ಪಾಕಿಸ್ತಾನದಲ್ಲಿ ಒಂದು ಲೀಟರ್ ಡೀಸೆಲ್ ಬೆಲೆ ಇನ್ನೇನು 200 ಪಾಕಿಸ್ತಾನಿ ರೂಪಾಯಿಗಳನ್ನು ದಾಟುವುದಕ್ಕೆ ಎಲ್ಲ ಸಿದ್ಧವಾಗಿದೆ. ಪಾಕಿಸ್ತಾನದ (Pakistan) ಇತಿಹಾಸದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ದಾಖಲೆ ನಿರ್ಮಾಣ ಆಗಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಏರುತ್ತಿರುವ ಕಚ್ಚಾ ತೈಲ ದರಗಳು ಮತ್ತು ಯುಎಸ್ ಡಾಲರ್ ವಿರುದ್ಧ ಪಾಕಿಸ್ತಾನದ ರೂಪಾಯಿ ಮೌಲ್ಯದ ಕುಸಿತ ಸೇರಿಕೊಂಡು ಇಂಥದ್ದೊಂದು ಬೆಳವಣಿಗೆ ಆಗಿದೆ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಏಪ್ರಿಲ್ 16ರಿಂದ ಆರಂಭವಾಗುವ ಪ್ರಸಕ್ತ ತಿಂಗಳ ಎರಡನೇ ಪಾಕ್ಷಿಕದಲ್ಲಿ ಹೊಸದಾಗಿ ರಚನೆಯಾದ ಪಾಕಿಸ್ತಾನ ಸರ್ಕಾರವು ಡೀಸೆಲ್ ಬೆಲೆಯನ್ನು ಲೀಟರ್‌ಗೆ 60.54 ರೂಪಾಯಿಗಳಷ್ಟು ಹೆಚ್ಚಿಸುವ ಅಗತ್ಯವಿದೆ ಅಥವಾ ಪ್ರಸ್ತುತ ಬೆಲೆಯನ್ನು ಉಳಿಸಿಕೊಳ್ಳಲು ಸಬ್ಸಿಡಿಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ನಾಯಕ ಸ್ಥಾನದಲ್ಲಿ ಇರುವವರು ಬೆಲೆ ಏರಿಕೆಗೆ ನಿರ್ಧಾರ ಮಾಡಿದಲ್ಲಿ ಒಂದು ಲೀಟರ್ ಡೀಸೆಲ್ ಬೆಲೆ ಲೀಟರ್‌ಗೆ 204.69 ರೂಪಾಯಿ ಆಗುತ್ತದೆ. ಇದಕ್ಕೂ ಮುನ್ನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 10 ರೂಪಾಯಿ ಕಡಿತ ಮಾಡಿದ್ದರು. 2022-23ರ ಬಜೆಟ್ ಘೋಷಣೆ ಮಾಡುವ ತನಕ ಬೆಲೆಯನ್ನು ತಡೆ ಹಿಡಿದಿದ್ದರು. ಮೂಲಗಳು ತಿಳಿಸಿರುವಂತೆ, ಸರ್ಕಾರವು ಗಂಭೀರ ಸನ್ನಿವೇಶದಲ್ಲಿದೆ ಮತ್ತು ಸಾರ್ವಜನಿಕರ ಬೆಂಬಲವನ್ನು ಪಡೆಯುವ ನಿಟ್ಟಿನಲ್ಲಿ ಬೆಲೆ ಏರಿಕೆ ಮಾಡದಿರುವುದಕ್ಕೆ ನಿರ್ಧರಿಸಬಹುದು. ಅಧಿಕಾರಿಗಳು ಹೇಳುವಂತೆ, ಈ ಹಿಂದಿನ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಸರ್ಕಾರವು ಮಾರ್ಚ್ ಮಧ್ಯದಿಂದ ದರವನ್ನು ಹಾಗೇ ಉಳಿಸಿತ್ತು. ಇದರಿಂದಾಗಿ ಏಪ್ರಿಲ್ನ ಮೊದಲ ಪಾಕ್ಷಿಕದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸಬ್ಸಿಡಿ ಬಿಲ್ 3000 ಕೋಟಿ ರೂಪಾಯಿ ಹೆಚ್ಚಳ ಮಾಡಿದೆ.
ಆದರೆ, ತೈಲ ಬೆಲೆಯನ್ನು ಬದಲಾವಣೆ ಮಾಡದೆ ಹಾಗೇ ಉಳಿಸಿಕೊಳ್ಳುವ ನಿರ್ಧಾರಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಇದಕ್ಕೆ ಅಧಿಕೃತವಾಗಿ ಅನುಮತಿ ಸಿಕ್ಕಿಲ್ಲ. ಒಂದು ವೇಳೆ ಈಗಿನ ಸರ್ಕಾರವು ಇದೇ ನೀತಿಯನ್ನು ಮುಂದುವರಿಸಿದಲ್ಲಿ ಏಪ್ರಿಲ್ 16ರಿಂದ 30ರ ಅವಧಿಗೆ ಮತ್ತೆ 3000 ಕೋಟಿ ರೂಪಾಯಿ ನೀಡಲೇ ಬೇಕಾಗುತ್ತದೆ. ತೈಲ ಬೆಲೆಯನ್ನು ಬದಲಾಯಿಸದೆ ಹಾಗೇ ಉಳಿಸಿಕೊಳ್ಳಲು 6000 ಕೋಟಿ ರೂಪಾಯಿ ಹೊರೆಯನ್ನು ಹೊರಬೇಕು. ಅಧಿಕಾರಿಗಳು ಹೇಳಿರುವಂತೆ, ಯುಎಸ್ ಡಾಲರ್ ವಿರುದ್ಧ ಪಾಕಿಸ್ತಾನ ರೂಪಾಯಿ ಮೌಲ್ಯ ಕುಸಿತವು ಕೂಡ ಪರಿಣಾಮ ಬೀರಿದೆ. ಇದರಿಂದಾಗಿ ಪೆಟ್ರೋಲಿಯಂ ಬೆಲೆಗಳು ಲೀಟರ್‌ಗೆ 5.54 ರೂ. ಅಥವಾ ಶೇ 3.3ರಷ್ಟು ಈಚೆಗೆ ಏರಿಕೆ ಆಗಿದೆ. ಸರಾಸರಿ ಡಾಲರ್ ಮೌಲ್ಯ 182.15ರಿಂದ 188.15 ಆಗಿದೆ.
ಈ ಲೇಖನದಲ್ಲಿ ತಿಳಿಸಿರುವುದು ಪಾಕಿಸ್ತಾನದ ರೂಪಾಯಿ ಮೌಲ್ಯ. ಪಾಕಿಸ್ತಾನ ಒಂದು ರೂಪಾಯಿ ಅಂದರೆ ಭಾರತದ ಕರೆನ್ಸಿ ಮೌಲ್ಯ 0.42 (42 ಪೈಸೆ).
Published On - 9:11 pm, Thu, 14 April 22