ನವದೆಹಲಿ, ಫೆಬ್ರುವರಿ 23: ಐಆರ್ಸಿಟಿಸಿಯ ಪೋರ್ಟಲ್ ಮೂಲಕ ರೈಲು ಪ್ರಯಾಣಿಕರು ಮುಂಗಡವಾಗಿ ಬುಕ್ ಮಾಡಲಾದ ಆಹಾರವನ್ನು ತಲುಪಿಸಲು ಸ್ವಿಗ್ಗಿ ಜೊತೆ ಐಆರ್ಸಿಟಿಸಿ (IRCTC Swiggy tie up) ಕೈಜೋಡಿಸಿದೆ. ಸದ್ಯದ ಮಟ್ಟಿಗೆ ಬೆಂಗಳೂರು ಸೇರಿದಂತೆ ಕೆಲವೇ ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಆರಂಭಿಸಲಾಗುತ್ತದೆ. ಯಾವಾ ಈ ಸೇವೆ ಆರಂಭವಾಗುತ್ತದೆ ಎಂಬುದು ಗೊತ್ತಿಲ್ಲ. ಪ್ರೀ ಆರ್ಡರ್ಡ್ ಫೂಡ್ (pre ordered meals) ಡೆಲಿವರಿಗೆ ಸ್ವಿಗ್ಗಿ ಜೊತೆ ಕೈ ಜೋಡಿಸಿರುವ ವಿಚಾರವನ್ನು ಐಆರ್ಸಿಟಿಸಿ ತನ್ನ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್ನಲ್ಲಿ (exchange filing) ಮಾಹಿತಿ ನೀಡಿದೆ.
‘ಐಆರ್ಸಿಟಿಸಿ ಇ-ಕೆಟರಿಂಗ್ ಪೋರ್ಟಲ್ ಮೂಲಕ ಮುಂಗಡವಾಗಿ ಬುಕ್ ಮಾಡಲಾದ ಆಹಾರದ ಪೂರೈಕೆ ಮತ್ತು ಡೆಲಿವರಿಗಾಗಿ ಬಂಡಲ್ ಟೆಕ್ನಾಲಜೀಸ್ ಪ್ರೈ ಲಿ (ಸ್ವಿಗ್ಗಿ ಫೂಡ್ಸ್) ಜೊತೆ ಐಆರ್ಸಿಟಿಸಿ ಒಪ್ಪಂದ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ನಾಲ್ಕು ರೈಲ್ವೆ ನಿಲ್ದಾಣಗಳಲ್ಲಿ ಈ ಸೇವೆ ಆರಂಭಿಸಲಾಗುತ್ತದೆ…’ ಎಂದು ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ಐಆರ್ಸಿಟಿಸಿ ಹೇಳಿದೆ.
ಆದರೆ, ಯಾವಾಗ ಈ ಸೇವೆ ಆರಂಭವಾಗುತ್ತದೆ ಎಂದು ಐಆರ್ಸಿಟಿಸಿ ಸ್ಪಷ್ಟಪಡಿಸಿಲ್ಲ, ಅಥವಾ ನಿರ್ದಿಷ್ಟ ಪಡಿಸಿಲ್ಲ.
ಇದನ್ನೂ ಓದಿ: ಸಂಸ್ಥೆ ನಡೆಸಲು ಇವರು ಅನರ್ಹರು: ಬೈಜುಸ್ ಮಾಲೀಕರ ವಿರುದ್ಧ ಷೇರುದಾರರ ದೂರು; ಫೋರೆನ್ಸಿಕ್ ಆಡಿಟಿಂಗ್ಗೆ ಮನವಿ
ಐಆರ್ಸಿಟಿಸಿ ಸ್ವಿಗ್ಗಿ ಜೊತೆ ಒಪ್ಪಂದ ಮಾಡಿಕೊಂಡಿರುವ ಮಾಹಿತಿ ನಿನ್ನೆ ಗುರುವಾರ ಕೇಳಿಬಂದಿತ್ತು. ಇವತ್ತು ಬೆಳಗ್ಗೆ ಷೇರುಮಾರುಕಟ್ಟೆಯಲ್ಲಿ ಐಆರ್ಸಿಟಿಸಿ ಷೇರುಗಳಿಗೆ ಉತ್ತಮ ಬೇಡಿಕೆ ಹುಟ್ಟಿತ್ತು. ಒಂದೇ ದಿನ ಶೇ. 2.92ರಷ್ಟು ಅಥವಾ 27 ರೂನಷ್ಟು ಏರಿಕೆ ಕಂಡಿದೆ. ಕಳೆದ ಎರಡು ವಾರದಿಂದ ಇಳಿಯುತ್ತಿದ್ದ ಇದರ ಷೇರು ಮತ್ತೆ ಏರಿಕೆಯ ಹಾದಿಗೆ ಬಂದಿದೆ.
2023ರ ಅಕ್ಟೋಬರ್ ತಿಂಗಳಲ್ಲಿ 659 ರೂ ಇದ್ದ ಐಆರ್ಸಿಟಿಸಿ ಬೆಲೆ ಇದೀಗ 963 ರೂ ಮುಟ್ಟಿದೆ. ನಾಲ್ಕು ತಿಂಗಳಲ್ಲಿ ಶೇ. 45ಕ್ಕಿಂತಲೂ ಹೆಚ್ಚು ಬೆಲೆ ಪಡೆದಿದೆ.
ಭಾರತದ ಎರಡನೇ ಅತಿದೊಡ್ಡ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಎನಿಸಿರುವ ಸ್ವಿಗ್ಗಿ ಇತ್ತೀಚೆಗೆ ಲಕ್ಷದ್ವೀಪದಲ್ಲೂ ತನ್ನ ಕಾರ್ಯಾಚರಣೆ ವಿಸ್ತರಿಸಿದೆ. ಅಗಟ್ಟಿ ದ್ವೀಪದಲ್ಲಿ ಸ್ವಿಗ್ಗಿ ಸೇವೆ ಲಭ್ಯ ಇದೆ. ಲಕ್ಷದ್ವೀಪದಲ್ಲಿ ಆನ್ಲೈನ್ ಫೂಡ್ ಡೆಲಿವರಿ ಸೇವೆ ಆರಂಭಿಸಿದ ದಾಖಲೆ ಸ್ವಿಗ್ಗಿಯದ್ದಾಗಿದೆ. ಅಗಾಟ್ಟಿ ದ್ವೀಪದ ಎಎಫ್ಸಿ ಫ್ರೈಡ್ ಚಿಕನ್, ಸಿಟಿ ಹೋಟೆಲ್, ಮುಬಾರಕ್ ಹೋಟೆಲ್ಗಳ ಜೊತೆ ಸ್ವಿಗ್ಗಿ ಟಯಪ್ ಮಾಡಿಕೊಂಡಿದೆ.
ಇದನ್ನೂ ಓದಿ: ಬಾಡಿಗೆ ಮನೆಯಾ, ಸ್ವಂತ ಮನೆಯಾ? ನಿಖಿಲ್ ಕಾಮತ್ ಲಾಜಿಕ್ ಇದು; ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಣ ಪ್ರತಿಕ್ರಿಯೆ
ಕುತೂಹಲವೆಂದರೆ ಸ್ವಿಗ್ಗಿಯ ಡೆಲಿವರಿ ಬಾಯ್ಗಳು ಲಕ್ಷದ್ವೀಪದಲ್ಲಿ ವಾಹನ ಬಳಸುವುದಿಲ್ಲ. ಸೈಕಲ್ ಮೂಲಕ ಆಹಾರ ತಲುಪಿಸುತ್ತಾರೆ. ಪರಿಸರ ಮಾಲಿನ್ಯ ಕಡಿಮೆ ಮಾಡಲು ಈ ಕ್ರಮ ಅನುಸರಿಸಲಾಗುತ್ತಿದೆ. ಅಲ್ಲದೇ ಲಕ್ಷದ್ವೀಪದಲ್ಲಿ ಪ್ರದೇಶ ವ್ಯಾಪ್ತಿ ದೊಡ್ಡದಿಲ್ಲದಿರುವುದರಿಂದ ಆಹಾರ ಸರಬರಾಜಿಗೆ ಸೈಕಲ್ ಬಳಕೆ ಸಾವಶ್ಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ