ನವದೆಹಲಿ, ಸೆಪ್ಟೆಂಬರ್ 22: ಜಾಗತಿಕ ಬ್ಯಾಂಕಿಂಗ್ ದೈತ್ಯ ಜೆಪಿ ಮಾರ್ಗನ್ ಚೇಸ್ ಅಂಡ್ ಕೋ ಸಂಸ್ಥೆ ತನ್ನ ಎಮರ್ಜಿಂಗ್ ಮಾರ್ಕೆಟ್ ಇಂಡೆಕ್ಸ್ಗೆ (EM Index) ಭಾರತದ ಗವರ್ನ್ಮೆಂಟ್ ಬಾಂಡ್ಗಳನ್ನು (Government Bond) ಒಳಗೊಳ್ಳಲು ನಿರ್ಧರಿಸಿದೆ. 2024ರ ಜೂನ್ 28ರಿಂದ ಭಾರತದ ಬಾಂಡ್ಗಳು ಗ್ಲೋಬಲ್ ಬಾಂಡ್ ಇಂಡೆಕ್ಸ್ನಲ್ಲಿ ದೊರಕಲಿವೆ. ಭಾರತ ಸರ್ಕಾರ ಕೈಗೊಂಡ ವಿವಿಧ ಹಣಕಾಸು ಸುಧಾರಣಾ ಕ್ರಮಗಳು ಈ ಬೆಳವಣಿಗೆಗೆ ಕಾರಣವೆನ್ನಲಾಗಿದೆ. ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಮಾರುಕಟ್ಟೆ ಸುಧಾರಣೆಗಳನ್ನು ಕೈಗೊಂಡಿತ್ತು. ಹಾಗೆಯೇ, 2020ರಲ್ಲಿ ಎಫ್ಎಆರ್ ಪ್ರೋಗ್ರಾಮ್ ಅನ್ನೂ ಸರ್ಕಾರಿ ಚಾಲನೆಗೊಳಿಸಿತ್ತು. ಇದೆಲ್ಲವೂ ಜೆಪಿ ಮಾರ್ಗನ್ ಚೇಸ್ ಅಂಡ್ ಕೋ ಸಂಸ್ಥೆ ತನ್ನ ಬೆಂಚ್ಮಾರ್ಕ್ ಇಂಡೆಕ್ಸ್ಗೆ ಭಾರತದ ಸಾಲಪತ್ರಗಳನ್ನು ಒಳಗೊಳ್ಳಲು ನಿರ್ಧರಿಸುವಂತೆ ಮಾಡಿವೆ.
ಭಾರತದ 23 ಸರ್ಕಾರಿ ಬಾಂಡ್ಗಳು ಈ ಇಂಡೆಕ್ಸ್ನಲ್ಲಿ ಲಿಸ್ಟ್ ಆಗಲು ಅರ್ಹತೆ ಹೊಂದಿವೆ. ಇವುಗಳ ಒಟ್ಟು ಮೌಲ್ಯ 330 ಬಿಲಿಯನ್ ಡಾಲರ್ನಷ್ಟಿದೆ. ಸುಮಾರು 27.4 ಲಕ್ಷಕೋಟಿ ರೂ ಮೌಲ್ಯದ ಈ ಸರ್ಕಾರಿ ಬಾಂಡ್ಗಳನ್ನು 2024ರ ಜೂನ್ 28ರಿಂದ ಇಂಡೆಕ್ಸ್ನಲ್ಲಿ ಒಳಗೊಳ್ಳುವ ಸಾಧ್ಯತೆ ಇದೆ. 10 ತಿಂಗಳ ಕಾಲ ಈ ಪ್ರಕ್ರಿಯೆ ಇರಲಿದೆ.
ಈ ಬೆಳವಣಿಗೆಯನ್ನು ಭಾರತದ ಮಾರುಕಟ್ಟೆಗಳು ಹರ್ಷದಿಂದ ಸ್ವಾಗತಿಸಿವೆ. ಸರ್ಕಾರಿ ಸಾಲಪತ್ರಗಳ ಮೇಲೆ ಹೂಡಿಕೆ ಹೆಚ್ಚಲಿದೆ. ಎಫ್ಪಿಐಗಳು ಹೆಚ್ಚಿನ ಪ್ರಮಾಣದಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ, ಸರ್ಕಾರಿ ಬಾಂಡ್ಗಳ ಮೇಲೆ ವಿದೇಶೀ ಹೂಡಿಕೆದಾರರ ಪ್ರಾಬಲ್ಯ ಹೊಂದಿರುವುದು ಆತಂಕದ ಸಂಗತಿಯೂ ಹೌದು ಎನ್ನುವ ಅನಿಸಿಕೆಗಳೂ ಹಲವರಲ್ಲಿವೆ.
ಇದನ್ನೂ ಓದಿ: ಕೆನಡಾದಲ್ಲಿದ್ದ ಮಹೀಂದ್ರ ಅಂಗಸಂಸ್ಥೆ ಬಂದ್; ದಿಢೀರ್ ಮುಚ್ಚಿದ ಪರಿಣಾಮ ಭಾರತೀಯ ಕಂಪನಿಗೆ ಸಾವಿರಾರು ಕೋಟಿ ನಷ್ಟ
ಜೆಪಿ ಮಾರ್ಗನ್ ಚೇಸ್ ಅಂಡ್ ಕೋ ಸಂಸ್ಥೆ ವಿವಿಧ ಸೂಚ್ಯಂಕಗಳನ್ನು ಹೊಂದಿದೆ. ಉದಯೋನ್ಮುಖ ಮಾರುಕಟ್ಟೆಗಳ ಸೂಚ್ಯಂಕವೆನಿಸಿದ ಇಎಂಬಿಐ ಇದೆ. ಇದರಲ್ಲಿ ಚೀನಾ, ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್, ಚೆಕ್ ರಿಪಬ್ಲಿಕ್, ಹಂಗೆರಿ, ಪೋಲ್ಯಾಂಡ್, ರೋಮೇನಿಯಾ, ಟರ್ಕಿ, ಬ್ರೆಜಿಲ್, ಚಿಲಿ, ಕೊಲಂಬಿಯಾ, ಮೆಕ್ಸಿಕೋ, ಪೆರು, ಈಜಿಪ್ಟ್ ಮತ್ತು ಸೌತ್ ಆಫ್ರಿಕಾ ದೇಶಗಳ ಬಾಂಡ್ಗಳನ್ನು ಒಳಗೊಳ್ಳಲಾಗಿದೆ.
ಜೆಪಿ ಮಾರ್ಗನ್ ಸಂಸ್ಥೆ ಮುಂದುವರಿದ ದೇಶಗಳ ಮಾರುಕಟ್ಟೆಗಳ ಸರ್ಕಾರಿ ಬಾಂಡ್ಗಳಿಗೆ ವಿವಿಧ ಸೂಚ್ಯಂಕಗಳನ್ನು ಹೊಂದಿದೆ. ಎಲ್ಲವನ್ನೂ ಸೇರಿಸಲಾದ ಗ್ಲೋಬಲ್ ಅಗ್ರಿಗೇಟ್ ಬಾಂಡ್ ಇಂಡೆಕ್ಸ್ ಇದೆ. ಇದರಲ್ಲಿ 60 ದೇಶಗಳಿಂದ ಸಾಲಪತ್ರಗಳು ಸಿಗುತ್ತವೆ. ಇವುಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ 20 ಟ್ರಿಲಿಯನ್ ಡಾಲರ್ (ಸುಮಾರು 1,600 ಲಕ್ಷ ಕೋಟಿ ರೂ) ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Fri, 22 September 23