DA hike: ಮಾರ್ಚ್ ತಿಂಗಳಲ್ಲಿ ಡಿಎ, ಡಿಆರ್ ಹೆಚ್ಚಳ ಸಾಧ್ಯತೆ; ಶೇ. 50ರ ಗಡಿ ಮುಟ್ಟಲಿದೆ ತುಟ್ಟಿಭತ್ಯೆ
7th Pay Commission Updates: ಸರ್ಕಾರಿ ಉದ್ಯೋಗಿಗಳಿಗೆ ನೀಡುವ ಡಿಎ ಮತ್ತು ಪಿಂಚಣಿದಾರರಿಗೆ ನೀಡುವ ಡಿಆರ್ ಅನ್ನು ಮಾರ್ಚ್ ತಿಂಗಳಲ್ಲಿ ಹೆಚ್ಚಿಸುವ ಸಾಧ್ಯತೆ ಇದೆ. ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರ ಎರಡೂ ಕೂಡ ಶೇ. 4ರಷ್ಟು ಹೆಚ್ಚಾಗಿ ಶೇ. 50ರ ಗಡಿ ಮುಟ್ಟಬಹುದು ಎನ್ನಲಾಗುತ್ತಿದೆ. ಬೆಲೆ ಏರಿಕೆಯಿಂದಾಗಿ ಉದ್ಯೋಗಿಯ ಸಂಬಳದ ಮೌಲ್ಯ ಕಡಿಮೆ ಆಗುತ್ತದೆ. ಅದನ್ನು ಸರಿದೂಗಿಸಲು ಡಿಎ ಮತ್ತು ಡಿಆರ್ ಹೆಚ್ಚಿಸಲಾಗುತ್ತದೆ.
ನವದೆಹಲಿ, ಫೆಬ್ರುವರಿ 23: ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಖುಷಿ ಸುದ್ದಿ. ಕೇಂದ್ರ ಸರ್ಕಾರ ವರ್ಷದ ಮೊದಲಾರ್ಧದ ಡಿಎ ಮತ್ತು ಡಿಆರ್ (Dearness Allowance, Dearness Relief) ಅನ್ನು ಮಾರ್ಚ್ ತಿಂಗಳಲ್ಲಿ ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ ಎನ್ನುವಂತಹ ವರದಿಗಳು ಸದ್ಯ ಸಾಕಷ್ಟು ಬರುತ್ತಿವೆ. ಹಿಂದಿನ ಕೆಲ ಬಾರಿಗಳಂತೆ ಈ ಬಾರಿ ಕೂಡ ಶೇ. 4ರಷ್ಟು ತುಟ್ಟಿಭತ್ಯೆ ಹೆಚ್ಚಳಬಹುದು ಎನ್ನಲಾಗುತ್ತಿದೆ. ಶೇ. 4ರಷ್ಟು ಡಿಎ ಹೆಚ್ಚಾದಲ್ಲಿ ಒಟ್ಟಾರೆ ತುಟ್ಟಿಭತ್ಯೆ ಶೇ. 50 ಆಗಲಿದೆ. ಮಾರ್ಚ್ ತಿಂಗಳಲ್ಲೇ ಹೆಚ್ಚಳವಾದರೂ ಅದು ಜನವರಿಯಿಂದಲೇ ಪೂರ್ವಾನ್ವಯ ಆಗುತ್ತದೆ. ಮಾರ್ಚ್ ತಿಂಗಳಲ್ಲಿ ಹೆಚ್ಚಳ ಪ್ರಕಟಿಸಿದರೆ ಏಪ್ರಿಲ್ ತಿಂಗಳ ಸಂಬಳಕ್ಕೆ ಅರಿಯರ್ಸ್ ಸೇರ್ಪಡೆಯಾಗುತ್ತದೆ. ಅಂದರೆ, ಜನವರಿಯಿಂದ ಏಪ್ರಿಲ್ವರೆಗಿನ ತುಟ್ಟಿಭತ್ಯೆ ಹೆಚ್ಚಳದ ಹಣ ಒಟ್ಟು ಸೇರಿ ಬರುತ್ತದೆ.
ಹಣದುಬ್ಬರ ಆಧಾರದ ಮೇಲೆ ತುಟ್ಟಿಭತ್ಯೆ
ಡಿಎ ಅಥವಾ ಡಿಯರ್ನೆಸ್ ಅಲೋಯನ್ಸ್ (ತುಟ್ಟಿಭತ್ಯೆ) ಅನ್ನು ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ನೀಡಲಾಗುತ್ತದೆ. ಡಿಆರ್ ಅಥವಾ ಡಿಯರ್ನೆಸ್ ರಿಲೀಫ್ ಅನ್ನು ಪಿಂಚಣಿ ಪಡೆಯುವ ನಿವೃತ್ತ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಇದು ಮೂಲವೇತನಕ್ಕೆ ಸೇರಿಸಿ ನೀಡಲಾಗುವ ಹೆಚ್ಚುವರಿ ಹಣವಾಗಿರುತ್ತದೆ.
ಇದನ್ನೂ ಓದಿ: ಬಾಡಿಗೆ ಮನೆಯಾ, ಸ್ವಂತ ಮನೆಯಾ? ನಿಖಿಲ್ ಕಾಮತ್ ಲಾಜಿಕ್ ಇದು; ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಣ ಪ್ರತಿಕ್ರಿಯೆ
ಹಣದುಬ್ಬರ ಅಥವಾ ಬೆಲೆ ಏರಿಕೆಯು ಸಂಬಳದ ಮೌಲ್ಯವನ್ನು ಕುಗ್ಗಿಸುತ್ತದೆ. ಇದನ್ನು ತಪ್ಪಿಸಲು ಅಥವಾ ಸರಿದೂಗಿಸಲು ಡಿಎ ಮತ್ತು ಡಿಆರ್ ಅನ್ನು ನೀಡಲಾಗುತ್ತದೆ. ಹೀಗಾಗಿ, ಡಿಎ ಮತ್ತು ಡಿಆರ್ ಏರಿಕೆಯು ಹಣದುಬ್ಬರಕ್ಕೆ ತಳುಕು ಹಾಕಿಕೊಂಡಿರುತ್ತದೆ. ಅದಕ್ಕಾಗಿ 12 ತಿಂಗಳ ಔದ್ಯಮಿಕ ಕಾರ್ಮಿಕರ ಹಣದುಬ್ಬರದ ಸರಾಸರಿ ದರವನ್ನು ಪರಿಗಣಿಸಲಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಡಿಎ ಮತ್ತು ಡಿಆರ್ ಅನ್ನು ಶೇ. 4ರಷ್ಟು ಹೆಚ್ಚಿಸಬಹುದು.
ವರ್ಷಕ್ಕೆ ಎರಡು ಬಾರಿ ಈ ರೀತಿ ತುಟ್ಟಿಭತ್ಯೆ ಪರಿಷ್ಕರಿಸಲಾಗುತ್ತದೆ. 2023ರ ಅಕ್ಟೋಬರ್ ತಿಂಗಳಲ್ಲಿ ಹಿಂದಿನ ಡಿಎ ಹೆಚ್ಚಳವಾಗಿತ್ತು. ಸದ್ಯ ಡಿಎ ಮತ್ತು ಡಿಆರ್ ಶೇ. 46ರಷ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ