Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆನಡಾದಲ್ಲಿದ್ದ ಮಹೀಂದ್ರ ಅಂಗಸಂಸ್ಥೆ ಬಂದ್; ದಿಢೀರ್ ಮುಚ್ಚಿದ ಪರಿಣಾಮ ಭಾರತೀಯ ಕಂಪನಿಗೆ ಸಾವಿರಾರು ಕೋಟಿ ನಷ್ಟ

M&M's Canada Associate Resson closes operation: ಮಹೀಂದ್ರ ಅಂಡ್ ಮಹೀಂದ್ರದ ಅಂಗಸಂಸ್ಥೆಯಾದ ರೆಸ್ಸೋನ್ ಏರೋಸ್ಪೇಸ್ ಕಾರ್ಪೊರೇಶನ್ ಮುಚ್ಚಿದೆ. ಕೆನಡಾದ ನ್ಯೂ ಬ್ರುನ್ಸ್​ವಿಕ್ ರಾಜ್ಯದ ಫ್ರೆಡೆರಿಕ್​ಟನ್ ನಗರದಲ್ಲಿ ಮುಖ್ಯಕಚೇರಿ ಹೊಂದಿದ್ದ ರೆಸ್ಸೋನ್ ಏರೋಸ್ಪೆಸ್​ನ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿದೆ. ಸೆಪ್ಟೆಂಬರ್ 20ರಂದು ಕೆನಡಾ ಕಾರ್ಪೊರೇಶನ್ಸ್ ಪ್ರಾಧಿಕಾರವು ರೆಸ್ಸೋನ್ ಏರೋಸ್ಪೇಸ್ ಕಾರ್ಪೊರೇಶನ್ ಸಂಸ್ಥೆಗೆ ಸರ್ಟಿಫಿಕೇಟ್ ಆಫ್ ಡಿಸೊಲ್ಯೂಶನ್ ಅನ್ನು ನೀಡಿದೆ. ಇದರೊಂದಿಗೆ ಅಂದೇ ಸಂಸ್ಥೆ ಅಧಿಕೃತವಾಗಿ ಬಂದ್ ಆಗಿದೆ. ಇದಕ್ಕೂ ಮುನ್ನ ರೆಸ್ಸೋನ್ ಸಂಸ್ಥೆ ಸ್ವಯಂಪ್ರೇರಿತವಾಗಿ ಮುಚ್ಚಸಲು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿತ್ತು.

ಕೆನಡಾದಲ್ಲಿದ್ದ ಮಹೀಂದ್ರ ಅಂಗಸಂಸ್ಥೆ ಬಂದ್; ದಿಢೀರ್ ಮುಚ್ಚಿದ ಪರಿಣಾಮ ಭಾರತೀಯ ಕಂಪನಿಗೆ ಸಾವಿರಾರು ಕೋಟಿ ನಷ್ಟ
ಆನಂದ್ ಮಹೀಂದ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 22, 2023 | 3:05 PM

ನವದೆಹಲಿ, ಸೆಪ್ಟೆಂಬರ್ 22: ಭಾರತ ಮತ್ತು ಕೆನಡಾ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಮುಂದುವರಿಯುತ್ತಿರುವ ಹೊತ್ತಿನಲ್ಲೇ ಆನಂದ್ ಮಹೀಂದ್ರ (Anand Mahindra) ಪಾಲುದಾರಿಕೆ ಇದ್ದ ಸಂಸ್ಥೆಯೊಂದು ಕೆನಡಾದಲ್ಲಿ ಬಾಗಿಲು ಬಂದ್ ಮಾಡಿಕೊಂಡಿದೆ. ಮಹೀಂದ್ರ ಅಂಡ್ ಮಹೀಂದ್ರದ ಅಂಗಸಂಸ್ಥೆಯಾದ ರೆಸ್ಸೋನ್ ಏರೋಸ್ಪೇಸ್ ಕಾರ್ಪೊರೇಶನ್ (Resson Aerospace Corporation) ಮುಚ್ಚಿದೆ. ಕೆನಡಾದ ನ್ಯೂ ಬ್ರುನ್ಸ್​ವಿಕ್ ರಾಜ್ಯದ ಫ್ರೆಡೆರಿಕ್​ಟನ್ (Fredericton, New Brunswick) ನಗರದಲ್ಲಿ ಮುಖ್ಯಕಚೇರಿ ಹೊಂದಿದ್ದ ರೆಸ್ಸೋನ್ ಏರೋಸ್ಪೆಸ್​ನ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿದೆ.

ಸೆಪ್ಟೆಂಬರ್ 20ರಂದು ಕೆನಡಾ ಕಾರ್ಪೊರೇಶನ್ಸ್ ಪ್ರಾಧಿಕಾರವು ರೆಸ್ಸೋನ್ ಏರೋಸ್ಪೇಸ್ ಕಾರ್ಪೊರೇಶನ್ ಸಂಸ್ಥೆಗೆ ಸರ್ಟಿಫಿಕೇಟ್ ಆಫ್ ಡಿಸೊಲ್ಯೂಶನ್ ಅನ್ನು ನೀಡಿದೆ. ಇದರೊಂದಿಗೆ ಅಂದೇ ಸಂಸ್ಥೆ ಅಧಿಕೃತವಾಗಿ ಬಂದ್ ಆಗಿದೆ. ಇದಕ್ಕೂ ಮುನ್ನ ರೆಸ್ಸೋನ್ ಸಂಸ್ಥೆ ಸ್ವಯಂಪ್ರೇರಿತವಾಗಿ ಮುಚ್ಚಸಲು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿತ್ತು.

ರೆಸ್ಸೋನ್ ಎರೋಸ್ಪೇಸ್ ಕಾರ್ಪೊರೇಶನ್​ನಲ್ಲಿ ಮಹೀಂದ್ರ ಅಂಡ್ ಮಹೀಂದ್ರ ಷೇರುಪಾಲು ಶೇ. 11.18ರಷ್ಟು ಇತ್ತು. ಈಗ ರೆಸ್ಸೋನ್ ವಿಸರ್ಜನೆಯೊಂದಿಗೆ ಮಹೀಂದ್ರ ಕಂಪನಿಗೆ 4.7 ಮಿಲಿಯನ್ ಕೆನಡಿಯನ್ ಡಾಲರ್​ನಷ್ಟು ಮಾತ್ರ ಹಣ ಸಿಗಬಹುದು. ಅಂದರೆ ಸುಮಾರು 28.7 ಕೋಟಿ ರೂನಷ್ಟು ಹಣ ಬರಬಹುದು.

ಇದನ್ನೂ ಓದಿ: ವಾಷಿಂಗ್ ಪೌಡರ್​ನಿಂದ ಶುರುವಾಗಿ ಎಪಿಐಗೆ ಬಂದಿಳಿಯುವ ನಿರ್ಮಾ; 5,651 ಕೋಟಿ ರೂಗೆ ಗ್ಲೆನ್​ಮಾರ್ಕ್ ಲೈಫ್ ಸೈನ್ಸಸ್ ಷೇರು ಖರೀದಿಗೆ ಮುಂದು

ಆದರೆ, ಈ ಬೆಳವಣಿಗೆಯಲ್ಲಿ ಮಹೀಂದ್ರ ಅಂಡ್ ಮಹೀಂದ್ರದ ಷೇರುಸಂಪತ್ತು ಸಾಕಷ್ಟು ಕರಗಿದ್ದು ಹೌದು. ಸೆಪ್ಟೆಂಬರ್ 20ರಂದು ಈ ಬೆಳವಣಿಗೆ ಆದಾಗ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಎಂ ಅಂಡ್ ಎಂನ ಷೇರುಬೆಲೆ 1658 ರೂಗೂ ಹೆಚ್ಚು ಇತ್ತು. ಒಂದೇ ದಿನದಲ್ಲಿ ಬೆಲೆ 1,581 ರುಪಾಯಿಗೆ ಕುಸಿದುಹೋಯಿತು. ಇದರಿಂದ ಮಹೀಂದ್ರ ಗ್ರೂಪ್​ನ ಷೇರು ಸಂಪತ್ತು ಸಾವಿರಾರು ಕೋಟಿ ರೂನಷ್ಟು ಕರಗಿಹೋಯಿತು. ಇದೀಗ ಮಹೀಂದ್ರದ ಷೇರುಬೆಲೆ 1,607 ರೂಗೆ ಏರಿದೆ. ಒಂದು ದಿನದ ಹಿನ್ನಡೆ ಬಳಿಕ ಷೇರು ಚೇತರಿಕೆ ಪಡೆದಿದೆ.

ಖಲಿಸ್ತಾನ್ ವಿವಾದಕ್ಕೂ ರೆಸ್ಸೋನ್ ಬಂದ್ ಆಗುವುದಕ್ಕೂ ಸಂಬಂಧ ಇಲ್ಲ

ಖಲಿಸ್ತಾನ್ ವಿಚಾರವಾಗಿ ಭಾರತದ ವಿರುದ್ಧ ಕೆನಡಾ ಆರೋಪ ಮಾಡಿದ್ದಕ್ಕೆ ಪ್ರತಿಯಾಗಿ ಮಹೀಂದ್ರ ಅಂಡ್ ಮಹೀಂದ್ರದ ಕೆನಡಾ ಅಂಗಸಂಸ್ಥೆಯನ್ನು ಮುಚ್ಚಲಾಗಿದೆ ಎಂದು ಬಿಂಬಿಸುವ ಸುದ್ದಿಗಳು ಕೆಲ ಮಾಧ್ಯಮಗಳಲ್ಲಿ ಬಂದಿದ್ದವು. ಆದರೆ, ಈ ವಿವಾದಕ್ಕೂ ಇದಕ್ಕೂ ಸಂಬಂಧ ಇಲ್ಲ. ಮಹೀಂದ್ರ ಅಂಡ್ ಮಹೀಂದ್ರ ತನ್ನ ಅಂಗಸಂಸ್ಥೆಯನ್ನು ವಿಸರ್ಜಿಸುವ ನಿರ್ಧಾರವನ್ನು ಈ ಹಿಂದೆಯೇ ತೆಗೆದುಕೊಳ್ಳಲಾಗಿತ್ತು.

ಇದನ್ನೂ ಓದಿ: ವಿಪ್ರೋ ಹೊಸ ಸಿಎಫ್ಒ ಅಪರ್ಣಾ ಅಯ್ಯರ್ 2002ರ ಸಿಎ ಬ್ಯಾಚ್​ನ ಗೋಲ್ಡ್ ಮೆಡಲಿಸ್ಟ್; ಈಕೆಯ ವೃತ್ತಿ ಪ್ರಯಾಣ ಹೇಗಿದೆ? ಇಲ್ಲಿದೆ ವಿವರ

ಭಾರತ ಮತ್ತು ಕೆನಡಾ ಬಿಕ್ಕಟ್ಟು ಸ್ಥಿತಿ ಈಗ ಹೇಗಿದೆ?

ಕೆನಡಾದಲ್ಲಿ ಖಲಿಸ್ತಾನೀ ಉಗ್ರರ ವಿಚಾರದಲ್ಲಿ ಭಾರವು ಜಿ20 ಶೃಂಗಸಭೆಯ ವೇಳೆ ಕೆನಡಾವನ್ನು ತರಾಟೆಗೆ ತೆಗೆದುಕೊಂಡಿತ್ತು. ಕೆಲ ದಿನಗಳ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಭಾರತದ ಮೇಲೆ ಗಂಭೀರ ಆರೋಪ ಮಾಡಿದರು. ಖಲಿಸ್ತಾನೀ ಹೋರಾಟಗಾರ ನಿಜ್ಜರ್​ನ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟ್​​ಗಳ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಆರೋಪಿಸಿದ್ದರು. ಅದರ ಬೆನ್ನಲ್ಲೇ ಭಾರತೀಯ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಉಚ್ಚಾಟಿಸಿತು. ಭಾರತವೂ ಪ್ರತಿಕ್ರಮ ಕೈಗೊಂಡಿತು.

ಈ ವಿಚಾರವಾಗಿ ಅಮೆರಿಕ ಸೇರಿದಂತೆ ತನ್ನ ಮಿತ್ರ ರಾಷ್ಟ್ರಗಳ ಬೆಂಬಲ ಪಡೆಯಲು ಕೆನಡಾ ಪ್ರಯತ್ನಿಸುತ್ತಿದೆ. ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎನ್ನುವ ತನ್ನ ಆರೋಪವನ್ನು ಟ್ರುಡೋ ಪುನರುಚ್ಚರಿಸುತ್ತಲೇ ಇದ್ದಾರೆ. ಈ ಬಗ್ಗೆ ತನಿಖೆಗೆ ಸಹಕಾರ ಕೊಡಬೇಕು ಎಂದು ಅಮೆರಿಕ ಮತ್ತಿತರ ದೇಶಗಳು ಭಾರತವನ್ನು ಒತ್ತಾಯಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ