ನವದೆಹಲಿ, ಸೆಪ್ಟೆಂಬರ್ 22: ಸೋಪು ಮತ್ತು ಡಿಟರ್ಜೆಂಟ್ ಸೇರಿದಂತೆ ಬಹುಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಿರ್ಮಾ ಸಂಸ್ಥೆ (Nirma Group) ಇದೀಗ ತನ್ನ ವ್ಯಾಪ್ತಿ ವಿಸ್ತರಣೆಯಲ್ಲಿ ದೊಡ್ಡ ಹೆಜ್ಜೆ ಇರಿಸಿದೆ. ಇದೇ ಮೊದಲ ಬಾರಿಗೆ ಫಾರ್ಮಾ ಕ್ಷೇತ್ರದಲ್ಲಿ ಎಪಿಐ ತಯಾರಿಕೆಗೆ ಪ್ರವೇಶ ಮಾಡಿದೆ. ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್ ಸಂಸ್ಥೆಯ (glenmark life sciences) ಶೇ. 75ರಷ್ಟು ಷೇರುಪಾಲನ್ನು ನಿರ್ಮಾ ಖರೀದಿ ಮಾಡಲಿದೆ. ವರದಿಗಳ ಪ್ರಕಾರ ಪ್ರತೀ ಷೇರಿಗೆ 615 ರೂಗಳಂತೆ ಒಟ್ಟು 5,651 ಕೋಟಿ ರೂಗೆ ಪಾಲು ಪಡೆಯಲು ಹೊರಟಿದೆ. ಗ್ಲೆನ್ಮಾರ್ಕ್ ಲೈಫ್ ಸೈನ್ಸ್ನ ಎಲ್ಲಾ ಸಾರ್ವಜನಿಕ ಷೇರುದಾರರಿಗೆ ನಿರ್ಮಾ ಓಪನ್ ಆಫರ್ ಕೊಡಲಿದೆ.
ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್ ಸಂಸ್ಥೆ 2021ರಿಂದ ಷೇರುಪೇಟೆಯಲ್ಲಿ ಲಿಸ್ಟ್ ಆಗಿದೆ. ಇದರ ಮಾಲೀಕಸಂಸ್ಥೆ ಗ್ಲೆನ್ಮಾರ್ಕ್ ಫಾರ್ಮಾ ಶೇ. 7.84ರಷ್ಟು ಪಾಲನ್ನು ಹೊಂದಿರಲಿದೆ. ಗ್ಲೆನ್ಮಾರ್ಕ್ ಫಾರ್ಮಗೆ ಸಾಲದ ಹೊರೆ ಅಧಿಕವಾಗಿದ್ದು, ಅದನ್ನು ತಗ್ಗಿಸಲು ತನ್ನ ಲೈಫ್ ಸೈನ್ಸಸ್ ಸಂಸ್ಥೆಯ ಷೇರುಪಾಲನ್ನು ಬಿಕರಿ ಮಾಡುತ್ತಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಪ್ರೋ ಹೊಸ ಸಿಎಫ್ಒ ಅಪರ್ಣಾ ಅಯ್ಯರ್ 2002ರ ಸಿಎ ಬ್ಯಾಚ್ನ ಗೋಲ್ಡ್ ಮೆಡಲಿಸ್ಟ್; ಈಕೆಯ ವೃತ್ತಿ ಪ್ರಯಾಣ ಹೇಗಿದೆ? ಇಲ್ಲಿದೆ ವಿವರ
ಗುಜರಾತ್ನ ಅಹಮದಾಬಾದ್ ಮೂಲದ ನಿರ್ಮಾ ಗ್ರೂಪ್ ಸಂಸ್ಥೆ ಫಾರ್ಮಾ ಕ್ಷೇತ್ರದಲ್ಲಿ ಇದೆಯಾದರೂ ಎಪಿಐ ವಿಚಾರದಲ್ಲಿ ಇದು ಮೊದಲ ಹೆಜ್ಜೆ. ಸೋಪು, ಡಿಟರ್ಜೆಂಟ್ಗಳ ಮೂಲಕ ದೇಶಾದ್ಯಂತ ಚಿರಪರಿಚಿತ ಬ್ರ್ಯಾಂಡ್ ಆಗಿರುವ ನಿರ್ಮಾ ಗ್ರೂಪ್, ಸಿಮೆಂಟ್, ಔದ್ಯಮಿಕ ರಾಸಾಯನಿಕ, ರಿಯಲ್ ಎಸ್ಟೆಟ್ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಫಾರ್ಮಾ ಕ್ಷೇತ್ರಕ್ಕೂ ಅಡಿ ಇಟ್ಟಿದೆ.
ಕಾಂಟ್ಯಾಕ್ಟ್ ಲೆನ್ಸ್ ಕ್ಲೀನ್ ಮಾಡುವ ಧ್ರವ, ಐ ಡ್ರಾಪ್ ಇತ್ಯಾದಿ ತಯಾರಿಸುವ ಬೆಂಗಳೂರಿನ ಸ್ಟೆರಿಕಾನ್ ಫಾರ್ಮಾವನ್ನು ಪೂರ್ಣವಾಗಿ ನಿರ್ಮಾ ಖರೀದಿ ಮಾಡಿತ್ತು. ಅಕುಲೈಫ್ ಹೆಲ್ತ್ಕೇರ್ ಕಂಪನಿಯನ್ನೂ ನಿರ್ಮಾ ಹೊಂದಿದೆ. ಇನ್ಫ್ಯೂಶನ್ಸ್, ಇಂಜೆಕ್ಟಬಲ್, ಮೆಡಿಕಲ್ ಡಿವೈಸ್, ಓರಲ್ ಫಾರ್ಮುಲೇಶನ್ಸ್ ಇತ್ಯಾದಿ ವಿವಿಧ ಉತ್ಪನ್ನಗಳನ್ನು ಅಕುಲೈಫ್ ಹೆಲ್ತ್ಕೇರ್ ತಯಾರಿಸಿ 70 ದೇಶಗಳಿಗೆ ರಫ್ತು ಮಾಡುತ್ತದೆ.
ಈಗ ಎಪಿಐ ತಯಾರಿಕಾ ಕ್ಷೇತ್ರಕ್ಕೆ ನಿರ್ಮಾ ಹೋಗಲಿರುವುದು ದೊಡ್ಡ ಹೆಜ್ಜೆ ಎನ್ನಲಾಗಿದೆ. ಫಾರ್ಮಾ ಕ್ಷೇತ್ರದಲ್ಲಿ ಎಪಿಐಗಳದ್ದು ಬಹಳ ದೊಡ್ಡ ಪಾತ್ರ ಇದೆ.
ಇದನ್ನೂ ಓದಿ: Ayushman Bhav: ನಾಲ್ಕೇ ದಿನದಲ್ಲಿ 5 ಲಕ್ಷ ಆಯುಷ್ಮಾನ್ ಕಾರ್ಡ್ ವಿತರಣೆ; ಅಭಿಯಾನಕ್ಕೆ ಲಕ್ಷಾಂತರ ಮಂದಿ ಸ್ಪಂದನೆ
ಎಪಿಐ ಎಂಬುದು ಆ್ಯಕ್ಟಿವ್ ಫಾರ್ಮಸ್ಯೂಟಿಕಲ್ ಇಂಗ್ರೆಡಿಯೆಂಟ್ (API- active pharmaceutical ingredient). ಅಂದರೆ ಒಂದು ಔಷಧದಲ್ಲಿರುವ ಪ್ರಮುಖ ಹೂರಣವೇ ಎಪಿಐ. ಯಾವುದೇ ಔಷಧವಾದರೂ ವಿವಿಧ ಸಂಯುಕ್ತಗಳಿರುತ್ತವೆ. ಅದರಲ್ಲಿ ಪ್ರಮುಖವಾದ ಹೂರಣವೊಂದು ಇರುತ್ತದೆ. ಉದಾಹರಣೆಗೆ, ಪಾರಸಿಟಮಾಲ್ ಮಾತ್ರೆಯಲ್ಲಿ ಆಕ್ಟಿವ್ ಇಂಗ್ರೆಡಿಯೆಂಟ್ ಆಗಿ ಪಾರಸಿಟಮಾಲ್ ಇರುತ್ತದೆ. ಜೊತೆಗೆ ಪೂರಕವಾದ ಬೇರೆ ಇಂಗ್ರೆಡಿಯೆಂಟ್ಗಳೂ ಇರುತ್ತವೆ. ಇಲ್ಲಿ ಎಪಿಐ ಎಂಬುದು ಪ್ಯಾರಸಿಟಮಾಲ್ ಆಗಿರುತ್ತದೆ. ಹೀಗಾಗಿ, ಎಪಿಐ ತಯಾರಿಸುವ ಕಂಪನಿಗಳಿಗೆ ಒಳ್ಳೆಯ ಬೇಡಿಕೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ