ನವದೆಹಲಿ, ಜುಲೈ 23: ಭಾರತದ ಅಧ್ಯಕ್ಷತೆಯ ಜಿ20 ಶೃಂಗಸಭೆ (G20 Summit) ಸೆಪ್ಟಂಬರ್ 9 ಮತ್ತು 10ರಂದು ರಾಷ್ಟ್ರ ರಾಜಧಾನಿ ನಗರಿಯಲ್ಲಿ ನಡೆಯಲಿದೆ. ಅದಕ್ಕಾಗಿ ದೆಹಲಿಯ ಪ್ರಗತಿ ಮೈದಾನ್ ಸಂಕೀರ್ಣವನ್ನು (Pragathi Maidan Complex) ಮರು ಅಭಿವೃದ್ಧಿಪಡಿಸಲಾಗಿದ್ದು ವಿಶ್ವದರ್ಜೆಯ ಸ್ಥಳವಾಗಿ ಅದು ಮಾರ್ಪಟ್ಟಿದೆ. ಐಟಿಪಿಒ ಕಾಂಪ್ಲೆಕ್ಸ್ ಆಗಿದ್ದ ಈ ಸ್ಥಳ ಈಗ ಐಇಸಿಸಿ ಸೆಂಟರ್ ಆಗಿ ರೂಪುಗೊಂಡಿದೆ. ಇಂಟರ್ನ್ಯಾಷನ್ ಎಕ್ಸಿಬಿಶನ್ ಕಮ್ ಕನ್ವೆನ್ಷನ್ ಸೆಂಟರ್ (IECC) ಅನ್ನು ಪ್ರಧಾನಿ ನರೇಂದ್ರ ಮೋದಿ ಜುಲೈ 26, ಬುಧವಾರದಂದು ಉದ್ಘಾಟನೆ ಮಾಡಲಿದ್ದಾರೆ ಎಂದು ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆ ದಿನದಂದು ಪೂಜೆಯ ಮೂಲಕ ಸಮಾರಂಭ ಆರಂಭವಾಗಲಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೂರಾರು ಮಂದಿಗೆ ಆ ಸಮಾರಂಭಕ್ಕೆ ಆಹ್ವಾನ ಕೊಡಲಾಗಿದೆ.
ಐಇಸಿಸಿ ಸುಮಾರು 123 ಎಕರೆಗಳ ಜಾಗದಲ್ಲಿದೆ. ಅಂತಾರಾಷ್ಟ್ರೀಯ ಸಭೆಗಳು, ಕಾನ್ಫರೆನ್ಸ್ಗಳು, ಪ್ರದರ್ಶನಗಳನ್ನು ನಡೆಸಲು ಅತಿದೊಡ್ಡ ಕಾಂಪ್ಲೆಕ್ಸ್ ಇದಾಗಿದೆ. ಅಷ್ಟೇ ಅಲ್ಲ ವಿಶ್ವದ 10 ಅಗ್ರಮಾನ್ಯ ಪ್ರದರ್ಶನ ಸ್ಥಳಗಳಲ್ಲಿ ಐಇಸಿಸಿ ಕೂಡ ಇದೆ. ಜರ್ಮನಿಯ ಐತಿಹಾಸಿಕ ಹಾನೋವರ್ ಎಕ್ಸಿಬಿಶನ್ ಸೆಂಟರ್, ಚೀನಾದ ಶಾಂಘೈನಲ್ಲಿರುವ ನ್ಯಾಷನಲ್ ಎಕ್ಸಿಬಿಶನ್ ಅಂಡ್ ಕನ್ವೆನ್ಷನ್ ಸೆಂಟರ್ ಇತ್ಯಾದಿಗಳ ಸಾಲಿಗೆ ಭಾರತದ ಇಂಟರ್ನ್ಯಾಷನ್ ಎಕ್ಸಿಬಿಶನ್ ಅಂಡ್ ಕನ್ವೆನ್ಷನ್ ಸೆಂಟರ್ ಬರುತ್ತದೆ.
ಇದನ್ನೂ ಓದಿ: India Forex: ಭಾರತದ ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಭರ್ಜರಿ ಏರಿಕೆ; ಟಾಪ್4 ರಾಷ್ಟ್ರದಲ್ಲಿ ಭಾರತ
ಐಇಸಿಸಿಯ ಲೆವೆಲ್ 3ಯಲ್ಲಿ 7,000 ಮಂದಿಗೆ ಆಸನದ ವ್ಯವಸ್ಥೆ ಇದೆ. 5,500 ಸೀಟಿಂಗ್ ಕೆಪಾಸಿಟಿ ಇರುವ ಆಸ್ಟ್ರೇಲಿಯಾದ ಐತಿಹಾಸಿಕ ಸಿಡ್ನಿ ಆಪರಾ ಹೌಸ್ಗಿಂತಲೂ ಒಂದು ಕೈ ಮೇಲಿದೆ ಐಇಸಿಸಿ. ಬಹಳ ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಸಭೆಗಳನ್ನು ನಡೆಸಲು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಇದು ಪ್ರಶಸ್ತವಾಗಿದೆ.
ಐಇಸಿಸಿಯ ಎಕ್ಸಿಬಿಶನ್ ಹಾಲ್ ಕೂಡ ಬಹಳ ವಿಶಾಲವಾಗಿದ್ದು ಏಳು ರೀತಿಯ ಪ್ರದರ್ಶನ ಸ್ಥಳಗಳನ್ನು ಒಳಗೊಳ್ಳಲಾಗಿದೆ. ಇನ್ನು, ಅದರಲ್ಲಿರುವ ಓಪನ್ ಥಿಯೇಟರ್ (ಆಂಫಿಥಿಯೇಟರ್) ಸುಮಾರು 3,000 ಮಂದಿ ಕೂರಲು ಸೀಟುಗಳಿವೆ. ಮೂರು ಪಿವಿಆರ್ ಥಿಯೇಟರುಗಳಿಗೆ ಸಮಾನವಾಗಿರುವ ಈ ಆಂಫಿಥಿಯೇಟರ್ ಸಾಂಸ್ಕೃತಿಕ ಮತ್ತು ಜನರಂಜನಾ ಕಾರ್ಯಕ್ರಮಗಳನ್ನು ನಡೆಸಲು ಪ್ರಶಸ್ತವಾಗಿದೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಐಇಸಿಸಿಯಲ್ಲಿ ವಾಹನ ನಿಲುಗಡೆಗೆ ವಿಶಾಲ ಅಂಗಣ ಇದೆ. ಇಲ್ಲಿ 5,500ಕ್ಕೂ ಹೆಚ್ಚು ವಾಹನಗಳ ಪಾರ್ಕಿಂಗ್ಗೆ ಸ್ಥಳಾವಕಾಶ ಇದೆ.
ಇದನ್ನೂ ಓದಿ: Inflation: ಹಣದುಬ್ಬರ ಎಫೆಕ್ಟ್; ಭಾರತದಲ್ಲಿ ಬ್ಯಾಂಕ್ ಬಡ್ಡಿ ದರಗಳು ಇನ್ನಷ್ಟು ಹೆಚ್ಚಾಗಲಿವೆಯೇ?
ಜಿ20 ಗುಂಪಿನ ಸಭೆ ಪ್ರತೀ ವರ್ಷವೂ ನಡೆಯುತ್ತದೆ. ಪ್ರತೀ ಬಾರಿಯೂ ಒಂದು ದೇಶಕ್ಕೆ ಅಧ್ಯಕ್ಷ ಸ್ಥಾನ ಕೊಡಲಾಗುತ್ತದೆ. ಭಾರತಕ್ಕೆ ಮೊದಲ ಬಾರಿಗೆ ಜಿ20 ಅಧ್ಯಕ್ಷ ಸ್ಥಾನ ಸಿಕ್ಕಿದೆ. 2022ರ ಡಿಸೆಂಬರ್ 1ರಿಂದ 2023 ನವೆಂಬರ್ 30ರವರೆಗೂ ಭಾರತ ಜಿ20 ಗುಂಪಿನ ಅಧ್ಯಕ್ಷನಾಗಿದೆ. ಸೆಪ್ಟಂಬರ್ 9 ಮತ್ತು 10ರಂದು ಬಹಳ ಮುಖ್ಯವಾದ ಜಿ20 ಶೃಂಗಸಭೆ ನಡೆಯುತ್ತಿದೆ. ಇದೇ ಐಇಸಿಸಿಯಲ್ಲಿ ಇದನ್ನು ಆಯೋಜಿಸಲಾಗಿದೆ.
ಜಿ20 ಎಂಬುದು ವಿಶ್ವದ ಅಗ್ರಗಣ್ಯ 20 ಆರ್ಥಿಕತೆಯ ದೇಶಗಳ ಗುಂಪಾಗಿದೆ. ವಿಶ್ವದ ಬಹುಪಾಲು ಆರ್ಥಿಕತೆಯು ಈ 20 ದೇಶಗಳಲ್ಲಿ ಕೇಂದ್ರಿತವಾಗಿದೆ. ಅಮೆರಿಕ, ರಷ್ಯಾ, ಚೀನಾ, ಜಪಾನ್, ಫ್ರಾನ್ಸ್, ಭಾರತ, ಇಟಲಿ, ಕೊರಿಯಾ, ಸೌದಿ ಅರೇಬಿಯಾ, ಜರ್ಮನಿ, ಬ್ರಿಟನ್, ಯೂರೋಪಿಯನ್ ಯೂನಿಯನ್ ಇತ್ಯಾದಿ 20 ಸದಸ್ಯ ದೇಶಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ