ವಿಪ್ರೋ ಹೊಸ ಸಿಎಫ್ಒ ಅಪರ್ಣಾ ಅಯ್ಯರ್ 2002ರ ಸಿಎ ಬ್ಯಾಚ್ನ ಗೋಲ್ಡ್ ಮೆಡಲಿಸ್ಟ್; ಈಕೆಯ ವೃತ್ತಿ ಪ್ರಯಾಣ ಹೇಗಿದೆ? ಇಲ್ಲಿದೆ ವಿವರ
Aparna Iyer Becomes Wipro CFO On Business Women's Day: ಕಳೆದ ಎರಡು ದಶಕಗಳಿಂದ ವಿಪ್ರೋದಲ್ಲಿ ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಾ ಬಂದಿರುವ ಅಪರ್ಣಾ ಅಯ್ಯರ್ ಇದೀಗ ಚೀಫ್ ಫೈನಾನ್ಷಿಯಲ್ ಆಫೀಸರ್ ಆಗಿ ಬಡ್ತಿ ಪಡೆದಿದ್ದಾರೆ. ಮಹಿಳಾ ಉದ್ಯಮಿಗಳ ದಿನವಾದ ಸೆಪ್ಟೆಂಬರ್ 22ರಂದೇ ಅವರು ಸಿಎಫ್ಒ ಆಗಿ ಅಧಿಕಾರಕ್ಕೆ ಏರಿರುವುದು ವಿಶೇಷ. 2002ರ ಸಿಎ ಬ್ಯಾಚ್ನಲ್ಲಿ ಅಪರ್ಣಾ ಅವರು ಚಿನ್ನದ ಪದಕ ವಿಜೇತೆಯಾಗಿದ್ದಾರೆ. ಆ ವರ್ಷವೇ ವಿಪ್ರೋಗೆ ಸೀನಿಯರ್ ಇಂಟರ್ನಲ್ ಆಡಿಟರ್ ಆಗಿ ನೇಮಕವಾದ ಅಪರ್ಣಾ 20 ವರ್ಷದಲ್ಲಿ ಸಿಎಫ್ಒ ಹಂತಕ್ಕೆ ಬೆಳೆದು ಸೈ ಎನಿಸಿದ್ದಾರೆ.
ಮಹಿಳಾ ಉದ್ಯಮಿಗಳ ದಿನದಂದೇ ಭಾರತದ ಐಟಿ ಸರ್ವಿಸ್ ಕಂಪನಿ ವಿಪ್ರೋಗೆ ಅಪರ್ಣಾ ಅಯ್ಯರ್ (Aparna Iyer) ನೂತನ ಸಿಇಒ ಆಗಿದ್ದಾರೆ. 21 ವರ್ಷದಿಂದ ವಿಪ್ರೋದಲ್ಲಿದ್ದ ಜತಿನ್ ದಲಾಲ್ ಅವರು ಸಿಎಫ್ಒ ಸ್ಥಾನಕ್ಕೆ ನಿನ್ನೆ (ಸೆಪ್ಟೆಂಬರ್ 21) ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನವನ್ನು ಅಪರ್ಣಾ ತುಂಬಲಿದ್ದು, ಇಂದಿನಿಂದಲೇ ಸಿಎಫ್ಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಪರ್ಣಾ ಅಯ್ಯರ್ ಅವರೂ ಕೂಡ ವಿಪ್ರೋದಲ್ಲಿ 20ಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡಿ ಪಳಗಿದವರು. ಭಾರತದ ಉನ್ನತ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಮಹಿಳೆಯರ ಸಾಲಿಗೆ ಅಪರ್ಣಾ ಸಿ ಅಯ್ಯರ್ ಸೇರಿದ್ದಾರೆ. ಕಳೆದ ಕೆಲ ವರ್ಷಗಳಿಂದ ವಿಪ್ರೋದ ಹಣಕಾಸು ತಂತ್ರಗಾರಿಕೆ, ಹೂಡಿಕೆ ಯೋಜನೆಗಳು ಮತ್ತು ಪರಿವರ್ತನಾ ಕ್ರಮಗಳಲ್ಲಿ ಅಪರ್ಣಾ ಮಹತ್ವದ ಪಾತ್ರ ವಹಿಸಿದ್ದಾರೆನ್ನಲಾಗಿದೆ. ಸಿಎಫ್ಒ ಆಗುವ ಮುನ್ನ ಅವರು ವಿಪ್ರೋದ ಫೈನಾನ್ಸ್ ವಿಭಾಗದ ವೈಸ್ ಪ್ರೆಸಿಡೆಂಟ್ ಮತ್ತು ಟ್ರೆಷರರ್ ಆಗಿದ್ದರು.
ಇನ್ನು, ಸಿಎಫ್ಒ ಸ್ಥಾನದಿಂದ ಹೊರಬಂದಿರುವ ಜತಿನ್ ದಲಾಲ್ ಅವರು 2002ರಲ್ಲಿ ವಿಪ್ರೋ ಸೇರಿದವರು. 2015ರಲ್ಲಿ ಸಿಎಫ್ಒ ಮತ್ತು ಅಧ್ಯಕ್ಷರಾಗಿದ್ದರು. ಇದೀಗ ಅವರು ಬೇರೆ ಬೇರೆ ಅವಕಾಶಗಳನ್ನು ಹುಡುಕುತ್ತಿರುವ ಹಿನ್ನೆಲೆಯಲ್ಲಿ ವಿಪ್ರೋದಿಂದ ಹೊರಹೋಗುತ್ತಿದ್ದಾರೆ. ನವೆಂಬರ್ 30ರವರೆಗೂ ಅವರು ವಿಪ್ರೋದಲ್ಲೇ ಇರಲಿದ್ದು, ನೂತನ ಸಿಎಫ್ಒಗೆ ಮಾರ್ಗದರ್ಶನ ಮಾಡುವ ಸಾಧ್ಯತೆ ಇದೆ. ಅಪರ್ಣಾ ಅಯ್ಯರ್ ಅವರು ಸೆಪ್ಟೆಂಬರ್ 22ರಂದು ಸಿಎಫ್ಒ ಆಗಿ ಅಧಿಕಾರ ವಹಿಸಿದ್ದು, ಸಿಇಒ ಥಿಯರಿ ಡೆಲಾಪೋರ್ಟೆ ಅವರಿಗೆ ರಿಪೋರ್ಟ್ ಮಾಡುತ್ತಾರೆ.
ಇದನ್ನೂ ಓದಿ: Business women’s Day 2023: ಸೆ. 22 ಮಹಿಳಾ ಉದ್ಯಮಿಗಳ ದಿನ; ಯಾವಾಗಿಂದ ಆರಂಭ; ಏನಿದರ ಮಹತ್ವ ಇತ್ಯಾದಿ ವಿವರ ತಿಳಿಯಿರಿ
ಗೋಲ್ಡ್ ಮೆಡಲಿಸ್ಟ್ ಅಪರ್ಣಾ ಅಯ್ಯರ್ ಬಗ್ಗೆ ಒಂದಷ್ಟು ವಿಚಾರಗಳು
- ಅಪರ್ಣಾ ಅಯ್ಯರ್ ಅವರು ಮೂಲತಃ ಚಾರ್ಟರ್ಡ್ ಅಕೌಂಟೆಂಟ್. 2002ರ ಸಿಎ ಬ್ಯಾಚ್ನಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿದ್ದಾರೆ.
- ಮುಂಬೈನಲ್ಲಿ ಬಿಕಾಂ ಪದವಿ ಪಡೆದ ಬಳಿಕ ಅವರು ICAIನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಕೋರ್ಸ್ ಪೂರ್ಣಗೊಳಿಸಿದ್ದಾರೆ.
- 2003ರಲ್ಲಿ ಅವರು ಸೀನಿಯರ್ ಇಂಟರ್ನಲ್ ಆಡಿಟರ್ ಆಗಿ ವಿಪ್ರೋಗೆ ಸೇರಿದ ಅಪರ್ಣಾ ಅಯ್ಯರ್, ಸುದೀರ್ಘ 20 ವರ್ಷದ ವೃತ್ತಿಯಲ್ಲಿ ಪ್ರಮುಖ ಮುಂಚೂಣಿ ಹುದ್ದೆಗಳನ್ನು ನಿರ್ವಹಿಸುತ್ತಾ ಮೇಲೇರಿದ್ದಾರೆ.
- ವಿಪ್ರೋದಲ್ಲಿ ಎರಡು ದಶಕಗಳ ಅವಧಿಯಲ್ಲಿ ಇಂಟರ್ನಲ್ ಅಡಿಟ್, ಬಿಸಿನೆಸ್ ಫೈನಾನ್ಸ್, ಫೈನಾನ್ಸ್ ಪ್ಲಾನಿಂಗ್ ಮತ್ತು ಅನಾಲಿಸ್, ಕಾರ್ಪೊರೇಟ್ ಟ್ರೆಷರಿ, ಇನ್ವೆಸ್ಟರ್ ರಿಲೇಶನ್ಸ್ ಇತ್ಯಾದಿ ಹಲವು ರೀತಿಯ ಜವಾಬ್ದಾರಿಗಳನ್ನು ಅಪರ್ಣಾ ನಿಭಾಯಿಸಿದ್ದಾರೆ.
- ಫೈನಾನ್ಷಿಯಲ್ ರಿಸ್ಕ್ ಮ್ಯಾನೇಜ್ಮೆಂಟ್, ಕ್ಯಾಪಿಟಲ್ ಅಲೋಕೇಶನ್, ಫಂಡ್ ರೈಸಿಂಗ್ ಇತ್ಯಾದಿ ಸಂಗತಿಯಲ್ಲಿ ಅಪರ್ಣಾ ಒಬ್ಬ ನುರಿತ ಸಂಪನ್ಮೂಲ ವ್ಯಕ್ತಿ ಎನಿಸಿದ್ದಾರೆ.
- ಅಪರ್ಣಾ ಅಯ್ಯರ್ ಅವರು ವಿಪ್ರೋದ ಹಿರಿಯ ಉಪಾಧ್ಯಕ್ಷೆ ಆಗಿದ್ದರು. ಅಲ್ಲದೇ ಸಂಸ್ಥೆಯ ಒಂದು ವಿಭಾಗವಾದ ಫುಲ್ಸ್ಟ್ರೈಡ್ ಕ್ಲೌಡ್ ಗ್ಲೋಬಲ್ ಬಿಸಿನೆಸ್ ಲೈನ್ನಲ್ಲಿ ಸಿಎಫ್ಒ ಕೂಡ ಆಗಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ