ಯುಎಇಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಎರಡೂ ದೇಶಗಳ ಬಾಂಧವ್ಯ ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ದುಬೈನಲ್ಲಿ ಭಾರತ್ ಮಾರ್ಟ್ (Bharat Mart) ಎಂಬ ಬೃಹತ್ ಮಳಿಗೆ ಮತ್ತು ಉಗ್ರಾಣ ಸೌಲಭ್ಯಕ್ಕೆ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಚಾಲನೆ ಕೊಟ್ಟಿದ್ದಾರೆ. ಭಾರತ ಮತ್ತು ಯುಎಇ ನಡುವಿನ ವ್ಯಾಪಾರ ವಹಿವಾಟು ಹೆಚ್ಚಿಸಲು ಮತ್ತು ಭಾರತದ ರಫ್ತುದಾರರಿಗೆ ಅನುಕೂಲ ಒದಗಿಸಲು ಭಾರತ್ ಮಾರ್ಟ್ ನೆರವಾಗಲಿದೆ. ವರದಿ ಪ್ರಕಾರ 2025ರೊಳಗೆ, ಅಂದರೆ ಇನ್ನೊಂದು ವರ್ಷದೊಳಗೆ ಭಾರತ್ ಮಾರ್ಟ್ ಕಾರ್ಯಾಚರಣೆಯಲ್ಲಿ ಇರಲಿದೆ. ದುಬೈನಲ್ಲಿ ಚೀನಾದ ಡ್ರ್ಯಾಗನ್ ಮಾರ್ಟ್ (dragon mart) ಇದೆ. ಅದೇ ಮಾದರಿಯಲ್ಲಿ ಭಾರತ್ ಮಾರ್ಟ್ ಅನ್ನು ನಿರ್ಮಿಸಬಹುದು ಎನ್ನಲಾಗಿದೆ. ಈ ಬಗ್ಗೆ ಯೋಜನೆ ಇನ್ನೂ ಅಂತಿಮಗೊಳ್ಳಬೇಕಿದ್ದು, 2025ರ ಅಂತ್ಯದೊಳಗೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ.
ದುಬೈನಲ್ಲಿ ಡಿಪಿ ವರ್ಲ್ಡ್ ನಿರ್ವಹಿಸುವ ಜಿಬೆಲ್ ಅಲಿ ಫ್ರೀ ಝೋನ್ನಲ್ಲಿ (JAFZA) ಒಂದು ಲಕ್ಷ ಸ್ಕ್ವಯರ್ ಮೀಟರ್ (ಹತ್ತು ಲಕ್ಷ ಚದರಡಿ) ಸ್ಥಳದಲ್ಲಿ ನಿರ್ಮಿತವಾಗಲಿರುವ ಭಾರತ್ ಮಾರ್ಟ್ ಒಂದು ರೀತಿಯಲ್ಲಿ ಮಹಾ ಮಳಿಗೆ. ಭಾರತದ ರಫ್ತುದಾರರ ಉತ್ಪನ್ನಗಳ ಪ್ರದರ್ಶನ ಇಲ್ಲಿ ಇರುತ್ತದೆ. ಈ ಮಹಾಮಳಿಗೆಯಲ್ಲಿ ಸಂಗ್ರಹಾಗಾರಗಳು, ಪ್ರದರ್ಶನ ಮಳಿಗೆಗಳು, ರೀಟೇಲ್ ವ್ಯಾಪಾರದ ಮಳಿಗೆಗಳು, ಹೋಟೆಲ್ಗಳು, ಭಾರೀ ಯಂತ್ರಗಳು, ಹೀಗೆ ನಾನಾ ವಸ್ತುಗಳು ಇರುತ್ತವೆ.
ಇದನ್ನೂ ಓದಿ: ಜಗತ್ತಿಗೆ ಸ್ವಚ್ಛ, ಪಾರದರ್ಶಕ, ತಂತ್ರಜ್ಞಾನದ ಅರಿವಿರುವ ಸರ್ಕಾರಗಳ ಅಗತ್ಯವಿದೆ: ಯುಎಇಯಲ್ಲಿ ಪ್ರಧಾನಿ ಮೋದಿ
ಯುಎಇಯಲ್ಲಿರುವ ಯಾವುದೇ ಸಂಸ್ಥೆಗಳು ಮತ್ತು ವ್ಯಕ್ತಿಗಳು ಈ ಮಹಾ ಮಳಿಗೆಗೆ ಭೇಟಿ ನೀಡಿದರೆ ಭಾರತೀಯ ಉತ್ಪನ್ನಗಳನ್ನು ಕಣ್ಣಾರೆ ಕಂಡು, ಅದನ್ನು ಖರೀದಿಸಬಹುದು. ಒಂದೇ ಸ್ಥಳದಲ್ಲಿ ಎಲ್ಲಾ ಭಾರತೀಯ ವಸ್ತುಗಳು ಸಿಗುವುದರಿಂದ ಆಮದುಗಾರರಿಗೆ ಅನುಕೂಲವಾಗುತ್ತದೆ. ಭಾರತೀಯ ಕಂಪನಿಗಳಿಗೂ ಭಾರತ್ ಮಾರ್ಟ್ ಒಂದು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಲು ಒಂದು ಒಳ್ಳೆಯ ವೇದಿಕೆ ಆಗುತ್ತದೆ.
ವರದಿಯೊಂದರ ಪ್ರಕಾರ ಭಾರತೀಯ ರಫ್ತುದಾರ ಸಂಸ್ಥೆಗಳು ಯುಎಇ ಮುಖಾಂತರ ಆಫ್ರಿಕಾ, ಯೂರೋಪ್, ಅಮೆರಿಕ ಖಂಡಗಳಿಗೆ ತಮ್ಮ ಬಿಸಿನೆಸ್ ವಿಸ್ತರಿಸಲು ಸುಲಭವಾಗುತ್ತದೆ. ಬೇರೆ ದೇಶಗಳಿಗೆ ಸರಕು ಸಾಗಣೆ ವೆಚ್ಚ ಮತ್ತು ಸಮಯ ಎರಡೂ ಮಿಗುತ್ತದೆ.
ಇದನ್ನೂ ಓದಿ: ಸ್ವಾಮಿನಾಥನ್ ಆಯೋಗದ ಎಂಎಸ್ಪಿ ಸೂತ್ರದ ಅನುಷ್ಠಾನ ಸಾಧ್ಯವಾ? ತಜ್ಞರ ಅನಿಸಿಕೆ ಇದು
ನರೇಂದ್ರ ಮೋದಿ ಅವರ ಯುಎಇ ಭೇಟಿ ವೇಳೆ ಎರಡೂ ದೇಶಗಳ ಮಧ್ಯೆ 10 ಒಡಂಬಡಿಕೆ (ಎಂಒಯು) ಒಪ್ಪಂದಗಳಾಗಿವೆ. 2022ರಲ್ಲಿ ಎರಡೂ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಿದ್ದವು. ಎರಡು ದೇಶಗಳ ನಡುವಿನ ವ್ಯಾಪಾರ ಮೊತ್ತವನ್ನು 100 ಬಿಲಿಯನ್ ಡಾಲರ್ಗೆ ಹೆಚ್ಚಿಸುವ ಗುರಿ ಇಡಲಾಗಿದೆ. ಹಾಗೆಯೇ, ವ್ಯಾಪಾರದಲ್ಲಿ ಡಾಲರ್ ಕರೆನ್ಸಿ ಬದಲು ರುಪಾಯಿ ಬಳಸಲೂ ಯುಎಇಯನ್ನು ಒಪ್ಪಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ