Adani Green: ಭಾರತದ ಇತಿಹಾಸದಲ್ಲೇ ಅತಿಹೆಚ್ಚು ನವೀಕರಣ ಇಂಧನ ಉತ್ಪಾದನೆ: ಅದಾನಿ ಕಂಪನಿ ದಾಖಲೆ
Adani Green Energy record: ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯ ಒಟ್ಟು ನವೀಕರಣ ಉತ್ಪಾದನಾ ಸಾಮರ್ಥ್ಯ 15,539.9 ಮೆಗಾ ವ್ಯಾಟ್ಗೆ ಏರಿದೆ. 15 ಗಿಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯ ದಾಟಿದ ಭಾರತದ ಮೊದಲ ಕಂಪನಿ ಎನಿಸಿದೆ ಅದಾನಿ ಗ್ರೀನ್ ಎನರ್ಜಿ. ಗುಜರಾತ್ನ ಖಾವಡಾದಲ್ಲಿ ಅದಾನಿ ಗ್ರೀನ್ ಸಂಸ್ಥೆ ವಿಶ್ವದಲ್ಲೇ ಅತಿದೊಡ್ಡ ರಿನಿವಬಲ್ ಎನರ್ಜಿ ಘಟಕ ಸ್ಥಾಪಿಸುತ್ತಿದೆ. ಈ ಪ್ರಾಜೆಕ್ಟ್ ಪೂರ್ಣಗೊಂಡರೆ ಅಲ್ಲಿ 15,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು.

ನವದೆಹಲಿ, ಜೂನ್ 30: ಅದಾನಿ ಗ್ರೂಪ್ಗೆ ಸೇರಿದ ಅದಾನಿ ಗ್ರೀನ್ ಎನರ್ಜಿ (Adani Green Energy) ಸಂಸ್ಥೆಯ ಒಟ್ಟಾರೆ ರಿನಿವಬಲ್ ಎನರ್ಜಿ ಉತ್ಪಾದನಾ ಸಾಮರ್ಥ್ಯ (Renewable energy capacity) 15,000 ಮೆಗಾವ್ಯಾಟ್ ದಾಟಿದೆ. ಗುಜರಾತ್ನ ಕಚ್ಛ್ ಜಿಲ್ಲೆಯ ಖಾವಡಾದಲ್ಲಿ (Khavda) ನಿರ್ಮಿಸಲಾಗುತ್ತಿರುವ 1,011.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕವನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯ ಸ್ಥಾಪಿತ ರಿನಿವಬಲ್ ಎನರ್ಜಿ ಸಾಮರ್ಥ್ಯ 15,539.9 ಮೆಗಾವ್ಯಾಟ್ ಅಥವಾ 15.54 ಗಿ.ವ್ಯಾಟ್ಗೆ ಏರಿದೆ. ಈ ಮಟ್ಟದ ರಿನಿವಬಲ್ ಎನರ್ಜಿ ಉತ್ಪಾದನಾ ಸಾಮರ್ಥ್ಯದ ಗಡಿ ದಾಟಿದ ಭಾರತದ ಮೊದಲ ಕಂಪನಿ ಎನ್ನುವ ದಾಖಲೆಯನ್ನು ಅದಾನಿ ಗ್ರೀನ್ ಮಾಡಿದೆ.
ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಈ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಅದಾನಿ ಗ್ರೀನ್ ಸಂಸ್ಥೆ 15,000 ಮೆ.ವ್ಯಾ. ರಿನಿವಬಲ್ ಎನರ್ಜಿ ಕೆಪಾಸಿಟಿ ದಾಟಿದೆ. ಅತಿಹೆಚ್ಚು ರಿನಿವಬಲ್ ಎನರ್ಜಿ ಹೊಂದಿರುವ ಮತ್ತು ಅತಿವೇಗವಾಗಿ ಸಾಮರ್ಥ್ಯ ಹೆಚ್ಚಿಸಿದ ದಾಖಲೆ ಸ್ಥಾಪಿಸಿದೆ ಎಂದು ಹೇಳಲು ಬಯಸುತ್ತೇನೆ. ವಿಶ್ವದ ಟಾಪ್ 10 ಗ್ರೀನ್ ಪವರ್ ಉತ್ಪಾದನಾ ಸ್ಥಳಗಳಲ್ಲಿ ಖಾವಡಾ ಇದೆ. ಈ ಮೈಲಿಗಲ್ಲು ಅಂಕಿ ಅಂಶಕ್ಕಿಂತ ಮಿಗಿಲಾದುದು. ಈ ಭೂಮಿ ಮೇಲೆ ಇರುವ ನಮ್ಮ ಬದ್ಧತೆ ಮತ್ತು ಭಾರತದ ಗ್ರೀನ್ ಎನರ್ಜಿ ಸಾಮರ್ಥ್ಯ ಹೆಚ್ಚಿಸುವ ನಮ್ಮ ಸಂಕಲ್ಪಕ್ಕೆ ಇದು ಕನ್ನಡಿ ಹಿಡಿದಿದೆ’ ಎಂದು ಗೌತಮ್ ಅದಾನಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹರ್ಷ ಹಂಚಿಕೊಂಡಿದ್ದಾರೆ.
Delighted to share that Adani Green has surpassed 15,000 MW of renewable energy capacity, marking the largest and fastest green energy build-out in India’s history.
From the desert landscapes of Khavda to a proud place among the world’s Top 10 Green Power Producers, this… pic.twitter.com/FWDWr5SUOm
— Gautam Adani (@gautam_adani) June 30, 2025
ಇದನ್ನೂ ಓದಿ: ಅತ್ಯಂತ ವೇಗವಾಗಿ ವೃದ್ಧಿಯಾಗುತ್ತಿರುವ ಭಾರತದ ಬ್ರ್ಯಾಂಡ್ ಅದಾನಿ: ವಾರ್ಷಿಕ ಶೇ 82ರ ಬೆಳವಣಿಗೆ!
30 ಗಿ.ವ್ಯಾ. ರಿನಿವಬಲ್ ಎನರ್ಜಿ ಗುರಿ
ಅದಾನಿ ಗ್ರೀನ್ ಸಂಸ್ಥೆ 2030ರೊಳಗೆ ತನ್ನ ರಿನಿವಬಲ್ ಎನರ್ಜಿಯ ಕಾರ್ಯಾಚರಣೆ ಸಾಮರ್ಥ್ಯವನ್ನು 30,000 ಮೆಗಾವ್ಯಾಟ್ ಅಥವಾ 30 ಗಿಗಾ ವ್ಯಾಟ್ಗೆ ಹೆಚ್ಚಿಸುವ ಗುರಿ ಇಟ್ಟಿದೆ. ಸದ್ಯ ಅದರ 15 ಗಿಗಾ ವ್ಯಾಟ್ ಸ್ಥಾಪಿತ ಮರುಬಳಕೆ ಇಂಧನ ಸಾಮರ್ಥ್ಯದಲ್ಲಿ ಸೌರಶಕ್ತಿಯದ್ದು ಬಹುಪಾಲು. ಅದಾನಿ ಕಂಪನಿ ತನ್ನ ರಿನಿವಬಲ್ ಎನರ್ಜಿ ಘಟಕಗಳಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು 79 ಲಕ್ಷ ಮನೆಗಳಿಗೆ ಸರಬರಾಜು ಮಾಡಬಹುದಾದಷ್ಟು ಬೃಹತ್ತಾಗಿದೆ.
ಅದಾನಿ ಗ್ರೀನ್ನ ರಿನಿವಬಲ್ ಎನರ್ಜಿ ಉತ್ಪಾದನಾ ಸಾಮರ್ಥ್ಯ
ಒಟ್ಟು ಸ್ಥಾಪಿತ ಸಾಮರ್ಥ್ಯ: 15,539.9 ಮೆಗಾವ್ಯಾಟ್
- ಸೌರಶಕ್ತಿ: 11,005.5 ಮೆಗಾವ್ಯಾಟ್
- ವಾಯುಶಕ್ತಿ: 1,977.8 ಮೆಗಾ ವ್ಯಾಟ್
- ಹೈಬ್ರಿಡ್: 2,556.6 ಮೆಗಾ ವ್ಯಾಟ್
ಖಾವಡಾದಲ್ಲಿ ವಿಶ್ವದಲ್ಲೇ ಅತಿದೊಡ್ಡ ಸೋಲಾರ್ ಪಾರ್ಕ್; ಪ್ಯಾರಿಸ್ಗಿಂತ 5 ಪಟ್ಟು ದೊಡ್ಡದು
ಗುಜರಾತ್ನ ಬರಡುಭೂಮಿ ಎನಿಸಿದ ಖಾವಡಾದಲ್ಲಿ ಅದಾನಿ ಗ್ರೀನ್ ಎನರ್ಜಿ ಸಂಸ್ಥೆ ವಿಶ್ವದಲ್ಲೇ ಅತಿದೊಡ್ಡ ನವೀಕರಣ ಇಂಧನ ಘಟಕ ಅಭಿವೃದ್ಧಿಪಡಿಸುತ್ತಿದೆ. ಇದು ಪೂರ್ಣಗೊಂಡರೆ ಇಂಧನ ಉತ್ಪಾದನಾ ಸಾಮರ್ಥ್ಯ 30,000 ಮೆಗಾ ವ್ಯಾಟ್ನಷ್ಟಾಗುತ್ತದೆ.
ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಅದಾನಿ ಗ್ರೂಪ್ನಿಂದ 40 ಲಕ್ಷ ಮಂದಿಗೆ ಅನ್ನದಾನ ಸೇರಿ ವಿವಿಧ ಸೇವೆ
ಈ ಘಟಕ ಬರೋಬ್ಬರಿ 538 ಚದರ ಕಿಮೀಯಷ್ಟು ವಿಸ್ತೀರ್ಣದಲ್ಲಿದೆ. ಇದು ಎಷ್ಟು ಬೃಹತ್ ಎಂದರೆ ಪ್ಯಾರಿಸ್ ನಗರಕ್ಕಿಂತ ಐದು ಪಟ್ಟು ಹೆಚ್ಚು. ಬಾಹ್ಯಾಕಾಶದಿಂದಲೂ ಇದನ್ನು ನೋಡಬಹುದು. ಈ ಯೋಜನೆ ಪೂರ್ಣಗೊಂಡರೆ ವಿಶ್ವದಲ್ಲೇ ಅತಿದೊಡ್ಡ ವಿದ್ಯುತ್ ಉತ್ಪಾದನಾ ಘಟಕ ಎನಿಸುತ್ತದೆ.
ಚೀನಾ ಕಂಪನಿಗಳು ಬಹಳ ಮುಂದು
ಚೀನಾ ದೇಶದಲ್ಲಿ ಒಟ್ಟು ರಿನಿವಬಲ್ ಎನರ್ಜಿ ಕೆಪಾಸಿಟಿ 1,400 ಗಿಗಾ ವ್ಯಾಟ್ನಷ್ಟಿದೆ. ಇದರಲ್ಲಿ ಚೀನಾ ಥ್ರೀ ಗಾರ್ಜಸ್ ಕಾರ್ಪೊರೇಶನ್ ಎಂಬ ಸಂಸ್ಥೆಯೊಂದೇ 223 ಗಿಗಾ ವ್ಯಾಟ್ನಷ್ಟು ನವೀಕರಣ ಇಂಧನ ಉತ್ಪಾದನೆ ಮಾಡಬಲ್ಲುದು.
ನೆಕ್ಸ್ಟ್ಎರಾ ಎನರ್ಜಿ, ವೆಸ್ಟಾಸ್, ಸೀಮೆನ್ಸ್ ಗಮೆಸಾ, ಎನೆಲ್ ಗ್ರೀನ್ ಪವರ್, ಐಬರ್ಡ್ರೋಲಾ, ಎಸ್ಪಿಐಸಿ ಮೊದಲಾದ ಕಂಪನಿಗಳೂ ಕೂಡ ಭಾರೀ ದೊಡ್ಡ ಪ್ರಮಾಣದಲ್ಲಿ ರಿನಿವಬಲ್ ಎನರ್ಜಿ ಉತ್ಪಾದನಾ ಸಾಮರ್ಥ್ಯ ಹೊಂದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:39 am, Mon, 30 June 25




