ಪಾಕಿಸ್ತಾನದ ಪ್ರಧಾನಿ ಹುದ್ದೆಯಲ್ಲಿದ್ದು ನಾಲಿಗೆ ಹರಿಬಿಟ್ಟ ಇಮ್ರಾನ್ ಖಾನ್: ತುಟಿ ಜಾರಿದ ಈ 8 ಮಾತುಗಳಿಂದ ಸೃಷ್ಟಿಯಾಗಿತ್ತು ವಿವಾದ
ಪ್ರಧಾನಿ ಗಾದಿಯಲ್ಲಿ ಕುಳಿತು ತೆಗೆದುಕೊಂಡ ತೀರ್ಮಾನಗಳಿಗಿಂತಲೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿಯೇ ಹೆಚ್ಚು ಸುದ್ದಿಯಾದವರು ಇಮ್ರಾನ್ ಖಾನ್.
ಇಸ್ಲಾಮಾಬಾದ್: ವಿಶ್ವಾಸಮತ ಯಾಚಿಸಲು ಸಾಧ್ಯವಾಗದೆ ಪ್ರಧಾನಿ ಹುದ್ದೆ ಕಳೆದುಕೊಂಡ ಪಾಕಿಸ್ತಾನದ ಮೊದಲ ಪ್ರಧಾನಿ ಎನಿಸಿಕೊಂಡ ಇಮ್ರಾನ್ ಖಾನ್ ನಾಲ್ಕು ವರ್ಷದ ಅಧಿಕಾರ ಅವಧಿಯಲ್ಲಿ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. 2018ರಲ್ಲಿ ಪ್ರಧಾನಿಯಾಗಿದ್ದ ಇಮ್ರಾನ್, ಪ್ರಧಾನಿ ಗಾದಿಯಲ್ಲಿ ಕುಳಿತು ತೆಗೆದುಕೊಂಡ ತೀರ್ಮಾನಗಳಿಗಿಂತಲೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿಯೇ ಹೆಚ್ಚು ಸುದ್ದಿಯಾದರು. ದೇಶದ ಆರ್ಥಿಕ ವಿದ್ಯಮಾನಗಳನ್ನು ಸಮರ್ಪಕವಾಗಿ ನಿರ್ವಹಿಸುವುದಲ್ಲಿ ವಿಫಲರಾಗಿ, ಜನಜೀವನವನ್ನು ಸಂಕಷ್ಟಕ್ಕೆ ನೂಕಿದರು ಎಂದು ವಿರೋಧ ಪಕ್ಷಗಳು ಹಲವು ಬಾರಿ ಇಮ್ರಾನ್ ವಿರುದ್ಧ ಹರಿಹಾಯ್ದಿದ್ದವು. ರಷ್ಯಾ ರಾಜಧಾನಿ ಮಾಸ್ಕೋಗೆ ಇಮ್ರಾನ್ ಭೇಟಿ ನೀಡುವ ಸಮಯದಲ್ಲಿ ಉಕ್ರೇನ್ ಸಂಘರ್ಷ ಆರಂಭವಾಗಿತ್ತು. ಇದನ್ನು ಇಮ್ರಾನ್, ‘ಉತ್ಸಾಹ ತುಂಬಿದ ಕ್ಷಣಗಳು’ (exciting times) ಎಂದು ಕರೆದಿದ್ದರು. ಈ ಹೇಳಿಕೆಗೆ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿತ್ತು. ಪಾಕಿಸ್ತಾನದಲ್ಲಿ ಹೆಚ್ಚಾಗುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಇಮ್ರಾನ್ ನೀಡಿದ್ದ ಹೇಳಿಕೆಗೆ ಸಹ ವ್ಯಾಪಕವಾಗಿ ಟೀಕೆಗೊಳಗಾಗಿತ್ತು.
ಪ್ರಧಾನಿ ಹುದ್ದೆಯಲ್ಲಿದ್ದಾಗ ಇಮ್ರಾನ್ ಖಾನ್ ನೀಡಿದ್ದ 8 ವಿವಾದಾತ್ಮಕ ಹೇಳಿಕೆಗಳಿವು…
- ಮಹಿಳೆಯರ ಬಟ್ಟೆಯಿಂದ ಪುರುಷರ ಮನೋಭಾವ ಬದಲಾಗುತ್ತದೆ: ಕಳೆದ ವರ್ಷ ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ಪಾಕಿಸ್ತಾನದಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಾಗಲು ಮಹಿಳೆಯರು ಧರಿಸುವ ಬಟ್ಟೆ ಪ್ರಮುಖ ಕಾರಣ ಎಂದಿದ್ದರು. ‘ಮಹಿಳೆಯರು ಸರಿಯಾದ ರೀತಿಯಲ್ಲಿ ಬಟ್ಟೆ ಧರಿಸದಿದ್ದರೆ, ಅತಿ ಕಡಿಮೆ ಬಟ್ಟೆ ಧರಿಸಿದ್ದರೆ ಪುರುಷರ ಮನೋಭಾವದ ಮೇಲೆ ಅದು ಪರಿಣಾಮ ಬೀರುತ್ತದೆ. ರೊಬೊಟ್ ಅಲ್ಲದ ಎಲ್ಲ ಪುರುಷರ ವರ್ತನೆಯೂ ಬದಲಾಗುತ್ತದೆ. ಇದು ಕಾಮನ್ ಸೆನ್ಸ್’ ಎಂದಿದ್ದರು. ‘ಪರ್ದಾ ಪದ್ಧತಿಯಿಂದ ಸಮಾಜದಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ’ ಎಂದು ಇಮ್ರಾನ್ ಖಾನ್ ವಿಶ್ಲೇಷಿಸಿದ್ದರು.
- ಮೊಬೈಲ್ ಬಳಕೆಯಿಂದ ಲೈಂಗಿಕ ದೌರ್ಜನ್ಯ ಹೆಚ್ಚಳ: ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಬೇಕು ಎಂದು ಹೇಳುವ ಭರದಲ್ಲಿ ಇಮ್ರಾನ್ ಖಾನ್ ಕಳೆದ ಆಗಸ್ಟ್ ತಿಂಗಳಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪಾಕಿಸ್ತಾನದಲ್ಲಿ ಲೈಂಗಿಕ ಅಪರಾಧಗಳು ಹೆಚ್ಚಾಗಲು ಮೊಬೈಲ್ಗಳ ತಪ್ಪು ಬಳಕೆಯೇ ಮುಖ್ಯ ಕಾರಣ. ನಮ್ಮ ಮಕ್ಕಳಿಗೆ ಸರಿಯಾದ ಜೀವನ ಮೌಲ್ಯ ಕಲಿಸಬೇಕಿದೆ ಎಂದು ಹೇಳಿದ್ದರು.
- ಒಸಾಮಾ ಬಿನ್ ಲಾಡೆನ್ ಓರ್ವ ಹುತಾತ್ಮ: ಜಾಗತಿಕ ಭಯೋತ್ಪಾದನೆ ಸಂಘಟನೆ ಅಲ್ ಖೈದಾದ ಮುಖ್ಯಸ್ಥ, ಅಮೆರಿಕದ ವಾಣಿಜ್ಯ ಕೇಂದ್ರ ಕಟ್ಟಡದ ಮೇಲೆ ನಡೆದ 9/11ರ ದಾಳಿಯ ರೂವಾರಿ ಒಸಾಮಾ ಬಿನ್ ಲಾಡೆನ್ನನ್ನು ಇಮ್ರಾನ್ ಖಾನ್ ಹುತಾತ್ಮ ಎಂದು ಕರೆದಿದ್ದರು. ‘ಪಾಕಿಸ್ತಾನದ ನೆಲಕ್ಕೆ ಬಂದು ಅಮೆರಿಕನ್ನು ಒಸಮಾ ಬಿನ್ ಲಾಡೆನ್ನನ್ನು ಕೊಂದಿದ್ದನ್ನು ಎಂದಿಗೂ ಮರೆಯಲಾಗಿದೆ. ಇದರಿಂದ ಪಾಕಿಸ್ತಾನಕ್ಕೆ ಮುಜುಗರವಾಗಿತ್ತು. ಒಸಾಮಾ ಹುತಾತ್ಮರಾದರು’ ಎಂದು ಪಾಕ್ ಸಂಸತ್ತಿನಲ್ಲಿ ಇಮ್ರಾನ್ ಹೇಳಿದ್ದರು.
- ಆಲೂಗಡ್ಡೆ-ಟೊಮೆಟೊ ಬೆಲೆ: ಪಾಕಿಸ್ತಾನದ ಆರ್ಥಿಕತೆಯನ್ನು ಇಮ್ರಾನ್ ಖಾನ್ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ವಿರೋಧ ಪಕ್ಷಗಳು ದೂರಿದಾಗ, ‘ನಾನು ಅಲೂಗಡ್ಡೆ ಮತ್ತು ಟೊಮೆಟೊ ಬೆಲೆ ತಿಳಿಯಲು ರಾಜಕಾರಣಕ್ಕೆ ಬರಲಿಲ್ಲ. ನಾನು ದೇಶದ ಯುವಜನರ ಆಶೋತ್ತರಗಳಿಗೆ ಸ್ಪಂದಿಸಲು ರಾಜಕಾರಣಕ್ಕೆ ಬಂದೆ’ ಎಂದು ಇಮ್ರಾನ್ ಖಾನ್ ಹೇಳಿದ್ದರು. ಈ ಹೇಳಿಕೆಗೆ ಮಹಿಳೆಯರ ತೀವ್ರ ವಿರೋಧ ವ್ಯಕ್ತವಾಗಿತ್ತು.
- ಅಫ್ಘಾನಿಸ್ತಾನಕ್ಕೆ ಗುಲಾಮಗಿರಿಯಿಂದ ಮುಕ್ತಿ: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರವನ್ನು ಆಗಸ್ಟ್ 2021ರಲ್ಲಿ ತಾಲಿಬಾನ್ ವಶಪಡಿಸಿಕೊಂಡ ನಂತರ ಹೇಳಿಕೆ ನೀಡಿದ್ದ ಇಮ್ರಾನ್ ಖಾನ್, ‘ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಬಂಧಿಸಿದ್ದ ಸರಪಳಿಗಳನ್ನು ಕಿತ್ತು ಹಾಕಿದ್ದಾರೆ. ಒಮ್ಮೆ ನೀವು ಯಾರದಾದರೂ ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ಅದರ ಪಾರಮ್ಯ ಒಪ್ಪಿಕೊಂಡು ಅದಕ್ಕೆ ಗುಲಾಮರಾಗುತ್ತೀರಿ. ಮಾನಸಿಕ ಗುಲಾಮಗಿರಿಯಿಂದ ಬಿಡಿಸಿಕೊಳ್ಳುವುದು ಕಷ್ಟ. ಗುಲಾಮಗಿರಿಯ ಸಂಕೋಲೆಗಳನ್ನು ಅಫ್ಘಾನಿಸ್ತಾನ ಬಿಡಿಸಿಕೊಂಡಿದೆ’ ಎಂದು ಇಮ್ರಾನ್ ಖಾನ್ ಹೇಳಿದ್ದರು.
- ಜರ್ಮನಿ-ಜಪಾನ್ ನೆರೆ ದೇಶಗಳು: ಇರಾನ್ ರಾಜಧಾನಿ ತೆಹರಾನ್ನಲ್ಲಿ 2019ರಲ್ಲಿ ಮಾಡಿದ್ದ ಭಾಷಣದಲ್ಲಿ ಇಮ್ರಾನ್ ಖಾನ್ ಜರ್ಮನಿ ಮತ್ತು ಜಪಾನ್ ದೇಶಗಳು ಗಡಿ ಹಂಚಿಕೊಳ್ಳುತ್ತವೆ ಎಂದು ಹೇಳಿದ್ದರು. ಜರ್ಮನಿ ಮತ್ತು ಜಪಾನ್ ದೇಶಗಳು ಲಕ್ಷಾಂತರ ಜನರನ್ನು ಕೊಂದಿವೆ. 2ನೇ ಮಹಾಯುದ್ಧ ಮುಗಿಯುವವರೆಗೆ ಎರಡೂ ದೇಶಗಳು ಗಡಿಯಲ್ಲಿ ಜಂಟಿಯಾಗಿ ಕೈಗಾರಿಕೆಗಳನ್ನು ನಿರ್ವಹಿಸುತ್ತಿದ್ದವು. ಯುದ್ಧದ ನಂತರ ಇದು ನಿಂತಿತು ಎಂದು ಹೇಳಿದರು.
- ಇತಿಹಾಸದಲ್ಲಿ ಯೇಸುಕ್ರಿಸ್ತನ ಉಲ್ಲೇಖವಿಲ್ಲ: ಪ್ರವಾದಿ ಮೊಹಮ್ಮದರ ಜನ್ಮದಿನಾಚರಣೆ ಸಂದರ್ಭದಲ್ಲಿ ಮಾತನಾಡುವಾಗ, ‘ಯೇಸು ಕ್ರಿಸ್ತನ ಉಲ್ಲೇಖವೇ ಇತಿಹಾಸದ ಪಠ್ಯಗಳಲ್ಲಿ ಇಲ್ಲ’ ಎಂದು ವಿವಾದಾತ್ಮಕ ಹೇಳಿಕೆಯನ್ನು ಇಮ್ರಾನ್ ಖಾನ್ ನೀಡಿದ್ದರು. ಡಿಸೆಂಬರ್ 2018ರಲ್ಲಿ ಇಮ್ರಾನ್ ಹೇಳಿದ್ದ ಈ ಮಾತಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
- ಸಖತ್ ಖುಷಿಯಾಗ್ತಿದೆ: ಕಳೆದ ಫೆಬ್ರುವರಿಯಲ್ಲಿ ಉಕ್ರೇನ್ ವಿರುದ್ಧ ರಷ್ಯಾ ದಾಳಿ ಆರಂಭಿಸುವ ಕೆಲವೇ ಗಂಟೆಗಳ ಮೊದಲು ರಷ್ಯಾ ರಾಜಧಾನಿ ಮಾಸ್ಕೊಗೆ ಭೇಟಿ ನೀಡಿದ್ದ ಇಮ್ರಾನ್ ಖಾನ್, ‘ಒಂದೊಳ್ಳೆ ಸಮಯದಲ್ಲಿ ಈ ಭೇಟಿ ನಡೆಯುತ್ತಿದೆ. ನಾನಂತೂ ಉತ್ಸುಕನಾಗಿದ್ದೇನೆ’ ಎಂದು ಹೇಳಿದ್ದರು.
ಇದನ್ನೂ ಓದಿ: Key Players: ಕ್ಲೀನ್ ಬೋಲ್ಡ್; ಇಮ್ರಾನ್ ಖಾನ್ ಪದಚ್ಯುತಿಗೆ ಪ್ಲಾನ್ ಮಾಡಿದ ಪಾಕ್ ರಾಜಕಾರಣಿಗಳಿವರು
ಇದನ್ನೂ ಓದಿ: Imran Khan: ವಿಶ್ವಾಸಮತ ಸಾಬೀತುಪಡಿಸಲು ಇಮ್ರಾನ್ ಖಾನ್ ವಿಫಲ: ಪ್ರಧಾನಿ ಹುದ್ದೆಯಿಂದ ವಜಾ
Published On - 9:22 am, Sun, 10 April 22