ತುಟ್ಟಿಭತ್ಯೆ (Dearness Allowance) ಏರಿಕೆಗೆ ಇತ್ತೀಚಿನ ಕೇಂದ್ರ ಸಂಪುಟ ಅನುಮೋದನೆಯ ನಂತರ ಡಿಎ ಈಗ ಮೂಲ ವೇತನದ ಶೇ 34ರಷ್ಟು ಆಗಿದೆ. ಈ ಹೆಚ್ಚಳದೊಂದಿಗೆ ಡಿಎ ಮಟ್ಟವನ್ನು ಆಧರಿಸಿ ನಿರ್ಧರಿಸುವ ಇತರ 4 ಭತ್ಯೆಗಳು ಸಹ ಹೆಚ್ಚಾಗಬಹುದು ಎಂದು ಈಗ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಗಳು ಪ್ರಸಾರ ಆಗುತ್ತಿವೆ. ಆ ಬಗ್ಗೆ ಪಟ್ಟಿ ಇಲ್ಲಿದೆ.
1. ಮೂಲ ವೇತನದ ಅನುಪಾತದಲ್ಲಿ ಡಿಎ ಇರುತ್ತದೆ. ಪರಿಣಾಮವಾಗಿ ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರ ಮಾಸಿಕ ಭವಿಷ್ಯ ನಿಧಿ (ಪಿಎಫ್) ಅನ್ನು ಸಹ ಹೆಚ್ಚಿಸುತ್ತದೆ.
2. ಡಿಎ ಹೆಚ್ಚಳದಿಂದಾಗಿ ಉದ್ಯೋಗಿಗಳ ಗ್ರಾಚ್ಯುಟಿ ಮೊತ್ತವು ಸಹ ಹೆಚ್ಚಳ ಆಗುತ್ತದೆ.
3. ತುಟ್ಟಿಭತ್ಯೆ ಹೆಚ್ಚಳವು ಉದ್ಯೋಗಿಗಳ ಪ್ರಯಾಣ/ಸಾರಿಗೆ ಭತ್ಯೆ ಮತ್ತು ನಗರ ಭತ್ಯೆಗಳ ಹೆಚ್ಚಳಕ್ಕೆ ಮಾರ್ಗವನ್ನು ಸರಾಗಗೊಳಿಸಿದೆ.
4. ಡಿಎ ಹೆಚ್ಚಿಸಿರುವುದರಿಂದ ಎಚ್‌ಆರ್‌ಎ ಹೆಚ್ಚಳಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ಊಹಾಪೋಹಗಳು ಕೂಡ ಹರಿದಾಡಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಮಾರ್ಚ್ 30, 2022ರಂದು ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ಕಂತು ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ಡಿಯರ್‌ನೆಸ್ ರಿಲೀಫ್ (ಡಿಆರ್) ಬಿಡುಗಡೆ ಮಾಡಲು ಅನುಮೋದನೆ ನೀಡಿತು. 1.1.2022ರಿಂದ ಜಾರಿಗೆ ಬರುತ್ತದೆ. ಬೆಲೆ ಏರಿಕೆಯನ್ನು ಸರಿದೂಗಿಸಲು, ಮೂಲ ವೇತನ/ಪಿಂಚಣಿಯ ಅಸ್ತಿತ್ವದಲ್ಲಿರುವ ಶೇ 31ರ ದರಕ್ಕಿಂತ ಶೇ 3ರಷ್ಟು ಹೆಚ್ಚಳವನ್ನು ಪ್ರತಿನಿಧಿಸುತ್ತದೆ. 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿ ಈ ಹೆಚ್ಚಳವನ್ನು ಅನುಮೋದಿಸಲಾಗಿದೆ.
ಡಿಯರ್‌ನೆಸ್ ಅಲೋವೆನ್ಸ್ ಮತ್ತು ಡಿಯರ್‌ನೆಸ್ ರಿಲೀಫ್ ಎರಡರ ಖಾತೆಯಲ್ಲಿನ ಬೊಕ್ಕಸದ ಮೇಲಿನ ಒಟ್ಟಾರೆ ಪರಿಣಾಮವು ವಾರ್ಷಿಕ ರೂ. 9,544.50 ಕೋಟಿಗಳಾಗಿರುತ್ತದೆ. ಇದರಿಂದ ಸುಮಾರು 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.