ಎಂಎಸ್ ಸ್ವಾಮಿನಾಥನ್ ಆಯೋಗ (MS Swaminathan Commission) ರೈತರ ಬದುಕು ಹಸನಾಗಲು ಸಹಾಯವಾಗುವಂತಹ ಹಲವು ಸಲಹೆಗಳನ್ನು ತಮ್ಮ ವರದಿಗಳಲ್ಲಿ ನೀಡಿದ್ದಾರೆ. 2004ರಿಂದ 2006ರವರೆಗಿನ ಅವಧಿಯಲ್ಲಿ ಅವರ ನೇತೃತ್ವದ ಆಯೋಗ ನಾಲ್ಕೈದು ವರದಿಗಳನ್ನು ಬಿಡುಗಡೆ ಮಾಡಿತ್ತು. ಆಗ ಇದ್ದ ಯುಪಿಎ ಸರ್ಕಾರ ಈ ವರದಿಯಲ್ಲಿನ ಹಲವು ಅಂಶಗಳನ್ನು ಜಾರಿಗೆ ತಂದಿತಾದರೂ ಎಂಎಸ್ಪಿ (MSP- Minimum support price) ಮೊದಲಾದ ಕೆಲ ಅಂಶಗಳನ್ನು ಕೈಚೆಲ್ಲಿತು. ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸುತ್ತೇವೆ ಎಂದು ಚುನಾವಣೆ ವೇಳೆ ಭರವಸೆ ನೀಡಿದ್ದ ಎನ್ಡಿಎ ಕೂಡ ಆ ಕೆಲಸ ಮಾಡಲಿಲ್ಲ. ಆಯೋಗದ ಶಿಫಾರಸಿನಂತೆ ಎಂಎಸ್ಪಿ ಜಾರಿಗೆ ತಂದರೆ ಮಾರುಕಟ್ಟೆಗೆ ಧಕ್ಕೆಯಾಗುತ್ತದೆ. ಇದು ರೈತರಿಗೆಯೇ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬುದು ಯುಪಿಎ ಸರ್ಕಾರ ನೀಡಿದ ಒಂದು ಕಾರಣ.
ಕೃಷಿ ತಜ್ಞ ಅಶೋಕ್ ಗುಲಾಟಿ ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬರೆದ ಒಂದು ಲೇಖನದಲ್ಲಿ ಪಂಜಾಬ್ ರೈತರ ಸಮಸ್ಯೆ ಮತ್ತು ಎಂಎಸ್ಪಿ ವಿಚಾರದ ಬಗ್ಗೆ ಒಂದು ಕುತೂಹಲದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಪಂಜಾಬ್ ಕೃಷಿ ಬಹಳ ಸಂಪದ್ಭರಿತವಾಗಿದೆ. ಪೂರ್ಣ ನೀರಾವರಿ ವ್ಯವಸ್ಥೆ ಹೊಂದಿದೆ. ಬಹಳ ಸಬ್ಸಿಡಿ ದರದಲ್ಲಿ ರಸಗೊಬ್ಬರ ಪಡೆಯುತ್ತಾರೆ. ಗೋಧಿ ಮತ್ತು ಭತ್ತಕ್ಕೆ ಬಹಳ ಹೆಚ್ಚಿನ ಎಂಎಸ್ಪಿ ಇದೆ. ಆದರೂ ಕೂಡ ಈ ರೈತರ ನೈಜ ಆದಾಯ ಮಾತ್ರ ಗಣನೀಯವಾಗಿ ಹೆಚ್ಚಾಗುತ್ತಿಲ್ಲ. ಇದು ಪಂಜಾಬ್ ರೈತರನ್ನು ಹತಾಶೆಯ ಸ್ಥಿತಿಗೆ ತಳ್ಳಿದೆ.
ಇದನ್ನೂ ಓದಿ: ಯುಪಿಎ ಸರ್ಕಾರ ಇದ್ದಾಗ ಸ್ವಾಮಿನಾಥನ್ ಸಮಿತಿಯ ಎಂಎಸ್ಪಿ ಶಿಫಾರಸನ್ನು ತಿರಸ್ಕರಿಸಿದ್ದು ಯಾಕೆ? ಇಲ್ಲಿದೆ ಕಾರಣ
ಮಾರುಕಟ್ಟೆ ದರ ಎಂಎಸ್ಪಿಗಿಂತ ಮೇಲೇರಲು ಬಿಡದಂತಹ ವ್ಯವಸ್ಥೆ ಕೃಷಿ ಮಾರುಕಟ್ಟೆಯಲ್ಲಿ ಇದೆ. ಎಂಎಸ್ಪಿ ಎಂದರೆ ಮಿನಿಮಮ್ ಪ್ರೈಸ್ ಎನ್ನುವ ಬದಲು ಮ್ಯಾಕ್ಸಿಮಮ್ ಸಪೋರ್ಟ್ ಪ್ರೈಸ್ ಎನ್ನುವಂತಾಗಿದೆ. ಈ ಕಾರಣಕ್ಕೆ ರೈತರ ಆದಾಯ ಹೆಚ್ಚಳ ಬಹಳ ಮಂದಗತಿಯಲ್ಲಿ ಹೆಚ್ಚುತ್ತಿದೆ.
ಅಶೋಕ್ ಗುಲಾಟಿ ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿರುವ ಇನ್ನೊಂದು ಸಂಭಾವ್ಯ ಕಾರಣ ಎಂದರೆ ಪಂಜಾಬ್ ಕೃಷಿಕರ ಬೆಳೆ ಆದ್ಯತೆ. ಪಂಜಾಬ್ನಲ್ಲಿ ಬಹುತೇಕ ಎಲ್ಲಾ ರೈತರು ಹೆಚ್ಚಾಗಿ ಗೋಧಿ ಮತ್ತು ಭತ್ತವನ್ನೇ ಬೆಳೆಯುತ್ತಾರೆ. ಬೇರೆ ಲಾಭದಾಯಕ ಬೆಳೆಗಳ ಕಡೆಗೆ ಪಂಜಾಬ್ ರೈತರು ಗಮನ ಹರಿಸಿದರೆ ರಫ್ತು ಮೂಲಕ ಸಾಕಷ್ಟು ಲಾಭ ಮಾಡಬಹುದು.
ಇದನ್ನೂ ಓದಿ: ಕೇಂದ್ರದ 300 ಯೂನಿಟ್ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಎಷ್ಟು ವೆಚ್ಚ? ಇಲ್ಲಿದೆ ಡೀಟೇಲ್ಸ್
ಸ್ವಾಮಿನಾಥನ್ ಆಯೋಗದ ಸೂತ್ರದ ಪ್ರಕಾರ ಎಂಎಸ್ಪಿ ಜಾರಿ ಮಾಡಿದರೆ ಆಹಾರ ಬೆಲೆ ಸಾಕಷ್ಟು ಏರುತ್ತದೆ. ಬಹುತೇಕ ಎಲ್ಲಾ ಬೆಳೆಗಳ ಬೆಲೆ ಶೇ. 25ರಿಂದ 30ರಷ್ಟು ಹೆಚ್ಚಾಗಬಹುದು. ಈ ಮಟ್ಟದ ಆಹಾರ ಹಣದುಬ್ಬರ ಏರಿಕೆಗೆ ದೇಶ ಸಿದ್ಧ ಇದೆಯಾ? ಯಾವ ಸರ್ಕಾರ ಕೂಡ ಈ ಪರಿಸ್ಥಿತಿ ತಂದುಕೊಳ್ಳಲು ಬಯಸುವುದಿಲ್ಲ. ಅದಕ್ಕೆ ಆಯೋಗದ ವರದಿಯ ಶಿಫಾರಸುಗಳನ್ನು ಮನಮೋಹನ್ ಸಿಂಗ್ ತಿರಸ್ಕರಿಸಿದ್ದು ಎಂದು ಅಶೋಕ್ ಗುಲಾಟಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ