137 ದಿನಗಳ ನಂತರ ಮಾರ್ಚ್ 22, 2022ರಂದು ತೈಲ ಮಾರ್ಕೆಟಿಂಗ್ ಕಂಪೆನಿಗಳು ಪೆಟ್ರೋಲ್, ಡೀಸೆಲ್ ಬೆಲೆ (Petrol- Diesel Price) ಏರಿಕೆ ಮಾಡಿದವು. ಆ ನಂತರದಲ್ಲಿ ತೈಲ ಬೆಲೆ ಗಮನಿಸಿದರೆ ಹತ್ತಿರ ಹತ್ತಿರ ಲೀಟರ್ಗೆ 10 ರೂಪಾಯಿ ಏರಿಕೆ ಮಾಡಲಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 105.41 ರೂಪಾಯಿ ಇದ್ದರೆ, ಡೀಸೆಲ್ ಲೀಟರ್ಗೆ 96.67 ರೂಪಾಯಿ ಇದೆ. ಆದರೆ ಈ ಏರಿಕೆಯಿಂದ ಜನರ ಮೇಲೆ ಪರಿಣಾಮ ಆಗುವುದನ್ನು ತಪ್ಪಿಸುವುದಕ್ಕೆ ಕೇಂದ್ರ ಸರ್ಕಾರವು ತೈಲದ ಮೇಲಿನ ತೆರಿಗೆ ಕಡಿತಕ್ಕೆ ಸಿದ್ಧವಾಗಿದೆಯಾ? ಹಾಗೇನೂ ಅನ್ನಿಸುವುದಿಲ್ಲ. ತೈಲದ ಮೇಲಿನ ತೆರಿಗೆ ಇಳಿಸುವ ಮನಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇಲ್ಲ. ತೈಲ ಕಂಪೆನಿಗಳಿಗೆ ಎಷ್ಟು ಹೊರೆಯನ್ನು ತಡೆಯುವುದಕ್ಕೆ ಸಾಧ್ಯವೋ ಅಷ್ಟನ್ನು ತಡೆದುಕೊಳ್ಳಲಿ ಎಂಬುದು ಸರ್ಕಾರದ ಇರಾದೆ. ಪೆಟ್ರೋಲ್- ಡೀಸೆಲ್ ಮೇಲಿನ ಸುಂಕ ಕಡಿಮೆ ಮಾಡಬೇಕು ಎಂಬ ತೈಲ ಸಚಿವಾಲಯದ ಮನವಿಗೆ ಪೂರಕವಾಗಿ ಹಣಕಾಸು ಸಚಿವಾಲಯ ಇಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಹಣಕಾಸು ಮತ್ತು ತೈಲ ಸಚಿವಾಲಯ ಅಧಿಕಾರಿಗಳು ಹಾಗೂ ತೈಲ ಮಾರ್ಕೆಟಿಂಗ್ ಕಂಪೆನಿಗಳ ಉನ್ನತಾಧಿಕಾರಿಗಳು ಈಚೆಗೆ ಸಭೆ ಸೇರಿ, ಅಂತರರಾಷ್ಟ್ರೀಯ ಮಟ್ಟದ ಈ ತೈಲ ಬೆಲೆ ಏರಿಕೆಯನ್ನು ತಹಬದಿಗೆ ತರುವುದು ಹೇಗೆ ಎಂದು ಚರ್ಚಿಸಿದ್ದರು.ತೈಲ ದರದ ಮೇಲಿನ ಸುಂಕ ಇಳಿಸುವ ಪ್ರಸ್ತಾವವನ್ನು ಹಣಕಾಸು ಸಚಿವಾಲಯದ ಅಧಿಕಾರಿಗಳು ಪುರಸ್ಕರಿಸಲಿಲ್ಲ. ಕಳೆದ ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಏಪ್ರಿಲ್ 6, 2022ರಂದು ಮಾಡಲಾಗಿದೆ. ಒಂದು ವಾರದಿಂದ ಬೆಲೆಯಲ್ಲಿ ಯಾವ ಬದಲಾವಣೆ ಆಗಿಲ್ಲ. ಆದರೂ ಅಂತರರಾಷ್ಟ್ರೀಯ ದರವನ್ನು ಗಮನಿಸಿದರೆ ಈಗಲೂ ಪೆಟ್ರೋಲ್ ಬೆಲೆ ಲೀಟರ್ಗೆ 8 ರೂಪಾಯಿ, ಡೀಸೆಲ್ 18 ರೂಪಾಯಿ ವ್ಯತ್ಯಾಸ ಇದೆ ಎಂದು ಮೂಲಗಳು ತಿಳಿಸಿವೆ.
ರೀಟೇಲ್ ದರದಲ್ಲಿ ಅತಿ ದೊಡ್ಡ ಪಾಲು ಕೇಂದ್ರ ಸರ್ಕಾರದ ಅಬಕಾರಿ ಸುಂಕ ಮತ್ತು ರಾಜ್ಯದ ವ್ಯಾಲ್ಯೂ ಆ್ಯಡೆಡ್ ಟ್ಯಾಕ್ಸ್ ಇದೆ. ದೆಹಲಿಯ ಲೆಕ್ಚಾಚಾರಕ್ಕೆ ಹೇಳುವುದಾದರೆ, ಒಟ್ಟು ಪೆಟ್ರೋಲ್ ಬೆಲೆಯಲ್ಲಿ ಶೇ 42ರಷ್ಟು, ಡೀಸೆಲ್ ಬೆಲೆಯಲ್ಲಿ ಶೇ 37ರಷ್ಟು ಸುಂಕವೇ ಇದೆ. ಈ ಮಧ್ಯೆ, ಕಳೆದ 8 ವರ್ಷದಲ್ಲಿ ಅಬಕಾರಿ ಸುಂಕದಲ್ಲಿ ಭಾರೀ ಹೆಚ್ಚಳ ಆಗಿದೆ. 2014ರ ಏಪ್ರಿಲ್ನಲ್ಲಿ ಲೀಟರ್ಗೆ ಪೆಟ್ರೋಲ್ ಮೇಲೆ 9.48 ರೂಪಾಯಿ ಇದ್ದದ್ದು 27.9 ರೂಪಾಯಿಗೆ ಏರಿಕೆ ಆಗಿದೆ. ಇನ್ನು ಇದೇ ಅವಧಿಯಲ್ಲಿ ಡೀಸೆಲ್ ಮೇಲೆ ರೂ. 3.18ರಿಂದ 21.8ಕ್ಕೆ ಏರಿದೆ. ಹಣಕಾಸು ವರ್ಷ 2021ಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ಸಂಗ್ರಹವು 3.72 ಲಕ್ಷ ಕೋಟಿ ರೂ.ತಲುಪಿದೆ. ಹಣಕಾಸು ವರ್ಷ 2020ರಲ್ಲಿ ಇದು 1.78 ಲಕ್ಷ ಕೋಟಿ ಇತ್ತು.
ಇತ್ತೀಚಿನ ದತ್ತಾಂಶದ ಪ್ರಕಾರ, ಗ್ರಾಹಕ ಹಣದುಬ್ಬರ ದರವು 17 ತಿಂಗಳ ಗರಿಷ್ಠ ಮಟ್ಟವಾದ ಶೇ 6.95 ಅನ್ನು ಮಾರ್ಚ್ನಲ್ಲಿ ತಲುಪಿದೆ. ಹೆಚ್ಚಿನ ತೈಲ ಮತ್ತು ಆಹಾರ ಪದಾರ್ಥಗಳ ವೆಲೆಯಿಂದಾಗಿ ಹೀಗಾಗಿದೆ.
ಇದನ್ನೂ ಓದಿ: ತಮಿಳುನಾಡು ನವದಂಪತಿಗೆ ವಿವಾಹ ಮಂಟಪದಲ್ಲಿ ಪೆಟ್ರೋಲ್ ಡೀಸೆಲ್ ಕೊಡುಗೆ