Jack Ma: ತಾನೇ ಸಾಕಿದಾ ಗಿಳಿ… ಜ್ಯಾಕ್ ಮಾ ಕೈತಪ್ಪಿದ ಆಂಟ್; ಏನಾಗುತ್ತಿದೆ ಚೀನಾದಲ್ಲಿ?

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 07, 2023 | 1:52 PM

ಆಂಟ್ ಗ್ರೂಪ್ ಮೇಲಿನ ತಮ್ಮ ಹಕ್ಕನ್ನು ಜ್ಯಾಕ್ ಮಾ ತ್ಯಜಿಸಿದ್ದಾರೆ. ಸಂಸ್ಥೆಯ ಷೇರುದಾರಿಕೆಯಲ್ಲಿ ಮತ್ತು ವೋಟಿಂಗ್ ಸ್ವರೂಪದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಸಂಸ್ಥೆಯಲ್ಲಿ ಶೇ. 50ಕ್ಕಿಂತ ಹೆಚ್ಚು ಇದ್ದ ಜ್ಯಾಕ್ ಮಾ ವೋಟಿಂಗ್ ಹಕ್ಕು ಇದೀಗ ಶೇ. 6.2ಕ್ಕೆ ಇಳಿದಿದೆ.

Jack Ma: ತಾನೇ ಸಾಕಿದಾ ಗಿಳಿ... ಜ್ಯಾಕ್ ಮಾ ಕೈತಪ್ಪಿದ ಆಂಟ್; ಏನಾಗುತ್ತಿದೆ ಚೀನಾದಲ್ಲಿ?
Jack Ma
Image Credit source: google image
Follow us on

ಜ್ಯಾಕ್ ಮಾ (Jack Ma) ನೆನಪಿರಬಹುದು. ಇವರು ಚೀನಾದ ದೊಡ್ಡ ಉದ್ಯಮಿ. ವಿಶ್ವದ ಅತಿದೊಡ್ಡ ಶ್ರೀಮಂತರಲ್ಲಿ ಒಬ್ಬರು. ಆಲಿಬಾಬಾ (Ali Baba Group) ಎಂಬ ಮಹಾಸಂಸ್ಥೆಯ ಸಂಸ್ಥಾಪಕರು. ಕೆಲ ವರ್ಷಗಳಿಂದ ದಿಢೀರ್ ಆಗಿ ನಾಪತ್ತೆಯಾಗಿ, ಇತ್ತೀಚೆಗೆ ಅಲ್ಪಸ್ವಲ್ಪವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚೀನಾದ ಈ ಉದ್ಯಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಇವರು ಸಂಸ್ಥಾಪಿಸಿದ ಆಂಟ್ ಗ್ರೂಪ್ (Ant Group) ಎಂಬ ಹಣಕಾಸು ತಂತ್ರಜ್ಞಾನ ಸಂಸ್ಥೆಯೇ ಇವರ ಕೈತಪ್ಪಿಹೋಗುತ್ತಿರುವ ಬೆಳವಣಿಗೆಯಾಗಿದೆ. ಆಂಟ್ ಗ್ರೂಪ್ ಮೇಲಿನ ತಮ್ಮ ಹಕ್ಕನ್ನು ಜ್ಯಾಕ್ ಮಾ ತ್ಯಜಿಸಿದ್ದಾರೆ. ಸಂಸ್ಥೆಯ ಷೇರುದಾರಿಕೆಯಲ್ಲಿ ಮತ್ತು ವೋಟಿಂಗ್ ಸ್ವರೂಪದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಸಂಸ್ಥೆಯಲ್ಲಿ ಶೇ. 50ಕ್ಕಿಂತ ಹೆಚ್ಚು ಇದ್ದ ಜ್ಯಾಕ್ ಮಾ ವೋಟಿಂಗ್ ಹಕ್ಕು ಇದೀಗ ಶೇ. 6.2ಕ್ಕೆ ಇಳಿದಿದೆ. 10 ವ್ಯಕ್ತಿಗಳಿಗೆ ಈಗ ವೋಟಿಂಗ್ ಹಕ್ಕುಗಳನ್ನು ಹಂಚಲಾಗಿದೆ.

ಆಂಟ್ ಗ್ರೂಪ್ ಎಂಬುದು ಅಲಿ ಬಾಬಾ ಗ್ರೂಪ್ನ ಒಂದು ಅಂಗಸಂಸ್ಥೆ. ಜ್ಯಾಕ್ ಮಾ ವೈಯಕ್ತಿಕವಾಗಿ ಇದರಲ್ಲಿ ಶೇ. 10ರಷ್ಟು ಪಾಲು ಹೊಂದಿರುವರಾದರೂ ತಮ್ಮ ಒಡೆತನದ ಇತರ ಕೆಲ ಸಂಸ್ಥೆಗಳ ಮೂಲಕ ಆಂಟ್ ಗ್ರೂಪ್ನಲ್ಲಿ ಶೇ. 50ಕ್ಕಿಂತ ಹೆಚ್ಚು ಪಾಲನ್ನು ಪರೋಕ್ಷವಾಗಿ ಹೊಂದಿದ್ದಾರೆ. ಹೀಗಾಗಿ, ವೋಟಿಂಗ್ ಹಕ್ಕಿನಲ್ಲಿ ಸಿಂಹಪಾಲು ಜ್ಯಾಕ್ ಮಾ ಅವರದ್ದಾಗಿತ್ತು. ಇದೀಗ ಸರ್ಕಾರದ ಮಧ್ಯಪ್ರವೇಶದ ಪರಿಣಾಮವಾಗಿ ಜ್ಯಾಕ್ ಮಾ ತಾವೇ ಸ್ಥಾಪಿಸಿದ ಸಾಮ್ರಾಜ್ಯದಿಂದ ಕೆಳಗಿಳಿಯುವಂತಾಗಿದೆ.

ಆಂಟ್ ಗ್ರೂಪ್ ಒಂದು ಹಣಕಾಸು ಸಂಸ್ಥೆಯಾಗಿದ್ದು, ಇದರ ಬಳಿ ಇರುವ ನಿಧಿಯನ್ನು ಬಳಸಿ ಚೀನಾದ ಸಣ್ಣ ಸಣ್ಣ ಉದ್ಯಮಗಳಿಗೆ ಸಾಲದ ವ್ಯವಸ್ಥೆ ಮಾಡಲಾಗುತ್ತಿದೆ. ಆರ್ಥಿಕತೆಯ ಬೆಳವಣಿಗೆಗೆ ಸಣ್ಣ ಸಣ್ಣ ಉದ್ಯಮಗಳು ಆರೋಗ್ಯದಿಂದಿರುವುದು ಅಗತ್ಯ. ಮುಂದಿನ ದಿನಗಳಲ್ಲಿ ಆಂಟ್ ಗ್ರೂಪ್ನ ಇತರ ಖಾಸಗಿ ಷೇರುದಾರರು ತಮ್ಮ ಪಾಲನ್ನು ಮಾರಿ ಹೊರಹೋಗುವ ಸಾಧ್ಯತೆ ಇದೆ. ಅದಾದ ಬಳಿಕ ಸಂಸ್ಥೆಯನ್ನು ಐಪಿಒಗೆ ತರುವ ಆಲೋಚನೆ ಚೀನಾ ಆಡಳಿತಗಾರರದ್ದಾಗಿದೆ.

ಸರ್ಕಾರದ ಪಾತ್ರವೇನು?

ಚೀನಾದಲ್ಲಿರುವುದು ಕಮ್ಯೂನಿಸ್ಟ್ ಆಡಳಿತ ವ್ಯವಸ್ಥೆ. ಸರ್ವರಿಗೂ ಸಮಪಾಲು ಎಂಬುದು ಕಮ್ಯೂನಿಸ್ಟ್ ಧ್ಯೇಯಮಂತ್ರ. ಕಳೆದ ಕೆಲ ದಶಕಗಳಲ್ಲಿ ಚೀನಾದಲ್ಲಿ ಖಾಸಗಿ ಉದ್ಯಮಿಗಳು ಫಲವತ್ತಾಗಿ ಬೆಳೆದುಹೋಗಿದ್ದಾರೆ. ಅಂಥವರಲ್ಲಿ ಜ್ಯಾಕ್ ಮಾ ಒಬ್ಬರು. ಖಾಸಗಿ ಕಂಪನಿಗಳು ಮತ್ತು ಉದ್ಯಮಿಗಳು ತಮ್ಮ ಆಸ್ತಿಯ ಬಹುಪಾಲನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂಬ ಚೀನೀ ಸರ್ಕಾರದ ಅಘೋಷಿತ ನೀತಿಗೆ ಅನುಸಾರವಾಗಿ ಬಹಳಷ್ಟು ಸಿರಿವಂತರು ಕಾರ್ಪೊರೇಟ್ ಏಣಿಯಿಂದ ಇಳಿದು ನೇಪಥ್ಯಕ್ಕೆ ಸರಿಹೋಗಿದ್ದಾರೆ.

ಇದನ್ನು ಓದಿ:Jack Ma: ಜಪಾನ್​ನಲ್ಲಿ ವಾಸವಾಗಿದ್ದರಂತೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ

ಕೆಲ ವರ್ಷಗಳ ಹಿಂದೆ ಜ್ಯಾಕ್ ಮಾ ಅವರು ಚೀನಾದ ಆಡಳಿತ ವ್ಯವಸ್ಥೆ ವಿರುದ್ಧ ಅಸಮಾಧಾನದ ಮಾತುಗಳನ್ನು ಆಡಿದ್ದರು. ಅದರ ಬೆನ್ನಲ್ಲೇ ಆಲಿಬಾಬಾ ಗ್ರೂಪ್ ಮೇಲೆ ಚೀನಾ ಆಡಳಿತ ಸಾಲು ಸಾಲಾಗಿ ಕಠಿಣ ಕ್ರಮಗಳನ್ನು ಕೈಗೊಂಡಿತು. ಜ್ಯಾಕ್ ಮಾ ಮಾಲಿಕತ್ವದ ಆಂಟ್ ಗ್ರೂಪ್ ಸಂಸ್ಥೆ ಐಪಿಒಗೆ ತೆರೆದುಕೊಳ್ಳದಂತೆ ನೋಡಿಕೊಳ್ಳಲಾಯಿತು. ಅದಾದ ಬಳಿಕ ಜ್ಯಾಕ್ ಮಾ ನಿಗೂಢವಾಗಿ ಕಣ್ಮರೆಯಾಗಿದ್ದರು.

2021ರಲ್ಲಿ ಅವರು ಅಮೆರಿಕ ಮೊದಲಾದ ಕಡೆ ಆಗಾಗ್ಗೆ ಕಾಣಿಸಿಕೊಂಡಿದ್ದುಂಟು. ಇತ್ತೀಚೆಗೆ ಅವರು ಜಪಾನಿನ ಟೋಕಿಯೋದಲ್ಲಿ ಕಾಣಿಸಿದ್ದರು. ವ್ಯವಹಾರ ಜಗತ್ತಿನಿಂದ ದೂರವಾಗಿ ಅವರು ತಮ್ಮ ಪಾಡಿಗೆ ತಾವಿದ್ದಾರೆ.

ಕೃಷ, ಕುರೂಪಿ, ಫೇಲ್ಡ್ ವ್ಯಕ್ತಿ ಜ್ಯಾಕ್ ಮಾ

ಜ್ಯಾಕ್ ಮಾ ಜೀವನ ಬಹಳ ರೋಚಕತೆಯ ಸಂಗತಿಗಳಿಂದ ಕೂಡಿದೆ. 1964 ಸೆಪ್ಟೆಂಬರ್ 10ರಂದು ಜನಿಸಿದ ಜ್ಯಾಕ್ ಮಾ ಚಿಕ್ಕಂದಿನಲ್ಲಿ ಇಂಗ್ಲೀಷ್ ಕಲಿಯದೇ ಹೋಗಿದ್ದರೆ ಇವತ್ತು ಮಾ ಯುನ್ ಆಗಿ ಯಾವುದಾದರೂ ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾ ನಿವೃತ್ತರಾಗುತ್ತಿದ್ದರೇನೋ. ಮಾ ಯುನ್ ಎಂಬ ವ್ಯಕ್ತಿ ಜ್ಯಾಕ್ ಮಾ ಆಗಿ ವಿಶ್ವ ಕಾರ್ಪೊರೇಟ್ ಜಗತ್ತನ್ನು ಹಲವು ವರ್ಷ ಆಳಿದ್ದು ಸಾಮಾನ್ಯವಲ್ಲ.

ಶಾಲಾ ದಿನಗಳಲ್ಲಿ ಸಹಪಾಠಿಗಳೊಂದಿಗೆ ಹೊಡೆದಾಟ ಆಡಿಕೊಂಡಿದ್ದ ಜ್ಯಾಕ್ ಮಾ ಓದಿನಲ್ಲಿ ಹೆಚ್ಚು ಬೆಳಕು ಕಾಣಲಿಲ್ಲ. ಆದರೆ, ಇಂಗ್ಲೀಷ್ ಬಗ್ಗೆ ಬಹಳ ಆಸಕ್ತಿ ಇತ್ತು. ವಿದೇಶೀಯರ ಜೊತೆ ಸಂವಾದ ನಡೆಸುತ್ತಾ ಇಂಗ್ಲೀಷ್ ಕರಗತ ಮಾಡಿಕೊಂಡಿದ್ದರು. ಆಗ ವಿದೇಶೀಯರಿಗೆ ಮಾ ಯುನ್ ಹೆಸರನ್ನು ಸರಿಯಾಗಿ ಉಚ್ಚರಿಸಲು ಬರದೇ ಇದ್ದರಿಂದ ಜ್ಯಾಕ್ ಎಂದು ಹೆಸರಿಟ್ಟಿದ್ದರು. ಮಾ ಯುನ್ ಹೆಸರು ಮುಂದೆ ಜ್ಯಾಕ್ ಮಾ ಆಗಿ ಮುಂದುವರಿಯಿತು.

ಇನ್ನು, ಕಾಲೇಜು ಎಂಟ್ರೆನ್ಸ್ ಪರೀಕ್ಷೆಯಲ್ಲಿ ಗಣಿತದಲ್ಲಿ ಗಳಿಸಿದ್ದು ಒಂದೇ ಅಂಕ. ವೇಯ್ಟರ್ ಕೆಲಸಕ್ಕೆ ಸೇರಲು ಹೋದ ಇವರ ಕೃಷಕಾಯ, ಮುಖಲಕ್ಷಣ ನೋಡಿ ಅದು ದಕ್ಕಲಿಲ್ಲ. ಕಾಲೇಜು ಪ್ರವೇಶ ಪರೀಕ್ಷೆಯ ಮೂರನೇ ಪ್ರಯತ್ನದಲ್ಲಿ ಸಫಲರಾದರೂ ಪ್ರವೇಶ ಸಿಗಲಿಲ್ಲ. ಇಂಗ್ಲೀಷ್ ವಿಷಯದಲ್ಲಿ ತೀರಾ ಕಡಿಮ ವಿದ್ಯಾರ್ಥಿಗಳು ಸಿಕ್ಕಿದ್ದರಿಂದ ಜ್ಯಾಕ್ ಮಾ ಅವರ ಇಂಗ್ಲೀಷ್ ಆಸಕ್ತಿಯಿಂದಾಗಿ ಸೀಟು ಸಿಕ್ಕಿತು. ಅಲ್ಲಿಂದ ಜ್ಯಾಕ್ ಮಾ ಭರ್ಜರಿ ಪ್ರಯಾಣ ಮುಂದುವರಿದ್ದು ಇತಿಹಾಸ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ