DA Hike: ಕೇಂದ್ರ ಸರ್ಕಾರಿ ನೌಕರರಿಗೆ ಶೇ 3ರಷ್ಟು ತುಟ್ಟಿ ಭತ್ಯೆ ಏರಿಕೆ
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಶೇ 3ರಷ್ಟು ತುಟ್ಟಿ ಭತ್ಯೆ ಏರಿಕೆ ಮಾಡಿ ಕೇಂದ್ರ ಸಂಪುಟದಿಂದ ಘೋಷಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ಭಾರತದಲ್ಲಿನ ವೇತನದಾರರಿಗೆ ಅತಿ ದೊಡ್ಡ ನಿರಾಳ ಎನ್ನುವಂತೆ ಕೇಂದ್ರ ಸರ್ಕಾರವು ಮಾರ್ಚ್ 30ನೇ ತಾರೀಕಿನ ಬುಧವಾರದಂದು ಘೋಷಣೆ ಮಾಡಿರುವಂತೆ ತುಟ್ಟಿಭತ್ಯೆಯಲ್ಲಿ (Dearness Allowance) ಏರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಅಡಿಯಲ್ಲಿ ಈ ಹೆಚ್ಚಳ ಆಗಿದೆ. ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಇದು ಗುಡ್ ನ್ಯೂಸ್ ಆಗಿದ್ದು, ಕೇಂದ್ರ ಸಚಿವ ಸಂಪುಟ ಸಭೆಯು ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಏರಿಕೆಗೆ ಸಭೆಯಲ್ಲಿ ಒಪ್ಪಿಗೆ ನೀಡಿದೆ. 2022ರ ಜನವರಿ 1ರಿಂದ ಡಿ.ಎ. ಏರಿಕೆ ಅನ್ವಯ ಆಗುತ್ತದೆ. ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ 3ರಷ್ಟು ಡಿ.ಎ. ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಇಷ್ಟಕ್ಕೂ ತುಟ್ಟಿ ಭತ್ಯೆ ಏರಿಕೆ ಉದ್ದೇಶವೇನು ಎನ್ನುವುದರ ಡೀಟೇಲ್ಸ್ ಇಲ್ಲಿದೆ ನೋಡಿ.
ಕೇಂದ್ರ ಸರ್ಕಾರವು ಬುಧವಾರ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಅಥವಾ ಡಿಎಯನ್ನು ಶೇಕಡಾ 3ರಷ್ಟು ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿ.ಎ. ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. 2022ರ ಜನವರಿ ಒಂದರಿಂದಲೇ ಡಿ.ಎ. ಏರಿಕೆಯು ಪೂರ್ವಾನ್ವಯವಾಗಲಿದೆ. ಹೆಚ್ಚುತ್ತಿರುವ ಇಂಧನ ಮತ್ತು ತೈಲ ಬೆಲೆಗಳು ಹಾಗೂ ಹಣದುಬ್ಬರದ ಮಧ್ಯೆ ತುಟ್ಟಿಭತ್ಯೆ ಹೆಚ್ಚಳವು ಲಕ್ಷಾಂತರ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಹೆಚ್ಚು ಅಗತ್ಯವಿರುವ ರಿಲೀಫ್ ಅನ್ನು ನೀಡುತ್ತದೆ. ತುಟ್ಟಿ ಭತ್ಯೆ ಏರಿಕೆಯಿಂದ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಹಣಕಾಸು ನಿರ್ವಹಣೆ, ದೈನಂದಿನ ಖರ್ಚು- ವೆಚ್ಚ ನಿರ್ವಹಣೆಗೆ ಸಹಾಯಕವಾಗುತ್ತದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಡಿಎ ಪರಿಷ್ಕರಣೆಯು ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿತ್ತು. 2021ರ ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಕೇಂದ್ರವು ದೀರ್ಘ ವಿರಾಮದ ನಂತರ ಶೇಕಡಾ 17ರಿಂದ ಶೇಕಡಾ 28ಕ್ಕೆ ಏರಿಸಿದೆ. ಮತ್ತೆ ಅಕ್ಟೋಬರ್, 2021ರಲ್ಲಿ ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆಯಲ್ಲಿ ಶೇಕಡಾ 3ರಷ್ಟು ಏರಿಕೆ ಮಾಡಲಾಗಿತ್ತು. ಇತ್ತೀಚಿನ ಏರಿಕೆಯೊಂದಿಗೆ, ಜುಲೈ 2021ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಶೇ 31ಕ್ಕೆ ಏರಿತು. ಅದೇ ರೀತಿ, ಕೇಂದ್ರ ಸರ್ಕಾರದ ಪಿಂಚಣಿದಾರರ ಡಿಯರ್ನೆಸ್ ರಿಲೀಫ್ ಅನ್ನು ಶೇ 31ಕ್ಕೆ ಏರಿಸಲಾಗಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್‌ನಲ್ಲಿ ಮತ್ತೆ ಶೇಕಡಾ 3ರಷ್ಟು ಹೆಚ್ಚಳವನ್ನು ಘೋಷಿಸಿದ ನಂತರ ತುಟ್ಟಿಭತ್ಯೆ ಮೂಲ ವೇತನದ ಶೇ 34ಕ್ಕೆ ಏರಿದೆ. ಈ ನಿರ್ಧಾರದಿಂದ 47.68 ಲಕ್ಷ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ತುಟ್ಟಿಭತ್ಯೆಯು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನದ ಒಂದು ಅಂಶವಾಗಿದೆ, ಇದು ಹಣದುಬ್ಬರದ ಪರಿಣಾಮವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಹೆಚ್ಚುತ್ತಿರುವ ಹಣದುಬ್ಬರ ದರಗಳನ್ನು ನಿಭಾಯಿಸಲು, ಸರ್ಕಾರಿ ನೌಕರರ ಪರಿಣಾಮಕಾರಿ ವೇತನವನ್ನು ನಿಯಮಿತವಾಗಿ ಪರಿಷ್ಕರಿಸಲಾಗುತ್ತದೆ. ಹಣದುಬ್ಬರವನ್ನು ಎದುರಿಸುವಂಥ ಗುರಿಯನ್ನು ಡಿಎ ಹೊಂದಿದ್ದು, ಕೇಂದ್ರವು ಪ್ರತಿ ವರ್ಷ ಎರಡು ಬಾರಿ ಡಿಎ ಪರಿಷ್ಕರಿಸುತ್ತದೆ – ಜನವರಿ ಮತ್ತು ಜುಲೈನಲ್ಲಿ ತಿಂಗಳಲ್ಲಿ. ಉದ್ಯೋಗಿಗಳು ನಗರ ವಲಯ, ಅರೆ-ನಗರ ವಲಯ ಅಥವಾ ಗ್ರಾಮೀಣ ವಲಯದಲ್ಲಿ ಕೆಲಸ ಮಾಡುತ್ತಾರೆಯೇ ಎಂಬುದರ ಆಧಾರದ ಮೇಲೆ ತುಟ್ಟಿಭತ್ಯೆಯು ಉದ್ಯೋಗಿಯಿಂದ ಉದ್ಯೋಗಿಗೆ ಬದಲಾಗುತ್ತದೆ ಎಂಬುದನ್ನು ಗಮನಿಸಬೇಕು.
2006ರಲ್ಲಿ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಲೆಕ್ಕಾಚಾರ ಮಾಡಲು ಸೂತ್ರವನ್ನು ಬದಲಾಯಿಸಿತು. ಕೇಂದ್ರ ಸರ್ಕಾರಿ ನೌಕರರಿಗೆ: ತುಟ್ಟಿಭತ್ಯೆ % = ((ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ (ಆಧಾರ ವರ್ಷ 2001=100) ಕಳೆದ 12 ತಿಂಗಳುಗಳಿಂದ -115.76)/115.76)*100. ಕೇಂದ್ರ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ: ತುಟ್ಟಿಭತ್ಯೆ % = ((ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 3 ತಿಂಗಳುಗಳಿಂದ -126.33)/126.33)*100
ಈಗ, ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಅಂಕಿ-ಅಂಶಗಳ ಪ್ರಕಾರ, ಇತ್ತೀಚಿನ ಹೆಚ್ಚಳದ ನಂತರ ಕೇಂದ್ರ ಸರ್ಕಾರಿ ನೌಕರರು ತಮ್ಮ ತುಟ್ಟಿಭತ್ಯೆಯಲ್ಲಿ ಶೇಕಡಾ 3ರಷ್ಟು ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ.
ಕೇಂದ್ರ ಸರ್ಕಾರಿ ನೌಕರರಿಗೆ ತಿಂಗಳಿಗೆ 18,000 ರೂಪಾಯಿ ಅವರ ವೇತನದಲ್ಲಿ ತುಟ್ಟಿಭತ್ಯೆ ಶೇ 3ರಷ್ಟು ಹೆಚ್ಚಾಗಲಿದೆ. ಶೇ 34 ಡಿಎಯೊಂದಿಗೆ ಮಾಸಿಕ ವೇತನದಲ್ಲಿ 6,120 ರೂಪಾಯಿ ಆಗುತ್ತದೆ. ತುಟ್ಟಿಭತ್ಯೆಯು ಮೂಲ ವೇತನಕ್ಕೆ ಸಂಬಂಧಿಸಿದೆ ಎಂಬುದನ್ನು ಗಮನಿಸಬೇಕು. ಆದ್ದರಿಂದ, ಡಿಎ ಹೆಚ್ಚಳದಿಂದ ಕೇಂದ್ರ ಸರ್ಕಾರಿ ನೌಕರರ ಮಾಸಿಕ ಭವಿಷ್ಯ ನಿಧಿ (ಪಿಎಫ್) ಮತ್ತು ಗ್ರಾಚ್ಯುಟಿ ಮೊತ್ತವೂ ಹೆಚ್ಚಾಗುತ್ತದೆ. ತುಟ್ಟಿಭತ್ಯೆ ಪರಿಷ್ಕರಣೆಯ ನಂತರ, ಕೇಂದ್ರ ಸರ್ಕಾರಿ ನೌಕರರಿಗೆ ಭವಿಷ್ಯ ನಿಧಿ, ಗ್ರಾಚ್ಯುಟಿ, ಪ್ರಯಾಣ ಭತ್ಯೆಗೆ ಮಾಸಿಕ ಕೊಡುಗೆ ಕೂಡ ಹೆಚ್ಚಾಗುತ್ತದೆ.
ಇದನ್ನೂ ಓದಿ: ಸಂಘಟಿತ ವಲಯದ ಕಾರ್ಮಿಕರಿಗೆ ಹೊಸ ಪಿಂಚಣಿ ಯೋಜನೆ: ಇಪಿಎಫ್ಒ ಚಿಂತನೆ
Published On - 3:05 pm, Wed, 30 March 22