್ಸಾಹಿಸಲು ಜನರೇಶನ್ ನೆಕ್ಸ್ಟ್ ಸಪೋರ್ಟ್ ಫಾರ್ ಇನ್ನೋವೇಟಿವ್ ಸ್ಟಾರ್ಟಪ್ಸ್ (ಜೆನೆಸಿಸ್) ಎನ್ನುವ ಒಂದು ಪ್ಲಾಟ್ಫಾರ್ಮ್ ರಚಿಸಲಾಗಿದೆ.
ಎಂಎಸ್ಎಚ್ ಯೋಜನೆ: ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದಡಿ ಸ್ಟಾರ್ಟಪ್ ಹಬ್ ಎನ್ನುವ ಉಪಕ್ರಮ 2016ರಲ್ಲಿ ಜಾರಿಯಾಗಿದೆ. ಸಚಿವಾಲಯದಿಂದ ಮಾನ್ಯತೆ ಪಡೆದ ಇನ್ಕುಬೇಶನ್ ಸೆಂಟರ್ಗಳು, ಹೊಸ ತಂತ್ರಜ್ಞಾನಗಳ ಕೇಂದ್ರಗಳು ಮತ್ತಿತರ ಪ್ಲಾಟ್ಫಾರ್ಮ್ಗಳನ್ನು ಒಂದೇ ವೇದಿಕೆಯಲ್ಲಿ ಕಲೆಹಾಕಿ ತಂತ್ರಜ್ಞಾನ ಆಧಾರಿತವಾದ ಆರ್ಥಿಕ ಪ್ರಗತಿಗೆ ಉತ್ತೇಜಿಸುವುದು ಈ ಯೋಜನೆಯ ಉದ್ದೇಶ.
ಟೈಡ್ 2.0 ಸ್ಕೀಮ್: ಎಂಎಸ್ಎಚ್ ರೀತಿಯಲ್ಲಿ ಇದೂ ಕೂಡ ಎಲೆಕ್ಟ್ರಾನಿಕ್ಸ್ ಸಚಿವಾಲಯದಿಂದ ನಡೆಸಲಾಗುತ್ತಿರುವ ಉಪಕ್ರಮವಾಗಿದೆ. ಎಐ, ಬ್ಲಾಕ್ಚೇನ್, ರೋಬೋಟಿಕ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಇತ್ಯಾದಿ ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸುವ ಸ್ಟಾರ್ಟಪ್ಗಳಿಗೆ ಉತ್ತೇಜಿಸುವುದು ಇದರ ಗುರಿ.
ನಿಧಿ ಸ್ಕೀಮ್: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 2016ರಲ್ಲಿ ಆರಂಭ ಮಾಡಿರುವ ನ್ಯಾಷನಲ್ ಇನಿಶಿಯೇಟಿವ್ ಫಾರ್ ಡೆವಲಪಿಂಗ್ ಅಂಡ್ ಹಾರ್ನೆಸಿಂಗ್ ಇನ್ನೋವೇಶನ್ಸ್ (ನಿಧಿ) ಉಪಕ್ರಮ ಇದು. ಯಶಸ್ವಿ ಸ್ಟಾರ್ಟಪ್ಗಳಿಗೆ ಉಪಯುಕ್ತ ಐಡಿಯಾಗಳು ಮತ್ತು ಇನ್ನೋವೇಶನ್ಗಳನ್ನು ಬೆಳೆಸಲು ಇರುವ ಒಂದು ಪ್ಲಾಟ್ಫಾರ್ಮ್ ಇದು. ಈ ಅದ್ಭುತ ಉಪಕ್ರಮದಿಂದ 1,100ಕ್ಕೂ ಅಧಿಕ ಐಟಿ ಪೇಟೆಂಟ್ಗಳು ಸಿಕ್ಕಿವೆ. 12 ಸಾವಿರಕ್ಕೂ ಅಧಿಕ ಸ್ಟಾರ್ಟಪ್ಗಳಿಗೆ ಬಲ ಸಿಕ್ಕಿದೆ. 1.3 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಗೆ ನೆರವಾಗಿದೆ.
ಗ್ರಾಮೀಣ ಉದ್ದಿಮೆಗಾರಿಕೆ ಯೋಜನೆ (ಎಸ್ವಿಇಪಿ): ದೀನದಯಾಳ್ ಅಂತ್ಯೋದಯ ಯೋಜನೆ ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್ ಯೋಜನೆ ಅಡಿ ಸ್ಟಾರ್ಟಪ್ ವಿಲೇಜ್ ಆಂಟ್ರಪ್ರನ್ಯೂರ್ಶಿಪ್ ಪ್ರೋಗ್ರಾಮ್ ಒಂದು ಉಪಯೋಜನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ದಿಮೆಗಾರಿಕೆಗೆ ಉತ್ತೇಜಿಸುವುದು ಇದರ ಉದ್ದೇಶ. ಹತ್ತಿರಹತ್ತಿರ 4 ಲಕ್ಷ ಉದ್ದಿಮೆಗಳಿಗೆ ಈ ಸ್ಕೀಮ್ ಮೂಲಕ ನೆರವಾಗಲಾಗಿದೆ.
ಆಸ್ಪೈರ್ ಯೋಜನೆ: ಎಂಎಸ್ಎಂಇ ಸಚಿವಾಲಯ 2015ರಲ್ಲಿ ಆರಂಭಿಸಿದ ಇದು ಇನ್ನೋವೇಶನ್, ಗ್ರಾಮೀಣ ಕೈಗಾರಿಕೆ ಮತ್ತು ಉದ್ದಿಮೆಗಾರಿಕೆಗೆ ಉತ್ತೇಜಿಸುವ ಯೋಜನೆ ಎನಿಸಿದೆ. ಸಣ್ಣ ಉದ್ದಿಮೆಗಳಿಗೆ ಬೇಕಾದ ಕೌಶಲ್ಯ ಒದಗಿಸುವುದು, ಕೌಶಲ್ಯವಂತ ಕೆಲಸಗಾರರನ್ನು ಒದಗಿಸುವುದು, ತಂತ್ರಜ್ಞಾನ ಮತ್ತು ಹಣಕಾಸು ನೆರವು ನೀಡುವುದು ಇದರ ಉದ್ದೇಶ.
ಪಿಎಂಇಜಿಪಿ ಯೋಜನೆ: ಪಿಎಂ ರೋಜಗಾರ್ ಯೋಜನೆ ಮತ್ತು ಗ್ರಾಮೀಣ ಉದ್ಯೋಗಸೃಷ್ಟಿ ಯೋಜನೆ ಎರಡನ್ನೂ ಸೇರಿಸಿ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯನ್ನು ರೂಪಿಸಲಾಗಿದೆ. ಎಂಎಸ್ಎಂಇ ಸಚಿವಾಲಯದ ಅಡಿಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಸಮಿತಿ (ಕೆವಿಐಸಿ) ಮೂಲಕ ಈ ಸ್ಕೀಮ್ ಅನ್ನು ಜಾರಿಗೊಳಿಸಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




