ಅತ್ಯಂತ ವೇಗವಾಗಿ ವೃದ್ಧಿಯಾಗುತ್ತಿರುವ ಭಾರತದ ಬ್ರ್ಯಾಂಡ್ ಅದಾನಿ: ವಾರ್ಷಿಕ ಶೇ 82ರ ಬೆಳವಣಿಗೆ!
ಬ್ರ್ಯಾಂಡ್ ಫೈನಾನ್ಸ್‌ನ ಇತ್ತೀಚಿನ ವರದಿಯ ಪ್ರಕಾರ, ಟಾಟಾ ಗ್ರೂಪ್ 2025ರಲ್ಲಿ ಭಾರತದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಆಗಿ ಮುಂದುವರಿದಿದೆ. ಆದರೆ ಅದಾನಿ ಗ್ರೂಪ್ ಶೇಕಡಾ 82ರ ಅದ್ಭುತ ಬೆಳವಣಿಗೆಯೊಂದಿಗೆ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಇನ್ಫೋಸಿಸ್, ಹೆಚ್ಡಿಎಫ್ಸಿ, ಎಲ್ಐಸಿ ಬ್ರ್ಯಾಂಡ್‌ಗಳು ಕೂಡ ಉತ್ತಮ ಬೆಳವಣಿಗೆ ದಾಖಲಿಸಿವೆ. ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ಭಾರತದ ಬಲಿಷ್ಠ ಆರ್ಥಿಕ ಸ್ಥಿತಿಯಿಂದಾಗಿ ಭಾರತೀಯ ಕಂಪನಿಗಳಿಗೆ ಉತ್ತಮ ಅವಕಾಶಗಳಿವೆ ಎಂದು ವರದಿ ಹೇಳಿದೆ.

ನವದೆಹಲಿ, ಜೂನ್ 28: 2025 ರ ಅತ್ಯಂತ ಮೌಲ್ಯಯುತ ಭಾರತೀಯ ಬ್ರ್ಯಾಂಡ್‌ಗಳ ಕುರಿತು ‘ಬ್ರ್ಯಾಂಡ್ ಫೈನಾನ್ಸ್’ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದ ಪ್ರಕಾರ, ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಆಗಿ ಅದಾನಿ (Adani Group) ಹೊರಹೊಮ್ಮಿದೆ. ‘ಮೋಸ್ಟ್ ವ್ಯಾಲ್ಯುಯೇಬಲ್ ಇಂಡಿಯನ್ ಬ್ರ್ಯಾಂಎ್ಸ್ 2025 (Most Valuable Indian Brands 2025)’ ಪ್ರಕಾರ, ಅದಾನಿ ಬ್ರ್ಯಾಂಡ್ ವಾರ್ಷಿಕ ಶೇ 82ರ ಬೆಳವಣಿಗೆ ದಾಖಲಿಸಿದೆ. ಟಾಟಾ ಗ್ರೂಪ್ (TATA Group) ಮತ್ತೊಮ್ಮೆ ದೇಶದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.
ವರದಿಯ ಪ್ರಕಾರ, ಅದಾನಿ ಗ್ರೂಪ್‌ನ ಬ್ರ್ಯಾಂಡ್ ಮೌಲ್ಯವು ಕಳೆದ ವರ್ಷ 3.55 ಬಿಲಿಯನ್ ಡಾಲರ್ ಇದ್ದುದು 2025 ರಲ್ಲಿ 6.46 ಬಿಲಿಯನ್ ಡಾಲರ್ಗೆ ಏರಿಕೆಯಾಗಲಿದೆ. ಒಂದು ವರ್ಷದಲ್ಲಿ ಬ್ರ್ಯಾಂಡ್ ಮೌಲ್ಯದಲ್ಲಿ 2.91 ಬಿಲಿಯನ್ ಡಾಲರ್ ಹೆಚ್ಚಳವು ಅದಾನಿ ಗ್ರೂಪ್‌ನ ಕಾರ್ಯತಂತ್ರಗಳಲ್ಲಿ ಇರುವ ಸ್ಪಷ್ಟತೆ, ನಾವೀನ್ಯತೆ ಮತ್ತು ಸುಸ್ಥಿರ ಬೆಳವಣಿಗೆಯಲ್ಲಿನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ವರದಿ ಹೇಳಿದೆ.
ಏತನ್ಮಧ್ಯೆ, ಟಾಟಾ ಗ್ರೂಪ್ ಮತ್ತೊಮ್ಮೆ ಭಾರತದ ಬ್ರ್ಯಾಂಡಿಂಗ್ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಿದೆ. ಬ್ರ್ಯಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆ ಬ್ರಾಂಡ್ ಫೈನಾನ್ಸ್‌ನ ಇತ್ತೀಚಿನ ‘ಇಂಡಿಯಾ 100’ ವರದಿ ಪ್ರಕಾರ, ಟಾಟಾ ಗ್ರೂಪ್ ಭಾರತದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಆಗಿದೆ. ಈ ವರ್ಷ ಅದರ ಬ್ರ್ಯಾಂಡ್ ಮೌಲ್ಯವು ಶೇ 10 ರಷ್ಟು ಹೆಚ್ಚಾಗಿದೆ ಮತ್ತು 30 ಬಿಲಿಯನ್ ಡಾಲರ್ ಗಡಿ ದಾಟಿದ ದೇಶದ ಮೊದಲ ಬ್ರ್ಯಾಂಡ್ ಆಗಿದೆ.
ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತೀಯ ಕಂಪನಿಗಳಿಗೆ ಸುವರ್ಣ ಅವಕಾಶ
ದೇಶದ ಬಲವಾದ ಆರ್ಥಿಕ ಸ್ಥಿತಿ ಮತ್ತು ಅಂದಾಜು ಶೇ 6-7 ರ ಜಿಡಿಪಿ ಬೆಳವಣಿಗೆಯ ದರದಿಂದಾಗಿ, ಭಾರತೀಯ ಕಂಪನಿಗಳು ತಮ್ಮ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಲು ಅಪಾರ ಅವಕಾಶವನ್ನು ಪಡೆಯಬಹುದು ಎಂದು ಈ ವರದಿ ಅಭಿಪ್ರಾಯಪಟ್ಟಿದೆ. ಹೆಚ್ಚುತ್ತಿರುವ ದೇಶೀಯ ಬೇಡಿಕೆ, ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮತ್ತು ಬಂಡವಾಳ ಹೂಡಿಕೆಯ ಸಹಾಯದಿಂದ, ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ ಕಂಪನಿಗಳು ವೇಗವಾಗಿ ಮುಂದುವರಿಯುತ್ತಿವೆ.
ಯಾವ ಬ್ರ್ಯಾಂಡ್‌ಗಳು ಮುಂಚೂಣಿಯಲ್ಲಿವೆ?
ಈ ವರ್ಷದ ವರದಿಯಲ್ಲಿರುವ ವಿಶೇಷವೆಂದರೆ ಭಾರತದ ಅಗ್ರ 10 ಬ್ರ್ಯಾಂಡ್‌ಗಳ ಮೌಲ್ಯದಲ್ಲಿ ಎರಡಂಕಿಯ ಬೆಳವಣಿಗೆ ದಾಖಲಾಗಿದೆ.
- ಇನ್ಫೋಸಿಸ್ – ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ, ಇದರ ಬ್ರ್ಯಾಂಡ್ ಮೌಲ್ಯವು ಶೇ 15 ರಷ್ಟು ಹೆಚ್ಚಾಗಿ 16.3 ಬಿಲಿಯನ್ ಡಾಲರ್ ತಲುಪಿದೆ.
- ಹೆಚ್ಡಿಎಫ್ಸಿ ಗ್ರೂಪ್ – ಮೂರನೇ ಸ್ಥಾನದಲ್ಲಿದೆ, ಇದು ಶೇ 37 ರಷ್ಟು ಭಾರಿ ಬೆಳವಣಿಗೆ ಕಂಡು 14.2 ಬಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯವನ್ನು ತಲುಪಿದೆ.
- ಎಲ್ಐಸಿ – ನಾಲ್ಕನೇ ಸ್ಥಾನದಲ್ಲಿದೆ, ಅದರ ಬ್ರ್ಯಾಂಡ್ ಮೌಲ್ಯವು ಶೇ 35 ರಷ್ಟು ಹೆಚ್ಚಾಗಿ 13.6 ಬಿಲಿಯನ್ ಡಾಲರ್ಗೆ ತಲುಪಿದೆ.
- ಹೆಚ್ಸಿಎಲ್ ಟೆಕ್- ಬ್ರ್ಯಾಂಡ್ ಮೌಲ್ಯವು ಶೇ 17 ರಷ್ಟು ಏರಿಕೆಯಾಗಿ 8.9 ಬಿಲಿಯನ್ ಡಾಲರ್ಗೆ ತಲುಪಿದೆ. ಲಾರ್ಸೆನ್ & ಟೂಬ್ರೊ ಗ್ರೂಪ್‌ನ ಮೌಲ್ಯವು ಶೇ 3 ರಷ್ಟು ಹೆಚ್ಚಾಗಿ 7.4 ಬಿಲಿಯನ್ ಡಾಲರ್ ತಲುಪಿದೆ. ಮಹೀಂದ್ರಾ ಗ್ರೂಪ್ ಕೂಡ ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದು, ಅದರ ಮೌಲ್ಯ 7.2 ಬಿಲಿಯನ್ ಡಾಲರ್ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




