2023ರ ಜೂನ್ ತಿಂಗಳಲ್ಲಿ ಕೆಲ ಮಹತ್ವದ ಹಣಕಾಸು ಸಂಬಂಧಿತ ಕಾರ್ಯಗಳಿಗೆ (Financial tasks) ಡೆಡ್ಲೈನ್ ಇದೆ. ಇವುಗಳನ್ನು ನೀವು ತಪ್ಪಿಸಿದರೆ ದಂಡ ಕಟ್ಟಬೇಕಾಬಹುದ ಅಥವಾ ಬೇರೆ ಕ್ರಮ ಎದುರಿಸಬೇಕಾಗಬಹುದು. ಹೆಚ್ಚುವರಿ ಪಿಎಫ್ ಪಿಂಚಣಿ ಬೇಕೆನ್ನುವವರು ಅರ್ಜಿ ಸಲ್ಲಿಸುವುದಿರಲಿ ಅಥವಾ ಪ್ಯಾನ್ ಮತ್ತ ಆಧಾರ್ ಲಿಂಕ್ ಮಾಡುವುದಿರಲಿ ಒಂದಿಷ್ಟು ಮಹತ್ವದ ಕಾರ್ಯಗಳನ್ನು ಜೂನ್ ಮುಗಿಯುವುದರೊಳಗೆ ನೀವು ಮಾಡಬೇಕಿದೆ.
ಪ್ಯಾನ್ ಮತ್ತು ಆಧಾರ್ ನಂಬರ್ ಜೋಡಣೆ ಬಹಳ ಮುಖ್ಯವಾದುದು. 1000 ರೂ ದಂಡ ಸಮೇತ ಈ ಕಾರ್ಯ ಮಾಡಲು 2023 ಮಾರ್ಚ್ 31ಕ್ಕೆ ಡೆಡ್ಲೈನ್ ಇತ್ತು. ಆದರೆ, ಬಹಳ ಮಂದಿ ಇನ್ನೂ ಲಿಂಕ್ ಮಾಡದ ಹಿನ್ನೆಲೆಯಲ್ಲಿ ಗಡುವನ್ನು ಜೂನ್ 30ಕ್ಕೆ ವಿಸ್ತರಿಸಲಾಗಿದೆ. ಈ ವಾಯಿದೆಯೊಳಗೆ ನೀವು ಪ್ಯಾನ್ ಆಧಾರ್ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ನಂಬರ್ ಅಸಿಂಧುಗೊಳ್ಳುತ್ತದೆ. ಈ ನಿಷ್ಕ್ರಿಯ ಪ್ಯಾನ್ ನಂಬರ್ ಅನ್ನು ನೀವು ಯಾವುದಾದರೂ ಹಣಕಾಸು ಚಟುವಟಿಕೆಗೆ ಬಳಸಿದಲ್ಲಿ ಭಾರೀ ಮೊತ್ತದ ದಂಡ ಕಟ್ಟಬೇಕಾಬಹುದು, ಅಥವಾ ಜೈಲು ಶಿಕ್ಷೆಗೂ ಒಳಗಾಗಬಹುದು.
ಇಪಿಎಫ್ ಸದಸ್ಯರು ಹೆಚ್ಚುವರಿ ಪಿಂಚಣಿ ಅವಕಾಶಕ್ಕಾಗಿ ಅರ್ಜಿ ಸಲ್ಲಿಸಲು ಜೂನ್ 26ಕ್ಕೆ ಗಡುವು ಕೊಡಲಾಗಿದೆ. ಸದ್ಯ ಗರಿಷ್ಠ 15 ಸಾವಿರ ರೂವರೆಗಿನ ಬೇಸಿಕ್ ಸ್ಯಾಲರಿಗೆ ಉದ್ಯೋಗಿಗಳಿಂದ ಇಪಿಎಫ್ಗೆ ಹಣ ಮುರಿದುಕೊಳ್ಳಲಾಗುತ್ತಿದೆ. ಇದಕ್ಕೂ ಹೆಚ್ಚಿನ ಸಂಬಳಕ್ಕೆ ಹೆಚ್ಚುವರಿ ಹಣ ಮುರಿದುಕೊಳ್ಳಬೇಕೆನ್ನುವುದು ಉದ್ಯೋಗಿಗಳ ಒತ್ತಾಯ. ಈ ಹಿನ್ನೆಲೆಯಲ್ಲಿ ಈ ಹೆಚ್ಚುವರಿ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ.
ಆರ್ಬಿಐ ರೂಪಿಸಿದ ಹೊಸ ಬ್ಯಾಂಕ್ ಲಾಕರ್ ಒಪ್ಪಂದವನ್ನು ಎಲ್ಲಾ ಬ್ಯಾಂಕುಗಳು ರಿನಿವಲ್ ಮಾಡಬೇಕು. 2023ರ ಡಿಸೆಂಬರ್ 31ರೊಳಗೆ ಈ ಕಾರ್ಯ ಪೂರ್ಣಗೊಳ್ಳಬೇಕು. ಹಂತ ಹಂತವಾಗಿ ಇದನ್ನು ಜಾರಿಗೊಳಿಸುವುದು ಆರ್ಬಿಐ ಯೋಜನೆ. ಅದರಂತೆ 2023 ಜೂನ್ 30ರೊಳಗೆ ಎಲ್ಲಾ ಬ್ಯಾಂಕುಗಳು ಶೇ. 50ರಷ್ಟು ಲಾಕರ್ ರಿನಿವಲ್ ಮಾಡಿರಬೇಕು. 2023 ಸೆಪ್ಟಂಬರ್ 30ರೊಳಗೆ ಶೇ. 75ರಷ್ಟು ಕಾರ್ಯಗಳಾಗಿರಬೇಕು. ಡಿಸೆಂಬರ್ 31ರೊಳಗೆ ನೂರು ಪ್ರತಿಶತದಷ್ಟು ಯೋಜನೆ ಪೂರ್ಣಗೊಂಡಿರಬೇಕು.
10 ವರ್ಷಕ್ಕಿಂತ ಹೆಚ್ಚು ಕಾಲದಿಂದ ಅಪ್ಡೇಟ್ ಆಗದೇ ಉಳಿದಿರುವ ಆಧಾರ್ ಡೆಮೋಗ್ರಾಫಿಕ್ ಮಾಹಿತಿಯನ್ನು ಅಪ್ಡೇಟ್ ಮಾಡುವಂತೆ ಸರ್ಕಾರ ತಿಳಿಸಿದೆ. ಅದರಂತೆ ಆನ್ಲೈನ್ನಲ್ಲಿ ಈ ಮಾಹಿತಿ ಉಚಿತವಾಗಿ ಅಪ್ಡೇಟ್ ಮಾಡುವ ಅವಕಾಶ ಇದೆ. ಇದು 2023 ಜೂನ್ 14ರವರೆಗೆ ಮಾತ್ರ. ಮೈ ಆಧಾರ್ ಪೋರ್ಟಲ್ಗೆ ಹೋದರೆ ಯಾವುದೇ ಶುಲ್ಕವಿಲ್ಲದೇ ನಾವೇ ಮಾಡಬಹುದು. ಈ ಗಡುವು ದಾಟಿದರೆ 50 ರೂ ಶುಲ್ಕ ಕಟ್ಟಿ ಮಾಡಬೇಕಾಗುತ್ತದೆ. ಈ ಉಚಿತ ಅವಕಾಶ ಮೈ ಆಧಾರ್ ಪೋರ್ಟಲ್ನಲ್ಲಿ ಮಾತ್ರ.
Published On - 10:35 am, Wed, 31 May 23