ಕರ್ಣಾಟಕ ಬ್ಯಾಂಕ್ ಸಿಇಒ ಎಸ್ ಎಚ್ ಶರ್ಮಾ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ರಾಜೀನಾಮೆ; ಏನು ಕಾರಣ?

Karnataka bank CEO Srikrisknan Hari Hara Sarma and Executive Director Sekar Rao resignation: ಕರ್ಣಾಟಕ ಬ್ಯಾಂಕ್​​ನ ಇಬ್ಬರು ಟಾಪ್ ಎಕ್ಸಿಕ್ಯೂಟಿವ್​​ಗಳು ರಾಜೀನಾಮೆ ನೀಡಿದ್ದಾರೆ. ಸಿಇಒ ಶ್ರೀಕೃಷ್ಣನ್ ಹರಿಹರ ಶರ್ಮಾ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. ನಿನ್ನೆ ಶನಿವಾರ (ಜೂನ್ 29) ಈ ಬೆಳವಣಿಗೆ ಬೆಳಕಿಗೆ ಬಂದಿದ್ದು, ಇವತ್ತು ಷೇರು ಮಾರುಕಟ್ಟೆಯಲ್ಲಿ ಈ ಬ್ಯಾಂಕ್​​ನ ಷೇರುಬೆಲೆ ಕುಸಿಯುತ್ತಿದೆ.

ಕರ್ಣಾಟಕ ಬ್ಯಾಂಕ್ ಸಿಇಒ ಎಸ್ ಎಚ್ ಶರ್ಮಾ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ರಾಜೀನಾಮೆ; ಏನು ಕಾರಣ?
ಕರ್ಣಾಟಕ ಬ್ಯಾಂಕ್

Updated on: Jun 30, 2025 | 1:12 PM

ನವದೆಹಲಿ, ಜೂನ್ 30: ಕರ್ಣಾಟಕ ಬ್ಯಾಂಕ್​​ನ ಸಿಇಒ ಶ್ರೀಕೃಷ್ಣನ್ ಹರಿಹರ ಶರ್ಮಾ (Srikrishnan Hari Hara Sarma) ಮತ್ತು ಕಾರ್ಯವಾಹಕ ನಿರ್ದೇಶಕ ಶೇಖರ್ ರಾವ್ (Sekhar Rao) ಅವರು ರಾಜೀನಾಮೆ ನೀಡಿದ್ದಾರೆ. ನಿನ್ನೆ ಶನಿವಾರ ಎಕ್ಸ್​​ಚೇಂಜ್ ಫೈಲಿಂಗ್​​ನಲ್ಲಿ ಸಂಸ್ಥೆಯು ಈ ವಿಚಾರವನ್ನು ಬಹಿರಂಗಪಡಿಸಿದೆ. ಆದರೆ, ಈ ಇಬ್ಬರು ಟಾಪ್ ಎಕ್ಸಿಕ್ಯೂಟಿವ್​​ಗಳ ರಾಜೀನಾಮೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.

ವೈಯಕ್ತಿಕ ಕಾರಣ ನೀಡಿ ಇಬ್ಬರೂ ಸಂಸ್ಥೆಯಿಂದ ಹೊರಬರುತ್ತಿದ್ದಾರೆ. ಸಿಇಒ ಶ್ರೀಕೃಷ್ಣನ್ ಅವರು ಜುಲೈ 15ರವರೆಗೂ ಕಂಪನಿಯಲ್ಲಿ ಇರಲಿದ್ದಾರೆ. ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ಜುಲೈ 31ರಂದು ಬ್ಯಾಂಕ್​​ನಿಂದ ನಿರ್ಗಮಿಸಲಿದ್ದಾರೆ.

ಈ ಬೆಳವಣಿಗೆ ಆದ ಬೆನ್ನಲ್ಲೇ ಇಂದು ಸೋಮವಾರ ಕರ್ಣಾಟಕ ಬ್ಯಾಂಕ್​ನ ಷೇರು ಬೆಲೆ (Karnataka bank share price) ತೀವ್ರ ಕುಸಿತಕ್ಕೆ ಸಿಲುಕಿದೆ. ಈ ವರದಿ ಬರೆಯುವ ವೇಳೆ ಅದರ ಷೇರುಬೆಲೆ ಇವತ್ತು ಶೇ. 5ರಷ್ಟು ಕಡಿಮೆ ಆಗಿದೆ. 207.65 ರೂ ಇದ್ದ ಬೆಲೆ ಈಗ 193 ರೂಗೆ ಕುಸಿದಿದೆ. ಇವತ್ತಿನ ಟ್ರೇಡಿಂಗ್ ಅವಧಿಯ ಒಂದು ಹಂತದಲ್ಲಿ ಷೇರುಬೆಲೆ 190 ರೂಗೆ ಕುಸಿದಿತ್ತು.

ಇದನ್ನೂ ಓದಿ: ಕ್ಯಾಷಿಯರ್, ಕ್ಲರ್ಕ್, ಸೆಕ್ರೆಟಿರಿಗಳಿರಲ್ಲ… ನಿಖಿಲ್ ಕಾಮತ್ ಪ್ರಕಾರ ಮುಂದಿನ ಕೆಲ ವರ್ಷದಲ್ಲಿ ಹೆಚ್ಚಲಿರುವ ಉದ್ಯೋಗಗಳು ಯಾವುವು ಗೊತ್ತಾ?

ದಿಢೀರ್ ರಾಜೀನಾಮೆಗೆ ಏನು ಕಾರಣ ಇರಬಹುದು?

ಆಗಲೇ ತಿಳಿಸಿದಂತೆ ಸಿಇಒ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಅವರುಗಳ ರಾಜೀನಾಮೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕಳೆದ ತಿಂಗಳಷ್ಟೇ ಆಡಿಟಿಂಗ್ ವೇಳೆ ಒಂದೂವರೆ ಕೋಟಿ ರೂ ವಹಿವಾಟಿನಲ್ಲಿ ವ್ಯತ್ಯಾಸ ಆಗಿರುವುದು ಬೆಳಕಿಗೆ ಬಂದಿತ್ತು. ಕನ್ಸಲ್ಟೆಂಟ್ ಸೇವೆ ಹಾಗೂ ಇತರ ಉದ್ದೇಶಗಳಿಗೆ ನಿರ್ದೇಶಕರು 1.53 ಕೋಟಿ ರೂ ವ್ಯಯಿಸಿದ್ದರು. ಈ ವೆಚ್ಚಕ್ಕೆ ಬೋರ್ಡ್​​ನ ಅನುಮತಿ ಇರಲಿಲ್ಲ. ಈ ವಿಷಯವನ್ನು ಸರ್ಕಾರದಿಂದ ನೇಮಕ ಮಾಡಲಾದ ಲೆಕ್ಕಪರಿಶೋಧಕರು ಎತ್ತಿ ತೋರಿಸಿದ್ದದರು. ಈ ಕಾರಣಕ್ಕೆ ಸಿಇಒ ಮತ್ತು ಇಡಿ ಅವರು ರಾಜೀನಾಮೆ ಕೊಟ್ಟರಾ ಎಂಬುದು ಸ್ಪಷ್ಟವಾಗಿಲ್ಲ.

ತಂತ್ರಜ್ಞಾನ ಸುಧಾರಣೆ, ಸಾಲ ವಿಭಾಗದಲ್ಲಿ ಸುಧಾರಣೆ ಕಾರ್ಯಗಳಿಗೆ ಹೊರಗಿನಿಂದ ಕನ್ಸಲ್ಟೆನ್ಸಿ ಸರ್ವಿಸ್ ಪಡೆಯಲು ಈ ವೆಚ್ಚ ಮಾಡಲಾಗಿರುವುದು ಗೊತ್ತಾಗಿದೆ.

ಇದನ್ನೂ ಓದಿ: Adani Green: ಭಾರತದ ಇತಿಹಾಸದಲ್ಲೇ ಅತಿಹೆಚ್ಚು ನವೀಕರಣ ಇಂಧನ ಉತ್ಪಾದನೆ: ಅದಾನಿ ಕಂಪನಿ ದಾಖಲೆ

ಶ್ರೀಕೃಷ್ಣನ್ ಹರಿಹರ ಶರ್ಮಾ ಅವರು 2023ರ ಮೇ ತಿಂಗಳಲ್ಲಿ ಕರ್ಣಾಟಕ ಬ್ಯಾಂಕ್​​ನ ಸಿಇಒ ಆಗಿ ನೇಮಕವಾಗಿದ್ದರು. ಹೊರಗಿನಿಂದ ಆ ಬ್ಯಾಂಕ್​​ನ ಸಿಇಒ ಆದ ಮೊದಲ ವ್ಯಕ್ತಿ ಎನಿಸಿದ್ದಾರೆ. ಮೂರು ವರ್ಷದ ಅವಧಿಗೆಂದು ಅವರನ್ನು ನೇಮಕ ಮಾಡಲಾಗಿತ್ತು. ಇನ್ನು ಒಂದು ವರ್ಷ ಇರುವಂತೆಯೇ ಅವರೇ ಖುದ್ದಾಗಿ ನಿರ್ಗಮಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:12 pm, Mon, 30 June 25