ನವದೆಹಲಿ, ಏಪ್ರಿಲ್ 2: ಜಪಾನ್ ದೇಶದ ಕರೆನ್ಸಿಯಾದ ಯೆನ್ (Yen currency) ದಿನೇ ದಿನೇ ಕುಸಿಯುತ್ತಾ ಬಂದಿದ್ದು, ಇದೀಗ ಕಳೆದ 34 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. 1990ರ ನಂತರ ಯೆನ್ ಮೌಲ್ಯ ಅತ್ಯಂತ ಕೆಳಗೆ ಇಳಿದಿದೆ. ತಜ್ಞರ ಪ್ರಕಾರ ಯೆನ್ ಮೌಲ್ಯ ಕುಸಿದಿರುವುದು ಭಾರತದ ವಾಹನ ಉದ್ಯಮಕ್ಕೆ ಲಾಭವಾಗಲಿದೆ. ಅದರಲ್ಲೂ ಜಪಾನ್ನಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳಿಗೆ ಅನುಕೂಲವಾಗಲಿದೆ. ಭಾರತದ ವಾಹನ ಉದ್ಯಮವು (Indian auto sector) ಜಪಾನ್ನಿಂದ ಬಿಡಿಭಾಗ ಮತ್ತಿತರ ವಸ್ತುಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತವೆ. ಪರಿಣಾಮವಾಗಿ ಕೆಲ ಆಟೊಮೊಬೈಲ್ ಷೇರುಗಳೂ ಕೂಡ ಬೇಡಿಕೆ ಪಡೆಯುವ ನಿರೀಕ್ಷೆ ಇದೆ.
2022-23ರ ಹಣಕಾಸು ವರ್ಷದಲ್ಲಿ ಜಪಾನ್ ದೇಶದಿಂದ ಭಾರತಕ್ಕೆ 16.49 ಬಿಲಿಯನ್ ಡಾಲರ್ನಷ್ಟು ಮೌಲ್ಯದ ವಸ್ತುಗಳು ಆಮದಾಗಿತ್ತು. ಅಮೂಲ್ಯ ಲೋಹ ಸಂಯುಕ್ತಗಳು, ವಾಹನ ಬಿಡಿಭಾಗಗಳು, ರೀಫೈನ್ಡ್ ಕಾಪರ್ ಅನ್ನು ಜಪಾನ್ನಿಂದ ಭಾರತ ಹೆಚ್ಚಾಗಿ ರಫ್ತು ಮಾಡಿಕೊಳ್ಳುತ್ತದೆ. ನ್ಯೂಕ್ಲಿಯಾರ್ ರಿಯಾಕ್ಟರ್ಸ್, ವಿದ್ಯುತ್ ಯಂತ್ರೋಪಕರಣಗಳು, ಕಬ್ಬಿಣ, ಉಕ್ಕು, ಪ್ಲಾಸ್ಟಿಕ್ ಆರ್ಟಿಕಲ್, ಇನಾರ್ಗ್ಯಾನಿಕ್ ಕೆಮಿಕಲ್ ಮೊದಲಾದವನ್ನೂ ಜಪಾನ್ ಭಾರತಕ್ಕೆ ಸರಬರಾಜು ಮಾಡುತ್ತದೆ. ಈ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಭಾರತೀಯ ಸಂಸ್ಥೆಗಳಿಗೆ ಈಗ ಯೆನ್ ಬೆಲೆ ಕುಸಿದಿರುವುದು ಲಾಭ ಆಗುತ್ತದೆ.
ಎರಡು ವರ್ಷದ ಹಿಂದೆ 100 ಯೆನ್ಗೆ 65 ರೂ ಇತ್ತು. ಈಗ 100 ಯೆನ್ಗೆ 55 ರುಪಾಯಿ ಆಗಿದೆ. ಒಂದು ಡಾಲರ್ಗೆ ಈಗ 151.975 ಯೆನ್ ಆಗಿದೆ. ಅಂದರೆ, ಕಡಿಮೆ ಬೆಲೆಗೆ ಹೆಚ್ಚು ಮೊತ್ತದ ಸರಕನ್ನು ಜಪಾನ್ನಿಂದ ಆಮದು ಮಾಡಿಕೊಳ್ಳಬಹುದು. ಇದು ಕೆಲ ಭಾರತೀಯ ಉದ್ದಿಮೆಗಳಿಗೆ ಅನುಕೂಲವಾಗುತ್ತದೆ. ಒಟ್ಟಾರೆ ಆರ್ಥಿಕತೆಗೂ ಲಾಭವಾಗಬಹುದು.
ಇದನ್ನೂ ಓದಿ: ಫೇಸ್ಬುಕ್, ಇನ್ಸ್ಟಾದ ನಿಮ್ಮ ಪೋಸ್ಟ್ಗಳು ವಿದೇಶೀ ಸರ್ವರ್ಗೆ ಹೋಗಲ್ಲ; ಭಾರತದಲ್ಲೇ ನಿರ್ಮಾಣವಾಗಿದೆ ಡಾಟಾ ಸೆಂಟರ್
ಜಪಾನ್ ಕಂಪನಿಗಳ ಜೊತೆ ಸಹಯೋಗ ಹೊಂದಿರುವ ಅಥವಾ ಅಂಗಸಂಸ್ಥೆಗಳಾಗಿರುವ ಮಾರುತಿ ಸುಜುಕಿ, ಮದರ್ಸನ್ ಸುಮಿ, ಶಾರ್ಪ್ ಮೊದಲಾದ ಕಂಪನಿಗಳತ್ತ ಒಂದು ಚಿತ್ತ ಇಡಬಹುದು. ಈ ಕಂಪನಿಗಳಿಗೆ ಜಪಾನ್ನಿಂದ ಹೆಚ್ಚು ವಸ್ತುಗಳು ಸರಬರಾಜಾಗುತ್ತವೆ. ಹೀಗಾಗಿ, ಈ ಕಂಪನಿಗಳ ಲಾಭದ ಮಾರ್ಜಿನ್ ಹೆಚ್ಚಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Tue, 2 April 24