ಜಪಾನ್​ನಲ್ಲಿ 17 ವರ್ಷ ಬಳಿಕ ಮೊದಲ ಬಾರಿಗೆ ಬಡ್ಡಿದರ ಹೆಚ್ಚಳ; ನೂರಕ್ಕೆ ಕೇವಲ 10 ಪೈಸೆ ಬಡ್ಡಿ

Bank of Japan Rises Interest Rates: ಜಪಾನ್ ದೇಶದಲ್ಲಿ ಮೈನಸ್ 0.1ರಷ್ಟಿದ್ದ ಬಡ್ಡಿದರವನ್ನು ಈಗ ಸೊನ್ನೆಯಿಂದ ಶೇ. 0.1ರ ಶ್ರೇಣಿಗೆ ಹೆಚ್ಚಿಸಲಾಗಿದೆ. ಹಣದುಬ್ಬರವು ಶೇ. 2 ತಲುಪಿರುವುದರಿಂದ ಬ್ಯಾಂಕ್ ಆಫ್ ಜಪಾನ್ ಬಡ್ಡಿದರ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ. ಜಪಾನ್​ನಲ್ಲಿ ಡೀಫ್ಲೇಶನ್ ಸಮಸ್ಯೆ ಇದ್ದರಿಂದ ಬಹಳ ವರ್ಷ ಕಾಲ ಬಡ್ಡಿದರವನ್ನು ಸೊನ್ನೆಗಿಂತ ಕಡಿಮೆಗೆ ಇಡಲಾಗಿತ್ತು.

ಜಪಾನ್​ನಲ್ಲಿ 17 ವರ್ಷ ಬಳಿಕ ಮೊದಲ ಬಾರಿಗೆ ಬಡ್ಡಿದರ ಹೆಚ್ಚಳ; ನೂರಕ್ಕೆ ಕೇವಲ 10 ಪೈಸೆ ಬಡ್ಡಿ
ಜಪಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 19, 2024 | 12:37 PM

ಟೋಕಿಯೋ, ಮಾರ್ಚ್ 19: ಬ್ಯಾಂಕ್ ಆಫ್ ಜಪಾನ್ 2007ರ ಬಳಿಕ ಮೊದಲ ಬಾರಿಗೆ ತನ್ನ ಬಡ್ಡಿದರ (Interest rates) ಹೆಚ್ಚಿಸಿದೆ. ಅದರ ಕಿರು ಅವಧಿ ಬಡ್ಡಿದರ (short-term policy rate) ಸೊನ್ನೆಯಿಂದ ಶೇ. 0.1ರ ಶ್ರೇಣಿಗೆ ಪರಿಷ್ಕರಿಸಲಾಗಿದೆ. 2007ರಲ್ಲಿ ಬಡ್ಡಿದರವನ್ನು ಮೈನಸ್ ಶೇ. 0.1ಕ್ಕೆ ನಿಗದಿ ಮಾಡಲಾಗಿತ್ತು. ನೆಗಟಿವ್ ಬಡ್ಡಿದರ ಇರುವ ಏಕೈಕ ದೇಶವೆಂಬ ಪಟ್ಟವನ್ನು ಜಪಾನ್ ಪಕ್ಕಕ್ಕಿಟ್ಟಂತಾಗಿದೆ. ಹಣದುಬ್ಬರ ನಿರೀಕ್ಷಿತ ಮಟ್ಟ ತಲುಪುತ್ತಿರುವುದರಿಂದ ಜಪಾನ್ ಸೆಂಟ್ರಲ್ ಬ್ಯಾಂಕ್ ತನ್ನ ಬಡ್ಡಿದರವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಲು ನಿರ್ಧರಿಸಿದೆ.

ವಿಶ್ವದ ಹಲವು ರಾಷ್ಟ್ರಗಳಿಗೆ ಹಣದುಬ್ಬರದ ಕಾಟವಾದರೆ ಜಪಾನ್ ಮೊದಲಾದ ಕೆಲ ದೇಶಗಳಲ್ಲಿ ಹಣದುಬ್ಬರ ಕುಸಿತ ಅಥವಾ ಡೀಫ್ಲೇಶನ್ ಸಮಸ್ಯೆ ಕಾಡಿದೆ. ಹಣದುಬ್ಬರವನ್ನು ಶೇ. 2ಕ್ಕೆ ತರುವುದು ಸೆಂಟ್ರಲ್ ಬ್ಯಾಂಕ್​ನ ಗುರಿಯಾಗಿತ್ತು. ಅದರಂತೆ ಬಡ್ಡಿದರವನ್ನು ಮೈನಸ್​ನಲ್ಲಿ ಇಡಲಾಗಿತ್ತು. ಈಗ ಆ ಗುರಿ ಈಡೇರಿರುವ ಹಿನ್ನೆಲೆಯಲ್ಲಿ ಬಡ್ಡಿದರವನ್ನು ಶೂನ್ಯಕ್ಕಿಂತ ಮೇಲೆತ್ತಲಾಗಿದೆ.

ಇದನ್ನೂ ಓದಿ: ಟಾಟಾ ಸನ್ಸ್​ನಿಂದ ಷೇರು ಮಾರಾಟ; ಟಿಸಿಎಸ್ ಷೇರುಕುಸಿತ; ಇದು ಖರೀದಿಸುವ ಸಮಯವಾ?

ಜಪಾನ್​ನಲ್ಲಿ ಹಲವು ವರ್ಷ ಬಳಿಕ ಉತ್ತಮ ಸಂಬಳ ಹೆಚ್ಚಳ

ಇನ್ನೊಂದು ಅಚ್ಚರಿಯ ಸಂಗತಿ ಎಂದರೆ, ಜಪಾನ್ ದೇಶದಲ್ಲಿ ಬೆಲೆ ಏರಿಕೆ ಬಹಳ ಮಂದಗತಿಯಲ್ಲಿ ಇರುವುದರಿಂದ ಕಾರ್ಮಿಕರಿಗೆ ವೇತನ ಹೆಚ್ಚಳ ಅಪರೂಪವಾಗಿದೆ. ಕಳೆದ 30 ವರ್ಷಗಳಿಂದ ವೇತನ ಹೆಚ್ಚಳ ತೀರಾ ನಗಣ್ಯವಾಗಿದೆ. ಒಂದೆರಡು ವಾರದ ಹಿಂದೆ ಜಪಾನ್​ನ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳೀಗೆ ಶೇ. 5.28ರಷ್ಟು ವೇತನ ಹೆಚ್ಚಳ ಮಾಡಲು ಅಂಗೀಕರಿಸಿವೆ. ಮೂರು ದಶಕದಲ್ಲೇ ಅತಿದೊಡ್ಡ ವೇತನ ಹೆಚ್ಚಳ ಅದಾಗಲಿದೆ.

ಬಡ್ಡಿದರ ಸೊನ್ನೆಗಿಂತ ಕಡಿಮೆ ಇದ್ದರೆ ಏನಾಗುತ್ತದೆ?

ಸೆಂಟ್ರಲ್ ಬ್ಯಾಂಕ್​ನ ಬಡ್ಡಿದರ ಶೇ. 5ರಷ್ಟು ಇದೆ ಎಂದರೆ, ಕಮರ್ಷಿಯಲ್ ಬ್ಯಾಂಕುಗಳು ಇಲ್ಲಿ ಠೇವಣಿ ಇರಿಸಿದರೆ ಪಡೆಯುವ ಬಡ್ಡಿ ಅದು. ಒಂದು ವೇಳೆ ಇದು ಸೊನ್ನೆಗಿಂತ ಕಡಿಮೆ ಇದ್ದರೆ ಅಲ್ಲಿ ಠೇವಣಿ ಇಡಲು ಆಗುವುದಿಲ್ಲ. ಬ್ಯಾಂಕುಗಳು ಬಡ್ಡಿರಹಿತವಾಗಿ ಗ್ರಾಹಕರಿಗೆ ಸಾಲ ಕೊಡಬೇಕಾಗುತ್ತದೆ. ಅಥವಾ ಸಾಲ ಪಡೆಯುವ ಗ್ರಾಹಕರಿಗೆ ಬ್ಯಾಂಕ್​ನವರೇ ಉತ್ತೇಜಕವಾಗಿ ಬಡ್ಡಿ ಸೇರಿಸಿಕೊಡುತ್ತದೆ.

ಇದನ್ನೂ ಓದಿ: ಚೀನಾ ಕಂಡಂತಹ ಆರ್ಥಿಕ ಬೆಳವಣಿಗೆಯ ವೇಗ ಭಾರತದಿಂದ ಅಸಾಧ್ಯ: ಮಾರ್ಗನ್ ಸ್ಟಾನ್ಲೀ

ಜನರು ಹಣವನ್ನು ಬ್ಯಾಂಕ್​​ನಲ್ಲಿ ಇಡುವುದನ್ನು ತಪ್ಪಿಸಲು ಮತ್ತು ಎಲ್ಲಾ ಹಣವನ್ನೂ ಖರ್ಚು ಮಾಡಿ ಆರ್ಥಿಕತೆಗೆ ಪುಷ್ಟಿ ಸಿಗಲಿ ಎಂಬ ಉದ್ದೇಶದಿಂದ ಬಡ್ಡಿದರ ಕಡಿಮೆ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ